ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ

By Staff
|
Google Oneindia Kannada News
  • ಎಂ. ಆರ್‌. ಸುನಂದಾ
ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಹಿರಿಯಕ್ಕ ಸುಮಿತ್ರ ವೃತ್ತಿ ಜೀವನ ಆರಂಭಿಸಿದ್ದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿಯಾಗಿ. ಆನಂತರ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎನ್‌ಸಿಇರ್‌ಟಿಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಡಾಕ್ಟರೇಟ್‌ ಲಭಿಸಿದ್ದು ಕರ್ನಾಟಕ ಜಾನಪದ ಸಂಗೀತದಲ್ಲಿನ ಸಂಶೋಧನೆಗಾಗಿ.

‘ಕೆ. ಎಸ್‌. ನರಸಿಂಹ ಸ್ವಾಮಿಗಳ ಪುಸ್ತಕಗಳು ಒಂದಾದ ಮೇಲೊಂದು ಬರೋದು. ಒಂದ್‌ ಭಾವಗೀತೆಗೆ ಒಂದ್ವಾರ ಕೂತ್ಕೊಂಡು ಟ್ಯೂನ್‌ ಮಾಡ್ತಿದ್ವು ನಾನು, ವಿಮಲ, ಕಮಲ. ಆಮೇಲೆ ಆಕಾಶವಾಣೀಲಿ ಹಾಡ್ತಿದ್ವು’ ಎಂದು ಸುಮಿತ್ರ ಹೇಳ್ತಾರೆ.

ಮುಂದುವರಿಯುತ್ತಾ - ‘ಕವಿವರ್ಯ ಪು. ತಿ. ನರಸಿಂಹಾಚಾರ್‌ ಪ್ರತಿ ಭಾನ್ವಾರ ನಮ್ಮ ಮನೆಗೇ ಬಂದು ಗೋಕುಲ ನಿರ್ಗಮನದ ಹಾಡುಗಳನ್ನ ಹೇಳಿಕೊಡೋರು. ಹದಿನೈದು ಹದಿನಾರು ವರ್ಷದವ್ರಾಗಿದ್ದಾಗ್ಲಿಂದ ಜನಪದ ಗೀತೆಗಳ ಕಛೇರಿ ಕೊಡ್ತಿದೀವಿ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಂಭಾಂಗಣದಲ್ಲಿ ಮೊದಲ ಕಚೇರಿ. ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ರಾಜ್ಯವನ್ನು ಪ್ರತಿನಿಧಿಸ್ತಾ ಇದ್ವಿ. ಸೆಂಟ್ರಲ್‌ ಕಾಲೇಜ್‌ ಶತಮಾನೋತ್ಸವ ಸಮಾರಂಭದಲ್ಲಿ ಜನಪದ ಗೀತೆಗಳನ್ನ ಹಾಡಿ ನಾಡಿನ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದೀವಿ. ನಮ್ಮ ತಂದೆಗೆ ಮಕ್ಕಳನ್ನು ಚೆನ್ನಾಗಿ ಓದ್ಸಿ ಕೆಲ್ಸಕ್ಕೆ ಸೇರಸ್ಬಿಡಬೇಕು ಅನ್ನೋ ಹಂಬಲ.

ನಮ್ಮಮ್ಮ ಕೂಡ ಯಾವತ್ತೂ ನಮ್ಮನ್ನ ಮದ್ವೇಗೇ ಅಂತ ತಯಾರು ಮಾಡ್ಲಿಲ್ಲ . ನಮ್‌ ಗಮನವೆಲ್ಲಾ ಏನಿದ್ರೂ ಸುತ್ತ ಮುತ್ತ ನಡ್ಯೋ ಘಟನೆಗಳ ಬಗ್ಗೆ, ಸಂಗೀತ ಸಾಹಿತ್ಯದ ಬಗ್ಗೆ’.

ಅರಳಿದ ಕಮಲ

ಕಮಲ ಎಂ. ಎಸ್‌. ಬಾಲು ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿ ಜೀವನ ಆರಂಭಿಸಿದ್ದು ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕಿಯಾಗಿ.

ನಂತರ ಆಕಾಶವಾಣಿ ಬೆಂಗಳೂರು ಹಾಗೂ ವಿವಿಧ ಭಾರತಿ ಕೇಂದ್ರಗಳಲ್ಲಿ ತುಂಬು ಕಂಠದ ಆತ್ಮೀಯ ನಿರೂಪಣೆಯ ಉದ್ಘೋಷಕಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಈ ಅವಧಿಯಲ್ಲಿ ಅನೇಕ ಜನಪದ ಗೀತೆಗಳ ಕಾರ್ಯಕ್ರಮಗಳನ್ನು ಬರೆದು ಪ್ರಸ್ತುತಪಡಿಸಿರುವುದಲ್ಲದೆ, ರಾಜ್ಯ ಮಟ್ಟದ ಧ್ವನಿ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ದೂರದರ್ಶನದ ಜನಪ್ರಿಯ ನುಡಿ ಚಿತ್ರಗಳಿಗೆ ಕಂಠದಾನ ಮಾಡಿರುವ ಕಮಲ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕರ್ತೆ. ಅಕ್ಕ ಸುಮಿತ್ರ ಹೇಳುವಂತೆ ‘ಕಮ್ಲ ಏನೇ ಮಾಡಿದ್ರೂ ಚೆನ್ನಾಗೇ ಮಾಡ್ತಾಳೆ. ತುಂಬಾ ಒಳ್ಳೇ ಕಂಠ. ಆದ್ರೆ ಹಾಡಿನ ಅಭ್ಯಾಸ ಮಾಡ್ಬೇಕಾದ್ರೆ ಮಾತ್ರಾ ಕರ್ದೂ ಕರ್ದೂ ಕೂಡಸ್ಕೋಬೇಕಾಗ್ತಿತ್ತು. ತುಂಬಾ ಓದ್ತಾಳೆ. ತುಂಬಾ ತಾಳ್ಮೆ. ಇನ್ನೊಬ್ರನ್ನ ಅರ್ಥ ಮಾಡ್ಕೊಂಡು ಬೆಂಬಲ ನೀಡೋ ಅಂಥ ವ್ಯಕ್ತಿ. ಯಾರೂ ಹೇಳ್ದೇ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾಳೆ. ವೆರಿ ಸಪೋರ್ಟಿವ್‌ ಪರ್ಸನ್‌. ಕಮಲ ಇದ್ರೆ ನಂಗೆ ತಣ್ಣಗಿರತ್ತೆ ’.

ಸುಮಿತ್ರ ಕರ್ನಾಟಕ ಜಾನಪದ ಪರಿಷತ್ತು , ಜಾನಪದ ಲೋಕ, ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳಿಂದ ಪುರಸ್ಕೃತರು. ಬಿ. ಬಿ. ಸಿ. ಯಲ್ಲಿ ಪರಿಣತಿ ಪಡೆದು ಬಂದವರು. ಏಷ್ಯನ್‌ ಬ್ರಾಡ್‌ಕಾಸ್ಟಿಂಗ್‌ ಯೂನಿಯನ್‌ನ ಹೊಸ ಬಂಕೊ ಪ್ರತಿಷ್ಠಾನದ ಪ್ರಶಸ್ತಿಯನ್ನು ನಮ್ಮ ರಾಷ್ಟ್ರಕ್ಕೆ ತಂದುಕೊಟ್ಟವರು. ಎಲ್ಲಕ್ಕಿಂತ ಮಿಗಿಲಾಗಿ, ಜನಪದ ಗೀತೆ ಎಂದರೆ ಮೂಗು ಮುರಿಯುತ್ತಿದ್ದ ದಿನಗಳಲ್ಲಿ ಅದರ ಮೂಲ ಸ್ವರೂಪದಲ್ಲಿ ಜನಗಳಿಗೆ ತಲುಪಿಸಲು ಜನಗಳಿಗೆ ತಲುಪಿಸಲು ಶ್ರಮಿಸಿದ ಅಪರೂಪದ ಮಹಿಳೆ.

ತಂಗಿ ಕಮಲ ಹೇಳುವಂತೆ ‘ಸುಮಿತ್ರ ಅಂತರ್ಮುಖಿ. ನಮ್ಮ ತಾಯೀನೇ ಅವ್ಳಿಗೆ ಯಾವುದೇ ವಿಷಯದ ಬಗ್ಗೆ ಪ್ರಮಾಣ ಪತ್ರ ನೀಡಿದ್ರೂ ಅದರಲ್ಲಿ ಜನಪದ ಗೀತೆಗಳನ್ನು ತುಂಬಾ ಚೆನ್ನಾಗಿ ಹಾಡ್ತಾಳೆ ಅಂತ ಸೇರಸವ್ರು. ಅವ್ಳು ಫೈರ್‌ ಬ್ರಾಂಡ್‌. ಸಣ್ಣ ವಯಸ್ಸಿನಿಂದಲೂ ನಾವು ಜಗಳ ಆಡ್ತಿದ್ದಿದ್ದೇ ಕಡಿಮೆ. ಅಕಸ್ಮಾತ್‌ ಆಡಿದ್ರೂ ಅದು ಟೇಲ್‌ ಆಫ್‌ ಟು ಸಿಟೀಸ್‌ ಅಥ್ವಾ ಇನ್ಯಾವುದೋ ಪುಸ್ತಕಾನ ಮೊದ್ಲು ಓದ್ಬೇಕು ಅನ್ನೋದಕ್ಕೆ ಮಾತ್ರ. ಘಂಟೆಗಟ್ಲೆ ಕೂತು ಜನಪದ ಗೀತೆಗಳನ್ನ ಅಭ್ಯಾಸ ಮಾಡ್ತಿದೀವಿ. ಒಟ್ಟಿಗೆ ಕಚೇರಿಗಳನ್ನೂ ಕೊಡ್ತೀವಿ. ಆದ್ರೆ ಎಲ್ರೂ ಸ್ವತಂತ್ರ ಮನೋಭಾವದವರು. ನಮ್ಮ ನಮ್ಮದೇ ಆದ ರೀತೀಲಿ ಜೀವನ ರೂಪಿಸ್ಕೊಂಡಿದೀವಿ’.

ಅಕ್ಕಂದಿರ ಪ್ರೀತಿಯ ತಂಗಿ ವಿಮಲ

ಕಿರಿಯ ಸೋದರಿ ವಿಮಲ ರಾಜಗೋಪಾಲ್‌ ಇಂಗ್ಲಿಷ್‌ ಭಾಷೆಯಲ್ಲಿ ಬಿ. ಎ. ಆನರ್ಸ್‌ ಓದಿ ಕಾರ್ಯನಿರತ ಅಧಿಕಾರಿಯಾಗಿ ಆಕಾಶವಾಣಿಯಲ್ಲಿ ವೃತ್ತಿ ಆರಂಭಿಸಿದವರು. ಕನ್ನಡ ಜನಪದ ಗೀತೆಗಳನ್ನ ತೆಲುಗಿಗೆ ಭಾಷಾಂತರಿಸಿ ಪ್ರಸಾರ ಮಾಡಿದ ಹಿರಿಮೆ ಇವರದು. ಹಲವಾರು ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿ, ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿ ಸೇವಾ ನಿರತರಾಗಿದ್ದಾರೆ.

‘ವಿಮಲ ಹೊರ ದೇಶದಲ್ಲಿ ಕನ್ನಡ ಜನಪದ ಗೀತೆಗಳನ್ನ ಪರಿಚಯಿಸೋ ಕಾರ್ಯದಲ್ಲಿ ತೊಡಗಿದ್ದಾಳೆ. ಅಲ್ಲಿನ ತಾರಾಲಯ (ಪ್ಲಾನಿಟೋರಿಯಂ)ದ ಪ್ರದರ್ಶನಕ್ಕೆ ನೀಡಿರುವ ಸಂಗೀತದಲ್ಲಿ ಸೂರ್ಯ ಕಿರಣದ ಆಗಮನದ ಸಂದರ್ಭದಲ್ಲಿ ಏಳು ಚಿನ್ನದ ಗಿರಿ ಗೀತೆಯನ್ನು ಸೇರ್ಸಿ ಕನ್ನಡ ನಾಡಪದದ ಕಂಪು ಶಾಶ್ವತವಾಗಿ ಅಲ್ಲಿರೋ ಹಾಗೆ ಮಾಡಿದಾಳೆ. ತುಂಬಾ ಮುಖ್ಯ ಅಂದ್ರೆ ದೈಹಿಕ ಹಾಗೂ ಮಾನಸಿಕ ರೋಗಗಳಿಂದ ಬಳಲ್ತಾ ಇರುವವರ ಚಿಕಿತ್ಸೆಗಾಗಿ ಜನಪದ ಸಂಗೀತವನ್ನು ಬಳಸ್ಕೋತಾ ಇರೋದು. ಅವಳ ಜನಪದ ಗೀತೆಗಳಿಂದ ಆಕರ್ಷಿತರಾದ ಕೆಲವು ರೆಡ್‌ ಇಂಡಿಯನ್‌ ಕಲಾವಿದರು ಸ್ವಯಂ ಪ್ರೇರಿತರಾಗಿ ಬಂದು ಲಯವಾದ್ಯ ಸಹಕಾರ ನೀಡಿದ್ದೂ ಉಂಟು. ಎಲ್ಲದರಲ್ಲೂ ತನ್ನನ್ನು ತಾನು ಗಂಭೀರವಾಗಿ ತೊಡಗಿಸ್ಕೋತಾಳೆ’ ಎನ್ನುತ್ತಾರೆ ಹಿರಿಯಕ್ಕ ಸುಮಿತ್ರಾ.

ದಶಕಗಳ ಕಾಲ ತಮ್ಮನ್ನು ತಾವು ಜನಪದ ಗೀತೆಗಳ ಸಂಗ್ರಹದಲ್ಲಿ, ಗಾಯನದಲ್ಲಿ, ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಎಲ್‌. ಜಿ. ಸಹೋದರಿಯರ ಹಂಬಲ ಇದು ಕನ್ನಡ ಜನಪದಗೀತೆಗಳ ಮೂಲ ಸಾಹಿತ್ಯ, ಸಂಗೀತ ಮತ್ತು ವಾದ್ಯಗಳಿಗೆ ಇನ್ನೂ ಹತ್ತಿರ ಆಗ್ಬೇಕು.

ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X