ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವನಾಥ್‌ ಹುಲಿಕಲ್‌ ಸಂದರ್ಶನ

By Staff
|
Google Oneindia Kannada News

*ಚ.ಹ. ರಘುನಾಥ

Vishvanath Hulikal- Photo by Sham‘ಸಾಹಿತ್ಯ ಹೊಟ್ಟೆ ತುಂಬಿಸುತ್ತಾ ?’

‘ಇಲ್ಲ . ಸಾಹಿತ್ಯವಷ್ಟೇ ಏಕೆ, ಸಾಹಿತ್ಯವನ್ನೂ ಒಳಗೊಂಡ ಸಂಸ್ಕೃತಿಯಾಗಲೀ, ಸಾಹಿತ್ಯಕ್ಕೆ ಬೀಜವಾದ ಭಾಷೆಯಾಗಲೀ ಹೊಟ್ಟೆ ತುಂಬಿಸುವುದಿಲ್ಲ . ಆ ಕಾರಣದಿಂದಲೇ ಮೊದಲು ಅನ್ನಕ್ಕೆ ಪ್ರಾಧಾನ್ಯತೆ ; ಹೊಟ್ಟೆ ತುಂಬಿದ ನಂತರವಷ್ಟೇ ಸಾಹಿತ್ಯಕ್ಕೆ ಮಣೆ. ’

ಆದರೆ ಒಮ್ಮೊಮ್ಮೆ ಹೀಗೂ ಆಗುತ್ತೆ ನೋಡಿ. ಅಮೆರಿಕದ ಪರಿಸರದಲ್ಲಿ ಸಾಹಿತ್ಯವೂ ಹೊಟ್ಟೆ ತುಂಬಿಸುವ ಸಾಧ್ಯತೆಯಿದೆ; ಪರೋಕ್ಷವಾಗಿ. ಇಲ್ಲಿ ನಡೆಯುವ ಸಾಹಿತ್ಯದ ಕಾರ್ಯಕ್ರಮಗಳು ಕೇವಲ ಸಾಹಿತ್ಯದಲ್ಲೇ ಕೊನೆಯಾಗುವುದಿಲ್ಲ . ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದಾಗಿ ಒಂದಷ್ಟು ಜನರ ಪರಿಚಯವಾಗುತ್ತೆ . ಗೆಳೆಯರ ಬಳಗ ಬೆಳೆಯುತ್ತೆ . ಅಂತಿಮವಾಗಿ, ನಮಗೇನಾದರೂ ಸಹಾಯ ಬೇಕಿದ್ದಲ್ಲಿ ಈ social network ನೆರವಿಗೆ ಬರುತ್ತೆ . ಸಾಹಿತ್ಯ ಅಂದರೆ ಬದುಕಿನ ಪ್ರತಿಬಿಂಬ ಹಾಗೂ ಗತಿಬಿಂಬ ಅನ್ನೋ ಮಾತು ಸತ್ಯವಾಗೋದೆ ಇಲ್ಲಿ ..’

ಸಾಹಿತ್ಯದ ಹೊಸ ಬಗೆಯ ಸಾಧ್ಯತೆಯನ್ನು ನಮ್ಮೆದುರು ತೆರೆದಿಟ್ಟವರು ವಿಶ್ವನಾಥ್‌ ಹುಲಿಕಲ್‌. ಅನೇಕ ಕೆಲಸಗಳನ್ನು ಬೆನ್ನಿಗೆ ಕಟ್ಟಿಕೊಂಡು ರಜೆದಿನಗಳಲ್ಲಿ ಅಮೆರಿಕದಿಂದ ತುಮಕೂರಿಗೆ ಬಂದಿರುವ ವಿಶ್ವನಾಥ್‌ ಹುಲಿಕಲ್‌- ‘ಅಮೆರಿಕ ನೆಲದಲ್ಲಿ ಕನ್ನಡಿಗರ ಸಾಹಿತ್ಯ ಚಟುವಟಿಕೆಗಳು ಹಾಗೂ ಆ ಚಟುವಟಿಕೆಗಳ ಅಗತ್ಯ-ಪ್ರಾಮುಖ್ಯ’ದ ಕುರಿತು ತಮ್ಮ ಅನುಭವಗಳನ್ನು ದಟ್ಸ್‌ಕನ್ನಡ.ಕಾಂಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡರು. ಸಂದರ್ಶನ ನಡೆದದ್ದು ಬೆಂಗಳೂರಿನ ಪ್ರೆಸ್‌ಕ್ಲಬ್‌ ಅಂಗಳದ ಹಸಿರು ಪರಿಸರದಲ್ಲಿ . ನವಂಬರ್‌ 22 ರ ಶುಕ್ರವಾರ.

*

ವಿಶ್ವನಾಥ್‌ ಹುಲಿಕಲ್‌ ಅವರನ್ನು ಒಂದೇ ವಾಕ್ಯದಲ್ಲಿ ಪರಿಚಯಿಸುವುದಾದರೆ- ‘ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌, ಪ್ರವೃತ್ತಿಯಲ್ಲಿ ರೈಟರ್‌’. ಆದರೆ, ಇಂಥ ಒಂದು ಮಾತಿನ ಹೇಳಿಕೆಗಳು ವ್ಯಕ್ತಿತ್ವವನ್ನು ಬಿಚ್ಚಿಡುವುದಕ್ಕಿಂಥ ಮುಚ್ಚಿಡುವುದೇ ಹೆಚ್ಚು . ಹುಲಿಕಲ್‌ ಅವರನ್ನೇ ನೋಡಿ. ಆತ ಇಂಜಿನಿಯರ್‌, ಸಾಹಿತಿ, ಅಷ್ಟೇ ಅಲ್ಲ : ಸಾಹಿತ್ಯ ಸಂಘಟಕ, ಕಲಾವಿದ, ಸಿನಿಮಾ ಕತೆಗಾರ, ಅನುವಾದಕ, ಹೀಗೆ ಬಹುಮುಖ ಪ್ರತಿಭೆ.

ತುಂಗೆಯ ಮಡಿಲ ಶೃಂಗೇರಿಯಲ್ಲಿ 1957ರಲ್ಲಿ ಜನಿಸಿದ ವಿಶ್ವನಾಥ್‌, ಅಪ್ಪ ಎಚ್‌.ಸೋಮನಾಥ್‌ ಅವರಂತೆ ಮೇಷ್ಟ್ರು ಆಗಬೇಕೆಂದು ಬಯಸಿದರು; ಆದದ್ದು ಇಂಜಿನಿಯರ್‌. ತಾಯಿ ಎಚ್‌.ಎಸ್‌.ಲಲಿತಾಂಬ ಕರ್ನಾಟಕ ಸಂಗೀತದಲ್ಲಿ ಪರಿಣತೆ. ಶಾರದಾಂಬೆಯ ಶೃಂಗೇರಿ ಆಕೆಯ ತವರು. ಅಪ್ಪನ ಊರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಹುಲಿಕಲ್‌.

ಅಪ್ಪನ ಮೇಷ್ಟ್ರುಗಿರಿಯ ಫಲವಾಗಿ ವಿಶ್ವನಾಥ್‌ ಊರೂರು ನೀರು ಕುಡಿದರು. ತುಮಕೂರು ಜಿಲ್ಲೆಯ ನಾಗವಲ್ಲಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಗುಲ್ಬರ್ಗಾ ಜಿಲ್ಲೆಯ ವಡಿಗೆರಾದಲ್ಲಿ ಮಾಧ್ಯಮಿಕ-ಪ್ರೌಢಶಾಲೆ ಕಲಿಕೆ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ನಡೆಯಿತು. ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದ(1978ರಲ್ಲಿ) ವಿಶ್ವನಾಥ್‌, 1981 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಬಿ.ಇ. (ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌) ಪೂರೈಸಿದರು. ಆನಂತರ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ 1984 ರಲ್ಲಿ ಕಂಪ್ಯೂಟರ್‌ ಇಂಜಿನಿಯರಿಂಗ್‌ ವಿಷಯದಲ್ಲಿ ಎಂ.ಟೆಕ್‌ ಪದವಿ ಪಡೆದರು. ಇದಿಷ್ಟೂ ವಿಶ್ವನಾಥ್‌ರ ವಿದ್ಯಾಭ್ಯಾಸದ ಜಾತಕ.

ವಿಶ್ವನಾಥ್‌ ವೃತ್ತಿ ಪ್ರಾರಂಭಿಸಿದ್ದು ಬೆಂಗಳೂರಿನ ವಿಪ್ರೋ ಇನ್‌ಫರ್ಮೇಶನ್‌ ಟೆಕ್ನಾಲಜೀಸ್‌ನಲ್ಲಿ. ಆಗಿನ್ನೂ ವಿಪ್ರೋ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಚಿಕ್ಕ ಚಿಕ್ಕ ಹೆಜ್ಜೆಗಳನ್ನಿಡುತ್ತಿತ್ತು. ವಿಪ್ರೆೋದಲ್ಲಿದ್ದಾಗಲೇ ‘ಭಾರತದ ಮೊಟ್ಟ ಮೊದಲ ಲೋಕಲ್‌ ಏರಿಯಾ ನೆಟ್‌ವರ್ಕ್‌’ ವಿನ್ಯಾಸವನ್ನು ವಿಶ್ವನಾಥ್‌ ಅಭಿವೃದ್ಧಿಪಡಿಸಿದರು. ಆನಂತರ ಅಮೆರಿಕ ಪ್ರಯಾಣ. ಮೊದಲು ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನಲ್ಲಿ ಉದ್ಯೋಗ, ಈಗ ಲೆಗಾಟೋ ಸಿಸ್ಟಂಸ್‌ನಲ್ಲಿ ಕೆಲಸ. ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನಿಂದ ‘ಲ್ಯಾನ್‌ ಮೇನೇಜರ್‌ ಹೀರೋ’ ಎನ್ನುವ ಪ್ರಶಸ್ತಿಗೆ ಪಾತ್ರರಾಗಿರುವ ವಿಶ್ವನಾಥ್‌, 1987 ರಲ್ಲಿ ಖರಗಪುರದಲ್ಲಿ ನಡೆದ ಅಂತರರಾಷ್ಟ್ರೀಯ ಸಿಂಪೋಸಿಯಂನಲ್ಲಿ ಪ್ರೌಢ ಪ್ರಬಂಧ ಮಂಡಿಸಿದ್ದಾರೆ.

ವಿಶ್ವನಾಥ್‌ ಹುಲಿಕಲ್‌ರ ಅಕ್ಷರ ಚಟುವಟಿಕೆಗಳು ಒಂದೆರಡಲ್ಲ. ಪತ್ನಿ ಅನ್ನಪೂರ್ಣ ವಿಶ್ವನಾಥ್‌ ಅವರೊಂದಿಗೆ- ‘ಸೌರಭ’ ಕಥಾ ಸಂಕಲನ ಹಾಗೂ ‘ಮಂಥನ’ ಎನ್ನುವ ಅನುವಾದಿತ ಬರಹಗಳ ಕೃತಿಯನ್ನು ಪ್ರಕಟಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ದುಡಿದಿರುವ ಅವರು- ‘ವಿಷು’ ಎನ್ನುವ ಸಾಹಿತ್ಯ ಸಂಚಿಕೆಯ ಸಂಪಾದಿಸಿದ್ದಾರೆ. ನಾಗತಿಹಳ್ಳಿಯ ‘ಅಮೆರಿಕ ಅಮೆರಿಕ’ ಸಿನಿಮಾದ ಕಥೆಗಾರರಲ್ಲಿ ಇವರೂ ಒಬ್ಬರು. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ‘ಸಾಹಿತ್ಯ ಗೋಷ್ಠಿ’ ಎನ್ನುವ ಸಾಹಿತ್ಯಕ್ಕೇ ಮೀಸಲಾದ ಬಳಗವೊಂದನ್ನು ರೂಪಿಸಿದ್ದಾರೆ.

ವಿಶ್ವನಾಥ್‌ರಿಗೆ ಬರ್ಟಂಡ್‌ ರಸೆಲ್‌ ಅಚ್ಚುಮೆಚ್ಚಿನ ಲೇಖಕ. ಆ ಕಾರಣದಿಂದಲೇ ರಸೆಲ್‌ನ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಕ್ರೋಸಾಫ್ಟ್‌ನ ಕೈಪಿಡಿಯಿಂದ ‘ಸಾಂಸ್ಕೃತಿಕ ಆಘಾತ’ ಹಾಗೂ ‘ಅಮೆರಿಕದಲ್ಲಿ ಹೊಂದಾಣಿಕೆ’ ಎನ್ನುವ ಅಪರೂಪದ ಲೇಖನಗಳನ್ನು ವಿಶ್ವನಾಥ್‌ ಕನ್ನಡೀಕರಿಸಿದ್ದಾರೆ.

ವೃತ್ತಿಯ ತಂತ್ರಜ್ಞಾನ ಜಗತ್ತು ಹಾಗೂ ಬಯಕೆಯ ಸಾರಸ್ವತ ಲೋಕ- ಎರಡರಲ್ಲೂ ವಿಶ್ವನಾಥ್‌ ಸಕ್ರಿಯರು. ಸಾಹಿತ್ಯದ ವಾಸನೆ ಅವರಿಗೆ ಹುಟ್ಟಿನಿಂದಲೇ ಬಂದಿರಬೇಕು. ತಾಯಿ ಲಲಿತಾಂಬ ಕರ್ನಾಟಕ ಸಂಗೀತ ಕಲಾವಿದೆ. ‘ವಿದ್ವತ್‌’ ಪರೀಕ್ಷೆಯನ್ನು ಪಾಸು ಮಾಡಿರುವ ಲಲಿತಾಂಬ ಗಮಕಿಯೂ ಹೌದು. ಕುಮಾರವ್ಯಾಸ ಭಾರತ ಆಕೆಗೆ ಅಚ್ಚುಮೆಚ್ಚು. ತಂದೆ ಸೋಮನಾಥ್‌ ವಿಜ್ಞಾನದ ಮೇಷ್ಟ್ರಾದರೂ ಸಾಹಿತ್ಯದ ಅಭಿಮಾನಿ. ಅಪ್ಪ ಸಾಹಿತ್ಯದ ಆರಾಧಕರಾದರೆ, ಅಜ್ಜಿ ಎಂ.ಬಿ.ಗೌರಮ್ಮ ಸ್ವತಃ ಕವಯತ್ರಿ. ಭಾಮಿನಿ ಷಟ್ಪದಿಯಲ್ಲಿ ಬರೆದ ‘ಸತಿ ಬೃಂದ’ ಕೃತಿ ಗೌರಮ್ಮನವರಿಗೆ ‘ರಾವ್‌ ಬಹದ್ದೂರ್‌’ ಪ್ರಶಸ್ತಿ ಗಳಿಸಿಕೊಟ್ಟಿತ್ತು. ಈ ಪರಿಯ ಸಾಂಸ್ಕೃತಿಕ ಹಿನ್ನೆಲೆಯ ವಿಶ್ವನಾಥ್‌ ಇವತ್ತು ಸಾಗುತ್ತಿರುವುದು ಹಿರಿಯರು ತೋರಿದ ಹೆದ್ದಾರಿಯಲ್ಲಿಯೇ.

*

ಸಾಹಿತ್ಯದ ಬಗ್ಗೆ ಸದಭಿರುಚಿಯನ್ನು ಮೂಡಿಸೋದು ‘ಸಾಹಿತ್ಯ ಗೋಷ್ಠಿ’ಯ ಮುಖ್ಯ ಉದ್ದೇಶ ಎಂದು ಸ್ಪಷ್ಟವಾಗಿ ಹೇಳುವ ವಿಶ್ವನಾಥ್‌ಗೆ ಸಾಹಿತ್ಯ ಗೋಷ್ಠಿಯ ಮೂಲಕ ಕುಪರ್ಟಿನೋ, ಸನ್ನಿವೇಲ್‌ ಪ್ರದೇಶಗಳಲ್ಲಿ ಕನ್ನಡದ ಚಟುವಟಿಕೆಗಳನ್ನು ಸದಾ ಜೀವಂತವಾಗಿರಿಸುವ ಆಸೆ. ಭೈರಪ್ಪನವರೋ, ಲನಾಭಟ್ಟರೋ ಅಥವಾ ಪ್ರಸಿದ್ಧ ಸಿನಿತಾರೆಯಾ ಕಲಾವಿದರೋ ಬಂದಾಗಷ್ಟೇ ಜೀವಗೊಳ್ಳುವ ಅಮೆರಿಕದಲ್ಲಿನ ಕನ್ನಡ ವಾತಾವರಣವನ್ನು - ತವರಿನ ಅತಿಥಿಗಳ ಅನುಪಸ್ಥಿತಿಯಲ್ಲಿಯೂ ಕ್ರಿಯಾಶೀಲವಾಗಿ ಇರಿಸುವುದು ವಿಶ್ವನಾಥ್‌ ಕನಸು.
ಅದೇನು ಸುಲಭದ ಕೆಲಸವಾ ?

‘ಸಂಗೀತದ ಕಾರ್ಯಕ್ರಮ ಮಾಡಿ, ಜನ ಬರ್ತಾರೆ. ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಿ, ಅಟೆಂಡೆನ್ಸ್‌ ಚೆನ್ನಾಗಿರುತ್ತೆ . ಸಾಹಿತ್ಯಕ್ಕೇನಿದ್ದರೂ ಮೂರನೇ ಪ್ರಾಧಾನ್ಯತೆ’ ಎನ್ನುತ್ತಾರೆ ವಿಶ್ವನಾಥ್‌. ವೃತ್ತಿಯಲ್ಲಿ ಪಕ್ಕಾ ಅಮೆರಿಕನ್ನರಾದ ಭಾರತೀಯರು, ವೈಯಕ್ತಿಕವಾಗಿ ಹದಿನಾರಾಣೆ ಭಾರತೀಯರು- ನಕ್ಷತ್ರಿಕರು. ಇದರೊಂದಿಗೆ ಅಮೆರಿಕದಲ್ಲಿ ಅನಿವಾಸಿ ಕನ್ನಡಿಗರ ಪರಿಧಿ ಚಿಕ್ಕದಾದರೂ ಅವಕಾಶಗಳ ಪರಿಧಿ ದೊಡ್ಡದು. ಇಂಥ ಸಂದರ್ಭದಲ್ಲಿ ಸಾಹಿತ್ಯದ ಕಾರ್ಯಕ್ರಮಗಳಿಗೆ ಜನರನ್ನು ಸೆಳೆಯಲು ಮಾಡಬೇಕಾದ ಸರ್ಕಸ್ಸು ಒಂದೆರಡಲ್ಲ. ಸಾಹಿತ್ಯ ಗೋಷ್ಠಿಯ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ - ಸಾಹಿತ್ಯದ ಸಂಕೀರ್ಣತೆಯನ್ನು ತಿಳಿಗೊಳಿಸುವ ಮೂಲಕ ಸಾಹಿತ್ಯವನ್ನು ಸಮುದಾಯಕ್ಕೆ ಮುಟ್ಟಿಸುವ ಕಾಯಕದಲ್ಲಿ ಸಾಹಿತ್ಯಗೋಷ್ಠಿ ತೊಡಗಿದೆ ಎನ್ನುತ್ತಾರೆ ವಿಶ್ವನಾಥ್‌. ಮನಸ್ಸಿಗಷ್ಟೇ ಅಲ್ಲ , ಹೊಟ್ಟೆಗೂ ಆಹಾರ ; ಇದು ಸಾಹಿತ್ಯಗೋಷ್ಠಿ ಕಾರ್ಯಕ್ರಮಗಳ ಇನ್ನೊಂದು ಆಕರ್ಷಣೆ.

ಸಾಹಿತ್ಯಾಸಕ್ತರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಸದಭಿರುಚಿಯನ್ನು ಮೂಡಿಸುವ ಉದ್ದೇಶದಿಂದ ನವಂಬರ್‌ 11, 2001 ರಂದು ಪ್ರಾರಂಭವಾದ ‘ಸಾಹಿತ್ಯಗೋಷ್ಠಿ’- ಭಾಷಣ, ಕವಿಗೋಷ್ಠಿ, ವಿಚಾರ ಸಂಕಿರಣ, ಚರ್ಚೆ, ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರತಿ ತಿಂಗಳೂ ನಡೆಸುತ್ತಿದೆ. ಕಾರ್ಯಕ್ರಮಗಳನ್ನು ಸುರಳೀತವಾಗಿ ನಡೆಸಿಕೊಂಡು ಬರುವುದಕ್ಕೆ ಅಡ್ಡವಾಗುವ ನೋವುಗಳು ಬೇಕಾದಷ್ಟಿವೆ. ನಲಿವುಗಳು ದಕ್ಕಬೇಕಾದರೆ ನೋವು ಅನುಭವಿಸಲೇಬೇಕು. ಸಾಹಿತ್ಯದೊಡನೆ ಸಂಯೋಗ ಮಾಡಿದವರು ಹೆರಿಗೆ ನೋವಿಗೆ ನರಳಬಾರದು. ಸಾಹಿತ್ಯಗೋಷ್ಠಿಯ ಇನ್ನೊಂದು ಕೂಸಾಗಿ ಸದ್ಯದಲ್ಲೇ ಅವರ ವೆಬ್‌ಸೈಟ್‌ ಅಂತರಜಾಲದ ಪ್ರವೇಶ ಪಡೆಯಲಿದೆ.

ಸಾಹಿತ್ಯ ಗೋಷ್ಠಿಯ ಮೂಲಕ ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸುವ, ಆ ಮೂಲಕ ಕನ್ನಡದ ಶ್ರೇಷ್ಠ ಲೇಖಕರನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯೂ ಸಾಹಿತ್ಯಗೋಷ್ಠಿಗಿದೆ. ಯೋಜನೆಯ ಪ್ರಾಥಮಿಕ ಹಂತವಾಗಿ ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಸಾಹಿತ್ಯಗೋಷ್ಠಿಯ ಸಂಪಾದಕೀಯ ಬಳಗ ತೀರ್ಮಾನಿಸಿದೆ. ಕಾರ್ಯ ಚಾಲ್ತಿಯಲ್ಲಿದೆ.

ಇದಿಷ್ಟೂ ಸಾಹಿತ್ಯಗೋಷ್ಠಿಯ ಮೂಲಕ ಸಮುದಾಯದ ಚಟುವಟಿಕೆಯಾಯಿತು. ವೈಯಕ್ತಿಕವಾಗಿ, ವಿಶ್ವನಾಥ್‌ ಏನು ಮಾಡ್ತಿದಾರೆ ?

John steinbeckಸದ್ಯಕ್ಕೆ ಜಾನ್‌ ಸ್ಟೈನ್‌ಬಕ್‌ನ ಲೇಖನಗಳನ್ನು ವಿಶ್ವನಾಥ್‌ ಕನ್ನಡೀಕರಿಸುತ್ತಿದ್ದಾರೆ. ಪುಲಿಟ್ಜರ್‌, ನೊಬೆಲ್‌ ಪ್ರಶಸ್ತಿ ವಿಜೇತ ಸ್ಟೈನ್‌ಬಕ್‌ ಒಳನೋಟಗಳನ್ನುಳ್ಳ ಪ್ರತಿಭಾವಂತ ಲೇಖಕ. ಒಬ್ಬ ಅಮೆರಿಕನ್‌ ಆಗಿ ಅಮೆರಿಕದ ಬಗ್ಗೆ ಮುಕ್ತ ಮನಸ್ಸಿನಿಂದ ಬರೆದವನು. ಅಮೆರಿಕದ ಬಗೆಗಿನ ಆತನ ಒಳನೋಟ, ವಿರೋಧಾಭಾಸ ಹಾಗೂ ಅಪರೂಪದ ಚಿಂತನೆಗಳನ್ನೊಳಗೊಂಡ ‘ಅಮೆರಿಕ ಅಂಡ್‌ ಅಮೆರಿಕನ್ಸ್‌’ (America and Americans) ಸಂಕಲನದ ಪ್ರಬಂಧಗಳನ್ನು ವಿಶ್ವನಾಥ್‌ ಕನ್ನಡಕ್ಕೆ ತರುತ್ತಿದ್ದಾರೆ. ಪ್ರಕಾಶಕರು ಸಿಕ್ಕುವುದೇ ಬಾಕಿ; ಸ್ಟೈನ್‌ಬಕ್‌ ಕನ್ನಡಕ್ಕೆ ಬರಲಿದ್ದಾನೆ. ಅಂದಹಾಗೆ, ಈಗ ಜಾನ್‌ ಸ್ಟೈನ್‌ಬಕ್‌ನ ಜನ್ಮ ಶತಾಬ್ಧಿ ವರ್ಷ ಚಾಲ್ತಿಯಲ್ಲಿದೆ.

*

ತುಮಕೂರು-ಬೆಂಗಳೂರು ನಡುವೆ ರಜೆ ದಿನಗಳನ್ನು ಖರ್ಚು ಮಾಡುತ್ತಿರುವ ವಿಶ್ವನಾಥ್‌ ತವರಲ್ಲೂ ಕನವರಿಸುತ್ತಿರುವುದು ಸಾಹಿತ್ಯವನ್ನೇ. ಬಂಧು ಮಿತ್ರರೊಂದಿಗೆ ಕಾಲಕ್ಷೇಪ, ಲೇಖಕರು ಪ್ರಕಾಶಕರೊಂದಿಗೆ ಸಂಪರ್ಕ- ಇದು ವಿಶ್ವನಾಥ್‌ರ ಈ ಬಾರಿಯ ಭಾರತ ಪ್ರವಾಸದ ಟೈಂ ಟೇಬಲ್‌. ಅಮೆರಿಕೆಗೆ ಒಯ್ಯಲು ಈಗಾಗಲೇ ಸಣ್ಣ ಪುಸ್ತಕ ರಾಶಿಯನ್ನು ಖರೀದಿಸಿದ್ದಾರೆ. ಎಸ್‌.ಎಲ್‌.ಭೈರಪ್ಪನವರ ‘ಮಂದ್ರ’, ನಾಗವರ್ಮನ ‘ಕಾದಂಬರಿ’ಗಳ ಜೊತೆಗೆ ಮನವೇ ರಿಲಾಕ್ಸ್‌ ಪ್ಲೀಸ್‌, ಬದುಕಲು ಕಲಿಯಿರಿ ಪುಸ್ತಕಗಳೂ ರಾಶಿಯಲ್ಲಿ ಸೇರಿವೆ. ಅಂದರೆ, ಸಾಹಿತ್ಯ ಗೋಷ್ಠಿಯ ಬಂಡಿಗೆ ಇನ್ನಷ್ಟು ಇಂಧನ ಸಿಕ್ಕಂತಾಯಿತು. ಈ ಇಂಧನದ ಕಾವಿನಲ್ಲಿ ಓಡಬೇಕಾದ ಸಾಹಿತ್ಯಗೋಷ್ಠಿಯ ಬಂಡಿ ಇನ್ನೂ ತಲುಪಬೇಕಾಗಿರುವ ಗುರಿಯನ್ನು ನೋಡಲು ಹುಲಿಕಲ್‌ ದಂಪತಿಗಳೊಡನೆ ನೀವೂ ಇರಬೇಕು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X