ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕನ್ನಡ ಮೇಷ್ಟ್ರು’ ಪರಂಪರೆ ಶ್ರೀಮಂತಗೊಳಿಸಿದ ರಾಜುಮೇಷ್ಟ್ರು

By Staff
|
Google Oneindia Kannada News

*ರಘುನಾಥ ಚ.ಹ.

Chi. Sreenivasarajuಪಾವಲಿ ಎಂಟಾಣೆ ಬಿಲ್ಲೆಗಳೊಂದಿಗೆ ಕಲ್ಲುಸಕ್ಕರೆ, ಪೆಪ್ಪರುಮಿಂಟುಗಳನ್ನು ಜೇಬಿನಲ್ಲಿಯಾ ಅಥವಾ ಅಡಿಕೆಲೆ ಚೀಲದಲ್ಲಿಯಾ ಇಟ್ಟುಕೊಳ್ಳುವ ಅಜ್ಜ ಅಜ್ಜಿಯರು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇದ್ದಾರೆ. ಮೊಮ್ಮಕ್ಕಳೇ ಆಗಬೇಕೆಂದಿಲ್ಲ ; ಯಾರ ಮಕ್ಕಳಾದರೂ ಸರಿ, ಅಜ್ಜ/ಅಜ್ಜಿಯ ಖಜಾನೆಯಿಂದ ಪೆಪ್ಪರಮಿಂಟೊ ನಾಕಾಣೆಯಾ ಪಾವತಿಯಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮಕ್ಕಳ ಮೊಗದಲ್ಲಿ ಮಿನುಗುವ ಖುಷಿಯನ್ನು ಹಾಗೂ ಆ ಖುಷಿ ಪ್ರತಿಫಲಿಸುವ ಅಜ್ಜ/ಅಜ್ಜಿಯ ಕಣ್ಣಲ್ಲಿನ ಮಿಂಚನ್ನು ನೋಡಬೇಕು. ರಾಜು ಮೇಷ್ಟ್ರನ್ನ ನೋಡಿದಾಗಲೆಲ್ಲ ನನಗೆ ಅಂಥ ಅಜ್ಜನ ನೆನಪಾಗುತ್ತದೆ.

ಕಿರಿಯರ ಬಗ್ಗೆ ಅಪಾರ ಅಂತಃಕರಣವನ್ನು ತುಂಬಿಕೊಂಡವರು ಚಿ.ಶ್ರೀನಿವಾಸರಾಜು. ಅವರು ನನಗೆ ಯಾವತ್ತೂ ಪೆಪ್ಪರಮಿಂಟು ಕೊಟ್ಟವರಲ್ಲ. ಆದರೆ ಅವರೊಂದಿಗಿನ ಬಹುತೇಕ ಭೇಟಿಗಳಲ್ಲಿ ಹೊಸ ಪುಸ್ತಕವಿಲ್ಲದೆ ನಾನು ವಾಪಸ್ಸಾದದ್ದಿಲ್ಲ. ಮೇಷ್ಟ್ರು ಈ ಬಾರಿ ಯಾವ ಪುಸ್ತಕ ಕೊಡುತ್ತಾರೆ ಎಂದು ಶ್ರೀನಿವಾಸ ರಾಜು ಅವರನ್ನು ಭೇಟಿಯಾದ ಪ್ರತಿ ಸಂದರ್ಭದಲ್ಲಿಯೂ ಅಜ್ಜ ಕೊಡುವ ಪೆಪ್ಪರಮೆಂಟಿಗೆ ಕಾತರಿಸುವ ಮಕ್ಕಳಂತೆ ನಾನು ಕಾತರಿಸಿದ್ದೇನೆ. ಅವರು ನಿರಾಸೆ ಮಾಡಿದ್ದು ಕಡಿಮೆ. ಅವರ ಮನೆಗೆ ಹೋದರಂತೂ ಮೇಷ್ಟ್ರ ಕಡೆಯಿಂದ ಪುಸ್ತಕ ಹಾಗೂ ಸರಸ್ವತಿ ಮೇಡಂ ಅವರಿಂದ ತಿಂಡಿಗೆ ಮೋಸವಿಲ್ಲ ! ಶ್ರೀನಿವಾಸರಾಜು ಅಂದಕೂಡಲೇ ನನ್ನ ಕಣ್ಣೆದುರು ಬರುವುದು- ಕೈಯಲ್ಲಿ ಪುಸ್ತಕ ಹಿಡಿದ ಕಿಂದರಜೋಗಿಯಂಥ ಮನುಷ್ಯ ಹಾಗೂ ಸದಾ ಪ್ರೀತಿಯನ್ನೇ ಸ್ಫುರಿಸುವ ಜೋಡಿ ಕಣ್ಣುಗಳು.

ರಾಜು ಮೇಷ್ಟ್ರು ಹಾಗೂ ನನ್ನ ಪರಿಚಯ ಪ್ರಾರಂಭವಾದದ್ದು ಪುಸ್ತಕಗಳ ಮೂಲಕವೇ. ನಾನಾಗ ಪಾಲಿಟೆಕ್ನಿಕ್‌ ವಿದ್ಯಾರ್ಥಿ. ಕ್ರೆೃಸ್ಟ್‌ ಕಾಲೇಜಿನ ಕನ್ನಡ ಸಂಘ ನಡೆಸುವ ಬೇಂದ್ರೆ ಸ್ಮೃತಿ ಕವನ ಸ್ಪರ್ಧೆ ಹಾಗೂ ಪುಸ್ತಕ ಪ್ರಕಟಣೆಯ ಬಗ್ಗೆ ಎಲ್ಲೋ ಓದಿದ್ದೆ. ಬಹುಮಾನಿತ ಕವಿತೆಗಳ ಪುಸ್ತಕ ಓದುವ ಕುತೂಹಲ. ಶ್ರೀನಿವಾಸರಾಜು ಮಾತ್ರವಲ್ಲ, ಕ್ರೆೃಸ್ಟ್‌ ಕಾಲೇಜ್‌ ಯಾವ ದಿಕ್ಕಿಗಿದೆ ಎನ್ನುವುದೂ ಗೊತ್ತಿಲ್ಲದ ಸಂದರ್ಭ. ಪತ್ರಿಕೆಯಲ್ಲಿ ಕನ್ನಡ ಸಂಘದ ವಿಳಾಸ ಸಿಕ್ಕಿತು. ಆ ವಿಳಾಸಕ್ಕೆ 10 ರುಪಾಯಿ ಮನಿಯಾರ್ಡರ್‌ ಮಾಡಿ ಪುಸ್ತಕ ಕಳಿಸುವಂತೆ ಪತ್ರ ಬರೆದೆ. ಮರೆತೆ. ಒಂದು ದಿನ ಇದ್ದಕ್ಕಿದ್ದಂತೆಯೇ ಬರಬೇಕೆ ಪುಸ್ತಕಗಳು. ನಾನು ಕೇಳಿದ್ದು ಒಂದು ಪುಸ್ತಕ, ಬಂದದ್ದು ನಾಲ್ಕು. ನೀವು ಓದಿ, ಗೆಳೆಯರಿಗೂ ಓದಲು ಕೊಡಿ ಎಂದು ಚಿಕ್ಕದೊಂದು ಒಕ್ಕಣೆ. ಕೆಳಗೆ ಸಹಿ. ಅದು ಶ್ರೀನಿವಾಸರಾಜು ಅವರ ಸಹಿ ಅನ್ನುವುದು ಗೊತ್ತಾದದ್ದು ಅವರು ಪರಿಚಯವಾದ ನಂತರವೇ. ಹೀಗೆ ಪ್ರಾರಂಭವಾದ ಪುಸ್ತಕ ನಂಟು- ನಂತರದ ವರ್ಷಗಳಲ್ಲಿ ಕನ್ನಡ ಸಂಘದ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದರೊಂದಿಗೆ, ಆಗಾಗ ಸಿಕ್ಕ ಭೇಟಿಯ ಅವಕಾಶಗಳಲ್ಲಿ ಮುಂದುವರಿದಿದೆ. ರಾಜು ಮೇಷ್ಟ್ರಿಂದ ಪುಸ್ತಕ ಪಡೆಯುವುದು ನನ್ನ ಹಕ್ಕು ಎಂದೇ ಭಾವಿಸಿಬಿಟ್ಟಿದ್ದೇನೆ. ಅವರ ಪ್ರೀತಿ, ಕಾಳಜಿ, ಸಹನೆ ಎದುರು ಅನೇಕ ಬಾರಿ ನಾನು ಬೆಚ್ಚಿ ಬಿದ್ದದ್ದೂ ಇದೆ.

ಶ್ರೀನಿವಾಸರಾಜು ಅವರ ಜೊತೆಗಿನ ನನ್ನ ಈ ಅನುಭವಗಳು ನನ್ನವು ಮಾತ್ರ ಎಂದು ನಾನು ಭಾವಿಸಿಲ್ಲ . ಅವರ ಪರಿಚಯದ ವ್ಯಾಪ್ತಿಗೆ ಬಂದ ಎಲ್ಲರೂ ಇಂಥ ಅನುಭವವನ್ನು ಆಗಾಗ ಬಯಸಿ ಬಯಸಿ ಹೊಂದುತ್ತಲೇ ಇರುತ್ತಾರೆ. ನನ್ನ ಜಮಾನದ ಅನೇಕರಿಗೆ ಪಾಠ ಹೇಳದಿದ್ದರೂ ಶ್ರೀನಿವಾಸರಾಜು ‘ಮೇಷ್ಟ್ರು’. ನಾಡಿನುದ್ದಕ್ಕೂ ಅವರ ವಿದ್ಯಾರ್ಥಿಗಳು ಇದ್ದಾರೆ.

‘ಶ್ರೀನಿವಾಸರಾಜು ಒಂದು ವಿಶ್ವ ವಿದ್ಯಾಲಯ’ ಎಂದು ಅವರ ಬಗ್ಗೆ ಮಾತನಾಡುವವರೆಲ್ಲ ಹೇಳುವುದು ಸಂಪ್ರದಾಯವೇ ಆಗಿಹೋಗಿದೆ. ಒಂದು ವಿಶ್ವ ವಿದ್ಯಾಲಯ ಮಾಡಬಹುದಾದ ಕೆಲಸವನ್ನು ಕ್ರೆೃಸ್ಟ್‌ ಕಾಲೇಜು ಕನ್ನಡ ಸಂಘದ ಮೂಲಕ ಮೇಷ್ಟ್ರು ಮಾಡಿದ್ದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ನಡುವಿನ ಯಾವುದೇ ವಿಶ್ವ ವಿದ್ಯಾಲಯ ಮುಟ್ಟಲು ಸಾಧ್ಯವಾಗದ ಮೈಲುಗಲ್ಲನ್ನು ಅವರು ಮುಟ್ಟಿದ್ದಾರೆ. ಅದೆಂದರೆ, ಪುಸ್ತಕ ಪ್ರಕಟಣೆಯ ಜೊತೆಜೊತೆಗೇ ಓದುಗ/ಲೇಖಕರ ಬಳಗವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು.

ಕ್ರೆೃಸ್ಟ್‌ ಕಾಲೇಜು ಕನ್ನಡ ಸಂಘದ ಮೂಲಕ ಒಂದುನೂರ ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಶ್ರೀನಿವಾಸರಾಜು ಪ್ರಕಟಿಸಿದ್ದಾರೆ. ಇದು ಲೆಕ್ಕದ ಮಾತು. ಆದರೆ, ಈ ಪುಸ್ತಕಗಳ ಮೂಲಕ ಅವರು ಬೆಸೆದ ಲೇಖಕರ-ಓದುಗರ ಬಳಗ ಲೆಕ್ಕಕ್ಕೆ ಸಿಗದು. ಇವತ್ತಿನ ಕನ್ನಡ ಸಂದರ್ಭದ ಅನೇಕ ಮಹತ್ವದ ಬರಹಗಾರರ ಮೊದಲು ಪುಸ್ತಕಗಳು ಕನ್ನಡ ಸಂಘದ ಮೂಲಕ ಪ್ರಕಟವಾಗಿವೆ. ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನ ಸ್ಪರ್ಧೆಯ ಮೂಲಕ, ಅನಕೃ ಸ್ಮಾರಕ ಲೇಖನ ಸ್ಪರ್ಧೆಯ ಮೂಲಕ ಅನೇಕ ಯುವ ಬರಹಗಾರರು ಬೆಳಕಿಗೆ ಬಂದಿದ್ದಾರೆ. ಈ ಸ್ಪರ್ಧೆಗಳ ಮೂಲಕವೇ ನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಯುವ ಬರಹಗಾರರ ನಡುವೆ ಬೆಸುಗೆ ಸಾಧ್ಯವಾಗಿದೆ. ಕೆಲವೊಮ್ಮೆ ಮುಖ ನೋಡದಿದ್ದರೂ ಅಕ್ಷರಮೈತ್ರಿ ಸಾಧ್ಯವಾಗಿದೆ. ಇದು ಕನ್ನಡದ ಮೇಷ್ಟ್ರೊಬ್ಬರು ಮಾಡಬಹುದಾದ ಅತ್ಯಂತ ಶ್ರೇಷ್ಠ ಸಾಧನೆ.

*

The guiding light for Kannada writers, Raju with his better half Saraswatiಬಹುತೇಕ ಸೃಜನಶೀಲ ಸಾಧಕರಂತೆ ಶ್ರೀನಿವಾಸರಾಜು ಅವರ ಬೇರುಗಳಿರುವುದೂ ಗ್ರಾಮೀಣ ಪರಿಸರದಲ್ಲೇ. ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ಶ್ರೀನಿವಾಸರಾಜು ಅವರ ತವರು. ಹುಟ್ಟಿದ್ದು ನವಂಬರ್‌ 28, 1942 ರಲ್ಲಿ. ತಂದೆ ಚಿಕ್ಕರಾಜು, ಸರ್ಕಾರಿ ನೌಕರರು. ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರದಲ್ಲಿ, ಬೆಳೆದದ್ದು ದೊಡ್ಡಮ್ಮನ ಆಶ್ರಯದಲ್ಲಿ. ಮಗ ಪೊಲೀಸ್‌ ಇಲಾಖೆಗೆ ಸೇರಬೇಕೆಂದು ಅಪ್ಪ ಬಯಸಿದ್ದರೂ, ನಡೆದದ್ದೇ ಬೇರೆ. ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ರಾಜು ಬಿ.ಎಸ್ಸಿ ಓದಿದರು. ನಂತರ ಬಿ.ಎ, ಎಂ.ಎ- ಇದಿಷ್ಟೂ ವಿದ್ಯಾಭ್ಯಾಸದ ಮಾತು.

ಇಷ್ಟಪಟ್ಟಿದ್ದರೆ ಶ್ರೀನಿವಾಸರಾಜು ಇಂಜಿನಿಯರಿಂಗ್‌ ಓದಬಹುದಿತ್ತು. ದಾವಣಗೆರೆಯಲ್ಲಿ ಸೀಟೂ ಸಿಕ್ಕಿತ್ತು. ಆದರೆ ಮಗ ಕಣ್ಮುಂದೆಯೇ ಇರಲೆಂಬ ಹೆತ್ತವರ ಆಸೆ ಶ್ರೀನಿವಾಸರಾಜು ಅವರ ದಿಕ್ಕನ್ನು ಬದಲಿಸಿತು. ಆದದ್ದೆಲ್ಲಾ ಒಳ್ಳೆಯದೇ. ಶ್ರೀನಿವಾಸರಾಜು ಇಂಜಿನಿಯರ್‌ ಆಗಿದ್ದಿದ್ದರೆ ಆರ್ಥಿಕ ದೃಷ್ಟಿಯಿಂದ ಅವರ ಬದುಕು ಇನ್ನಷ್ಟು ಸುಧಾರಿಸುತ್ತಿತ್ತೇನೋ ; ಆದರೆ ಅಪರೂಪದ ಸಾಂಸ್ಕೃತಿಕ ಪರಿಚಾರಕನನ್ನು ಕನ್ನಡ ಸಾರಸ್ವತ ಲೋಕ ಕಳೆದುಕೊಳ್ಳುತ್ತಿತ್ತು.

‘ಲೋಹ ಅಭಿವೃದ್ಧಿ ಮಂಡಳಿ’ಯಲ್ಲಿ ಸಾರಿಗೆ ಅಧಿಕಾರಿಯಾಗಿ ನೌಕರಿ ಆರಂಭಿಸಿ, ಎರಡು ವರ್ಷ ದುಡಿಯುವಷ್ಟರಲ್ಲಿ ಸಾಂಸ್ಕೃತಿಕ ಲೋಕದ ಸೆಳೆತಕ್ಕೆ ಒಳಗಾದ ಶ್ರೀನಿವಾಸರಾಜು ಅವರಿಗೆ ವೃತ್ತಿ ಬೇಸರ ತಂದಿತು. ಬಿ.ಎ ಕ್ಲಾಸಿಗೆ ಸೇರಿಕೊಳ್ಳುವ ಮೂಲಕ ಓದು ಮುಂದುವರಿಸಿದರು. ನಂತರದಲ್ಲಿ ಎಂ.ಎ. ಈ ದಿನಗಳಲ್ಲಿ ಕೆ.ವಿ.ನಾರಾಯಣ, ಎಚ್‌.ಎಸ್‌.ರಾಘವೇಂದ್ರ ರಾವ್‌, ಕಿ.ರಂ.ನಾಗರಾಜು ಮುಂತಾದ ಗೆಳೆಯರ ಒಡನಾಟದಿಂದಾಗಿ ಕನ್ನಡದ ಬಗೆಗಿನ ಆಸಕ್ತಿ ಹದಗೊಂಡರೆ, ‘ಕನ್ನಡ ಮೇಷ್ಟ್ರು’ ಪರಂಪರೆಗೆ ಗೌರವ ತಂದ ಜಿ.ಪಿ.ರಾಜರತ್ನಂ, ಎಂ.ವಿ.ಸೀತಾರಾಮಯ್ಯ, ರಂ.ಶ್ರೀ.ಮುಗಳಿ, ಜಿ.ಎಸ್‌.ಶಿವರುದ್ರಪ್ಪನವರಿಂದ ಪಾಠ ಕೇಳುವ ಯೋಗ ಕನ್ನಡದ ಬಗೆಗಿನ ಪ್ರೀತಿ ಬೆಳೆಸಿತು.

ಶ್ರೀನಿವಾಸರಾಜು ಅವರು ಕ್ರೆೃಸ್ಟ್‌ ಕಾಲೇಜು ಸೇರಿದ್ದು 1969 ರಲ್ಲಿ. ಅಪ್ಪಟ ಇಂಗ್ಲಿಷ್‌ ಸಂಸ್ಕೃತಿಯ ಪರಿಸರದಲ್ಲಿ ಕನ್ನಡದ ಬೀಜ ಊರುವ ಸವಾಲು ಅವರ ಮುಂದಿತ್ತು. ಕಾಲೇಜು ಸೇರಿದ ಮರುವರ್ಷವೇ (1970) ಮದುವೆಯಾದರು. ಸರಸ್ವತಿ ಅವರನ್ನು ಮದುವೆಯಾದ ಎರಡೇ ವರ್ಷಗಳಲ್ಲಿ (1972) ರಾಜು ಅವರಿಗೆ ಇನ್ನೊಂದು ಮದುವೆ; ಕನ್ನಡ ಸಂಘದ ರೂಪದಲ್ಲಿ. (ಕುಟುಂಬದ ಬಗ್ಗೆ ಹರಿಸಿದ್ದಕ್ಕಿಂಥ ಹೆಚ್ಚು ಗಮನವನ್ನು ಕನ್ನಡ ಸಂಘದ ಚಟುವಟಿಕೆಗಳಿಗೆ ನೀಡಿದ್ದರಿಂದ, ಕನ್ನಡ ಸಂಘವನ್ನು ರಾಜುಮೇಷ್ಟ್ರ ಎರಡನೇ ಹೆಂಡತಿ ಅಂದರೆ ತಪ್ಪಿಲ್ಲ ತಾನೆ!?).

ಅಧ್ಯಯನದ ದಿನಗಳಲ್ಲಿ ಸೆಂಟ್ರಲ್‌ ಕಾಲೇಜಿನ ಪರಿಸರ ಶ್ರೀನಿವಾಸರಾಜು ಅವರ ಮೇಲೆ ಎರಡು ರೀತಿಯಲ್ಲಿ ಪ್ರಭಾವ ಬೀರಿತ್ತು. ಮೊದಲನೆಯದಾಗಿ, ರಾಜು ಅವರನ್ನು ಸೆಂಟ್ರಲ್‌ ಕಾಲೇಜಿನ ಪರಿಸರದ ತುಂಬಾ ವ್ಯಾಪಿಸಿದ್ದ ಜಿ.ಪಿ.ರಾಜರತ್ನಂ ತುಂಬಾ ಸೆಳೆದರು. ಸೆಂಟ್ರಲ್‌ ಕಾಲೇಜಿನಲ್ಲಿ ರಾಜರತ್ನಂ ರೂಪಿಸಿ ಬೆಳೆಸಿದ ಕನ್ನಡ ಸಂಘ, ಕ್ರೆೃಸ್ಟ್‌ ಕಾಲೇಜಿನಲ್ಲಿ ಕನ್ನಡ ಸಂಘ ರೂಪಿಸುವಾಗ ಶ್ರೀನಿವಾಸರಾಜು ಅವರಿಗೆ ಮಾದರಿಯಾಯಿತು. ಎರಡನೆಯದಾಗಿ, ಸೆಂಟ್ರಲ್‌ ಕಾಲೇಜಿನ ಲೈಬ್ರರಿ ಮುಂದಿನ ಕಲ್ಲುಬೆಂಚು ಅರ್ಥಾತ್‌ ‘ಪಿಪಿ ಕಟ್ಟೆ’ (ಪಿಪಿ ಅಂದರೆ ಪೋಲಿ ಪಟಾಲಂ ಅಂತಾರೆ ಮೇಷ್ಟ್ರು ) ರಾಜು ಅವರ ವಿಚಾರಗಳನ್ನು ಗಟ್ಟಿಗೊಳಿಸಿತು. ಗೆಳೆಯರ ಪಟಾಲಂನ ಸಂಜೆಯ ಸಭೆ ನಡೆಯುತ್ತಿದ್ದುದು ಈ ಕಟ್ಟೆಯ ಮೇಲೆಯೇ. ‘ಅಂಕಣ’, ‘ಶೂದ್ರ’ ಪತ್ರಿಕೆಗಳು ಹುಟ್ಟಿದ್ದು ‘ಪಿಪಿ ಕಟ್ಟೆ’ ಸಭೆಗಳಲ್ಲೇ.

ಕ್ರೆೃಸ್ಟ್‌ ಕಾಲೇಜು ಕನ್ನಡ ಸಂಘ ಶ್ರೀನಿವಾಸರಾಜು ಅವರ ಶ್ರಮ-ಕನಸಿನ ಅಭಿವ್ಯಕ್ತಿ. ಕನ್ನಡಸಂಘ ಹಾಗೂ ಶ್ರೀನಿವಾಸರಾಜು ಅವರನ್ನು ಪ್ರತ್ಯೇಕವಾಗಿ ನೆನೆಯುವುದು ಸಾಧ್ಯವೇ ಇಲ್ಲ. ಬಯಸಿದ್ದರೆ ಯಾವುದೊ ಒಂದು ವಿಶ್ವ ವಿದ್ಯಾಲಯದ ಪ್ರಮುಖ ಸ್ಥಾನವನ್ನು ಅಲಂಕರಿಸಬಹುದಿತ್ತಾದರೂ, ನಿವೃತ್ತಿ ಹೊಂದುವ ದಿನದವರೆಗೂ ಶ್ರೀನಿವಾಸರಾಜು ಕ್ರೆೃಸ್ಟ್‌ ಕಾಲೇಜಿನಲ್ಲೇ ಉಳಿದರು. ಬೆಂಗಳೂರಿನ ಪ್ರತಿಷ್ಠಿತ ಹಾಗೂ ಹೈಟೆಕ್‌ ಕಾಲೇಜುಗಳಲ್ಲೊಂದಾದ ಕ್ರೆೃಸ್ಟ್‌ ಕಾಲೇಜಿನ ಹೆಸರನ್ನು ಕನ್ನಡ ಸಂಘದ ಮೂಲಕ ನಾಡಿನುದ್ದಕ್ಕೂ ಮುಟ್ಟಿಸಿದ ಕೀರ್ತಿ ರಾಜು ಅವರಿಗೆ ಸಲ್ಲುತ್ತದೆ.

ಬೇರೆಯವರ ಪುಸ್ತಕ ಪ್ರಕಟಿಸುವುದರಲ್ಲಿ, ಆ ಪುಸ್ತಕಗಳನ್ನು ಸಹೃದಯರಿಗೆ ಮುಟ್ಟಿಸುವುದರಲ್ಲೇ ಸಾರ್ಥಕತೆ ಕಂಡ ಶ್ರೀನಿವಾಸರಾಜು ತಾವು ಬರೆದದ್ದು ಕಡಿಮೆ. ನಾಟಕ, ಕಥೆ, ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಆಗಾಗ ತೊಡಗಿಸಿಕೊಂಡ ಅವರಿಗೆ ಪೂರ್ಣ ಪ್ರಮಾಣದಲ್ಲಿ ಬರಹಗಾರರಾಗಲು ಬಿಡುವಾಗಲೇ ಇಲ್ಲ. (ಕನ್ನಡ ಪರಿಚಾರಿಕೆಯಲ್ಲಿ ತೊಡಗಿದವರಿಗೆ ಬಿಡುವಾಗುವುದಾದಗೂ ಹೇಗೆ !). ಶ್ರೀನಿವಾಸರಾಜು ಅವರ ಮೂಕ ನಾಟಕಗಳನ್ನು ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಪ್ರಯೋಗಗಳು ಎಂದು ಗುರ್ತಿಸಲಾಗಿದೆ.

ಕನ್ನಡ ಸಂಘದ ಮೂಲಕ 170 ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಿಸಿದ ಶ್ರೀನಿವಾಸರಾಜು ಒತ್ತು ನೀಡಿದ್ದು ಯುವಬರಹಗಾರರಿಗೆ, ಅದರಲ್ಲೂ ಕವಿಗಳಿಗೆ. ಎಚ್‌.ಎಸ್‌.ಶಿವಪ್ರಕಾಶ್‌, ಎಸ್‌.ಮಂಜುನಾಥ್‌, ಪ್ರತಿಭಾ ನಂದಕುಮಾರ್‌, ಅಬ್ದುಲ್‌ ರಷೀದ್‌, ಟಿ.ಎನ್‌.ಸೀತಾರಾಂ, ಅಮರೇಶ ನುಗಡೋಣಿ, ಬಸವರಾಜ ಕಲ್ಗುಡಿ, ಎಚ್‌.ಎಸ್‌.ರಾಘವೇಂದ್ರ ರಾವ್‌, ಕೆ.ಎನ್‌.ಹನುಮಂತಯ್ಯ ಅವರ ಮೊದಲ ಪುಸ್ತಕಗಳು ಪ್ರಕಟವಾದದ್ದು ಕನ್ನಡ ಸಂಘದ ಮೂಲಕವೇ. ಇದೆಲ್ಲ ಸಾಹಿತ್ಯ ಪರಿಚಾರಕ ಶ್ರೀನಿವಾಸರಾಜು ಅವರ ಮುಖ. ತುಂಬಾ ಜನಕ್ಕೆ ಗೊತ್ತಿಲ್ಲದ ಇನ್ನೊಂದು ಮುಖ ಅವರಿಗಿದೆ. ದಾರಿಯಲ್ಲಿ ಎನ್‌ಸಿಸಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಯಾಬ್ಬ ನಡೆದುಹೋಗುತ್ತಿದ್ದರೆ ಶ್ರೀನಿವಾಸರಾಜು ಅವರ ನಡಿಗೆ ನಿಧಾನವಾಗುತ್ತದೆ. ಅದೇರೀತಿ, ಫುಟ್ಬಾಲ್‌ ಆಡುವ ಹುಡುಗರನ್ನು ಕಂಡಾಗ ಅವರ ಕಣ್ಣುಗಳಲ್ಲಿ ಹೊಳಪು ಕಾಣಿಸುತ್ತದೆ. ವಿದ್ಯಾರ್ಥಿ ದಿನಗಳಲ್ಲಿ ಶ್ರೀನಿವಾಸರಾಜು ಅವರಿಗೆ ಎನ್‌ಸಿಸಿ ಎಂದರೆ ಅಚ್ಚುಮೆಚ್ಚು. ವಿದ್ಯಾರ್ಥಿಯಾಗಿದ್ದಾಗ ಎನ್‌ಸಿಸಿ ಕೆಡೆಟ್‌ ಆಗಿದ್ದ ಅವರು, ಆನಂತರ ಎನ್‌ಸಿಸಿ ಅಧಿಕಾರಿಯಾಗಿಯೂ ದುಡಿದಿದ್ದರು. ಎನ್‌ಸಿಸಿಯಷ್ಟೇ ಪುಟ್ಬಾಲ್‌ ಅವರಿಗಿಷ್ಟ. ಕಾಲ್ಚೆಂಡಿನಾಟದಲ್ಲಿ ಗೋಲು ರಕ್ಷಕರಾಗಿ ಚೆಂಡು ಹಿಡಿಯುವುದು ತುಂಬಾ ಖುಷಿ ಕೊಡುವ ಸಂಗತಿ. ಎನ್‌ಸಿಸಿ ಹಾಗೂ ಪುಟ್ಬಾಲ್‌ ಬಗೆಗೆ ರಾಜುಮೇಷ್ಟ್ರು ಈಗಲೂ ಭಾವುಕರಾಗಿ ಮಾತಾಡುತ್ತಾರೆ.

*

ಆರ್ಯಭಟ, ವಿಶ್ವೇಶ್ವರಯ್ಯ, ಸಂಸ, ಮನು ಮುಂತಾದ ಪ್ರಶಸ್ತಿಗಳು, ಕೋಲಾರ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಶ್ರೀನಿವಾಸರಾಜು ಅವರಿಗೆ ಸಂದಿವೆ. ಇನ್ನೇನು ಕ್ರೆೃಸ್ಟ್‌ ಕಾಲೇಜಿನ ಕರ್ತವ್ಯದಿಂದ ನಿವೃತ್ತರಾಗುತ್ತಾರೆ ಅನ್ನುವಾಗ ರಾಜು ಮೇಷ್ಟ್ರಿಗೆ, ಅವರ ಕನ್ನಡ ಸಂಘಕ್ಕೆ ಪುಸ್ತಕ ಪ್ರಾಧಿಕಾರದ ‘ಉತ್ತಮ ಪ್ರಕಾಶಕ’ ಪ್ರಶಸ್ತಿ ದೊರೆತದ್ದು ಕನ್ನಡ ಸಂಘದೊಂದಿಗಿನ ಅವರ ಒಡನಾಟಕ್ಕೆ ಅರ್ಥಪೂರ್ಣ ವಿದಾಯವಾಗಿತ್ತು. ಆದರೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೂಚಿತವಾಗಿದ್ದ ಶ್ರೀನಿವಾಸರಾಜು ಅವರ ಹೆಸರು ರಾತ್ರಿಯ ರಾಜಕೀಯದಲ್ಲಿ ಬೆಳಗಾಗುವುದರೊಳಗೆ ಲಾಬಿದಾರರ ಪಾಲಾದದ್ದು ನೋವಿನ ಸಂಗತಿ.

ಕ್ರೆೃಸ್ಟ್‌ ಕಾಲೇಜಿನ ಕನ್ನಡ ಮೇಷ್ಟ್ರು ಕರ್ತವ್ಯದಿಂದ ನಿವೃತ್ತರಾಗಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರೂ ರಾಜುಮೇಷ್ಟ್ರ ಕನ್ನಡ ಪರಿಚಾರಿಕೆಗೆ ಮಾತ್ರ ವಿಶ್ರಾಂತಿ ಎಂಬುದಿಲ್ಲ. ಕನ್ನಡದ ಕೆಲಸ ಎಂದರೆ ಅವರಿಗೆ ಆಹ್ವಾನವೇ ಬೇಕಿಲ್ಲ. ‘ಮೇಷ್ಟ್ರೇ, ಬೇರೆಯವರಿಂದ ಬರೆಸುವುದನ್ನು ಕಡಿಮೆ ಮಾಡಿ, ಇನ್ನು ಮುಂದಾದರೂ ನಿಮ್ಮ ಬರವಣಿಗೆಗೆ ಗಮನ ಕೊಡಿ’ ಎಂದರೆ ನಗುತ್ತಾರೆ. ಇನ್ನೂ ಏನೇನು ಕೆಲಸ ಬಾಕಿಯಿದೆ ಎಂದು ಪಟ್ಟಿ ನೀಡುತ್ತಾರೆ. ಕನ್ನಡದ ಬಗ್ಗೆ, ಕನ್ನಡದಂಥ ಪ್ರಾದೇಶಿಕ ಭಾಷೆಗಳ ಸ್ಥಿತಿಗತಿ ಬಗ್ಗೆ, ಜಾಗತೀಕರಣದ ಬಗ್ಗೆ ರಾಜುಮೇಷ್ಟ್ರು ಅರ್ಥಪೂರ್ಣವಾಗಿ ಮಾತಾಡುತ್ತಾರೆ. ರಾಜು ಮೇಷ್ಟ್ರ ಜೀವನ ಪ್ರೇಮ ಹಾಗೂ ಪುಸ್ತಕ ಪ್ರೇಮ ಬೆಂಗಳೂರಿನ ಮಾಲಿನ್ಯದ ಮಸಿಗೂ ಮಾಸದಷ್ಟು ತಾಜಾ ಆಗಿವೆ. ರಾಜು ಮೇಷ್ಟ್ರನ್ನು ಹಳ್ಳಿಯ ಅಜ್ಜನೊಂದಿಗೆ ನೆನೆದದ್ದು ಆ ಕಾರಣದಿಂದಲೇ. ಮೊಮ್ಮಗುವಿಗೆ ಪೆಪ್ಪರುಮೆಂಟು ಕೊಟ್ಟು, ಕಂದನ ನಗೆಯನ್ನು ತನ್ನ ಕಣ್ಣಲ್ಲಿ ತುಂಬಿಕೊಳ್ಳುವ ಅಜ್ಜನಿಗೂ ರಾಜು ಮೇಷ್ಟ್ರಿಗೂ ಸಾಮ್ಯವಿದೆ. ಮೊಗೆದಷ್ಟೂ ಉಕ್ಕುವ ಜೀವನಪ್ರೇಮ ಇಬ್ಬರಲ್ಲೂ ಇದೆ.

ರಾಜು ಮೇಷ್ಟ್ರ ಸಾಧನೆ ಏನು ? ಬದುಕಿನ ಇತರ ತುರ್ತುಗಳಷ್ಟೇ ಸಾಹಿತ್ಯಿಕ ಸಾಂಸ್ಕೃತಿಕ ಕಾಳಜಿಗಳನ್ನೂ ಅಂಟಿಸಿಕೊಂಡು ತಿರುಗುವ ‘ಸಂಚಯ’ದ ಡಿ.ವಿ.ಪ್ರಹ್ಲಾದ್‌, ‘ಅಭಿನವ’ದ ನ.ರವಿಕುಮಾರ್‌ ಅಂಥವರು- ‘ನಮಗೆಲ್ಲ ರಾಜು ಮೇಷ್ಟ್ರೆ ಸ್ಫೂರ್ತಿ’ ಎನ್ನುವುದೇ ಈ ಪ್ರಶ್ನೆಗೆ ಉತ್ತರ. ಈ ಮಾತು ‘ರಾಜು ಮೇಷ್ಟ್ರ ಹಾದಿಯಲ್ಲಿ ಮುಂದೇನು?’ ಎನ್ನುವ ಇನ್ನೊಂದು ಪ್ರಶ್ನೆಗೂ ಉತ್ತರದಂತಿರುವುದು ಜಡಗಟ್ಟಿದ ಸಾಂಸ್ಕೃತಿಕ ಸಂದರ್ಭದಲ್ಲಿ ಭರವಸೆ ಹುಟ್ಟಿಸುತ್ತದೆ.

Post your views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X