• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಣ್ಣನೆಯ ಸ್ವಿಸ್‌ನಿಂದ ನಮ್ಮಾಫೀಸಿಗೆ ಬಂದ ಬಿಜಾಪುರದ ಹುಡುಗ

By Staff
|
  • ನ್ಯೂಸ್‌ ರೂಂ, ದಟ್ಸ್‌ಕನ್ನಡ.ಕಾಂ

ಮೊನ್ನೆ (ಅ. 16) ನಮ್ಮ ಪೋರ್ಟಲ್‌ಗೆ ಸ್ಕಾಟ್ಲೆಂಡ್‌ ಚಂದ್ರ ಬಂದಿದ್ದರು.

ಪ್ರೀತಿ ಪ್ರೇಮ ಅಂತ ತುಡಿಯುವ ಅನೇಕ ಯುವ ಹೃದಯಗಳು ಸಾಗರದಾಚೆ ಕಂಪ್ಯೂಟರ್‌ ಮುಂದೆ ಕೂತಾಗಲೂ ಎದೆಯ ಢವಢವವನ್ನು ಕವನಗಳ ಸಾಲಾಗಿಸುತ್ತವೆ. ಅಂಥಾ ಸಾಲುಗಳ ಪುಟ್ಟ ಪುಟ್ಟ ಕವನಗಳನ್ನು ವರ್ಷಗಳ ಹಿಂದೆಯೇ ನಮಗೆ ಕಳುಹಿಸಿದ ಚಂದ್ರು, ನಮಗೆ ಸ್ಕಾಟ್‌ಲೆಂಡ್‌ ಚಂದ್ರು ಅಂತಲೇ ಪರಿಚಿತರು. ಅವರ ನಿಜನಾಮ ಚಂದ್ರಶೇಖರ್‌ ಮಾಡಬಾವಿ. ಸ್ಕಾಟ್‌ಲೆಂಡಿನಿಂದ ಕೆಲಸದ ಕರೆಗೆ ಸ್ವಿಟ್ಜರ್‌ಲ್ಯಾಂಡಿಗೆ ಅಡಿಯಿಟ್ಟರೂ, ಕವಿ ಹೃದಯದ ಬನಿ ಹೆಚ್ಚಾಯಿತೇ ವಿನಾ ಕಡಿಮೆಯಾಗಲಿಲ್ಲ. ನಮ್ಮ ಕವನ ಸಿಂಚನ ವಿಭಾಗದಲ್ಲಿ ಅವರು ಹಲವಾರು ಹನಿ ಕವನ, ಮಿನಿ ಕವನಗಳನ್ನು ಚಿಮುಕಿಸಿದ್ದಾರೆ.

Chandrashekhara Madabaviಎನ್ನಾರೈ ಕನ್ನಡಿಗರು ಭಾರತಕ್ಕೆ, ಬೆಂಗಳೂರಿಗೆ ಬಂದಾಗ, ನಮ್ಮ ಪೋರ್ಟಲ್‌ಗೆ ಬಂದು, ನಮ್ಮ ಆಫೀಸು ನೋಡಿ ಅಚ್ಚರಿ ಪಟ್ಟು, ನಮ್ಮ ಪುಟ್ಟ ಟೀಮ್‌ ನೋಡಿ ಅಮೇಸಿಂಗ್‌ ಅಂತಲೋ, ಗುಡ್‌ ಗುಡ್‌ ಅಂತಲೋ ಹೇಳಿ ಹೋಗುವುದು ವಿಶೇಷ ಅಲ್ಲ. ಆಫೀಸಿಗೆ ಬರುವಾಗ ಅವರ ಕಣ್ಣಲ್ಲಿ ಬೆಟ್ಟದಷ್ಟು ಕುತೂಹಲ. ಹೇಗೆ ಈ ಕನ್ನಡ ಆನ್‌ಲೈನ್‌ ವಾಹಿನಿ ಹರಿಯುತ್ತದೆ... ವಾಹಿನಿಯ ಮೂಲ ಹೇಗಿದೆ ಅಂತ ನೋಡುವ ತವಕ. ನೋಡಿದ ನಂತರ ಕೆಲಸದ ಪರಿಗಳನ್ನು, ಯಾರು ಯಾವ ವಿಭಾಗ ನೋಡಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಸಹಜ ಇಚ್ಛೆ. ನಮಗೋ ಅಲ್ಲಿ ಕನ್ನಡಿಗರು ನಮ್ಮ ಪೋರ್ಟಲ್‌ ಅನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳುವ ಬಯಕೆ. ಯಾವ ಸೆಕ್ಷನ್‌ ನಿಮಗಿಷ್ಟ ? ಅಡುಗೆ ಮನೆ ಓದುತ್ತೀರಾ, ಸಾಹಿತ್ಯ ಓದುತ್ತೀರಾ ? ನೀವು ಸಿನೆಮಾ ಪ್ರಿಯರಾ ? ನಿಮ್ಮ ಏರಿಯಾದಲ್ಲಿರುವ ಕನ್ನಡ ಸಂಘ ಹೇಗೆ ಕೆಲಸ ಮಾಡುತ್ತಿದೆ ?ಏನು ಪ್ರೋಗ್ರಾಂ ಹಾಕಿಕೊಳ್ಳುತ್ತೀರಿ ....ನಿಮ್ಮ ಗೆಳೆಯ/ಗೆಳತಿಯರು ಪೋರ್ಟಲ್‌ ನೋಡುತ್ತಾ ಏನಂತ ಉದ್ಘರಿಸುತ್ತಾರೆ...ಪೋರ್ಟಲ್‌ಗೆ ನಿಮ್ಮ ಸಲಹೆ ಏನು ?- ಹೀಗೆ ನಮ್ಮ ರಾಶಿ ಪ್ರಶ್ನೆಗಳನ್ನು ಆಫೀಸಿಗೆ ಬರುವ ಅಕ್ಷರ ಪ್ರಿಯರ ಮೇಲೆ ಹರಿಯಬಿಡುತ್ತೇವೆ.

ಚಂದ್ರಶೇಖರ್‌ ಬಗ್ಗೆಯೂ ಇಂಥದೇ ಕುತೂಹಲ. ಎಲ್ಲರೂ ಒಂದು ಕಪ್‌ ಚಹಾ ಗುಟುಕರಿಸುತ್ತಾ ಮಾತಿಗೆ ಶುರು ಹಚ್ಚಿಕೊಂಡೆವು. ನಮ್ಮ ಆಫೀಸಿಗೆ ಭೇಟಿ ನೀಡುವವರ ಪೈಕಿ ಹೆಚ್ಚಿನವರು ಅಮೆರಿಕನ್ನಡಿಗರು. ಚಂದ್ರಶೇಖರ್‌ ಸ್ವಿಸ್‌ನಲ್ಲಿ ಇರುವವರಾದ್ದರಿಂದ ಅಲ್ಲಿನ ಕನ್ನಡಿಗರ ಬಗ್ಗೆ ನಮಗೆ ಗುಲಗಂಜಿ ಕುತೂಹಲ ಜಾಸ್ತಿ. ಸ್ವಿಸ್‌ನಲ್ಲಿ ಎಷ್ಟು ಕನ್ನಡಿಗರಿದ್ದಾರೆ, ಅವರ ಆಸಕ್ತಿಗಳೇನು , ಕನ್ನಡ ಕಳಕಳಿ ಇದೆಯಾ, ಓದಿ- ಬರೆದು ಮಾಡುತ್ತಾರಾ- ಮತ್ತೆ ಎರಗಿತು ನಮ್ಮ ಪ್ರಶ್ನೆ.

ಸ್ವಿಸ್‌ನಲ್ಲಿ ಹೆಚ್ಚಿನವರು ಐಟಿಯೇತರರು. ಬ್ಯಾಂಕುಗಳಲ್ಲಿ ದುಡಿಯುವವರು. ಯೂನಿವರ್ಸಿಟಿಯಲ್ಲಿ ಹೆಚ್ಚುವರಿ ಓದಿಗೆ ಬಂದವರು. ಓದು ಮುಗಿಸಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡ ಜಾಣರು. ಅಲ್ಲೊಂದು ಕನ್ನಡ ಸಂಘವಿದೆ. ಸ್ವಿಸ್‌ನಲ್ಲಿ ಕನ್ನಡಿಗರ ಸಾಂದ್ರತೆ ಕಡಿಮೆ. ಆದರೂ ಆಗೊಮ್ಮೆ ಈಗೊಮ್ಮೆ ಕನ್ನಡಿಗರ ಪಿಕ್‌ನಿಕ್‌ನಂತಹ ಕಾರ್ಯಕ್ರಮಗಳು ನಡೆಯುವುದುಂಟು- ಇದು ಚಂದ್ರು ಕೊಟ್ಟ ಅಲ್ಲಿನವರ ಪರಿಚಯ.

ಚಂದ್ರಶೇಖರ್‌ ಕನ್ನಡ ನಾಡು ಬಿಟ್ಟು ದೂರದೂರಿಗೆ ಹೋಗಿದ್ದರೂ ಈಗಲೂ ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಇಲ್ಲೇ ಇಂಗ್ಲಿಷ್‌ ಮೀಡಿಯಂನಲ್ಲಿ ಓದಿ ವಿದೇಶಕ್ಕೆ ಹಾರಿದವರು, ನಂತರ ಕನ್ನಡದಲ್ಲಿ ಬರೆಯಬೇಕೆಂದು ಆಸೆ ಪಟ್ಟರೂ ಕಷ್ಟವಾಗುತ್ತದೆ. ಶಿಕ್ಷಣದ ಮಾದರಿಯೇ ಹಾಗಿದೆ. ಕನ್ನಡದಲ್ಲಿ ಮಾತಾಡಿದಷ್ಟು ಬರೆಯುವುದು ಸುಲಭವಲ್ಲವಲ್ಲ. ಅದಕ್ಕೇ ಅನೇಕರು ಬರೆಯುವ ಗೊಡವೆಗೆ ಹೋಗುವುದಿಲ್ಲ ಅಂತ ಚಂದ್ರಶೇಖರ್‌ ನಕ್ಕರು.

ಚಂದ್ರಮ ಮಿನಿಕವನಗಳ ಕವಿಯಾದರೂ ಅವರಿಗೆ ಲೇಖನಗಳನ್ನು ಬರೆಯುವ ಆಸೆ. ಬೇರೆಭಾಷೆಯಲ್ಲಿ ಒಳ್ಳೆಯ ಲೇಖನಗಳನ್ನು ನೋಡಿದಾಗ ಅದನ್ನು ಕನ್ನಡಕ್ಕೆ ಭಾಷಾಂತರಿಸಿ, ಇತರರೊಂದಿಗೂ ಹಂಚಿಕೊಳ್ಳಬೇಕು ಅಂತ ಅನಿಸುತ್ತದೆ. ಆದರೆ ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಕವನಗಳಾದರೆ ಅನಿಸಿದ್ದನ್ನು ಅನಿಸಿದ ಹಾಗೆ ಪುಟ್ಟದಾಗಿ ಎಲ್ಲಿಯಾದರೂ ಬರೆದಿಡಬಹುದು. ಲೇಖನಕ್ಕೆ ಬೇಕಾದ ಧ್ಯಾನವೇ ಬೇರೆ ಅಂತಾರೆ. ರವಿ ಬೆಳಗೆರೆ ಬರಹಗಳೆಂದರೆ ಚಂದ್ರುಗೆ ಬಲು ಇಷ್ಟ. ವಿಶ್ವೇಶ್ವರ ಭಟ್ಟರ ಅಂಕಣ ಓದುವುದನ್ನೂ ಅವರು ತಪ್ಪಿಸುವುದಿಲ್ಲ. ವಿಚಿತ್ರಾನ್ನ ಪ್ರಿಯರಲ್ಲಿ ಇವರೂ ಒಬ್ಬರು.

ಚಂದ್ರಶೇಖರ್‌ ಕರ್ನಾಟಕಕ್ಕೆ ಬಂದಿದ್ದು ಎರಡೇ ವಾರದ ರಜೆ ಮೇಲೆ. ಮೂಲತಃ ಬಿಜಾಪುರದವರಾದ ಅವರದ್ದು ಕೃಷಿ ಕುಟುಂಬ. ಸೂರ್ಯ ಕಾಂತಿ, ಶೇಂಗಾ , ಜೋಳ ಬೆಳೆಯುವ ಒಕ್ಕಲು. ಬಿಜಾಪುರದ ಸುಡು ಬಿಸಿಲು, ಆ ಊರಿನ ಆಪ್ತತೆ, ಬಾರದೇ ಬಾರದೇ ಸತಾಯಿಸಿ ಈಗಷ್ಟೇ ಕಾಲಿಟ್ಟಿರುವ ಮಳೆ, ಆ ಮಳೆ ಮತ್ತಷ್ಟು ಬರಲಿ ಎಂದು ಹಾರೈಸುವ ಅಪ್ಪ ಮತ್ತು ತಮ್ಮನ ಬಗೆಗೆಲ್ಲಾ ಚಂದ್ರು ಹೇಳಿಕೊಂಡರು.

ಸ್ವಿಸ್‌ ಚೆಂದದ ಊರಲ್ಲವಾ.. ಅಂತ ಕೇಳಿದರೆ, ಹೌದು ಮೊದ ಮೊದಲು ಚೆಂದಾಗಿದೆ ಅನಿಸುತ್ತಿತ್ತು. ಈಗ ಮಾಮೂಲಾಗಿ ಬಿಟ್ಟಿದೆ. ಈಗೇನಿದ್ದರೂ ಸುಡು ಬಿಸಿಲಿನ ಬಿಜಾಪುರವೇ ಚೆಂದಾಗಿದೆ ಅನಿಸುತ್ತದೆ. ತವರಿನ ನೆನಪೇ ಹಾಗಲ್ಲವೇ ಎನ್ನುವ ಚಂದ್ರು ಇನ್ನೆರಡು ದಿನದಲ್ಲಿ ವಾಪಸ್ಸು ಹೋಗುವವರಿದ್ದಾರೆ. ಮತ್ತೆ ಬರುವವರಿದ್ದಾರೆ.

ಹುಡುಗಿ ನೋಡಲಿಕ್ಕೆ ಅಂತಲೇ ಇಷ್ಟು ಅರ್ಜಂಟಾಗಿ ರಜೆ ತಗೊಂಡು ಊರಿಗೆ ಬಂದ್ರಾ... ಅಂತ ನಮ್ಮಿಂದ ರೇಗಿಸಿಕೊಂಡು, ನಮ್ಮ ಸಿಇಓ ಮಹೇಶ್‌ ಸರ್‌ನ್ನು ಕೂಡ ಭೇಟಿಯಾಗಿ ಚಂದ್ರು ಬೀಳ್ಕೊಂಡರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X