• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಕಾಸ್‌ ಕಾಮತ್‌ ಸಂದರ್ಶನ

By Super
|

ಐದು ಸಾವಿರ ವರ್ಷಗಳಷ್ಟು ಇತಿಹಾಸ ಅಡಗಿಸಿಟ್ಟುಕೊಂಡಿರುವ ಭಾರತ ಇವತ್ತಿಗೂ ಜಗತ್ತಿನ ಸಂಸ್ಕೃತಿಯ ತೊಟ್ಟಿಲು. ಜ್ಞಾನ, ಸೌಂದರ್ಯ, ಸಂಪತ್ತು- ಏನೇ ಆಗಿರಬಹುದು; ಹಿಂದಿನಂತೆ ಈಗಲೂ ವಿಶ್ವದ ಜನಮನಗಳನ್ನು ತನ್ನ ಅನನ್ಯತೆ ಮತ್ತು ಪ್ರಾಚೀನ ಸೊಬಗ ರಾಶಿಯಿಂದ ತೆಕ್ಕೆಗೆ ತೆಗೆದುಕೊಳ್ಳುವಷ್ಟು ಶಕ್ತ ನಮ್ಮ ಸಂಸ್ಕೃತಿ.

ನಮ್ಮ ಮನೆ- ಮನಗಳಲ್ಲೇ ಹಿಂದಣ ಸೀಟಿಗೆ ದೂಡಲ್ಪಟ್ಟಿರುವ ಪ್ರಾಚೀನ ಸಂಸ್ಕೃತಿಯ ಅಣಿ ಮುತ್ತುಗಳನ್ನು ಹಣಕಿ ಮುಂದಿನ ದಿನಗಳಲ್ಲಿ ನೋಡಲು ಏನೆಲ್ಲಾ ಕಸರತ್ತು ಮಾಡಬೇಕಾದೀತೋ ಎಂಬ ಆತಂಕ ಇವತ್ತಿನ ಜಾಗತೀಕರಣೋತ್ತರ ಸಮಾಜದಲ್ಲಿ ಸಹಜವಾಗೇ ಮೂಡಿದೆ. ತಂತ್ರಜ್ಞಾನದ ಭೂತದ ನೆರಳಡಿ ಸಂಸ್ಕೃತಿಯನ್ನು ಜತನವಾಗಿಡುವುದು ದೊಡ್ಡ ಸವಾಲೇ ಸರಿ. ಸಾವಿರದ ಒಂಭೈನೂರ ತೊಂಬತ್ತರ ದಶಕದಲ್ಲಿ ಭಾರತದಲ್ಲಿ ಅಂಬೆಗಾಲಿಕ್ಕುತ್ತಾ ಬಂದ ಇಂಟರ್ನೆಟ್‌ ಸವಲತ್ತು ಇವತ್ತು ಎದೆಸೆಟೆದು ನಿಂತಿದೆ. ಏನೇ ಮಾಹಿತಿ ಹುಡುಕಾಟಕ್ಕೂ ಅದರಲ್ಲಿನ ಕಿಟಕಿಯ ತೆರೆಯೋದು ಮಕ್ಕಳಿಗೂ ಅಭ್ಯಾಸವಾಗಿಹೋಗಿದೆ.

ಹೀಗೆ ಮಾಹಿತಿಗಾಗಿ ಜಾಲಾಡುವಾಗ ಪದೇ ಪದೇ ಒಂದು ಚೆಂದದ ವೆಬ್‌ಸೈಟು ಇದಿರಾಯಿತು. ಭಾರತೀಯ ಸಂಸ್ಕೃತಿಯ ಬಹುಮುಖಿ ಮಾಹಿತಿ ಆ ವೆಬ್‌ಸೈಟಿನಲ್ಲಿ ಪುಂಖಾನುಪುಂಖ ತೆರೆದುಕೊಂಡಿತು. ಕಣ್ಣು ತುಂಬಿಕೊಂಡಷ್ಟೂ ಫೋಟೋಗಳು. ಕಲೆ, ಚರಿತ್ರೆ, ಧರ್ಮ, ಹಬ್ಬ, ದೇವಸ್ಥಾನ, ಮಹಿಳೆ, ಕರಳು ಕಚ್ಚುವ ಭಿಕ್ಷುಕನ ಚಿತ್ರಣ, ರಂಜನೀಯ ಪ್ರಸಕ್ತ ಮಾಹಿತಿ- ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡಬೇಕು, ಹಾಗಿದೆ ವೆಬ್‌ಸೈಟಿನ ವಿಷಯಗಳ ಹರಹು. ಅಗಾಧ ಮಾಹಿತಿ ಹಾಗೂ ಭಲೆ ಭಲೆ ಚಿತ್ರಗಳಿದ್ದರೂ, ಡೌನ್‌ಲೋಡಿನ ತೊಂದರೆಯ ಕಿರಿಕಿರಿ ಕಿಂಚಿತ್ತೂ ಇಲ್ಲ. ಬೇಕಾದ ಮಾಹಿತಿಯ ಹುಡುಕಾಟ ಸುಲಿದ ಬಾಳೆಯ ಹಣ್ಣಿನಂದದಿ ಸಲೀಸು. ಈ ಡಾಟ್‌ಕಾಮೇ http://www.kamat.com.

ಈಗ ಈ ವೆಬ್‌ಸೈಟನ್ನು ತೆರೆದು, ಕೂತು ಕಣ್ತುಂಬಿಕೊಳ್ಳುವುದು ರೂಢಿಯಾಗಿಬಿಟ್ಟಿದೆ. ನನಗಷ್ಟೇ ಅಲ್ಲ, ಜಗತ್ತಿನ ಅಸಂಖ್ಯ ಇಂಟರ್ನೆಟ್‌ ‘ಜಾಲಿಗರ' ಪಾಲಿಗಿದು ಭಾರತೀಯ ಸಂಸ್ಕೃತಿಯ ಕನ್ನಡಿ. ಭಾರತೀಯ ಸಂಸ್ಕೃತಿಯ ಮಜಲುಗಳು ತಂತಾವೇ ತೆರೆದುಕೊಳ್ಳುವಷ್ಟು ಸೊಗಸಾದ ಮಾಹಿತಿ ವಿಂಗಡಣೆ ನೋಡುಗರಿಗೆ ಕಿಂಚಿತ್ತೂ ತ್ರಾಸು ಕೊಡದು.

ಇಂಥಾ ಸುಂದರ ವೆಬ್‌ಸೈಟನ್ನು ಜಗತ್ತಿಗೆ ಕೊಟ್ಟ ಕಾಮತ್‌ ಕುಟುಂಬಕ್ಕೆ ಧನ್ಯವಾದಗಳು.

ಬದುಕಿರುವವರೆಗೂ ದಣಿಯದೆ ಸಮಾಜದ ಮಜಲುಗಳನ್ನು ಬರಹಗಳಲ್ಲಿ ಕಡೆದಿಟ್ಟ , ಫೋಟೋಗಳಲ್ಲಿ ಹಿಡಿದಿಟ್ಟ ಕೃಷ್ಣಾನಂದ ಕಾಮತ್‌ (ಫೆಬ್ರವರಿ 2002ರಲ್ಲಿ ಇವರು ನಿಧನರಾದರು) ಮತ್ತು ಚರಿತ್ರೆ ಹಾಗೂ ಮಹಿಳಾ ಕ್ಷೇತ್ರದಲ್ಲಿ ಬರಹ ಕೃಷಿ ಮಾಡಿರುವ ಅವರ ಪತ್ನಿ ಜ್ಯೋತ್ಸ್ನಾ ಕಾಮತ್‌ ಅವರ ಬರಹಗಳ ಅಗಾಧ ಭಂಡಾರಕ್ಕೆ ಇಂಟರ್ನೆಟ್‌ ನೆಲೆ ಒದಗಿಸಿದ್ದು ಅವರ ಮಗ ವಿಕಾಸ್‌ ಕಾಮತ್‌.

ಕರ್ನಾಟಕಕ್ಕೆ ಕನ್ನಡಿ ಹಿಡಿಯುವ ಹಾದಿಯಲ್ಲಿ ಶುರುವಾದ ನೆಟ್‌ ಸಾಹಸ ಕ್ರಮೇಣ ಭಾರತದ ವಿವಿಧ ವಿಷಯಗಳಿಗೂ ಹರಡಿಕೊಂಡಿತು. ಇವತ್ತು ಕಾಮತ್‌ ಡಾಟ್‌ ಕಾಂನಲ್ಲಿರುವ ಪುಟಗಳ ಸಂಖ್ಯೆ ಎಷ್ಟು, ಚಿತ್ರಗಳೆಷ್ಟು ಅಂತ ಎಣಿಸತೊಡಗಿದರೆ ನಕ್ಷತ್ರಗಳನ್ನು ಲೆಕ್ಕ ಹಾಕುವ ಸಾಹಸಕ್ಕೆ ಕೈ ಹಾಕಿದಂತಾಗುತ್ತದೆ.

To know the best that has been said and thought in the world ಎಂಬ ಮ್ಯಾಥ್ಯೂ ಅರ್ನಾಲ್ಡ್‌ ನ ಸಂಸ್ಕೃತಿಯ ಕುರಿತ ವ್ಯಾಖ್ಯೆಗೆ ಕಾಮತ್‌ ಡಾಟ್‌ ಕಾಮ್‌ನಲ್ಲಿ ವಿಸ್ತುತ ರೂಪ ಸಿಕ್ಕಿದೆ ಎಂಬುದು ಅಕ್ಷರಶಃ ನಿಜ. ‘ಭಾರತೀಯ ಸಂಬಂಧಿ ವೆಬ್‌ಸೈಟುಗಳು ಅಂತರ್ಜಾಲದಲ್ಲಿ ವ್ಯಾಪಕವಾಗಲು ಉತ್ತೇಜಕ ಶಕ್ತಿಯಾಗಬೇಕು ಎಂಬುದು ನನ್ನಾಸೆ. ಇತರರೂ ವೆಬ್‌ಲಾಗ್‌ ಸೃಷ್ಟಿಸಲು ನಮ್ಮ ಸಾಫ್ಟ್‌ವೇರ್‌ ಲಭ್ಯವಿದೆ' ಎನ್ನುವ ವಿಕಾಸ್‌ ಕಾಮತ್‌ರ ಅಚ್ಚುಕಟ್ಟು ಕೆಲಸ ಹಾಗೂ ಇತರರೂ ಮೇಲೆ ಬರಬೇಕೆಂಬ ಹಂಬಲಕ್ಕೆ ಕಾಮತ್‌ ಡಾಟ್‌ ಕಾಂನ Tips and Tricks to build contentrich websites ಎಂಬ ವಿಭಾಗವೇ ಸಾಕ್ಷಿ. ಅಮೆರಿಕೆಯ ಸುಮಾರು ಇಪ್ಪತ್ತು ವಿಶ್ವವಿದ್ಯಾಲಯಗಳು ಭಾರತದ ಬಗ್ಗೆ ಪಕ್ಕಾ ವಿವರ ಪಡೆಯಲು ವಿದ್ಯಾರ್ಥಿಗಳಿಗೆ ಈ ವೆಬ್‌ಸೈಟನ್ನೇ ಶಿಫಾರಸ್ಸು ಮಾಡಿವೆ.

ಕೈ ಮನದ ತುಂಬಾ ಕೆಲಸವನ್ನೇ ಹಚ್ಚಿಕೊಂಡಿರುವ ವಿಕಾಸ್‌ ಕಾಮತ್‌ ಇ- ಮೇಲ್‌ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಬಿಡುವು ಮಾಡಿಕೊಂಡು ಉತ್ತರಿಸಿದರು. ಸಂದರ್ಶನದ ಸಾರ ಇದೋ ಇಂತಿದೆ...

ಕಾಮತ್‌ ಡಾಟ್‌ ಕಾಂ ಯೋಜನೆ ಕೈಗೆತ್ತಿಕೊಂಡಿದ್ದು ಯಾಕೆ?

ಬಹುಜನರಿಗೆ ತಲುಪಬಲ್ಲ ಇಂಟರ್ನೆಟ್‌ನ ಸೌಂದರ್ಯ ಅಪರೂಪವಾದದ್ದು. ಸಾಲದ್ದಕ್ಕೆ ಒಂದು ವೆಬ್‌ಸೈಟನ್ನು ರಚಿಸಿ, ಅದರಲ್ಲಿ ಕಲೆಹಾಕಿದ ಮಾಹಿತಿ ಜೋಡಿಸಲು ಆಗುವ ವೆಚ್ಚ ಅತ್ಯಲ್ಪ. ನನ್ನ ಅಪ್ಪ ಒಬ್ಬ ಫೋಟೋಗ್ರಾಫರ್‌ ಹಾಗೂ ಲೇಖಕರಾಗಿದ್ದರು. ಅಮ್ಮ ಚರಿತ್ರಕಾರರು. ಭಾರತದಲ್ಲಿ ಫೋಟಾಗ್ರಫಿಕ್‌ ಕೆಲಸಗಳನ್ನು ಪ್ರಕಟಿಸಲು ನಾವು ಹೆಣಗಾಡಿ ಸೋತೆವು. ಯಾಕೆಂದರೆ, ಈ ಕೆಲಸಕ್ಕೆ ಆಗುವ ಖರ್ಚು ದುಬಾರಿ. ಮುದ್ರಣಾ ಜಗತ್ತಿನಲ್ಲಿ ಬೆಳಕು ಕಾಣದ ಕೆಲಸವನ್ನು ಜನರಿಗೆ ಮುಟ್ಟಿಸಲು ವೆಬ್‌ ಲೋಕ ವೇದಿಕೆಯಾಯಿತು. ಬರಹದ ಸರಕು ಹಾಗೂ ತಂತ್ರಜ್ಞಾನ ಎರಡೂ ಕೈಲಿದ್ದುದರಿಂದ ಯೋಜನೆ ಸಲೀಸಾಗಿ ಜಾರಿಗೆ ಬಂತು.

ನಿಮ್ಮ ಅಪ್ಪ- ಅಮ್ಮ ಅಲ್ಲದೆ, ನಿಮಗೆ ಪ್ರೇರಕ ಶಕ್ತಿ ಯಾರಾದರೂ ಇದ್ದಾರಾ?

ಈ ವಿಷಯದಲ್ಲಿ ಅಪ್ಪ- ಅಮ್ಮನ ಹೊರತು ಯಾರನ್ನೂ ನೆನೆಯಲು ಆಗಲ್ಲ. ನಸೀಬು ನನ್ನ ಕಡೆಗಿತ್ತು ಅನ್ನಬಹುದಷ್ಟೆ. ನಮ್ಮ ವೆಬ್‌ಸೈಟಿನ ಒಂದು ಚಿತ್ರಕ್ಕೆ If the Kamats dont do it, who will ? ಅಂತ ಕ್ಯಾಪ್ಶನ್‌ ಕೊಟ್ಟಿದ್ದೇವೆ. ಒಂದಲ್ಲ ಒಂದು ರೀತಿ, ಇದೇ ನನಗೆ ದಾರಿದೀಪ.

ಅಷ್ಟೊಂದು ವಿಷಯಗಳನ್ನು ಅಪ್‌ಲೋಡ್‌ ಮಾಡಲು ಸಮಯ ಎಲ್ಲಿಂದ ತರುತ್ತೀರಿ?

ಕಷ್ಟ ಆಗತ್ತೆ ನಿಜ. ವೆಬ್‌ಸೈಟಿನ ಕೆಲಸಕ್ಕೆ ಸಮಯ ಕೊಟ್ಟು , ನಮ್ಮ ಬದುಕಿನ ಕೆಲವು ಗಳಿಗೆಗಳಿಂದ ನಾವು ವಂಚಿತರಾಗಿರುವುದೂ ನಿಜ. ಸುಮಾರು ಐವತ್ತು ವರ್ಷಗಳ ಹಿಂದೆ ಅಪ್ಪ ಒಂದು ಕ್ಯಾಮರಾ ಎರವಲು ಪಡೆದು ಅದರಲ್ಲಿ ಜಗತ್ತನ್ನು ತುಂಬಿಕೊಳ್ಳತೊಡಗಿದರು. 1970 ಹಾಗೂ 80ರ ದಶಕದಲ್ಲಿ ನನ್ನ ಅಪ್ಪ- ಅಮ್ಮ ಮಾಡಿದ ಸಂಶೋಧನೆ ಬೆಟ್ಟದಷ್ಟು. ಆ ಬೆಟ್ಟದ ಮುಂದೆ ಅಪ್‌ಲೋಡ್‌ ಮಾಡುವ ನನ್ನ ಕೆಲಸ ಇರುವೆಯಂತೆ ಅನ್ನೋದೂ ನಿಜ.

ನಿಮ್ಮ ವೆಬ್‌ಸೈಟ್‌ ಬಗ್ಗೆ ವಿದೇಶೀಯರ ಅಭಿಪ್ರಾಯ ಹೇಗಿದೆ?

ನಮ್ಮ ಓದುಗರ ಬಳಗದಲ್ಲಿ ವಿದೇಶೀಯರಿಗೆ ಬಹು ಮುಖ್ಯ ಸ್ಥಾನ ಕೊಡುತ್ತೇನೆ. ಭಾರತೀಯ ಸಂಸ್ಕೃತಿಯ ಪಕ್ಕಾ ಅಧ್ಯಯನಕ್ಕೆ ನಮ್ಮ ವೆಬ್‌ಸೈಟ್‌ ದಾರಿದೀಪ ಎಂದು ಅಮೆರಿಕೆಯ ಇಪ್ಪತ್ತು ವಿಶ್ವವಿದ್ಯಾಲಯಗಳು ಮತ್ತು ಉತ್ತರ ಅಮೆರಿಕ ಹಾಗೂ ಯೂರೋಪಿನ ಅನೇಕ ಶಾಲೆಗಳು ಮಾನ್ಯ ಮಾಡಿರುವುದೇ ಇದಕ್ಕೆ ಸಾಕ್ಷಿ.

ವೆಬ್‌ಸೈಟಿನಲ್ಲಿ ಇನ್ನೂ ಏನೇನು ಮಾಹಿತಿ ತುಂಬುವ ಇರಾದೆಯಿದೆ?

ಪರಿಷ್ಕರಿಸಿದ ಹಾಗೂ ಪರಿಷ್ಕರಿಸದ ಸಾಕಷ್ಟು ಮಾಹಿತಿ ಅಪ್‌ಲೋಡ್‌ ಆಗಲು ಬಾಕಿ ಇದೆ. ಅಪ್ಪ ಕಲೆ ಹಾಕಿರುವ Anthropological illustrations ನ ಜಾಲಕ್ಕೆ ತುಂಬುವ ಕೆಲಸ ಬಾಕಿಯಿದೆ. ವೆಬ್‌ಸೈಟಿನಲ್ಲಿ ಈವರೆಗೆ ಯಾರೂ ಇಂಥಾ ಕೆಲಸ ಮಾಡಿಲ್ಲ. ಭಾರತದಲ್ಲಿ ಅಪ್ಪ ತೆಗೆದಿರುವ ಫೋಟೋಗಳ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು. ಈಗ ವೆಬ್‌ಸೈಟಿಗೆ ತುಂಬಲಾಗಿರುವುದು ಕೇವಲ 8 ಸಾವಿರ, ಅಂದರೆ ಬಾಕಿಯಿರುವ ಕೆಲಸ ಎಷ್ಟು ಅಗಾಧ ಅನ್ನೋದನ್ನು ನೀವೇ ಊಹಿಸಿಕೊಳ್ಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Exclusive Interview with Kamat.coms Vikas Kamath

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more