ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವ್ಯಪ್ರಿಯನಯ್ಯ ಈ ನಟರಾಜ ...ಸಂಗೀತ ಪ್ರೇಮಿ, ತಂತ್ರಜ್ಞಾನಿ, ಸಂಘಟಕ- ಇವೆಲ್ಲಕ್ಕೂ ಮಿಗಿಲಾಗಿ ಮಾನವೀಯ ಸಂವೇದನೆಗಳಿಗೆ ತುಡಿವ ಜೀವ ನಟರಾಜ್‌ ಅವರದ್ದು . ಭಕ್ತಿಲೋಕದ ನಟರಾಜ ನಾಟ್ಯಪ್ರಿಯನಾದರೆ- ಈ ನಟರಾಜ ಕಾವ್ಯಪ್ರಿಯ ; ಪದಗಳ ಜೊತೆ ಕುಣಿವ ಮಣಿವ ನಟರಾಜ. ಮೈ.ಶ್ರೀ. ಕಾವ್ಯವೆಂದರೆ ಅಣು ಕಿರಣಗಳ ನಡುವೆ ಅರಳುವ ಕಾವ್ಯ!

By Staff
|
Google Oneindia Kannada News

ಮುಖಪುಟ --> ಸಾಹಿತ್ಯ ಸೊಗಡು --> ಜನ ಈ ದಿನ --> ವ್ಯಕ್ತಿ ಚಿತ್ರಏಪ್ರಿಲ್‌ 11, 2003

ಕಾವ್ಯಪ್ರಿಯನಯ್ಯ ಈ ನಟರಾಜ ...
ಸಂಗೀತ ಪ್ರೇಮಿ, ತಂತ್ರಜ್ಞಾನಿ, ಸಂಘಟಕ- ಇವೆಲ್ಲಕ್ಕೂ ಮಿಗಿಲಾಗಿ ಮಾನವೀಯ ಸಂವೇದನೆಗಳಿಗೆ ತುಡಿವ ಜೀವ ನಟರಾಜ್‌ ಅವರದ್ದು . ಭಕ್ತಿಲೋಕದ ನಟರಾಜ ನಾಟ್ಯಪ್ರಿಯನಾದರೆ- ಈ ನಟರಾಜ ಕಾವ್ಯಪ್ರಿಯ ; ಪದಗಳ ಜೊತೆ ಕುಣಿವ ಮಣಿವ ನಟರಾಜ. ಮೈ.ಶ್ರೀ. ಕಾವ್ಯವೆಂದರೆ ಅಣು ಕಿರಣಗಳ ನಡುವೆ ಅರಳುವ ಕಾವ್ಯ!

  • ಚ.ಹ. ರಘುನಾಥ
Dr. M. S. Nataraj with his Family‘ಭಾರತದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯಾದಾಗ ಇದ್ದಕ್ಕಿದ್ದಂತೆ ಜಗತ್ತಿನ ದೃಷ್ಟಿ ಭಾರತದ ಕಡೆ ಹರಿಯಿತು. ಹತ್ತು ಸಾವಿರ ಮೈಲಿಯ ಆಚೆ ಒಬ್ಬ ಭಾರತೀಯನ ಕೊರಳಿನಲ್ಲಿ ಅಯ್ಯೋ ಎಂಬ ಧ್ವನಿ ಹೊರಟಿತು. 77ನೆ ಮಾರ್ಚಿನಲ್ಲಿ ಚುನಾವಣೆಯಾದಾಗ ಅದೇ ಕಿರುಗೊರಳು ಈ ಪದ್ಯವನ್ನು ಉಸಿರಿತು... ಅರವತ್ತೆಂಟು ಕೋಟಿ ನರಪೇತಲಗಳ ಪ್ರತಿನಿಧಿಯಾದ ನನಗೆ, ನ್ಯೂಯಾರ್ಕಿನಲ್ಲೊಬ್ಬ ನಮ್ಮ ತರುಣ ‘ಪ್ರತಾಪವಾನ್‌ ಶಂಖಂ ದಧ್ಮೌ’ ನೋಡಿ ಆಶ್ಚರ್ಯವೂ ಸಂತೋಷವೂ ಅತೀವ ನಾಚಿಕೆಯೂ ಉಂಟಾಯಿತು.’

- ಡಾ.ಮೈ.ಶ್ರೀ.ನಟರಾಜ್‌ರ ‘ವಿಚಿತ್ರ ಚೈತ್ರ’ ಕವಿತೆಯ ಕುರಿತು ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮ ‘ಅಮೆರಿಕಾದಲ್ಲಿ ಗೊರೂರು’ ಕೃತಿಯಲ್ಲಿ ಮಾಡಿರುವ ಉಲ್ಲೇಖವಿದು. ಸರಿ ಸುಮಾರು ಇಪ್ಪತ್ತೆೈದು ವರ್ಷಗಳ ಹಿಂದೆ ಗೊರೂರರ ಮೆಚ್ಚುಗೆಗೆ ಪಾತ್ರರಾಗಿದ್ದ ನಟರಾಜ್‌ ಈಗ ಗೊರೂರರ ಹೆಸರಿನ ಪ್ರಶಸ್ತಿ ಪಡೆದಿದ್ದಾರೆ. ಯೋಗಾಯೋಗ ಅಂದರೆ ಇದೇ ಇರಬೇಕು!

ಇಲ್ಲಿದೆ ನಮ್ಮನೆ ಅಲ್ಲಿರುವೆ ಸುಮ್ಮನೆ ಎಂದು ಅಮೆರಿಕಕ್ಕೆ ಹೋಗಿ ನೆಲೆಸಿರುವ ಡಾ.ಮೈ.ಶ್ರೀ.ನಟರಾಜ್‌ ಅಮಾವಾಸ್ಯೆಗೊಂದು ಹುಣ್ಣಿಮೆಗೆರಡು ಕವಿತೆ ಬರೆಯುವ ಪಂಕ್ತಿಗೆ ಸೇರಿದವರಲ್ಲ . ಲಭ್ಯ ಅಂಕಿಅಂಶಗಳ ಪ್ರಕಾರ ಮೂರು ದಶಕಗಳಿಂದ ಪದ್ಯ ಹೊಸೆಯುತ್ತಿದ್ದರೂ ನಟರಾಜ್‌ ಈವರೆಗೆ ಪ್ರಕಟಿಸಿರುವುದು ಎರಡು ಕವನ ಸಂಕಲನ ಮಾತ್ರ (‘ನಾನೂ ಅಮೆರಿಕನ್‌ ಆಗಿಬಿಟ್ಟೆ’- 1984, ‘ಅಮೆರಿಕನ್ನಡ ಪ್ರಕಾಶನ’ದ ಪ್ರಕಟಣೆ ಹಾಗೂ ‘ಮಧುಚಂದ್ರ, ಸಿರಿಕೇಂದ್ರ’- 2002, ಮೈಸೂರಿನ ಗೀತಾ ಬುಕ್‌ಹೌಸ್‌ ಪ್ರಕಟಣೆ). ಕಾಡಬೇಕು, ಕಾಡಿದ್ದು ಗಟ್ಟಿಯಾಗಬೇಕು, ಗಟ್ಟಿಯಾಗಿದ್ದು ತಂತಾನೇ ಅರಳಬೇಕು- ಇದು ನಟರಾಜ್‌ ಎಂಬ ಕವಿಯೆದೆಯಲ್ಲಿ ಕವಿತೆ ಅರಳುವ ಪರಿ. ಅಂದಮಾತ್ರಕ್ಕೆ ನಟರಾಜ್‌ ಬರೆದುದೆಲ್ಲ ಅನನ್ಯ ಅಮೂಲ್ಯ ಎಂತೇನಲ್ಲ . ಆದರೆ ಬರೆದ ಪ್ರತಿಯಕ್ಕರದಲ್ಲೂ ಕವಿಯ ಪ್ರಾಮಾಣಿಕತೆಗೆ ಎಲ್ಲೂ ಮೋಸವಾಗಿಲ್ಲ .

ಮೇರಿಲ್ಯಾಂಡಿನ ಗೈಥರ್ಸ್‌ಬರ್ಗ್‌ನಲ್ಲಿ ವಾಸವಾಗಿರುವ ನಟರಾಜ್‌ ಅವರನ್ನು ಅನೇಕರು ಗುಳಿಗೆ ಕೊಡುವ ಡಾಕ್ಟರು ಎಂದುಕೊಂಡಿರುವುದುಂಟು. ಏಕೆಂದರೆ, ವೈದ್ಯರ ಶಿಸ್ತಿನ ರುಜು ನಟರಾಜ್‌ ವ್ಯಕ್ತಿತ್ವ ಹಾಗೂ ಕವಿತ್ವ ಎರಡರಲ್ಲೂ ಎದ್ದು ಕಾಣುವುದುಂಟು. ದಶಕಗಳ ಹಿಂದೆ ಸೀಮೋಲ್ಲಂಘನ ಮಾಡುತ್ತಿದ್ದವರಲ್ಲಿ ಡಾಕ್ಟರುಗಳ ಸಂಖ್ಯೆಯೇ ಹೆಚ್ಚು. ಆ ಅಂದಾಜಿನಿಂದಾಗಿ ಕೂಡ ನಟರಾಜ್‌ ಹೆಸರಿನ ಹಿಂದೆ ಅಂಟಿಕೊಂಡ ಡಾಕ್ಟರ್‌ ವಿಶೇಷಣದಲ್ಲಿ ಅನೇಕರು ವೈದ್ಯಕೀಯದ ವಾಸನೆ ಕಲ್ಪಿಸಿಕೊಳ್ಳುವುದುಂಟು. ಆದರೆ, ವಸ್ತುಸ್ಥಿತಿ ಬೇರೆಯೇ ಸ್ವಾಮಿ- ನಟರಾಜ್‌ ಡಾಕ್ಟರಲ್ಲ , ಇಂಜಿನಿಯರ್ರು! ಒಂದರ್ಥದಲ್ಲಿ ನಟರಾಜ್‌ ವೈದ್ಯರೂ ಹೌದು ; ಅವರಲ್ಲುಂಟು ನಗೆ ಗುಳಿಗೆಯ ಪ್ರಿಸ್ಕಿೃಪ್ಷನ್‌. ಉದಾಹರಣೆ ಬೇಕಿದ್ದಲ್ಲಿ ಅವರ ಕವಿತೆಗಳನ್ನು ಓದಿ, ಓದೋದುತ್ತಲೇ ಹಸನ್ಮುಖಿಗಳಾಗಿ.

*

‘ತನ್ನನ್ನೇ ತಾನು ಗೇಲಿ ಮಾಡಿಕೊಳ್ಳಬಲ್ಲ ನಟರಾಜರು ಯಾರನ್ನಾದರೂ ಗೇಲಿ ಮಾಡಿ ಬಚಾಯಿಸಿಕೊಳ್ಳಬಲ್ಲರು’ ಎನ್ನುತ್ತಾರೆ, ಜ್ಞಾನಪೀಠಿಗ ಹಾಗೂ ನಟರಾಜರಂತೆಯೇ ಸಾಂಸ್ಕೃತಿಕ ರಂಗದ ಡಾಕ್ಟರ್‌ ಆದ ಡಾ.ಯು.ಆರ್‌.ಅನಂತಮೂರ್ತಿ. ವರಸೆಯಲ್ಲಿ ಅನಂತಮೂರ್ತಿಗಳು ಮೈ.ಶ್ರೀ.ಗೆ ಮೇಷ್ಟ್ರಾದರೂ, ಶಿಷ್ಯನ ಕಿಚಾಯಿಸುವಿಕೆಯಿಂದ ಪಾರಾಗುವುದು ಅವರಿಗೆ ಸಾಧ್ಯವಾಗಿಲ್ಲ . ಮೈ.ಶ್ರೀ. ಯಾರನ್ನು ಬಿಟ್ಟಿದ್ದಾರೆ ಹೇಳಿ. ಅಜಾತಶತ್ರು ಹರಿಯನ್ನೇ ಹುರಿದು ಮುಕ್ಕಿದ ಕಾವ್ಯಕೀರ್ತಿ ಅವರದು !

ನಟರಾಜ್‌ ಕವಿತೆ ಆಡುಮಾತಿಗೆ ಹತ್ತಿರವಾದದ್ದು . ಓದುಗರನ್ನು ಯಾವ ಸಾಲಿನಲ್ಲೂ ದಾರಿ ತಪ್ಪಿಸದ ಮೈ.ಶ್ರೀ. ಕವಿತೆಗಳಲ್ಲಿ ವಿಡಂಬನೆಗೆ ಮೊದಲ ಮಣೆ. ಅಂದಮಾತ್ರಕ್ಕೆ ಅದು ಕಾಲೆಳೆಯುವ, ಆತ್ಮರತಿಯ ವಿಡಂಬನೆಯಲ್ಲ ; ಸದಭಿರುಚಿಯ, ಆರೋಗ್ಯಕರ ಕಿಚಾಯಿಸುವಿಕೆ. ನಗೆ ನಾಭಿಯಲ್ಲಿ ವಿಷಾದವೇ ಸ್ಥಾಯಿಯಾದ ಈ ವಿಡಂಬನೆ ಸಮಾಜದ ಸ್ವಾಸ್ಥ್ಯಕ್ಕೆ ಒದಗುವಂಥದ್ದು. ಸಬರಮತಿಯ ರೈಲು ದುರಂತ, ಒಸಾಮನ ಅಟ್ಟಹಾಸ, ಬುಷ್‌ನ ಭಸ್ಮಾಸುರ ಅವತಾರ ನಟರಾಜ್‌ರ ಚುರುಕು ಲೇಖನಿಯಲ್ಲಿ ಗರಿಗರಿ ಕವಿತೆಯಾಗುತ್ತದೆ. ಸಾಂಸ್ಕೃತಿಕ ರೋಗ /ಆರೋಗ್ಯಗಳ ಸಂಗತಿಗಳನ್ನು ಈ ಡಾಕ್ಟರು ಚೆನ್ನಾಗಿ ಬಲ್ಲರು.

ಕವಿತೆಯಷ್ಟೇ ಅಲ್ಲ , ನಾಟಕವೂ ಮೈ.ಶ್ರೀ.ಗೆ ಒಲಿದಿದೆ. ‘ಡಾ.ಮೈ.ಶ್ರೀ. ನಟರಾಜ್‌ರ ಎರಡು ನಾಟಕಗಳು : ಮೀನಿನ ಹೆಜ್ಜೆ ಮತ್ತು ನೇಣು’ ಕೃತಿಯನ್ನು 1996 ರಲ್ಲಿ ಅಭಿವ್ಯಕ್ತಿ ಪ್ರಕಾಶನ ಪ್ರಕಟಿಸಿದೆ. ‘ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು’ ಕೃತಿಯನ್ನು ಗೀತಾ ಬುಕ್‌ ಹೌಸ್‌ 2000 ಇಸವಿಯಲ್ಲಿ ಪ್ರಕಟಿಸಿದೆ. ಅಮೆರಿಕದ ಕನ್ನಡ ಸಂಘಗಳ ರಂಗ ವೇದಿಕೆಗೆ ಕನ್ನಡ ನಾಟಕಗಳನ್ನು ತಂದ ಮೊದಲಿಗರಲ್ಲಿ ನಟರಾಜ್‌ ಅವರದು ಎದ್ದು ಕಾಣುವ ಹೆಸರು.

ಸಂಗೀತ ನಟರಾಜ್‌ರ ಆಸಕ್ತಿಯ ಇನ್ನೊಂದು ಕ್ಷೇತ್ರ. ‘ನವರತ್ನಮಾಲಿಕಾ’ ಎಂಬ ಹೆಸರಿನಲ್ಲಿ ಒಂಬತ್ತು ಕೃತಿಗಳಿಗೆ ನಟರಾಜ್‌ ಸಾಹಿತ್ಯ ರಚಿಸಿದ್ದು , ಸಂಗೀತ ವಿದುಷಿ ಉಚಾ ಚಾರ್‌ ಈ ಕೃತಿಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಉಷಾ ಅವರ ನಿರ್ದೇಶನದ ‘ವಚನಾಮೃತಧಾರೆ’ ಧ್ವನಿ ಸಂಪುಟಕ್ಕೆ ನಟರಾಜ್‌ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವ್ಯಾಖ್ಯೆ ಬರೆದಿದ್ದಾರೆ. ಇದಿಷ್ಟೂ ನಟರಾಜ್‌ರ ಸಂಗೀತಾಸಕ್ತಿಯ ಸರಿಗಮ.

ನಟರಾಜ್‌ ಒಳ್ಳೆಯ ಸಂಘಟಕರೂ ಹೌದು. ಮೇರಿಲ್ಯಾಂಡ್‌, ವರ್ಜೀನಿಯಾ ಹಾಗೂ ವಾಷಿಂಗ್ಟನ್‌ ಪ್ರದೇಶಗಳ ಕನ್ನಡಿಗರ ಅಭಿವ್ಯಕ್ತಿಯಾದ ‘ಕಾವೇರಿ’ ಕನ್ನಡ ಸಂಘದ ಅಧ್ಯಕ್ಷರಾಗಿ (1984ರಲ್ಲಿ ) ಸೇವೆ ಸಲ್ಲಿಸಿದ್ದ ಅವರು, ಕನ್ನಡಪರ ಚಟುವಟಿಕೆಗಳಲ್ಲಿ ಸದಾ ಮುಂದು.

*

ಗೌಡರ ರಾಜಕೀಯ ಪ್ರಾಬಲ್ಯದ ಹಾಸನದಲ್ಲಿ ಜನಿಸಿದ ಮೈ.ಶ್ರೀ.ನಟರಾಜ್‌, ಹಾರಿದ ಎತ್ತರಗಳು ಒಂದೆರಡಲ್ಲ . ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಸಿವಿಲ್‌ ಇಂಜಿನಿಯರಿಂಗ್‌ ಪದವಿ, ಮುಂಬಯಿಯ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಿಂದ ಎಂ.ಟೆಕ್‌. ಪದವಿ ಪಡೆದ ನಟರಾಜ್‌, ಕೆಲಕಾಲ ಐಐಟಿಯಲ್ಲಿಯೇ ಉಪನ್ಯಾಸಕರಾಗಿದ್ದರು. ಆನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿ, ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ- ಜಿಯಾಟೆಕ್ನಿಕಲ್‌ ಇಂಜಿನಿಯರಿಂಗ್‌ನಲ್ಲಿ ಪಿಎಚ್‌.ಡಿ. ಪದವಿ ಪಡೆಯುವ ಮೂಲಕ ಡಾಕ್ಟರ್‌ ಆದರು!

ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸಲಹೆಗಾರರಾಗಿ, ಅಮೆರಿಕ ಸರ್ಕಾರದ ಅಣುಶಕ್ತಿ ನಿಯಂತ್ರಣ ಸಂಸ್ಥೆಯಲ್ಲಿ ರಾಕ್‌ ಮೆಕ್ಯಾನಿಕ್ಸ್‌ ಮತ್ತು ಜಿಯಾಟೆಕ್ನಿಕಲ್‌ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಮೈ.ಶ್ರೀ.- ಈಗ, ಅಣುಶಕ್ತಿ ಕೇಂದ್ರಗಳಲ್ಲಿ ಉರಿದುಳಿದ ಇಂಧನವನ್ನು ಜೀವಿ ಪ್ರಪಂಚಕ್ಕಾಗಲಿ ಅಥವಾ ವಾತಾವರಣಕ್ಕಾಗಲಿ ಹಾನಿಯಾಗದಂತೆ ಒಪ್ಪ ಮಾಡುವ ತಂತ್ರ ನಿಪುಣತೆಯಲ್ಲಿ ತೊಡಗಿದ್ದಾರೆ.

ಸಾಹಿತ್ಯ ಹಾಗೂ ಸಂಗೀತ ಲೋಕವಿಹಾರಿಯಾದ ನಟರಾಜ್‌ ಅವರದು ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವ ಕುಟುಂಬ. ಪತ್ನಿ ಗೀತಾ, ಮಕ್ಕಳು- ಮಧೂಲಿಕಾ, ಶೃತಿರಂಜನಿ ಹಾಗೂ ಶ್ರೀನಿವಾಸ.

*

ನಟರಾಜ್‌ಗೆ ಪ್ರಶಸ್ತಿಗಳು ಹೊಸತೇನೂ ಅಲ್ಲ - ಫಿಲಿಡೆಲ್ಫಿಯಾದ ‘ತ್ರಿವೇಣಿ ಕನ್ನಡ ಸಂಘ’ದ ‘ನೀಲಮ್ಮ ಮೆಟ್ಗುಡ್‌’ ಪಾರಿತೋಷಕ, ಮಂಗಳೂರಿನ ನಿಯತಕಾಲಿಕ ‘ಹೃದಯವಾಹಿನಿ’ಯ ‘ಹೃದಯವಂತರು’ ಪ್ರಶಸ್ತಿ ನಟರಾಜ್‌ರಿಗೆ ಸಂದಿವೆ.

ಪ್ರಸ್ತುತ ‘ಮಧುಚಂದ್ರ ಸಿರಿಕೇಂದ್ರ’ ಸಂಕಲನಕ್ಕೆ ಸಂದಿರುವ 2002 ನೇ ಸಾಲಿನ ‘ಗೊರೂರು ಪ್ರಶಸ್ತಿ’ ನಟರಾಜ್‌ರ ಬರೆಯುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮೈಸೂರಿನ ಕನ್ನಡ ಸಂಘಟನೆಗಳ ಅಭಿಮಾನ-ಸಮ್ಮಾನಕ್ಕೂ ಮೈ.ಶ್ರೀ.ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಸನ್ಮಾನಗಳ ಬೆಳಕಿನ ಕಾವಿನಲ್ಲಿ ನಟರಾಜ್‌ ಕಾವ್ಯಾಕಾಶ ಇನ್ನಷ್ಟು ನಕ್ಷತ್ರಗಳ ನಿಲುಕಿಸಿಕೊಳ್ಳಲಿ.


ಪೂರಕ ಓದಿಗೆ-
ಡಾ.ಮೈ.ಶ್ರೀ.ನಟರಾಜರ ಕಾವ್ಯ-ವರ್ತಮಾನಕ್ಕೊಂದು ಭಾಷ್ಯ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X