ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗನ ಕೈಯಲ್ಲಿ ನ್ಯೂಯಾರ್ಕ್‌ ಕೀಲಿಕೈ !

By Staff
|
Google Oneindia Kannada News
  • ಮೈಸೂರು ಪ್ರತಿನಿಧಿಯಿಂದ
ನ್ಯೂಯಾರ್ಕ್‌ ಭಾರತೀಯ ಸಮುದಾಯದಲ್ಲೆಲ್ಲ ಈಗ ಅಮೆರಿಕನ್ನಡಿಗ ಎಲ್‌.ನಾಗರಾಜ್‌ ಅವರದ್ದೇ ಮಾತು. ನಾಗರಾಜ್‌ ಅವರ ಕೈಯಲ್ಲೀಗ ಬಹುದೊಡ್ಡ ಹೊಣೆಗಾರಿಕೆ. ಈ ಹೊಣೆಗಾರಿಕೆ ಕನ್ನಡಿಗರಿಗೆಲ್ಲ ಹೆಮ್ಮೆ ಪಡುವಂಥದ್ದು . ಕನ್ನಡಿಗರಷ್ಟೇ ಏಕೆ, ಭಾರತೀಯರಿಗೂ ಕೋಡು ಮೂಡಿಸುವಂಥದ್ದು !

ಸೆಪ್ಟಂಬರ್‌ 11ರ ವಿಧ್ವಂಸಕ ಘಟನೆಯ ಕರಾಳ ನೆನಪುಗಳಿನ್ನೂ ಅಮೆರಿಕಾ ನೆಲದಲ್ಲಿ ಉಸಿರಾಡುತ್ತಿವೆ. ಒಂದೆಡೆ ಕಾಡುವ ಕರಾಳ ನೆನಪುಗಳು, ಇನ್ನೊಂದೆಡೆ ಲಾಡೆನ್‌ ಬೆಂಬಲಿಗರ ಮರುದಾಳಿಯ ಭಯ- ಇವುಗಳ ನಡುವೆ ಪುನರ್‌ ನಿರ್ಮಾಣದ ಕಾರ್ಯವೂ ಭರದಿಂದ ಸಾಗುತ್ತಿದೆ. ಇಂಥದೊಂದು ಮಲ್ಟಿ ಬಿಲಿಯನ್‌ ಡಾಲರ್‌ಗಳ ‘ಕಟ್ಟುವ ಹಾಗೂ ಅಭಿವೃದ್ಧಿಪಡಿಸುವ ಯೋಜನೆ’ಯ ಮುಂಚೂಣಿಯಲ್ಲಿ ನಾಗರಾಜ್‌ ನಿಂತಿದ್ದಾರೆ.

Mysore L. Nagarajaನಾಗರಾಜ್‌ ಕನ್ನಡಿಗರು. ಕರುನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನವರು. ಮೈಸೂರು ಎಲ್‌.ನಾಗರಾಜ್‌ ಅವರು ನ್ಯೂಯಾರ್ಕ್‌ ಮಹಾನಗರ ಸಾರಿಗೆ ಪ್ರಾಧಿಕಾರ (MTA- Metropolitan Transportation Authority) ಹೊಸದಾಗಿ ರಚಿಸಿರುವ ವಿಭಾಗದ ಅಧ್ಯಕ್ಷರು. ನ್ಯೂಯಾರ್ಕ್‌ ಹಾಗೂ ಸುತ್ತಮುತ್ತಲಿನ ಖಾಸಗಿ ಸಾರ್ವಜನಿಕ ಸಾರಿಗೆಯನ್ನು ನಿರ್ವಹಿಸುತ್ತಿರುವ ಕಂಪನಿಯಾಂದರ ಯೋಜನೆಯಿದು.

‘ಎಂಟಿಎ’ ನಿರ್ದೇಶಕರ ಮಂಡಳಿ ನಾಗರಾಜ್‌ ಅವರನ್ನು ಹೊಸದಾಗಿ ರೂಪುಗೊಂಡಿರುವ ವಿಂಗ್‌ನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆರಿಸಿದೆ. ಬಹು ಬಿಲಿಯನ್‌ ಡಾಲರ್‌ಗಳ ಬೃಹತ್‌ ಯೋಜನೆಯನ್ನು ನಾಗರಾಜ್‌ ಅವರು ನಿರ್ವಹಿಸುವ ಬಗ್ಗೆ ‘ಎಂಟಿಎ’ಗೆ ಅಪರಿಮಿತ ವಿಶ್ವಾಸ.

ಅಂದಹಾಗೆ, ಯಾರೀ ನಾಗರಾಜ್‌?

ನಾಗರಾಜ್‌ ಕನ್ನಡಿಗರು, ಮೈಸೂರಿವರು ಎನ್ನುವುದು ಅವರ ಬೇರುಗಳ ಸಮಾಚಾರ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ನಾಗರಾಜ್‌, ಆನಂತರ Brigham Young ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್‌. ಪದವಿ ಪಡೆದಿದ್ದಾರೆ. ನ್ಯೂಯಾರ್ಕ್‌ ನಗರದ ವಿಶ್ವ ವಿದ್ಯಾಲಯದ Milton Pikarski Distinguished Leadership in Transportation ಪ್ರಶಸ್ತಿ 1988ರಲ್ಲಿ ನಾಗರಾಜ್‌ಗೆ ದೊರೆತಿದೆ. ಅಮೆರಿಕಾಗೆ ತೆರಳುವ ಮುನ್ನ ಎರಡು ವರ್ಷಗಳ ಕಾಲ ಮೈಸೂರಿನಲ್ಲಿ ಉಪನ್ಯಾಸಕರಾಗಿ ನಾಗರಾಜ್‌ ಕರ್ತವ್ಯ ನಿರ್ವಹಿಸಿದ್ದರು. ನಾಗರಾಜ್‌ ಅವರ ಸಹೋದರ ಎಂ.ಎಲ್‌.ಕೃಷ್ಣಸ್ವಾಮಿ ಕೂಡಾ ಇಂಜಿನಿಯರ್‌. ಮೈಸೂರಿನ ಕುವೆಂಪು ನಗರದಲ್ಲಿ ಅವರ ವಾಸ.

ವೃತ್ತಿಯ ವಿಷಯದಲ್ಲಿ ಸಾಧನೆ ದೊಡ್ಡದಿದೆ. ‘ಎಂಟಿಎ’ಯ ನ್ಯೂಯಾರ್ಕ್‌ ಸಿಟಿ ಟ್ರಾನ್ಸಿಟ್‌ನ ಉಪಾಧ್ಯಕ್ಷ ಮತ್ತು ಮುಖ್ಯ ಇಂಜಿನಿಯರ್‌ ಆಗಿ 1996ರಿಂದ ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟಂಬರ್‌ 11ರ ವಿಧ್ವಂಸಕ ಕೃತ್ಯಗಳ ಸಂದರ್ಭದಲ್ಲಿ ಹಾನಿಗೊಂಡ ದ್ವಿಮುಖ ಸಬ್‌ವೇ(ಭೂಗತ ರೈಲು) ಯೋಜನೆಯನ್ನು ವರ್ಷದೊಪ್ಪತ್ತಿನಲ್ಲಿ ಯಶಸ್ವಿಯಾಗಿ ಪೂರೈಸಿದ ದಾಖಲೆ ಹಾಗೂ ವಿವಿಧ ಹಂತಗಳಲ್ಲಿರುವ 400 ಯೋಜನೆಗಳ ನಿರ್ವಹಣೆ ಹಾಗೂ ವಿನ್ಯಾಸದ ಮೈಲುಗಲ್ಲುಗಳು ನಾಗರಾಜ್‌ ಸಾಧನೆಗಳ ಯಾದಿಯಲ್ಲಿದೆ.

ನಾಗರಾಜ್‌ ಅವರ ಸಾಮರ್ಥ್ಯದ ಬಗೆಗೆ ‘ಎಂಟಿಎ’ ಅಧ್ಯಕ್ಷ ಪೀಟರ್‌ ಎಸ್‌.ಕಲಿಕೋವ್‌ ಅವರಿಗೆ ತುಂಬು ವಿಶ್ವಾಸ. ಪ್ರಸ್ತುತದ ಮೆಗಾ ಯೋಜನೆ ಒಂದು ದೊಡ್ಡ ಸವಾಲು. ಆದರೆ ಇದನ್ನು ನಾಗರಾಜ್‌ ಯಶಸ್ವಿಯಾಗಿ ನಿರ್ವಹಿಸುವ ಕುರಿತು ನಮಗೆ ಸಂಪೂರ್ಣ ನಂಬುಗೆಯಿದೆ. ಈ ಪರಿಯ ಕಾಮಗಾರಿಗಳನ್ನು ನಿಗದಿತ ಸಮಯ ಹಾಗೂ ಬಜೆಟ್ಟಿನಲ್ಲಿ ಪೂರೈಸುವುದಕ್ಕೆ ನಾಗರಾಜ್‌ ತಕ್ಕ ವ್ಯಕ್ತಿ ಎನ್ನುತ್ತಾರೆ ಕಲಿಕೋವ್‌.

ಕಲಿಕೋವ್‌ ಅವರ ವಿಶ್ವಾಸಕ್ಕೂ ಸಮರ್ಥನೆಗಳಿವೆ. ನಾಗರಾಜ್‌ ಅವರು ನಿರ್ವಹಿಸಿರುವ ಪ್ರತಿಶತ 75ಕ್ಕೂ ಹೆಚ್ಚು ಯೋಜನೆಗಳು ನಿಗದಿತ ಸಮಯ ಹಾಗೂ ಬಜೆಟ್ಟಿನಲ್ಲಿ ಪೂರ್ತಿಯಾಗಿವೆ. 1981ರಲ್ಲಿ ‘ಎಂಟಿಎ’ಯ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ನಾಗರಾಜ್‌ ಹಿಂತಿರುಗಿ ನೋಡಿದ್ದಿಲ್ಲ .

ನ್ಯೂಯಾರ್ಕ್‌ ನಗರದ ಸಮಗ್ರಅಭಿವೃದ್ಧಿ : ನಾಗರಾಜ್‌ ಅವರಿಗೆ ವಹಿಸಿಕೊಟ್ಟಿರುವ ‘ಎಂಟಿಎ’ಯ ನೂತನ ಯೋಜನೆ ಮಹತ್ವಾಕಾಂಕೆಯದು. ನ್ಯೂಯಾರ್ಕ್‌ ನಗರದ ಸಾರಿಗೆ ನಿರ್ಮಾಣ ನಿರ್ವಹಣೆಗಾಗಿ ‘ಎಂಟಿಎ’ ಹೊಸತೊಂದು ವಿಭಾಗವನ್ನೇ ಆರಂಭಿಸಿದ್ದು , ಇದರ ಕೀಲಿಕೈಯನ್ನು ನಾಗರಾಜ್‌ ಅವರಿಗೆ ಕೊಟ್ಟಿದೆ.

ನಾಗರಾಜ್‌ ಅವರು ನಿರ್ವಹಿಸುತ್ತಿರುವ ಯೋಜನೆ ಇತರ ಅನೇಕ ಬೃಹತ್‌ ಯೋಜನೆಗಳಿಗೆ ಮಾತೃರೂಪಿಯದು ಹಾಗೂ ಈ ಯೋಜನೆಯ ಯಶಸ್ಸು ‘ಎಂಟಿಎ’ಯ ಸ್ಥಾನಮಾನಗಳನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಭಾವಿಸಲಾಗಿದೆ.

ನೂತನ ಯೋಜನೆಯಿಂದಾಗಿ ಸ್ಪರ್ಧಾ ಜಗತ್ತಿನಲ್ಲಿ ‘ಎಂಟಿಎ’ಯ ಸ್ಥಾನಮಾನವಷ್ಟೇ ಅಲ್ಲ , ನ್ಯೂಯಾರ್ಕ್‌ ಮಹಾನಗರದ ಆರ್ಥಿಕ, ವಾಣಿಜ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆ ನಾಟಕೀಯವಾಗಿ ಬದಲಾಗಲಿದೆ ಎಂದು ‘ಎಂಟಿಎ’ಯ ಕಾರ್ಯ ನಿರ್ವಾಹಕ ನಿರ್ದೇಶಕ ಕ್ಯಾಥರೀನ್‌ ಎನ್‌.ಎಲ್‌. ಬಣ್ಣಿಸುತ್ತಾರೆ.

ಕನ್ನಡಿಗನೊಬ್ಬನ ಜಾಗತಿಕ ಅಭ್ಯುದಯ ಕರ್ನಾಟಕಕ್ಕೆ ಹೆಮ್ಮೆ ತರುವಂಥದ್ದಲ್ಲವೇ? ವಿಶ್ವಖ್ಯಾತ ವಾಸ್ತುಶಿಲ್ಪಿ ಸರ್‌.ಎಂ.ವಿಶ್ವೇಶ್ವರಯ್ಯನವರ ಜಯಂತಿಗೆ ಇನ್ನೊಂದು ತಿಂಗಳು ಬಾಕಿಯಿರುವ ಸಂದರ್ಭದಲ್ಲಿ ಮತ್ತೊಬ್ಬ ಕನ್ನಡಿಗ ವಾಸ್ತುಶಿಲ್ಪಿಯ ಸಾಧನೆ ಖುಷಿ ಕೊಡುತ್ತದೆ, ಜೊತೆಗೊಂದಿಷ್ಟು ಬೆರಗು !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X