ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಪರ್‌ ಆಫೀಸಿನಲ್ಲಿ ಇಂಥವರೂ ಇರುತ್ತಾರೆ!

By Staff
|
Google Oneindia Kannada News

Haldodderi Sudheendraಹೆಚ್‌. ಎನ್‌. ಸುಧೀಂದ್ರ,
ಜಯನಗರ , ಬೆಂಗಳೂರು

[email protected]
Sridhar Dixit ‘ನಾನು ಸುಧಾ’ ದಿಂದ ಶ್ರೀಧರ ದೀಕ್ಷಿತ್‌ ಮಾತನಾಡ್ತಿರೋದು. ನಿಮ್ಮ ಲೇಖನ ಮುಂದಿನ ವಾರ ಮುಖಪುಟದಲ್ಲಿ ಹಾಕ್ಕೊಳ್ತಾ ಇದೀವಿ. ಅದಕ್ಕೆಂದು ಕೊಟ್ಟಿರೋ ಫೋಟೋಸ್‌ನಲ್ಲಿ ಕ್ಲಾರಿಟಿ ಇಲ್ಲ. ಬೇರೆ ಫೋಟೋಗಳು ನಿಮ್ಮಲ್ಲಿದ್ದರೆ ಕೊಡಿ. I enjoyed reading your article..’

ನಮ್ಮ ನಡುವಿನ ಮೊದಲ ಸಂಭಾಷಣೆಯ ಕೊನೆಯ ಸಾಲು ಕಿವಿಗೆ ಹಿತವೆನಿಸಲಿಲ್ಲ. ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಗೆಂದು ನಾನೊಂದು ಲೇಖನ ಕೊಟ್ಟಿದ್ದೆ. 1999ರ ನವೆಂಬರ್‌ ಇರಬೇಕು. ಅಂದಿನ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಜಿ.ಎನ್‌. ರಂಗನಾಥ ರಾವ್‌, ಲೇಖನವನ್ನು ‘ ಸುಧಾ’ಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದರು. ಆಗ ‘ ಸುಧಾ’ ದಲ್ಲಿ Live Wireನಂತೆ ಕೆಲಸ ಮಾಡುತ್ತಿದ್ದ ಶ್ರೀಧರ ದೀಕ್ಷಿತ್‌ ಅವರು ತಮ್ಮ ಲೇಖನಗಳ ಮುಖಾಂತರ ನನಗೆ ಪರಿಚಿತರಿದ್ದರು. ‘ಪ್ರಜಾವಾಣಿ’ ಗುಂಪಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಮೊದಲ ಲೇಖನ ಅದಾಗಿದ್ದರೂ Thanks but,I dont enjoy someone editing my articles ಎಂದು ಒರಟಾಗಿಯೇ ದೀಕ್ಷಿತ್‌ಗೆ ಉತ್ತರಿಸಿದ್ದೆ. ‘ ಸೈಬರ್‌ ಭಯೋತ್ಪಾದಕ’ರ ಬಗ್ಗೆ ನನ್ನ ಆ ಲೇಖನ ಪ್ರಕಟವಾದ ಎರಡೇ ವಾರದಲ್ಲಿ Y2K ಬಗ್ಗೆ ‘ತರಂಗ’ದಲ್ಲಿ ನನ್ನ ಮುಖಪುಟ ಲೇಖನ ಬಂತು. ಆಗ ಫೋನ್‌ ಹಿಡಿದ ದೀಕ್ಷಿತ್‌ ಹೇಳಿದ್ದು, ‘ನಮ್ಮ ರೈವಲ್ಸ್‌ಗಳಿಗೆ ನೀವು ಬರೆಯುವುದು ಸರಿಯಲ್ಲ’. ‘ನಾನು ನಿಮ್ಮ ಗುತ್ತಿಗೆದಾರನೆ? ರೈವಲ್ಸ್‌ ಅಂತೇಕೆ ಭಾವಿಸುತ್ತೀರಿ, ಕಾಂಪಿಟಿಟರ್ಸ್‌ ಅನ್ನಿ’ ಎಂದು ಛೇಡಿಸಿದ್ದೆ. ಅದಕ್ಕವರು ‘ನಾನೇನಾದರೂ ಸುಧಾ ಇನ್‌ಚಾರ್ಜ್‌ ಆಗಿದ್ದರೆ ನಿಮ್ಮ ಲೇಖನಗಳನ್ನು ಸ್ಟಾಪ್‌ ಮಾಡಿಸುತ್ತಿದ್ದೆ’ ಎಂಬ ನವಿರಾದ ಬೆದರಿಕೆ ಹಾಕಿದ್ದರು. ಮುಂದಿನದು ಇತಿಹಾಸ. ಹೃದಯವಂತ ದೀಕ್ಷಿತ್‌ ನನ್ನ ಲೇಖನಗಳ ವಿಶೇಷ ಆಸ್ಥೆ ವಹಿಸಿ ಪ್ರಕಟಿಸಲಾರಂಭಿಸಿದರು.

ಜನವರಿ 2000ದ ಮೊದಲ ಸಂಚಿಕೆಯಲ್ಲಿ ತಾವೇ ಆರಂಭಿಸಿದ ‘ವಿಜ್ಞಾನಕ್ಕೊಂದು ಬೆಳಕಿಂಡಿ’ ಪಾಕ್ಷಿಕ ಅಂಕಣಕ್ಕೆ ‘ನೀವೂ ಕಾಂಟ್ರಿಬ್ಯೂಟ್‌ ಮಾಡಬಹುದು’ ಎಂದು ಪುಸಲಾಯಿಸಿ, ಕಡೆಗೆ ನನ್ನ ತಲೆಗೇ ಕಟ್ಟಿಬಿಟ್ಟರು. ಏಪ್ರಿಲ್‌ ಒಂದರ ‘ ಮೂರ್ಖರ ಸಂಚಿಕೆಗೆ’ ಕಂಪ್ಯೂಟರ್‌ ಬಗ್ಗೆ ಏನಾದರೂ ಬರೆದುಕೊಡಿ ಎಂದು ಒತ್ತಾಯಿಸಿ ಮುದ್ರಣಕ್ಕೆ ಅಣಿಯಾಗುವ ಕೊನೆಯ ದಿವಸ ಬರೆದುಕೊಟ್ಟ ‘ಡಾಟ್‌ ಕಾಮ್‌ ದೇವರ ಸೈಟಿಗೆ ಲಾಗ್‌ಜ್ಯಾಮ್‌’ ಅನ್ನು ಖುಷಿಯಿಂದ ಪ್ರಕಟಿಸಿದರು. ಮುಂದೆ ಯುಗಾದಿ ಸಂಚಿಕೆಗೆ ಬರೆದುಕೊಟ್ಟ ಉಚಿತ ಕೈಪಿಡಿ ‘ಇಂಟರ್‌ನೆಟ್‌ ಎಂಬ ಮಾಯಾಜಾಲ’ಕ್ಕೆ ಒಳ್ಳೆಯ ಬೆನ್ನುಡಿ ಬರೆದದ್ದು ದೀಕ್ಷಿತರೇ. ನನ್ನ ‘ಅಗ್ನಿಭಕ್ಷಕ ಜಮದಗ್ನಿ’ ಎಂಬ ವಿಜ್ಞಾನ ಲೇಖನಕ್ಕೆ ಆರಂಭದಲ್ಲಿ ಕೊಂಚ ಯಕ್ಷಗಾನ ಸಂಭಾಷಣೆಯನ್ನು ಸೇರಿಸಿ ‘ಎಡಿಟ್‌’ ಮಾಡಿದ ಸಂದರ್ಭದಲ್ಲಿ Today I enjoyed your editing ಎಂದು ಫೋನ್‌ ಹಚ್ಚಿದ್ದೆ. ಅವರು ‘ಸುಧಾ’ ಬಿಡುವವರೆಗೂ ವಾರಕ್ಕೊಮ್ಮೆಯಾದರೂ ನಮ್ಮಿಬ್ಬರ ಭೇಟಿ ಇದ್ದೇ ಇತ್ತು, ಇಲ್ಲವೇ ಫೋನ್‌ ಅಥವಾ ಇಂಟರ್‌ನೆಟ್‌ ಚಾಟ್‌ ನಡೆಯುತ್ತಿತ್ತು. ಅಗತ್ಯ ಬಿದ್ದಾಗ ಇ-ಮೇಲ್‌ಗಳು ಅತ್ತಿಂದಿತ್ತ ಓಡಾಡುತ್ತಿದ್ದವು.

ನನಗೆ ಸದಾ ಮೆಚ್ಚುಗೆಯಾದದ್ದು ಅವರ ಮಾತುಗಳಲ್ಲಿನ ಹಿತ ಮತ್ತು ದನಿಯ ಗಡಸುತನ. ಅಕ್ಕರೆಯಿಂದ ತಾವು ಭಾಗವಹಿಸಿದ್ದ ತಾಳ ಮದ್ದಲೆ ಕಾರ್ಯಕ್ರಮಕ್ಕೆ ಕರೆದೊಯ್ದು ಅವರ ಮನೆಮಂದಿಗೆಲ್ಲ ನನ್ನ ಕುಟುಂಬದವರನ್ನು ಪರಿಚಯಿಸಿದ್ದರು. ಪ್ರೆಸ್‌ ಕ್ಲಬ್‌ನಲ್ಲೊಮ್ಮೆ ನಮ್ಮಿಬ್ಬರಿಗೂ ಪರಿಚಿತ ಪತ್ರಕರ್ತ ಮಿತ್ರರೊಡನೆ ಔತಣದಲ್ಲಿ ಖುಶಿಯಿಂದ ಭಾಗಿಯಾಗಿದ್ದರು. ಯಾರನ್ನೋ ಭೆಟ್ಟಿಯಾಗಲು ಮೂರು ವಾರದ ಹಿಂದೆ ಮಧ್ಯಾಹ್ನ ಪ್ರೆಸ್‌ಕ್ಲಬ್‌ಗೆ ಹೋಗಿದ್ದೆ. ಕಾರ್ಡ್ಸ್‌ ಆಡುತ್ತಿದ್ದವರು ನನ್ನತ್ತ ತಿರುಗಿ ‘ ಏನ್ರಿ, ನೀವಿಲ್ಲಿ’ ಎಂಬ ಅಚ್ಚರಿ ವ್ಯಕ್ತಪಡಿಸಿದ್ದರು. ಮರುದಿನ ಫೋನ್‌ ಹಚ್ಚಿದವನು ‘ಏನು ಟೊಪ್ಪಿಗೆ ಹಾಕಿದ್ದೀರಿ. ಯಾರಿಟ್ಟರೀ ಟೊಪ್ಪಿ ?’ ಎಂದೆ. ತಿಂಗಳ ಹಿಂದೆ ನಿಮ್ಮಂತೆ ನಾನೂ ನನ್ನ ತಂದೆಯನ್ನು ಕಳೆದುಕೊಂಡೆ’ ಎಂದರು. ನನ್ನ ತಂದೆಯವರ ಬಗ್ಗೆ (ಹಿರಿಯ ಪತ್ರಕರ್ತ ದಿವಂಗತ ಹೆಚ್‌.ಆರ್‌.ನಾಗೇಶ ರಾವ್‌) ಮಾಡುತ್ತಿರುವ ಸ್ಮರಣ ಸಂಚಿಕೆಯ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಿದರು. ಮಾತಿನ ಮಧ್ಯೆ ‘ಪಿತೃ ವಿಯೋಗ ಅನಿವಾರ್ಯ. ಆದರೆ ಇದು ನನ್ನ ವಯಸ್ಸನ್ನು ಒಮ್ಮೆಲೆ ಹತ್ತು ವರ್ಷಗಳಷ್ಟು ಹೆಚ್ಚಿಸಿದೆ’ ಎಂದರು. ಸುದೀರ್ಘ ಮಾತುಕತೆಯ ಕೊನೆಗೆ ಎಂದಿನಂತೆ ‘ಒಮ್ಮೆ ಭೆಟ್ಟಿಯಾಗೋಣ. ಪ್ರೆಸ್‌ ಕ್ಲಬ್‌ ಬೇಡ. ಇನ್ನೆಲ್ಲಾದರೂ ಹೊರಗೆ’ ಎಂದು ಮಾತು ಮುಗಿಸಿದರು.

ಪತ್ರಿಕೋದ್ಯಮದ ಅದೆಷ್ಟೋ ಹೊಳಹುಗಳನ್ನು ‘ಎಂಥ ಮಜಾ ಗೊತ್ತಾ?’ ಎಂದು ನನ್ನೊಂದಿಗೆ ಹಂಚಿಕೊಂಡಿದ್ದ ದೀಕ್ಷಿತ್‌ಗೆ, ‘ ನಾನು ನಿಮ್ಮಂತೆ ಪತ್ರಕರ್ತನಲ್ಲ’ ಎಂದೊಡನೆ ‘ಬಿಡಿ ಸ್ವಾಮಿ, ನೀವೊಬ್ಬ ಅರೆ-ಪತ್ರಕರ್ತ’ ಎಂದು ಚುಡಾಯಿಸುತ್ತಿದ್ದರು. ‘ ಅಂದರೆ ಅರೆ-ಹುಚ್ಚನಂತೆಯೆ?’ ಎಂಬ ಛೇಡಿಕೆಗೆ ‘ನಮ್ಮನ್ನು ಪೂರ್ತಿ ಹುಚ್ಚರನ್ನಾಗಿಸಿಬಿಟ್ಟರಲ್ಲ’ ಎಂದು ನಕ್ಕವರು. ಕಳೆದ ವಾರ ಫೋನ್‌ನಲ್ಲಿ ಸಿಕ್ಕವರು, ಮಾಧ್ಯಮ ಅಕಾಡೆಮಿಗೆ ತಾವು ಬರೆಯುತ್ತಿದ್ದ ‘ ಇಂಟರ್‌ನೆಟ್‌ ಪತ್ರಿಕೋದ್ಯಮ’ಕ್ಕೆ ಸಂಬಂಧಿಸಿದ ಪುಸ್ತಕ ಇನ್ನೇನು ಸಿದ್ಧವಾಗುತ್ತಿದೆಯೆಂಬ ಸಂತಸ ಹಂಚಿಕೊಂಡಿದ್ದರು. ಅದೇ ನಮ್ಮಿಬ್ಬರ ಕೊನೆಯ ಸಂಭಾಷಣೆ.

ದಟ್ಸ್‌ ಕನ್ನಡ ಸಂಪಾದಕ ಶಾಮ್‌ ಸಿಕ್ಕಾಗಲೆಲ್ಲ ನಾನು ಕೇಳುತ್ತಿದ್ದ ಪ್ರಶ್ನೆ ‘ಶ್ರೀಧರ್‌ ದೀಕ್ಷಿತ್‌ ಸಿಕ್ಕಿದ್ರಾ?’ ಶ್ರೀಧರ್‌ ದೀಕ್ಷಿತ್‌ ಫೋನ್‌ ಹಚ್ಚಿದಾಗಲೆಲ್ಲ ನನ್ನನ್ನು ಕೇಳುತ್ತಿದ್ದದ್ದು, ‘ಶ್ಯಾಮ್‌ ಸಿಕ್ಕಿದ್ರಾ?’. ಭಾನುವಾರ ರಾತ್ರಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ‘ಶ್ರೀಧರ್‌ ದೀಕ್ಷಿತ್‌ ಹೋಗಿಬಿಟ್ರು’ ಎಂಬ ಸುದ್ದಿ ಕೊಟ್ಟಾಗ ನಂಬಲಾಗಲಿಲ್ಲ. ಇಡೀ ರಾತ್ರಿ ‘ಮತ್ತೆ ಯಾವಾಗ ಭೆಟ್ಟಿಯಾಗೋಣ ?’ ಎಂದು ಕೇಳುತ್ತಿದ್ದ ದೀಕ್ಷಿತರ ಗಡಸು ದನಿಯೇ ಕಾಡುತ್ತಿತ್ತು. ಕಾಲೇಜಿನಲ್ಲಿ ವಿಜ್ಞಾನ ಕಲಿಯದಿದ್ದರೂ ವಿಜ್ಞಾನ ಲೇಖನಗಳನ್ನು ಒಮ್ಮೊಮ್ಮೆ ‘ನನಗೆ ಹೊಟ್ಟೆ ಉರಿಸುವಷ್ಟು’ ಚೆನ್ನಾಗಿ ಬರೆಯುತ್ತಿದ್ದ ದೀಕ್ಷಿತ್‌ ಇನ್ನಿಲ್ಲ ಎಂದು ನಂಬಲು ಇನ್ನೂ ಸಿದ್ಧನಾಗಿಲ್ಲ. ಎಡಿಟ್‌ ಮಾಡುವುದರಲ್ಲಷ್ಟೇ ಅಲ್ಲ , ಮಾತಿನಲ್ಲೂ ಮಜಾ ತೆಗೆದುಕೊಳ್ಳುತ್ತಿದ್ದ ಮೋಜುಗಾರ ದೀಕ್ಷಿತ್‌ ತುಂಬು ನಗೆಯ ಸೊಗಸುಗಾರನೂ ಆಗಿದ್ದರು.

ಮಿತ್ರ ವಿಯೋಗ ವಯಸ್ಸನ್ನು ಒಮ್ಮೆಲೆ ಎಷ್ಟು ಹೆಚ್ಚಿಸುತ್ತದೆ? ಬದುಕಿದ್ದರೆ ಶ್ರೀಧರ್‌ ದೀಕ್ಷಿತ್‌ ಉತ್ತರ ಹೇಳಬಹುದಾಗಿದ್ದ ಪ್ರಶ್ನೆಯಿದು!


ಪೂರಕ ಓದಿಗೆ-
ದಟ್ಸ್‌ಕನ್ನಡ.ಕಾಂಗಾಗಿ ಶ್ರೀಧರ್‌ ದೀಕ್ಷಿತ್‌ ಬರೆದಿದ್ದ ವಿಶೇಷ ಲೇಖನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X