ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್‌ಹಟನ್‌ ಮಸಾಲಾ !

By Super
|
Google Oneindia Kannada News

ಅಮೆರಿಕೆಯ ಆ್ಯಂಡ್ರೆ ಒಬ್ಬ ಬ್ಯಾಂಕ್‌ ಬಂಡವಾಳದಾರ. ತನ್ನ ಬಾಸ್‌ನ ಬಾಸ್‌ ನಾಥನ್‌ ಎಂಬಾತನ ಸಲಿಂಗ ಕಾಮದಾಸೆಗೆ ಆತ ಸಖನಾಗಬೇಕಾಗುತ್ತೆ. ಆ್ಯಂಡ್ರೆಯನ್ನು ಸ್ಟ್ರಿಪ್‌ ಕ್ಲಬ್‌ಗೆ ಕರೆದೊಯ್ಯುವ ನಾಥನ್‌, ಅಲ್ಲಿ ಅವನೊಡನೆ ಸಲಿಂಗ ಕಾಮಕೇಳಿ ಶುರುಮಾಡುತ್ತಾನೆ. ಇವರಿಬ್ಬರ ನಿತ್ಯ ಕಾಮದಾಟಕ್ಕೆ ಇನ್ನೊಂದು ಹುಡುಗಿ ಜತೆಯಾಗುತ್ತಾಳೆ. ಕೆಲವೇ ದಿನಗಳಲ್ಲಿ ಆ್ಯಂಡ್ರೆ, ನಾಥನ್‌ನ ಹೆಂಡತಿ ಸಿಬಿಲ್‌ ಪಕ್ಕ ಮಲಗಿರುತ್ತಾನೆ. ಇವತ್ತು ಗಂಡನ ಜತೆ ಮಲಗಿದರೆ, ನಾಳೆ ಹೆಂಡತಿ ಜತೆ- ಹೀಗೆ ಸಾಗುತ್ತದೆ ಆ್ಯಂಡ್ರೆ ಮಂಚದಾಟ. ಆಫೀಸಿನ ಪಾರ್ಟಿಯಲ್ಲಿ ಹತ್ತಿರಾಗುವ ಮಾರ್ಥಾ ಎಂಬ ಸೆಕ್ರೆಟರಿ ಜತೆಗೂ ನಡೆವ ಈತನ ಸಂಭೋಗ, ಆಕೆಯ ಹೊಟ್ಟೆಯಲ್ಲಿ ಮಗು ತುಂಬುತ್ತದೆ. ಇಷ್ಟು ಸಾಲದೆಂಬಂತೆ ಮಧು ಎಂಬ ಭಾರತದ ಹಳೆ ಪ್ರಿಯತಮೆ ತಾನು ಮದುವೆಯಾಗಿದ್ದ ಒಲ್ಲದ ಗಂಡನನ್ನು ತೊರೆದು, ಆ್ಯಂಡ್ರೆ ಮಂಚದಲ್ಲಿ ಅವನ ತೋಳ ತೆಕ್ಕೆಯಲ್ಲಿ ಸುಖ ಕಾಣುತ್ತಾಳೆ....

ಅಭಾ ದಾವೇಸರ್‌ ಎಂಬ ಕನ್ನಡದ ಮನಸ್ಸಿನ ಇಪ್ಪತ್ತೆಂಟರ ಹರೆಯದ ಹೆಂಗಸು ತನ್ನ ಮೊದಲ ಕಾದಂಬರಿ 'ದಿ ಥ್ರೀ ಆಫ್‌ ಅಸ್‌'ನಲ್ಲಿ ಇಂಥಾ ವಿಚಿತ್ರ ಕಾಮಕಥೆಯನ್ನು ಸಲೀಸಾಗಿ ಬರೆಯುತ್ತಾರೆ. ಪ್ಯಾರಾಗಟ್ಟಲೆ ಸೆಕ್ಸಿನ ವ್ಯಾಖ್ಯಾನ ಕೊಡುತ್ತಾ ಸಾಗುವ ಕಾದಂಬರಿ ಇವತ್ತು ಅಮೆರಿಕೆಯ ಬಿಳಿ ಸಲಿಂಗ ಕಾಮಿಗಳಿಗೆ ಅಚ್ಚುಮೆಚ್ಚು !

ದೆಹಲಿಯಲ್ಲಿ ವೈದ್ಯೆಯಾಗಿರುವ ಕನ್ನಡತಿ ಅಮ್ಮ ನ್ಯೂಯಾರ್ಕಲ್ಲಿ ನೆಲೆಸಿರುವ ಮಗಳ ಕಾದಂಬರಿ ಓದಿ ಕ್ಷಣ ಕಾಲ ಬೆಚ್ಚಿದ್ದು ದಿಟ. ಅಷ್ಟೊಂದು ಸೆಕ್ಸಿನ ಸರಕನ್ನು ತುರುಕದೆ ಹೇಳಬೇಕಾದ್ದನ್ನು ತಮ್ಮ ಮಗಳು ಹೇಳಬಹುದಿತ್ತು ಅನ್ನುವುದು ಆಕೆಯ ಅಂಬೋಣ. ಈಚೆಗೆ ಅಭಾ ಬೆಂಗಳೂರಿಗೆ ಬಂದಾಗ, ಎನ್‌.ಆರ್‌.ಕಾಲೋನಿಯಲ್ಲಿದ್ದ ಸೋದರ ಸಂಬಂಧಿಗಳು 'ಅವನ್ನೆಲ್ಲಾ ನೀನು ಅದು ಹೆಂಗೆ ಬರೆದೆ' ಅಂತ ಪ್ರಶ್ನೆ ಎಸೆಯುತ್ತಾ ಹುಬ್ಬೇರಿಸಿದ್ದರು. ಕೆಲವರು ನಿಮ್ಮ ಕಾದಂಬರಿಯ ನೀತಿ ಏನು ಅಂತ ಕಿಚಾಯಿಸಿದರು. 'ಎಂಥದೂ ಇಲ್ಲ' ಅಂತ ಅಭಾ ನಿರ್ದಾಕ್ಷಿಣ್ಯವಾಗಿ ಉತ್ತರ ಕೊಟ್ಟಿದ್ದೂ ಆಯಿತು. ತಾನು ಕೆಲಸ ಮಾಡಿದ ಪರಿಸರದಲ್ಲಿ ಗಮನಿಸಿದ Manhattan life ನ ಎಳೆಎಳೆಗಳನ್ನು ಹೊಸೆದು 'ದಿ ಥ್ರೀ ಆಫ್‌ ಅಸ್‌' ಕಾದಂಬರಿಯನ್ನು ಬರೆದುದಾಗಿ ಅಭಾ ಹೇಳಿಕೊಳ್ಳುತ್ತಾರೆ. ಅಂದಹಾಗೆ, ಕಿಚಾಯಿಸುವವರ ನಡುವೆ ಜೀವಿಸುವುದು ಅಭಾಗೆ ಈಗ ಅಭ್ಯಾಸವಾಗಿಹೋಗಿದೆ.

ಬೆಂಗಳೂರಲ್ಲೂ ಕೂಡ ಅನೇಕ ಪತ್ರಿಕೆಗಳು ಅಭಾಗೆ ತರಾವರಿ ಪ್ರಶ್ನೆಗಳನ್ನು ಎಸೆದದ್ದಾಗಿದೆ. ಈ- ಟೀವಿ ಈಕೆಯದ್ದೊಂದು ಸಂದರ್ಶನ ರೆಕಾರ್ಡ್‌ ಮಾಡಿಕೊಂಡು ಹೋಗಿದೆ.

ಕನ್ನಡವನ್ನು ಪರವಾಗಿಲ್ಲ ಎಂಬಂತೆ ಕಷ್ಟಪಟ್ಟು ಮಾತಾಡುವ ಅಭಾ ತಮ್ಮ ಶಾಲಾ ದಿನಗಳ ಕಳೆದದ್ದು ದೆಹಲಿಯಲ್ಲಿ. ಅಮ್ಮ ಕನ್ನಡತಿ. ಅಪ್ಪ ಪಂಜಾಬಿ. ಅಭಾ ಹೇಳಿಕೊಳ್ಳುವಂತೆ- ಅಮ್ಮನ ಕನ್ನಡತನವನ್ನೇ ಮೆಚ್ಚಿಕೊಂಡ ಈಕೆಯ ಯೋಚನೆಗಳಲ್ಲೂ ಕನ್ನಡದ ಬೇರುಗಳು ಹಾಸುಹೊಕ್ಕಾಗಿವೆ. ರಾಜಕೀಯ ತತ್ತ್ವಶಾಸ್ತ್ರ ಓದಲೆಂದು ಅಮೆರಿಕೆಯ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಹಾರಿದ ಅಭಾ Nietzsche ಬಗ್ಗೆ ಪ್ರಬಂಧ ಬರೆದರು. ಈಕೆಯಾಳಗೆ ಕವಯಿತ್ರಿ, ಕತೆಗಾರ್ತಿ, ಪತ್ರಕರ್ತೆ ಎಲ್ಲರೂ ಅಷ್ಟು ಹೊತ್ತಿಗೆ ಜಾಗೃತರಾಗಿದ್ದರು. ಅಭಾಗೆ ಚಿತ್ರ ಬರೆಯಲು ಕೂಡ ಬರುತ್ತದೆ.

ನ್ಯೂಯಾರ್ಕಲ್ಲೇ ನೆಲೆಯೂರಬಯಸಿದ ಈಕೆ ಕೆಲಸಕ್ಕಾಗಿ ದಿನಪತ್ರಿಕೆಗಳನ್ನು ಜಾಲಾಡಿದರು. ಲಂಡನ್‌ನಲ್ಲಿ ಮುಖ್ಯ ಕಚೇರಿಯಿದ್ದ ಸಂಸ್ಥೆಯಾಂದು ನ್ಯೂಯಾರ್ಕಲ್ಲಿ ಇನ್ನೊಂದು ಕೇಂದ್ರ ತೆರೆಯುತ್ತಿತ್ತು. ಅಲ್ಲಿ ಈಕೆಗೆ ಕೆಲಸ ಸಿಕ್ಕಿತು. ಅಲ್ಲಿ ಹಾಗೂ ಇನ್ನೊಂದು ಬಂಡವಾಳ ಬ್ಯಾಂಕ್‌ನಲ್ಲಿ ಒಟ್ಟು ಏಳು ವರ್ಷ ಕೆಲಸ ಮಾಡಿದ ಅಭಾ, ಅಲ್ಲಿನ ಜೀವನ, ಜನರ ಮನಸ್ಸು ಹಾಗೂ ಕೆಲಸದ ವಾತಾವರಣವನ್ನು ಅಚ್ಚುಕಟ್ಟಾಗಿ ಮನನ ಮಾಡಿಕೊಂಡರು. ಆಕೆ ಹೇಳುವಂತೆ ಅಲ್ಲಿ ಕಂಡರಿತ ಘಟನಾವಳಿಗಳೇ ಕಾದಂಬರಿಯ ವಸ್ತುಗಳಾದವು. ಇವತ್ತು ಅಭಾ ಫುಲ್‌ಟೈಂ ಲೇಖಕಿ. ಬರೀ ಬರೆಯೋದರಿಂದಲೇ ಏಗೋಕಾಗುತ್ತ ಅಂತ ಕೇಳಿದರೆ, 'ತಾಳ್ಮೆ, ಆತ್ಮವಿಶ್ವಾಸ ಹಾಗೂ ಒಂದಿನಿತು ಅದೃಷ್ಟ ಇದ್ದರೆ ಸಾಧ್ಯ ಸ್ವಾಮಿ' ಅಂತ ನಗುತ್ತಾರೆ.

ಅಭಾ ಈವರೆಗೆ ಕೆಲವು ಪದ್ಯಗಳನ್ನು ಬರೆದಿದ್ದಾರೆ. ಹೆಣೆದಿರುವ ಎರಡು ಇಂಗ್ಲಿಷ್‌ ಸಣ್ಣಕತೆ ಹಾಗೂ ಕಾದಂಬರಿಯನ್ನು ನಿರ್ಭಿಡೆಯಿಂದ ಪುರುಷ ಧ್ವನಿಯಲ್ಲಿ ಹೇಳಿದ್ದೇನೆ ಎನ್ನುವ ಅವರಿಗೆ ತಮ್ಮ ಎರಡನೇ ಕಾದಂಬರಿಯಲ್ಲಿ ಹೆಂಗಸಿನ ದನಿಯ ಮೂಲಕ ಕತೆ ಕಟ್ಟಿಕೊಡುವಾಸೆ. ಒಬ್ಬ ಭಾರತೀಯಳಾಗಿ, ಅದರಲ್ಲೂ ಒಬ್ಬ ಹೆಂಗಸಾಗಿ ಬಿಳಿ ಸಲಿಂಗ ಕಾಮಿ ಪುರುಷರ ದೃಷ್ಟಿಕೋನದಿಂದ ಇಂತಹ ಕಾದಂಬರಿಯನ್ನು ಬರೆಯೋಕೆ ಹೇಗೆ ಸಾಧ್ಯವಾಯಿತು ಅನ್ನೋದು ಅನೇಕರ ಅನುಮಾನ. ಆದರೆ, ಬಿಳಿಯ 'ಗೇ' ಪತ್ರಕರ್ತರು ಕಾದಂಬರಿಯನ್ನು ಬರೆದದ್ದು ಹೆಂಗಸೋ, ಭಾರತೀಯಳೋ ಅನ್ನುವುದನ್ನು ಕಿಂಚಿತ್ತೂ ಯೋಚಿಸದೆ ಮನಸಾರೆ ಮೆಚ್ಚಿಕೊಂಡಾಗ ಅಭಾಗೆ ಅಚ್ಚರಿ ಉಂಟಾಯಿತಂತೆ. ಭಾರತದಲ್ಲೇ ಇರುವ ಬರಹಗಾರರು ಹಾಗೂ ಅಮೆರಿಕೆಯಲ್ಲಿರುವ ಭಾರತೀಯ ಸಂಜಾತ ಬರಹಗಾರರನ್ನು ಸಹೃದಯರು ಸಲೀಸಾಗಿ ಗುರ್ತಿಸಲಿ ಎಂಬ ಕಾರಣಕ್ಕೆ ಅಭಾರಂಥಾ ಲೇಖಕಿಯರನ್ನು ಅಮೆರಿಕಾ, ದಕ್ಷಿಣ ಏಷ್ಯಾ ಬರಹಗಾರ್ತಿ ಎಂಬ ಕೆಟಗರಿಗೆ ಸೇರಿಸಿದೆ.

ಕಾದಂಬರಿಯಲ್ಲಿನ ಆ್ಯಂಡ್ರೆ ಪಾತ್ರದ ಇತರೆ ಪ್ರೇಮಿಗಳಿಗೆ ಹೋಲಿಸಿದರೆ ನಾಥನ್‌ ಪಾತ್ರಕ್ಕೆ ಅಸೂಯೆ ಇಲ್ಲ. ತನ್ನ ಕಾಂಕ್ಷೆಯನ್ನು ತೀರಿಸಿಕೊಳ್ಳಲು ಆ್ಯಂಡ್ರೆಯನ್ನು ಸಾಥಿಯಾಗಿಸಿಕೊಳ್ಳುವ ಕಾರಣಕ್ಕೋ ಏನೋ ಬಿಳಿ ಸಲಿಂಗ ಕಾಮಿಗಳ ಪತ್ರಕರ್ತರ ದಂಡಿಗೆ ಕಾದಂಬರಿ ಬಹುವಾಗಿ ಹಿಡಿಸಿದೆ.

ಕಾದಂಬರಿಗೆ ಅಶ್ಲೀಲ, ಹಾಗೆಹೀಗೆ ಅಂತ ಹಣೆಪಟ್ಟಿ ಕಟ್ಟುವ ಬದಲು ಅದನ್ನು ತಾರುಣ್ಯದ ಫ್ಯಾಂಟಸಿ ಪುಸ್ತಕವಾಗಿ ಸ್ವೀಕರಿಸುವುದು ಸಾಧ್ಯವಿದೆ. ಹೇಗೋ ಆ್ಯಂಡ್ರೆ ಹಠಾತ್ತನೆ ತನ್ನ ಜೀವನದ ಲೈಂಗಿಕ ಸ್ವರ್ಗಸುಖ ಕಂಡುಕೊಳ್ಳುವ ಘಟ್ಟಕ್ಕೆ ಬಂದುಬಿಟ್ಟಿದ್ದಾನೆ. ಇದು ಅವನ ತಾರುಣ್ಯದ ದಿಸೆ. ಹಾಗಂತ ಅವನು ಕಳಿತ ಮನಸ್ಸಿನ ಆಸಾಮಿ ಖಂಡಿತ ಅಲ್ಲ . ಹದಿಹರೆಯ ಒಬ್ಬೊಬ್ಬರಿಗೆ ಒಂದೊಂದು ವಯಸ್ಸಲ್ಲಿ ಅಡಕಾಯಿಸಿಕೊಳ್ಳುತ್ತದೆ ಅಂತ ತಮ್ಮ ಕಾದಂಬರಿಯ ಪಾತ್ರದ ಬಗ್ಗೆ ಅಭಾ ಮನಬಿಚ್ಚಿ ಮಾತಾಡುತ್ತಾರೆ.

Nietzsche (1844-1900) ಕುರಿತು ಅಭಾ ಬರೆದಿರುವ ಪ್ರಬಂಧ ಆಕೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. Nietzscheನನ್ನು ಎಡ ಹಾಗೂ ಬಲ ಪಂಥೀಯರಿಬ್ಬರೂ ತಮಗೆ ಬೇಕಾದಂತೆ ಕೆಟ್ಟದಾಗಿ ಬಳಸಿಕೊಂಡರು. ವಿಶ್ವವಿದ್ಯಾಲಯದ ಶಿಕ್ಷಣದ ಹೊಲಸು ರಾಜಕೀಯ, ಮಾನವೀಯತೆಯನ್ನು ತೊಳೆಯಲು ಹವಣಿಸುವ ಇಪ್ಪತ್ತನೇ ಶತಮಾನದ ಭಾವೋದ್ರೇಕ, ನಡಾವಳಿ ವಿಜ್ಞಾನ (behavioural sciences) ಗಳಿಂದ ತತ್ತ್ವ ಪಲ್ಲಟ ಮತ್ತು pseudoGothic industrial music- ಇವೆಲ್ಲವುಗಳಲ್ಲಿ ಒಂದು ಸಾಮಾನ್ಯ ಅಂಶವಿದೆ. ಅದೇ Friedrich Wilhelm Nietzsche ಎಂದು ಅಭಾ ಬರೆದಿದ್ದಾರೆ.

ಅಭಾ ಬರೆದ ಪ್ರಬಂಧದ ತಿರುಳಲ್ಲಿ ಆ್ಯಂಡ್ರೆ ಎಲ್ಲಿ ಹೊಂದುತ್ತಾನೆ ಎಂಬ ಯೋಚನೆ ಸುಳಿಯದೆ ಇರದು. ಅಭಾ ಹೇಳುತ್ತಾರೆ : ಆಧುನಿಕ ಜಗತ್ತಿನ ಎಡವಟ್ಟುಗಳ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ಕೆಲಸವನ್ನು Nietzsche ಮಾಡುತ್ತಾನೆ. ನಾವು ಎಡವಿದ್ದು ಎಲ್ಲಿ, ಆಧುನಿಕ ಜಗತ್ತಿನ ಸಮಸ್ಯೆಗಳೇನು, ಪ್ರಜಾತಂತ್ರ ಸೋತಿದ್ದು ಎಲ್ಲಿ- ಹೀಗೆ ಹತ್ತು ಹಲವು ವಾಸ್ತವಗಳನ್ನು ಅವನು ತಾತ್ತ್ವಿಕ ನೆಲೆಗಟ್ಟಿನಲ್ಲಿ ಹೇಳುತ್ತಾನೆ. ಅಧುನಿಕ ಅಥವಾ ಆಧುನಿಕೋತ್ತರ ಜಗತ್ತಿನಲ್ಲಿ ವಿಜ್ಞಾನ ನಮ್ಮನ್ನು ಗುಪ್ತ ಸಂಗತಿಗಳಿಂದ ಬೆತ್ತಲಾಗಿಸಿದೆ, ಪ್ರತಿಷ್ಠೆಯ ಬಟ್ಟೆ ಕೂಡ ಕಳಚಿಟ್ಟು ನಿಂತದ್ದಾಗಿದೆ. ಹೀಗೆ ಮಾಡಿದ್ದರಿಂದ ಇನ್ನೊಂದು ಹೆಸರನ್ನೋ, ಕೀರ್ತಿಯನ್ನೋ ನಾವು ಗಿಟ್ಟಿಸಿಕೊಂಡಿಲ್ಲ - ಈ ವಾಸ್ತವದ ಪ್ರತಿನಿಧಿ ಆ್ಯಂಡ್ರೆ. ಅವನೊಬ್ಬ post-Nietzschean ಚಾರಿತ್ರ್ಯದ ಆಸಾಮಿ. ಕಾಮ ಕಾಂಕ್ಷೆಯೇ ಅವನಿಗೆ ಮಿಕ್ಕೆಲ್ಲದ್ದಕ್ಕಿಂತ ಮುಖ್ಯವಾಗುತ್ತೆ. ತಾನು ಎಲ್ಲಿಗೆ ಹೊಂದಿಕೊಳ್ಳಬಲ್ಲೆ ಎಂಬುದರ ಗೊಂದಲ, ತಳಮಳವೇ ಇಂತಹ ನಡಾವಳಿಗೆ ಕಾರಣವಾಗುತ್ತದೆ. ಮಾನವನ ಸ್ಥಾನಮಾನಕ್ಕೆ ಮಸಿಬಳಿಯುವಂತಹ ಪ್ರವೃತ್ತಿ ಇದರ ಬುಡ. ಒಬ್ಬ ಆತ್ಮ ಪುರುಷನ ತೆವಲೆಂಬ ತಿಕ್ಕಲುತನದಿಂದ ಹೀಗಾಗತ್ತೆ. Nietzsche ದೃಷ್ಟಿಯಲ್ಲಿ ಪ್ರಜಾಪ್ರಭುತ್ವ bulldozer of greatness. ಅದೇನೇ ಇರಲಿ, 'ದಿ ಥ್ರೀ ಆಫ್‌ ಅಸ್‌'ನಲ್ಲಿನ ಲೈಂಗಿಕ ಸಂಭವನೀಯತೆ ಮತ್ತು ಸಂಯೋಜನೆಯೇ ನಗಿಸುವಂತಿದೆ. ಅದನ್ನು ನಾನು ಲೈಂಗಿಕ ತಮಾಷೆ ಅಂತ ಕರೆಯಲು ಕೂಡ ಹಿಂಜರಿಯೋದಿಲ್ಲ'.

ಸಂಪ್ರದಾಯ ವಾದಿಯಂತೆ ಹಳೇ ಫ್ಯಾಷನ್ನಿನ ಉಡುಗೆ ತೊಡುವ ಹೆಸರಾಂತ ಸಲಿಂಗ ಕಾಮಾಕಾಂಕ್ಷಿ ವುಡಿ ಅಲ್ಲೆನ್‌ ಬಗ್ಗೆ ಅಭಾ ಓದಿಲ್ಲವಾದರೂ, ಆತನ ಸಿನಿಮಾಗಳನ್ನು ನೋಡಿದ್ದಾರೆ. ತರಾವರಿ ಮನುಷ್ಯ- ಮನಸ್ಸುಗಳನ್ನು ಮುಕ್ತವಾಗಿ ತೆಕ್ಕೆಗೆ ತಂದುಕೊಳ್ಳುವ ನ್ಯೂಯಾರ್ಕ್‌ ನಗರಿ ಸದಾ ಗರಿಗರಿ. ಅಲ್ಲಿ ನಿಗಿನಿಗಿ ನೀಲಿ ಬಣ್ಣದ ಕೂದಲಿನವರು ಬೀದಿಯಲ್ಲಿ ಸಲೀಸಾಗಿ ನಡೆದು ಹೋದರೂ, ಯಾರೂ ಅವರನ್ನು ವಿಚಿತ್ರವಾಗಿ ನೋಡುವುದೇ ಇಲ್ಲ ಎನ್ನುವ ಅಭಾ ಈ ನಗರಿಯ ಅಂತರಾಳದ ಹೂರಣವನ್ನು ಸಾಕಷ್ಟು ಉಂಡಿದ್ದಾರೆ.

ನಬೋಕೋವ್‌ನ 'ಲೊಲಿಟ' ಕೃತಿಯನ್ನು ಓದಿಕೊಂಡಿರುವ ಅಭಾ ಪ್ರಕಾರ ಈಕೆ ಆತನ ಶೈಲಿಯನ್ನ್ನು ಕಿಂಚಿತ್ತೂ ಅನುಕರಿಸಿಲ್ಲ. ಆತನ ಕಾವ್ಯಮಯ ಭಾಷೆಯನ್ನು ಮನನ ಮಾಡಿಕೊಂಡರೇ ಅದು ಗೊತ್ತಾಗುತ್ತೆ ಎನ್ನುತ್ತಾರವರು. 'ದಿ ಥ್ರೀ ಆಫ್‌ ಅಸ್‌' ಕಾದಂಬರಿಯ ಬರಹದ ಶೈಲಿ ಪತ್ರಿಕೋದ್ಯಮದ ಬರವಣಿಗೆಗೆ ಹತ್ತಿರಾಗಿದೆ. ನ್ಯೂಯಾರ್ಕ್‌ ಹಾಗೂ ಅದರ ವೇಗಕ್ಕೆ ಈ ಭಾಷೆಯೇ ಸರಿಯಾಗಿ ಹೊಂದಿಕೊಳ್ಳುತ್ತದೆ ಎಂಬುದು ಅಭಾ ಕೊಡುವ ಸಮರ್ಥನೆ.

ಅಭಾ ಮೆಚ್ಚಿನ ಲೇಖಕ ಅಲನ್‌ ಬ್ಲೂಮ್‌. ಆತನ The Closing of the American Mind ಕೃತಿ ತಮ್ಮ ಹೃದಯಕ್ಕೆ ಹತ್ತಿರಾದುದು ಎನ್ನುವ ಅಭಾ, ಬ್ಲೂಮ್‌ ಬದುಕಿದ್ದಾಗ ಆತನನ್ನು ನೋಡಿರಲಿಲ್ಲ. ಚಿಕಾಗೋದಲ್ಲಿ ರಾಜಕೀಯ ತತ್ತ್ವಶಾಸ್ತ್ರದ ಪ್ರೊಫೆಸರ್‌ ಆಗಿದ್ದ ಆತನನ್ನೇ ತನ್ನ ಗುರಿ ಎಂದು ಅಭಾ ನಿರ್ಧರಿಸಿ ಆಗಿದೆ. ಅಂದಹಾಗೆ, ಕನ್ನಡ ಕಳಕಳಿಯಿರುವ ಅಭಾ ಈಗ ಇಂಗ್ಲಿಷ್‌ ಅನುವಾದಗೊಂಡಿರುವ ಅನಂತಮೂರ್ತಿಯವರ ಬರಹಗಳನ್ನು ಓದುತ್ತಿದ್ದಾರೆ. ಹೊಸ ತಲೆ ಮಾರಿನ ಕನ್ನಡ ಬರಹಗಾರರ ಹೆಸರೂ ಈಕೆಗೆ ಗೊತ್ತು. ಈ ಪೈಕಿ ಅನೇಕರ ಬರವಣಿಗೆ ಇಂಗ್ಲಿಷ್‌ಗೆ ತರ್ಜುಮೆಯಾಗಿರದ ಕಾರಣ, ಅವರೀಗ ನಿಧಾನ ಗತಿಯಲ್ಲಿ ಕನ್ನಡ ಕಲಿಯುತ್ತಿದ್ದಾರೆ !ಕನ್ನಡಕ್ಕೆ : ವಿಶಾಖ ಎನ್‌.)

English summary
Abha Dawesars The Three Of Us ( a novel) has descriptions of sex in every few paragraphs and has none of the lyrical eroticism of Lolita. But the novel, the New Yorkbased author insists, holds a mirror to the postmodern world where science has stripped us of all mystery and dignity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X