• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತ ಸಾಮ್ರಾಜ್ಞಿ ಸುಬ್ಬಲಕ್ಷ್ಮಿ

By ಎಸ್‌. ಆರ್‌. ದೀಪಾ ಶ್ರೀನಿವಾಸ್‌
|

ಕೌಸಲ್ಯಾ ಸುಪ್ರಜಾ ರಾಮಾ ।

ಪೂರ್ವಾ ಸಂಧ್ಯಾ ಪ್ರವರ್ತತೇ ।

ಉತ್ತಿಷ್ಠ ನರಶಾರ್ದೂಲ ।

ಕರ್ತವ್ಯಂ ದೈವಮಾಹ್ನಿಕಮ್‌ ।।

ಸಿರಿ ಕಂಠದಿಂದ ತೇಲಿಬರುವ ಈ ಸುಪ್ರಭಾತವನ್ನು ಕೇಳುತ್ತಿದ್ದರೆ ಸಾಕು, ಎಂಥ ನಾಸ್ತಿಕನೂ ಮಧುರಾನುಭೂತಿಯಿಂದ ಪುನೀತಭಾವ ಹೊಂದುತ್ತಾನೆ.

ಇದೇ ಕಂಠಶ್ರೀಯಿಂದ ಹೊಮ್ಮಿ ಬಂದ ಸಾವಿರಾರು ಕೀರ್ತನೆಗಳು, ದೇವರನಾಮಗಳು, ಮೀರಾ ಭಜನೆಗಳು ಕೋಟ್ಯಂತರ ಜನರ ಮನವನ್ನು ತಣಿಸಿವೆ.

ಕರ್ನಾಟಕ ಸಂಗೀತಕ್ಕೆ ಮಹೋನ್ನತ ಮೆರುಗು ನೀಡಿದ ಸಂಗೀತ ಸಾಮ್ರಾಜ್ಞಿ ಎಂ. ಎಸ್‌. ಅಂದರೆ ಎಂ. ಎಸ್‌. ಸುಬ್ಬಲಕ್ಷ್ಮಿ ತಮಿಳುನಾಡಿನ ಮಧುರೈನಲ್ಲಿ 1926ನೆ ಸೆಪ್ಟೆಂಬರ್‌ 16ರಂದು ಜನಿಸಿದರು. ತಂದೆ ಸುಬ್ರಹ್ಮಣ್ಯ ಅಯ್ಯರ್‌, ತಾಯಿ ವೀಣೆ ಷಣ್ಮುಗವಡಿವು. ತಂದೆ ತಾಯಿ ಇಬ್ಬರೂ ಸಂಗೀತಾರಾಧಕರು. ಅತ್ಯಂತ ಸ್ಫುರದ್ರೂಪಿಯಾದ ಈ ಮಗುವಿಗೆ ಕುಂಜಮ್ಮ ಎಂದು ಹೆಸರಿಟ್ಟರು.

ಕುಂಜಮ್ಮ ಹುಟ್ಟು ಕಲಾವಿದೆ. ತಂದೆ ತಾಯಿಯ ಸಂಗೀತಾಸಕ್ತಿ ಕುಂಜಮ್ಮನಲ್ಲಿ ಪರಿಪಾಕವಾಯಿತು. ಎಳೆಯ ವಯಸ್ಸಿನಲ್ಲಿಯೇ ಕುಂಜಮ್ಮ ಸಂಗೀತದಲ್ಲಿ ತೋರಿದ ಆಸಕ್ತಿಯನ್ನು ಕಂಡು ಗಮನಿಸಿ ಆ ಮಗುವಿಗೆ ಸೂಕ್ತ ಪ್ರೋತ್ಸಾಹ ನೀಡಿದರು. ಅಷ್ಟೇ ಅಲ್ಲ ಹೆಚ್ಚಿನ ಶಿಕ್ಷಣಕ್ಕಾಗಿ ಸುಪ್ರಸಿದ್ಧ ಸಂಗೀತ ವಿದ್ವಾಂಸರಾದ ಮಧುರೈ ಶ್ರೀನಿವಾಸ ಅಯ್ಯಂಗಾರ್‌ ಬಳಿ ಸೇರಿಸಿದರು.

ಒಳ್ಳೆಯ ಗುರುವನ್ನು ಪಡೆಯಲು ಅದೃಷ್ಟವಿರಬೇಕು. ಎಂ. ಎಸ್‌. ಈ ವಿಷಯದಲ್ಲಿ ಅತ್ಯಂತ ಅದೃಷ್ಟಶಾಲಿ ಎಂದೇ ಹೇಳಬಹುದು. ಮಧುರೈ ಶ್ರೀನಿವಾಸ ಅಯ್ಯಂಗಾರ್‌ ಅವರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿರುವಾಗ ಅಕಸ್ಮಿಕವಾಗಿ ಗುರುಗಳು ನಿಧನರಾದರು. ಆದರೆ ಸುಬ್ಬಲಕ್ಷ್ಮಿ ಧೃತಿಗೆಡಲಿಲ್ಲ. ಚೇತರಿಸಿಕೊಂಡು ಸಂಗೀತ ವಿದ್ವಾಂಸರಾದ ಪಂಡಿತ ನಾರಾಯಣ ವ್ಯಾಸರಲ್ಲಿ ಅರಿಯಾಕುಡಿ ರಾಮಾನುಜಯ್ಯಂಗಾರ್‌, ಪಟ್ಟಂ ಸುಬ್ರಹ್ಮಣ್ಯ ಅಯ್ಯರ್‌ ಅವರಲ್ಲಿ ಶ್ರದ್ಧೆಯಿಂದ ಸಂಗೀತ ಶಿಕ್ಷಣ ಪಡೆದರು.

1940ರಲ್ಲಿ ತ್ಯಾಗರಾಜ ಸದಾಶಿವಂ ಅವರನ್ನು ವಿವಾಹವಾದರು. ಅಂದಿನಿಂದ ಅವರ ಮೊದಲ ಹೆಸರು ಕುಂಜಮ್ಮ ಮರೆಯಾಗಿ ಎಂ. ಎಸ್‌. ಸುಬ್ಬಲಕ್ಷ್ಮಿ ಎಂಬ ಹೆಸರು ಪಡೆದರು. ಮುಂದೆ ಈ ಹೆಸರು ಜಗದ್ವಿಖ್ಯಾತವಾಯಿತೆಂಬುದನ್ನು ಎಲ್ಲರೂ ಬಲ್ಲರು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಪರಿಣತಿ ಹೊಂದಿದ ಮೇಲೂ ಎಂ. ಎಸ್‌. ಮುಸಿರಿ ಸುಬ್ರಹ್ಮಣ್ಯ ಅಯ್ಯರ್‌, ಶೆಮ್ಮಂಗುಡಿ ಆರ್‌. ಶ್ರೀನಿವಾಸ ಅಯ್ಯರ್‌, ಮೈಸೂರು ವಾಸುದೇವಾಚಾರ್ಯ ಇವರಲ್ಲಿ ಮಾರ್ಗದರ್ಶನ ಪಡೆದರು. ಯುವ ಸಂಗೀತಗಾರರಿಗೆ ಮಾದರಿಯಾಗುವಂತಹ ಕಲಿಕೆಯ ತಹ ತಹ ಅವರದ್ದು.

ಸುಬ್ಬಲಕ್ಷ್ಮಿಯವರ ಸಂಗೀತ ಕೇಳಿ ಮಹಾತ್ಮಾ ಗಾಂಧಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜವಾಹರ್‌ಲಾಲ್‌ ನೆಹರೂ ಅವರಂತೂ ತಲೆದೂಗಿ ಸಂಗೀತ ಸಾಮ್ರಾಜ್ಯದ ಸಾಮ್ರಾಜ್ಞಿ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ದೇಶದ ಎಲ್ಲಾ ಭಾಷೆಯಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.

ಎಂ. ಎಸ್‌. ಅವರು ಕರ್ನಾಟಕ ಸಂಗೀತಕ್ಕೆ ಒಂದು ಭಜನೆಯ ವಿಶೇಷ ಕೊಡುಗೆಯನ್ನೂ ನೀಡಿದರು. ಪ್ರಪ್ರಥಮವಾಗಿ ಮೀರಾ ಭಜನ್‌ನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ತೆಕ್ಕೆಗೆ ತಂದರು. ಭಜನ್‌ ಎಂದರೆ ಅದುವರೆಗೂ ಹಿಂದೂಸ್ಥಾನಿ ಪದ್ಧತಿಯಲ್ಲಿ ಹಾಡುವಂಥದ್ದು ಎಂದೇ ಆಗಿತ್ತು.

ಎಲ್ಲ ವಾಗ್ಗೇಯಕಾರರ ಕೃತಿಗಳು ಎಂ. ಎಸ್‌. ಅವರ ಕಂಠಸಿರಿಯ ಮೂಲಕ ಹಾದು ಬಂದಾಗ ಅದೊಂದು ವಿನೂತನ ವಿಸ್ಮಯ ರಸಲೋಕಕ್ಕೆ ಕರೆದೊಯ್ಯುತ್ತವೆ. ಹಾಗೆಯೇ ಎಂ. ಎಸ್‌. ಅವರ ಗಮಕಗಳಲ್ಲಿ ಶಾಸ್ತ್ರೀಯತೆ ಅನನ್ಯ. ಬಿಗಿ, ಗಾಂಭೀರ್ಯ, ಗತ್ತು, ದೊಂದು ತುಂಬಿ ಹರಿವ ನದಿ. ಜೋಗ ಜಲಪಾತದಲ್ಲಿ ಧುಮ್ಮಿಕ್ಕುವ ಸಲಿಲ ಧಾರೆ.

ಈ ಮಹಾನ್‌ ಸಂಗೀತ ಸರಸ್ವತಿಗೆ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದಷ್ಟೇ ಅಲ್ಲ, ದೇಸದ ಅತ್ಯುನ್ನತ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ದೇಶ ವಿದೇಶಗಳಲ್ಲಿ ಅನೇಕ ಸಲ ಎಂ. ಎಸ್‌. ಸಂಗೀತ ಕಚೇರಿಗಳು ಏರ್ಪಟ್ಟಿವೆ.

ಈ ಭಾರತದ ಕೋಗಿಲೆ ರೂಪಿನಲ್ಲಿ ಸಹ ಸುರ ಸುಂದರಿ. ಇವರ ಸುಂದರ ಶರೀರ, ಸುಂದರ ಶಾರೀರ ಚಲನಚಿತ್ರಮಾಧ್ಯಮದಲ್ಲೂ ದಾಖಲಾಗಿವೆ. ಸೇವಾ ಸದನ, ಶಕುಂತಲ, ಸಾವಿತ್ರಿ, ಭಕ್ತ ಮೀರಾ ಮೊದಲಾದ ಚಿತ್ರಗಳಲ್ಲಿ ಎಂ. ಎಸ್‌. ಅಭಿನಯಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರ, ಕೀರ್ತಿಯ ಮಹಾಪೂರ ಅವರ ಪಾದದ ಬಳಿ ರಾಶಿ ರಾಶಿಯಾಗಿ ಬಿದ್ದರೂ ಒಂದಿಷ್ಟೂ ಅಹಂಕಾರವೆಂಬುದಿಲ್ಲ. ವಿನಮ್ರ ಸ್ವಭಾವ. ಸುಂದರ ಮನಸು. ಎಂ. ಎಸ್‌. ಸಂಗೀತವನ್ನು ಅಜರಾಮರಗೊಳಿಸಲೆಂದು ತಿರುಪತಿಯ ಟಿ.ಟಿ.ಡಿಯವರು ಅಣ್ಣಮ್ಮಾಚಾರ್ಯರ ಎಲ್ಲ ಕೀರ್ತನೆಗಳನ್ನು ಐದು ಸಂಪುಟಗಳಲ್ಲಿ ತಂದಿದ್ದಾರೆ.

*

ಪ್ರಶಸ್ತಿ ಪುರಸ್ಕಾರಗಳು

ಪದ್ಮಭೂಷಣ ಪ್ರಶಸ್ತಿ

ಕೇಂದ್ರ ಸಂಗೀತ ನಾಟಕ ಅಕಾಡೆಮಿ (1956)

ಮ್ಯಾಗ್ಸೆಸೇ ಪ್ರಶಸ್ತಿ (1974)

ಪದ್ಮವಿಭೂಷಣ ಪ್ರಶಸ್ತಿ (1975)

ಹಫೀಜ್‌ಆಲಿಖಾನ್‌ ಪ್ರಶಸ್ತಿ (1988)

ಭಾರತ ರತ್ನ (1996)

ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ಸದಸ್ಯತ್ವ

ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌

1963 ರಲ್ಲಿ ಇಂಗ್ಲೆಂಡಿನ ಎಡಿನ್‌ಬರೋವಿನಲ್ಲಿ ಏರ್ಪಾಟಾಗಿದ್ದ ಅಂತಾರಾಷ್ಟ್ರೀಯ ಉತ್ಸವದಲ್ಲಿ ಭಾಗಿ

ಲಂಡನ್‌, ಜಿನೀವಾ, ಕೈರೋ ಮುಂತಾದ ಕಡೆಗಳಲ್ಲಿ ಸಂಗೀತ ಕಚೇರಿಗಳು

1966ರಲ್ಲಿ ವಿಶ್ವ ಸಂಸ್ಥೆಯ ಕೋರಿಕೆಯಂತೆ ವಿಶ್ವಸಂಸ್ಥೆ ದಿನಾಚರಣೆ ಸಮಾರಂಭದಲ್ಲಿ ಕಚೇರಿ ನೀಡಲು ವಿಶೇಷ ಆಹ್ವಾನ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deepa Srinivas writes a profile of Dr. M. S Subbalakshmi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more