• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಸಮ್ಮೇಳನ ಪಲ್ಲಕ್ಕಿಯ ಪಟ್ಟಕ್ಕೆ ಪಾಪು

By Staff
|

*ಎಂ. ವಿನೋದಿನಿ

Dr. Patila Puttappa, Dedicated to kannadaಪಾಪು ಎಂದೇ ಕರೆಸಿಕೊಳ್ಳುವ ಪಾಟೀಲ ಪುಟ್ಟಪ್ಪ ಒಂದಾನೊಂದು ಕಾಲದಲ್ಲಿ ಕನ್ನಡ ಚಳವಳಿಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದ್ದ ಹೆಸರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿಯೂ ಪ್ರಮುಖ ಹೆಸರು. ಅಪಾರ ಕನ್ನಡತನವನ್ನು ಮೈಗೂಡಿಸಿಕೊಂಡ ಇದೇ ಪ್ರತ್ಯೇಕ ರಾಜ್ಯದ ಹೋರಾಟದ ಅಗತ್ಯವನ್ನೂ ಪ್ರತಿಪಾದಿಸಿದವರು.

ಬೆಳಗಾವಿಯಲ್ಲಿ ಜರುಗುವ ಎಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪಾಟೀಲ ಪುಟ್ಟಪ್ಪನವರನ್ನು ಆಯ್ಕೆ ಮಾಡುವಾಗ, ಪಾಪು ಅವರ ನಡವಳಿಕೆ ಧೋರಣೆಗಳ ಬಗ್ಗೆ ಗುಸು ಗುಸು ಮಾತುಗಳು ಕಸಾಪ ಸಭೆಯಲ್ಲಿ ಕೇಳಿಬಂದವು. ಈ ಬಗ್ಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ನಡುವೆ ಸಣ್ಣ ವಾದವೂ ನಡೆಯಿತು. ಕೊನೆಗೆ ಎಲ್ಲರೂ ಬೇಧ ಮರೆತು ಪಾಪುವನ್ನು ಬೆಂಬಲಿಸಿದರು. ಪಾಪು ಬಹುಮತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು.

*

ಅವಿಭಜಿತ ಹುಬ್ಬಳ್ಳಿ ಧಾರವಾಡದ ಹಾವೇರಿಯಲ್ಲಿನ ಪುಟ್ಟ ಹಳ್ಳಿ ಕುರುಬಗೊಂಡ ಗ್ರಾಮ ಪಾಪು ತವರೂರು. ಸ್ವಾತಂತ್ರ್ಯ ಕೈಗೆ ಬರುವ ಹೊತ್ತಿಗೆ ಪಾಪು 26ರ ಯುವಕ. ಬಿಸಿ ರಕ್ತದ ಹುಮ್ಮಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು.

ಉನ್ನತ ವಿದ್ಯಾಭ್ಯಾಕ್ಕಾಗಿ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು. ಬ್ರಿಟಿಷರ ವಿರುದ್ಧ ಸಿಡಿದು ನಿಂತ ಪಾಪು ಅವರನ್ನು ಕಾಲೇಜಿನಿಂದ ಹೊರ ದಬ್ಬಲಾಯಿತು. ಇದರಿಂದ ಯುವಕ ಪುಟ್ಟಪ್ಪನಿಗೆ ಅನುಕೂಲವೇ ಆಯ್ತು. ಮುಂದಿನ ಹೋರಾಟಕ್ಕೆ ಕಾಲೇಜಿನ ಹಂಗಿಲ್ಲವಲ್ಲ ಎಂದು ನಿರಾಳರಾಗಿ ಭೂಗತ ಕಾರ್ಯಕರ್ತನಾಗಿ ಬ್ರಿಟಿಷರ ವಿರುದ್ಧದ ಚಟುವಟಿಕೆಗಳಲ್ಲಿ ವ್ಯಸ್ತರಾದರು.

ನಂತರ ಬಂತು ಪತ್ರಿಕೋದ್ಯಮ

ಬುದ್ಧಿ ಬಲಿಯುತ್ತಿದ್ದಂತೆಯೇ ಪಾಪುವನ್ನು ಆಕರ್ಷಿಸಿದ್ದು ಪತ್ರಿಕೋದ್ಯಮ. ಪಾಟಿ ಚೀಲ ಹೆಗಲಿಗೇರಿಸಿಕೊಂಡು ಹಾವೇರಿಯಲ್ಲಿ ಹೈಸ್ಕೂಲು ಕಲಿಯುತ್ತಿರುವಾಗಲೇ ‘ನಮ್ಮ ನಾಡು’ ಎಂಬ ಕೈ ಬರಹದ ಮಾಸಿಕ ಪತ್ರಿಕೆಯನ್ನು ಶುರುಮಾಡಿದರು. ಅಲ್ಲಿ ಶುರುವಾಯಿತು ದೇಶಭಕ್ತಿಯ ನಂಟು. ನಮ್ಮ ನಾಡು- ಬ್ರಿಟಿಷರ ವಿರುದ್ಧ ಪ್ರತಿಭಟನೆ, ಪತ್ರಿಕೋದ್ಯಮ ಹೋರಾಟಕ್ಕೊಂದು ಮಾಧ್ಯಮವಾಯಿತು.

ಕನ್ನಡದ ಪ್ರಥಮ ಡೈಜೆಸ್ಟ್‌ ‘ಸಂಗಮ’ ಹಾಗೂ ಮಹಿಳೆಯರಿಗೇ ಮೀಸಲಾದ ಮಹಿಳಾ ಪಾಕ್ಷಿಕವನ್ನು ತಂದ ಕ್ರೆಡಿಟ್‌ ಪಾಪುಗೇ ಸಲ್ಲಬೇಕು. ಹೀಗೆ ಹುಟ್ಟಿಕೊಂಡ ಪತ್ರಿಕೋದ್ಯಮದ ಪ್ರೀತಿ ನಂತರ ಕಾನೂನು ಪದವಿ ಓದುತ್ತಿರುವ ಸಂದರ್ಭದಲ್ಲಿ ‘ವಿಶಾಲ ಕರ್ನಾಟಕ’ ಎಂಬ ವಾರಪತ್ರಿಕೆಯಾಗಿ ಅರಳಿ, ಎಂಟು ವರ್ಷಗಳ ನಂತರ ಅದು ದಿನಪತ್ರಿಕೆಯಾಗಿ ಬಡ್ತಿ ಪಡೆಯಿತು. ಪಾಪು ಸಂಪಾದಕತ್ವದಲ್ಲಿ ನಂತರ ಹುಟ್ಟಿದ ವಾರ ಪತ್ರಿಕೆಯೇ ‘ಪ್ರಪಂಚ’. ಪಾಪು ನೇತೃತ್ವದಲ್ಲಿ ಬೆಳೆದ ಇನ್ನೊಂದು ಸಂಘಟನೆ ಧಾರವಾಡದ ಐತಿಹಾಸಿಕ ವಿದ್ಯಾವರ್ಧಕ ಸಂಘ. ಮೂವತ್ತೆರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಈ ಸಂಘವನ್ನು ಪಾಪು ಮುನ್ನಡೆಸಿದರು.

ಕಾಕತಾಳೀಯ ಅಂದರೆ ಇದುವೇ ನೋಡಿ; ಪಾಪು ಬೆಳೆಸಿದ ವಿದ್ಯಾವರ್ಧಕ ಸಂಘ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯ ಮನ್ನಣೆಗೆ ಪಾತ್ರವಾದ ನೆನಪು ಹಸಿರಾಗಿರುವಾಗಲೇ- ಪಾಪು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೋರಾಟದ ಬದುಕು

ಶಿಕ್ಷಣ, ರಾಜಕೀಯ, ಸಮಾಜ ಸೇವೆ, ಮುಂತಾಗಿ ಪಾಪು ಆಸಕ್ತಿಯ ಕ್ಷೇತ್ರಗಳು ಹತ್ತು ಹಲವು. ಕರ್ನಾಟಕ ಅಖಂಡವಾಗಿರಬೇಕು ಎಂದು ಏಕೀಕರಣಕ್ಕಾಗಿ ಹೋರಾಡಿದರು. ಇದೇ ಪಾಪು, ಆಡಳಿತ ವರ್ಗದ ಮಲತಾಯಿ ಧೋರಣೆಯಿಂದ ಉತ್ತರ ಕರ್ನಾಟಕದವರು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿರುವುದ ಕಂಡು, ಪ್ರತ್ಯೇಕತೆಯನ್ನು ಬೆಂಬಲಿಸಿದರು.

ಗೋಕಾಕ್‌ ವರದಿ ಜಾರಿಯಾಗಬೇಕು ಎಂದು ಚಳವಳಿ ಶುರು ಮಾಡಿದರು. ಆಡಳಿತದಲ್ಲಿ ಕನ್ನಡ ಭಾಷೆಯನ್ನ ಅನುಷ್ಠಾನಗೊಳಿಸಬೇಕು ಎಂದು ಇನ್ನೊಂದು ಹೋರಾಟ ಹಚ್ಚಿಕೊಂಡರು. ಕನ್ನಡ ಕಾವಲು ಸಮಿತಿ ಹಾಗೂ ಗಡಿ ಸಲಹಾ ಸಮಿತಿಯ ಅಧ್ಯಕ್ಷರಾಗಿ ಕನ್ನಡದ ಕಾರ್ಯಗಳಿಗೆ ಮಾರ್ಗದರ್ಶಿಗಳಾದರು. ಪಾಪು ಅವರದು ಹೋರಾಟದ ಜೀವ.

ಪಾಪು ಅವರ ಸಾಧನೆಯನ್ನು ಗುರುತಿಸಿ ಅವರನ್ನು ಅರಸಿ ಬಂದ ಪ್ರಶಸ್ತಿಗಳು ಹಲವು. ಕರ್ನಾಟಕ ವಿವಿಯಿಂದ ಡಿ.ಲಿಟ್‌ ಗೌರವ, ಹಂಪಿ ಕನ್ನಡ ವಿವಿಯಿಂದ (1996ರಲ್ಲಿ ) ಗೌರವ ಡಾಕ್ಟರೇಟ್‌, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪತ್ರಿಕೋದ್ಯಮದ ಗುರುತರ ಪುರಸ್ಕಾರ ಟಿಎಸ್ಸಾರ್‌ ಪ್ರಶಸ್ತಿ ಗಳಿಂದ ಪಾಪು ಸಮ್ಮಾನಿತರು.

ಪಾಪು ಕೃತಿ ಪ್ರಪಂಚ : ‘ನಮ್ಮದು ಕನ್ನಡ ನಾಡು’ ಕರ್ನಾಟಕದ ಕಥೆ, ಭಾರತದ ಬೆಳಕು, ನೆಲದ ನಕ್ಷತ್ರಗಳು, ಸಾವಿನ ಮೇಜವಾನಿ, ಸೋವಿಯತ್‌ದೇಶ ಕಂಡೆ, ಪಾಪು ಪ್ರಪಂಚ ಅಂಕಣ ಲೇಖನಗಳ ನಾಲ್ಕು ಸಂಪುಟಗಳು- ಇವೆಲ್ಲಾ ಪಾಟೀಟ ಪುಟ್ಟಪ್ಪನವರ ಜನಪ್ರಿಯ ಕೃತಿಗಳು.

*

ಪಾಪು ಅವರೀಗ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಅವರು ಹೇಳುವಂತೆ, ಇದು ಕನ್ನಡ ಪತ್ರಿಕೋದ್ಯಮಕ್ಕೆ ಸಂದ ಗೌರವ; ಲಾಬಿ ಗೀಬಿ ಮಾಡಿ ಬಂದದ್ದಲ್ಲ. ಹೌದು, ಪಾಪು ಅವರಿಗೆ ಲಾಬಿ ಮಾಡುವುದು ಗೊತ್ತಿಲ್ಲ. ಆ ಕಾರಣದಿಂದಾಗಿಯೇ ಅವರಿನ್ನೂ ಉತ್ತರ ಕರ್ನಾಟಕದಲ್ಲಿಯೇ ನೆಲೆಸಿದ್ದಾರೆ !

ಉತ್ತರ ಕರ್ನಾಟಕದಲ್ಲಿ, ಅದೂ ಮಹಾರಾಷ್ಟ್ರ ತನ್ನದು ಎಂದು ಹಕ್ಕು ಮಂಡಿಸುತ್ತಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನಮಾನ ನೀಡಿಕೆ, ಮಹಾಜನ್‌ ವರದಿಯ ಅನುಷ್ಠಾನ, ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ... ಹೀಗೆ ಸರಕಾರದ ಮುಂದೆ ಮತ್ತೊಮ್ಮೆ ಕನ್ನಡದ ಕೆಲಸಗಳ ಪಟ್ಟಿ ಮಂಡಿಸುವ ಅವಕಾಶ-ಜವಾಬ್ದಾರಿ ಪಾಪು ಅವರ ಮೇಲಿದೆ.

ಅಂದಹಾಗೆ, ಸಮ್ಮೇಳನದಲ್ಲಿ ಪ್ರತ್ಯೇಕ ರಾಜ್ಯದ ಅಗತ್ಯವನ್ನು ಪಾಪು ಪ್ರತಿಪಾದಿಸುತ್ತಾರಾ ?

Post Your Views

ಪಾಪು ಪ್ರಪಂಚ

ಬೆಂಗಳೂರು, ಮೈಸೂರು ಜನಕ್ಕೆ ಕರ್ನಾಟಕದ ಜ್ಞಾನ ಕಡಿಮೆ-ಪಾಪು

ಕರ್ನಾಟಕದೊಳಗೆ ದ್ವೀಪಗಳು- ಪಾಪು ವಿಷಾದ

ಗೋಕಾಕ್‌ ಚಳವಳಿಯ 20ನೇ ವರ್ಷದ ಸಂಸ್ಮರಣೆ

ಮಡಿವಂತಿಕೆ ತೊರೆಯಿರಿ, ಕನ್ನಡವನ್ನು ಉಳಿಸಿ ಬೆಳೆಸಿ- ಪಾಪು

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more