• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರೀಂ ಖಾನರ ಬಳಿ ಕೀಲಿ ಇದೆ, ಮನೆ ಇಲ್ಲ

By Staff
|

*ಮುರಲಿಕೃಷ್ಣ ಬೆಳಾಲು

ಬೆಂಗಳೂರು- ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಇವರು ಬಯಸಿದ್ದರೆ ಯಾವ ಸ್ಥಾನವನ್ನಾದರೂ ಗಳಿಸಬಹುದಿತ್ತು. ಆದರೆ ಎಲ್ಲವನ್ನೂ ದೇಶ, ನಾಡು, ನುಡಿಗಾಗಿ ಮುಡಿಪಾಗಿಟ್ಟ ಎಸ್‌. ಕೆ. ಕರೀಂಖಾನರಿಗೆ ಸಿಕ್ಕಿದ್ದು ಸರ್ವರ ‘ನಿರ್ಲಕ್ಷ್ಯ’.

ಈ ಕುರಿತು ಅವರನ್ನು ಪ್ರಶ್ನಿಸಿದರೆ, ‘ನಾವು ಬಲವಂತವಾಗಿ ಅವರಿಂದ ಅಭಿಮಾನ ಪಡೆಯಲಾಗುತ್ತಾ ? ನಮ್ಮನ್ನ ಗೌರವಿಸಿ, ಅನುಕಂಪ ತೋರಿಸಿ ಅನ್ನೋಕಾಗುತ್ತಾ ’ ಎಂದು ನಿರ್ಲಿಪ್ತ ಭಾವದಿಂದ ಕರೀಂ ಖಾನ್‌ ಉತ್ತರಿಸುತ್ತಾರೆ.

ಆದರೆ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಗೌರವಿಸುವುದರ ಸಂಕೇತವಾಗಿ ನಿಮಗೆ ನಿವೇಶನ ಕೊಡುತ್ತೇವೆ ಎಂದು ಘೋಷಿಸಿದ ಸರಕಾರ ಮನೆಯ ಕೀಲಿ ಕೈಯನ್ನೂ ಕೊಟ್ಟಿತ್ತು. ಆದರೆ ಮನೆಯಿನ್ನೂ ಸಿಕ್ಕಿಲ್ಲ.

Kareem Khanಬ್ರಹ್ಮಚಾರಿಯಾಗಿರುವ ಡಾ. ಕರೀಂಖಾನರೀಗ ಬೆಂಗಳೂರಿನ ಅಲಸೂರಿನಲ್ಲಿ ಸೋದರ ಗಫಾರ್‌ ಖಾನರ ಮನೆಯಲ್ಲಿದ್ದಾರೆ. ಅದಕ್ಕಿಂತ ಮೊದಲು ಬುಲ್‌ಟೆಂಪಲ್‌ ರಸ್ತೆಯಲ್ಲಿರುವ ಹೋಟೆಲ್‌ ದ್ವಾರಕಾದಲ್ಲಿ, ಅರ್ಧ ಕತ್ತಲು ಅರ್ಧ ಬೆಳಕಿರುವ ಕೊಠಡಿಯಾಂದರಲ್ಲಿದ್ದರು. ಏಳು ವರ್ಷಗಳ ಹಿಂದೆ ಜಾರಿ ಬಿದ್ದು ಕಾಲಿನ ಮೂಳೆ ಮುರಿದು ಹೋಗಿತ್ತು. ಆದ್ದರಿಂದ ಈಗ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಅಪರೂಪಕ್ಕೊಮ್ಮೊಮ್ಮೆ ತುಂಬಾ ಒತ್ತಾಯ ಮಾಡಿದರೆ ಹೋಗ್ತಾರಂತೆ. ಮನೆಯಾಳಗೇ ವಾಕರ್‌ ಸಹಾಯದಿಂದ ತಿರುಗಾಡುವುದನ್ನು ಬಿಟ್ಟರೆ ಹೆಚ್ಚೇನೂ ಅವರಿಗೆ ಓಡಾಡಲಾಗುವುದಿಲ್ಲ.

ಇದು 103 ವರ್ಷ ಪ್ರಾಯದ ಈ ಹಿರಿಯ ಜಾನಪದ ಕವಿಯ ಈಗಿನ ಸ್ಥಿತಿ. ಸ್ವಾತಂತ್ರ್ಯ ಹೋರಾಟ, ಕನ್ನಡ ಜಾನಪದ ಸಾಹಿತ್ಯ ಸೇವೆಗೈದವರ ಸಾಲಿನಲ್ಲಿ ಇವರು ಪ್ರಮುಖರು. ಅವರೇ ಹೇಳುವಂತೆ, ಕರ್ನಾಟಕದ ಹಳ್ಳಿ ಹಳ್ಳಿಗೆ ಹೋಗಿ ನಾನು ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದೇನೆ. ಇಂದು ಅವನ್ನು ಕೇಳೋರಿಲ್ಲ. ಅದಕ್ಕೆ ಸಮಾಜದಲ್ಲಿ ಯಾವ ಸ್ಥಾನ ಸಿಗಬೇಕಿತ್ತೋ ಅದು ಸಿಕ್ಕಿಲ್ಲ. ಆದ್ರೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಹಳೆ ಮೈಸೂರು ವಿಭಾಗದ ಕೆಲವರು ಸಾಧ್ಯವಾದಷ್ಟೂ ಅದನ್ನು ಸಂಗ್ರಹಿಸುತ್ತಿರುವುದು ಸಮಾಧಾನದ ಸಂಗತಿ.

‘ಹುಟ್ಟಿದ ಹಳ್ಳಿಯ ಹಾಡು’ ಖಾನರ ಮೊದಲ ಜಾನಪದ ಗೀತೆಗಳ ಸಂಗ್ರಹ. ಹಾಗೇ ಅವರು ಸಂಗ್ರಹಿಸಿದ ‘ಜಾನಪದ ಗೀತೆಗಳು’ ಎಂಬ ಪುಸ್ತಕ ಸುಪ್ರಸಿದ್ಧ. ಜನರು ಅದನ್ನು ಸ್ವಾಗತಿಸಿದರು. ಆದರೆ ಕೆಲವು ಪುಸ್ತಕದ ಅಂಗಡಿಯವರು ಅದರ ದುರ್ಲಾಭ ಪಡೆದು ತಾವೇ ಪ್ರಿಂಟ್‌ ಹಾಕಿಸತೊಡಗಿದರು. ಹಾಗೆ ಮುದ್ರಿಸಿದವರೊಬ್ಬರ ವಿರುದ್ಧ ಮೈಸೂರು ಕೋರ್ಟಿನಲ್ಲಿ ಕೇಸನ್ನೂ ಹಾಕಿದ್ದರು. ಆಮೇಲೆ ಅದನ್ನು ಅವರು ಮುದ್ರಿಸುವುದನ್ನೇ ಬಿಟ್ಟರಂತೆ !

‘ನಿಹಾರ’, ‘ಬಲಿದಾನ ಹುಸೇನ’, ‘ಮಾಗಡಿ ಕೆಂಪೇ ಗೌಡ’, ‘ಬೆಂಗಳೂರು ಕೆಂಪೇಗೌಡ’, ‘ಶ್ರೀ ಕೃಷ್ಣ ಲೀಲೆ’, ಖಾನರು ಬರೆದ ಪ್ರಮುಖ ಪುಸ್ತಕಗಳು. ಜಾನಪದ ಸಾಹಿತ್ಯದ ಜತೆಗೆ ಚಲನಚಿತ್ರ ಸಾಹಿತ್ಯದಲ್ಲೂ ಅವರು ಕೃಷಿ ಮಾಡಿದ್ದಾರೆ.

ಅವರು ಚಿತ್ರರಂಗದಲ್ಲಿಮೊಟ್ಟ ಮೊದಲು ಸಾಹಿತ್ಯ ರಚಿಸಿದ್ದು ‘ಸ್ವರ್ಣ ಗೌರಿ’ ಚಿತ್ರಕ್ಕೆ. ಅದರ ‘ನಟವರ ಗಂಗಾಧರ’ ಗೀತೆಗೆ ಪ್ರಶಸ್ತಿ ಬಂತು. ಜನ ಮನ್ನಣೆಯೂ ದೊರೆಯಿತು. ‘ಜೀವನ ತರಂಗ’, ‘ದೇವ ಮಾನವ’, ‘ಬೇವು ಬೆಲ್ಲ’, ‘ಚಂದ್ರಕುಮಾರ’, ‘ರಾಜೇಶ್ವರಿ’, ‘ಪತಿತ ಪಾವನೆ’, ‘ದೊಂಬರ ಕೃಷ್ಣ’... ಹೀಗೆ ಅನೇಕ ಚಿತ್ರಗಳಿಗೆ ಸಾಹಿತ್ಯ ರಚಿಸಿದ ಕೀರ್ತಿ ಅವರದ್ದು.

ಕರೀಂ ಖಾನರ ಹುಟ್ಟೂರು ಸಕಲೇಶಪುರ. ಅಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವೂ ಆಯಿತು. ಹಾಸನದಲ್ಲಿ ಪ್ರೌಢಶಾಲೆ ಮುಗಿಸಿದರು. ಆಗಲೇ ಆಂಗ್ಲ ಸರಕಾರದ ಕಣ್ಣು ತಪ್ಪಿಸಿ ಸ್ವಾತಂತ್ರ್ಯದ ಬಗ್ಗೆ ಉಪನ್ಯಾಸ ನೀಡತೊಡಗಿದ್ದರು. ಲಾವಣಿ ಬರೆದು, ಹಾಡಿ ಸ್ವಾತಂತ್ರ್ಯದ ಕುರಿತು ಜನ ಜಾಗೃತಿಗೆ ಯತ್ನಿಸಿದ್ದರು.

ಗಾಂಧೀಜಿ ಜತೆ ನಂದಿಬೆಟ್ಟದಲ್ಲಿ 15 ದಿನ ಇದ್ದದ್ದನ್ನು ಅವರು ಇಂದಿಗೂ ಮೆಲುಕು ಹಾಕುತ್ತಾರೆ. ಹಾಗೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ 5 ಬಾರಿ ಜೈಲು ವಾಸ ಅನುಭವಿಸಿದ್ದು, ಜೈಲಿನಲ್ಲಿ ನೀಡುತ್ತಿದ್ದ ಶಿಕ್ಷೆಗಳ ಬಗ್ಗೆಯೂ ತಿಳಿಸುತ್ತಾರೆ.

ಸ್ವಾತಂತ್ರ್ಯ ಹೋರಾಟದ ಸಮಯ ಜಾತೀಯತೆ ಇರಲಿಲ್ಲ. ನಂತರ ಅದು ಬೆಳೆಯಿತು. ರಾಜಕಾರಣಿಗಳೇ ಅದನ್ನು ಸ್ವಹಿತಕ್ಕಾಗಿ ಬೆಳೆಸಿದ್ದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅನಾಥರಾದರು ಎನ್ನುತ್ತಾರೆ ಖಾನ್‌.

ಹಂಸರತ್ನ, ಜಾನಪದಶ್ರೀ, ಜಾನಪದ ಜಂಗಮ, ಜೀಶಂಪಾ, ಜಾನಪದ ಪ್ರಶಸ್ತಿ, ಜಾನಪದ ರತ್ನ...ಅವರಿಗೆ ಸಿಕ್ಕ ಪ್ರಶಸ್ತಿಗಳು, ಬಿರುದುಗಳು ಅಸಂಖ್ಯ. ಇಂತಹ ದೇಶಪ್ರೇಮಿ, ಭಾಷಾ ಪ್ರೇಮಿ, ಸ್ವಾಭಿಮಾನಿ ಕಾಣಸಿಗುವುದು ವಿರಳ. ಕಾಂಗ್ರೆಸ್‌ಗಾಗಿ 75 ವರ್ಷ ದುಡಿದ, ಕನ್ನಡ ಭಾಷೆಗಾಗಿ ಶ್ರಮಿಸಿದ ಈ ಅಜಾತ ಶತ್ರುವಿಗೆ ಇನ್ನಾದರೂ ಸಿಗಬೇಕಾದ ಗೌರವ, ನ್ಯಾಯ ಸಿಕ್ಕಿದರೆ ಅದೇ ಅವರಿಗೆ ಸಲ್ಲುವ ದೊಡ್ಡ ಪ್ರಶಸ್ತಿ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more