ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ವೃತ್ತಿ ,ನಾಟಕ ನನ್ನ ಆತ್ಮ: ಸಿಂಹ

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

C.R.Simhaಸಿಂಹ ಎಂದರೆ ಮಕ್ಕಳಿಗೆ ಹೇಗೆ ಕಾಡು, ಗುಹೆ ನೆನಪಾಗುತ್ತದೋ ಹಾಗೆ ಕನ್ನಡಿಗರಿಗೆ ಸಿಂಹ ಎಂದರೆ ಟಿ.ಪಿ.ಕೈಲಾಸಂ ನೆನಪಾಗುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿದರೆ, ‘ವೇದಿಕೆ’ ನೆನಪಾಗುತ್ತದೆ. ವೇದಿಕೆ- ಸಿಂಹ ನೇತೃತ್ವದ ರಂಗ ತಂಡ. ರಂಗ ನಾಟಕಗಳೇ ವಿರಳವಾಗುತ್ತಿರುವ ಈಚಿನ ದಿನಗಳಲ್ಲಿ, ಸಹೃದಯರು ರಂಗಭೂಮಿ ಮರೆಯಬಾರದು ಎಂಬ ಕಾರಣಕ್ಕೆ ‘ವೇದಿಕೆ’ ಪ್ರತಿ ಶನಿವಾರ ನಾಟಕ ಪ್ರದರ್ಶಿಸುತ್ತಿದೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ಸಿ.ಆರ್‌.ಸಿಂಹ ಮೊನ್ನೆ ಬಿಡುವು ಮಾಡಿಕೊಂಡು ನಮ್ಮ ಜೊತೆ ತಣ್ಣಗೆ ಕೂತು ಮಾತಾಡಿದರು.

‘ವೇದಿಕೆ’ ಪ್ರಾರಂಭವಾದದ್ದು ಹೇಗೆ?
ಎಂಭತ್ತರ ದಶಕದಲ್ಲಿ ಇಂಗ್ಲಂಡ್‌ನಿಂದ ಬರುತ್ತಿದ್ದ ‘ಚಾರ್ಲ್ಸ್‌ ಡಿಕೆನ್ಸ್‌’, ‘ಶೇಕ್ಸ್‌ಪಿಯರ್‌ನ ಒನ್‌ ಮ್ಯಾನ್‌ ಷೋ’ಗಳನ್ನು ನೋಡುತ್ತಿದ್ದೆ. ಅವು ಆಗ ಪ್ರಸಿದ್ಧಿ ಗಳಿಸಿದ್ದವು. ನಾನು ಇಂತಹ ಒನ್‌ ಮ್ಯಾನ್‌ ಷೋ ಮಾಡಬೇಕು ಅಂತ ಬಹಳ ದಿನದಿಂದ ಆಸೆಯಿತ್ತು. ಆದರೆ ಯಾವುದು ಮಾಡಬೇಕು ಅಂತ ನಿಶ್ಚಯ ಆಗಿರಲಿಲ್ಲ. ನಾನೇ ಒಂದು ಹೊಸ ತಂಡ ಶುರುಮಾಡಬೇಕು ಅಂತ ಅನ್ನಿಸಿತ್ತು.

1983 ಹೊತ್ತಿಗೆ ಈ ಎರಡೂ ಕನಸು ಕೈಗೂಡುವ ಕಾಲ ಬಂತು. ಕೈಲಾಸಂ ಇಸ್‌ ದಿ ಮೋಸ್ಟ್‌ ಕಲರ್ಫುಲ್‌ ಪರ್ಸನಾಲಿಟಿ ಇನ್‌ ದಿ ವರ್ಲ್ಡ್‌ ಆಫ್‌ ಥಿಯೇಟರ್‌ ಅಂಡ್‌ ಡ್ರಾಮ. ಕೈಲಾಸಂ ನಾಟಕಗಳಲ್ಲದೆ ಅವರ ವ್ಯಕ್ತಿತ್ವದ ಬಗ್ಗೆ ಬಹಳ ಪುಸ್ತಕಗಳು ಬಂದಿದ್ವು. ಅವನ್ನೆಲ್ಲಾ ಓದಿದ್ದೆ. ನನ್ನ ಒನ್‌ ಮ್ಯಾನ್‌ ಶೋಗೆ ಇದೇ ಸೂಕ್ತ ಅನ್ನಿಸಿತು. ಕೈಲಾಸಂ ಜೀವನ, ಅವರ ಕೃತಿ, ಅವರ ವ್ಯಕ್ತಿತ್ವ- ಮೂರೂ ಸೇರಿಸಿದರೆ ಒಂದು ಏಕ ವ್ಯಕ್ತಿ ಅಭಿನಯ ಆಗತ್ತೆ ಅಂತ ನಿರ್ಧರಿಸಿದೆ, ನವೆಂಬರ್‌ 1983ರಲ್ಲಿ ಟಿಪಿಕಲ್‌ ಟಿ. ಪಿ. ಕೈಲಾಸಂ ಅಂತ ಒನ್‌ ಮ್ಯಾನ್‌ ಷೋ ಶುರು ಮಾಡಿದ್ವಿ. ಅದರ ಜತೆಗೇ ನಮ್ಮದೇ ಆದ ‘ವೇದಿಕೆ’ ಅಂತ ತಂಡ ಶುರು ಮಾಡಿದ್ವಿ. ಟಿಪಿಕಲ್‌ ಟಿ. ಪಿ. ಕೈಲಾಸಂ ಬಹಳ ಜನಪ್ರಿಯವಾಯ್ತು. ಅದು ತುಂಬಾ ಪ್ರದರ್ಶನ ಕಂಡಿತು. ಕರ್ನಾಟಕವಲ್ಲದೆ ಭಾರತದ ಇತರ ಊರುಗಳಾದ ದೆಹಲಿ, ಮುಂಬಯಿ, ಕಲ್ಕತ್ತ, ಮದರಾಸು ಮುಂತಾದ ಕಡೆ ಪ್ರದರ್ಶನ ಕಂಡಿತು. ಹವ್ಯಾಸಿ ರಂಗಭೂಮಿಯಿಂದ ಭಾರತದಿಂದ ಬೇರೆ ದೇಶಗಳಲ್ಲಿ ಪ್ರದರ್ಶನ ಕಂಡ ಮೊದಲ ನಾಟಕ ಇದು.

1986ರಲ್ಲಿ ಅಮೆರಿಕಾ, ಕೆನೆಡಾ, ಇಂಗ್ಲಂಡ್‌ ಮುಂತಾದ ಬೇರೆ ಬೇರೆ ದೇಶಗಳಲ್ಲೂ ನಾಟಕ ಮಾಡಿದೆವು. ಕೈಲಾಸಂ ಆದ ಮೇಲೆ ‘ಮೀಸೆ ಬಂದೋರು’ ಎಂಬ ನಗೆ ನಾಟಕ, ‘ಭೈರವಿ’ ಎಂಬ ಭರತನಾಟ್ಯ, ಕರ್ನಾಟಕ ಸಂಗೀತ ಮಿಶ್ರಿತ ನಾಟಕ ‘ಕರ್ಣ’, ಕುವೆಂಪುರವರ ‘ರಾಮಾಯಣ ದರ್ಶನ’ ಮತ್ತು ‘ಶೂದ್ರ ತಪಸ್ವಿ’ ನಾಟಕದ ಆಯ್ದ ಕೆಲವು ದೃಶ್ಯಗಳು ಮತ್ತು ಅವರ ಜೀವನದ ಒಂದು ಫ್ಲ್ಯಾಷ್‌ಬ್ಯಾಕ್‌ ಅಳವಡಿಸಿ ‘ರಸಋಷಿ’ ಎಂಬ ನಾಟಕ ನಟಿಸಿದ್ವಿ. ಅದು ಕುವೆಂಪುರವರ ಜೀವನ ದರ್ಶನ ಮತ್ತು ಸಾಹಿತ್ಯ ದರ್ಶನ ಆಧರಿಸಿದ ನಾಟಕ. ಈ ನಾಟಕಗಳನ್ನು ಅವಕಾಶ ಸಿಕ್ಕಾಗಲೆಲ್ಲಾ ಮಾಡ್ತಿದ್ವಿ. ಇದಕ್ಕೆ ಒಂದು ನಿರಂತರತೆ ಬೇಕು. ನಿರಂತರವಾಗಿ ಒಂದು ನಿರ್ದಿಷ್ಟ ಜಾಗದಲ್ಲಿ ನಡೆಯಬೇಕು ಎಂಬ ಕಾರಣಕ್ಕೆ 2001 ಅಕ್ಟೋಬರ್‌, ಅಂದರೆ ವಿಜಯದಶಮಿಯಿಂದ ಡಿಸೆಂಬರ್‌ವರೆಗೂ 10 ವಾರಗಳಲ್ಲಿ ನಾಟಕ ಮಾಡಿದೆವು. ಅಗ್ನಿ ಮತ್ತು ಮಳೆ, ಟಿಪಿಕಲ್‌ ಟಿ. ಪಿ. ಕೈಲಾಸಂ, ರಸಋಷಿ, ಹಾವು ಏಣಿ ನಾಟಕಗಳನ್ನು ಇಟ್ಟುಕೊಂಡು ವೇದಿಕೆ ರಂಗ ಮಾಲಿಕೆ ಶುರು ಮಾಡಿದೆವು.

ಇದಾದ ಮೇಲೆ ಈ ವರ್ಷ ಮಾರ್ಚ್‌ ನಿಂದ ಡಿಸೆಂಬರ್‌ ವರೆಗೂ ವೇದಿಕೆ ರಂಗಮಾಲಿಕೆ ಪ್ರತಿ ಶನಿವಾರ ಸಂಜೆ 7.00ಕ್ಕೆ ಹೆಚ್‌. ಎನ್‌. ಕಲಾಕ್ಷೇತ್ರದಲ್ಲಿ ಮುಂದುವರಿಸುತ್ತಿದ್ದೇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಹೊಸ ನಾಟಕ ಆಡುತ್ತಿದ್ದೇವೆ. ಭೈರವಿ, ಮದುವೆ ಮದುವೆ, ಮ್ಯಾಕ್‌ಬೆಥ್‌ ನಾಟಕಗಳನ್ನು ಹೊಸದಾಗಿ ಆಯ್ದುಕೊಂಡಿದ್ದೇವೆ. ಈ ರಂಗ ಮಾಲಿಕೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ನಮಗೆ ಸಂಖ್ಯೆ ಮುಖ್ಯವಲ್ಲ. ಜನರಲ್ಲಿ ನಾಟಕ ನೋಡಬೇಕು ಎಂಬ ಭಾವನೆ ಮೂಡಿಸುವುದು ಮುಖ್ಯ. ಈ ವಾರಾಂತ್ಯ ರಂಗಮಂದಿರದಿಂದ ನಮಗೆ ಹೊಸ ಪ್ರೇಕ್ಷಕರು ಬರುತ್ತಿದ್ದಾರೆ.

ರಂಗಭೂಮಿ ಇತ್ತೀಚಿಗೆ ಅಷ್ಟು ಯಶಸ್ಸು ಕಾಣುತ್ತಿಲ್ಲ. ಏಕೆ?
ಬೆಂಗಳೂರು ಬಹಳ ಬೆಳೆದಿದೆ. ಜನ ಕೆಲಸ ಮುಗಿಸಿಕೊಂಡು ಮನೆಗೆ ಬಂದರೆ ಎಷ್ಟೋ ಬಾರಿ ನಾಟಕ ನೋಡುವ ಆಸೆ ಇದ್ದರೂ ಟ್ರಾಫಿಕ್‌ಗೆ ಹೆದರಿ ಮನೆಯಿಂದಾಚೆ ಹೋಗುವುದೇ ಇಲ್ಲ. ಮತ್ತೊಂದು ಟಿ.ವಿ.. ಇದೊಂದಿದ್ದರೆ ಬೇರೆ ಮನರಂಜನೆ ಬೇಕಾಗಿಲ್ಲ. ಹೀಗಾಗಿ ನಾಟಕ ನೋಡುವವರೇ ಇಲ್ಲದೆ ನಾಟಕ ನಿಂತುಹೋಗಿದೆ. ಮತ್ತು ಹೆಚ್ಚು ನಾಟಕಗಳೇ ಇಲ್ಲದೆ ಪ್ರೇಕ್ಷಕರೇ ಇಲ್ಲ. ಇದೊಂದು ಸರ್ಕಲ್‌.

ಒಂದೇ ಥೇಟರ್‌ನಲ್ಲಿ ಅದೇ ಪ್ರೇಕ್ಷಕರ ಎದುರು ನಟಿಸುವುದರ ಉದ್ದೇಶ?
ಬೆಂಗಳೂರಲ್ಲದೆ ನಾವು ಮೈಸೂರು ಮತ್ತು ತುಮಕೂರಿನಲ್ಲೂ ಪ್ರದರ್ಶನ ಮಾಡಿದ್ದೇವೆ. ಶನಿವಾರ ಒಂದು ದಿವಸ ಬಿಟ್ಟು ಬೇರೆ ದಿವಸ ಯಾರೇ ಬಂದು ಕರೆದರೂ ನಾಟಕ ಮಾಡುವುದಕ್ಕೆ ನಾವು ತಯಾರು. ಆದರೆ ನಾಟಕ ಆಡಲು ಕರೆಯಬೇಕು ಅಷ್ಟೆ.

ನಿಮ್ಮ ಚಿತ್ರರಂಗದ ಅನುಭವ ಹೇಗೆ?
ನಾನು ಇದುವರೆಗೂ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರರಂಗ ಮತ್ತು ಟಿ.ವಿ. ನನ್ನ ವೃತ್ತಿ. ಆದರೆ ನಾಟಕ ನನ್ನ ಆತ್ಮ.

ಇತ್ತೀಚಿಗೆ ನಿಮಗೆ ಚಿತ್ರರಂಗದಲ್ಲಿ ಸವಾಲಾಗುವಂತಹ ಪಾತ್ರಗಳು ಸಿಗುತ್ತಿಲ್ಲ. ಏಕೆ?
ಚಿತ್ರರಂಗದಲ್ಲಿ ನಮ್ಮ ಇಷ್ಟವಾದ ಪಾತ್ರ ಸಿಗುವುದು ಬಹಳ ಕಷ್ಟ. ಒಂದು ಒಳ್ಳೇ ಚಿತ್ರ ಮಾಡಬೇಕು. ಅದರಲ್ಲಿ ಒಂದು ಒಳ್ಳೇ ಪಾತ್ರ ಇರಬೇಕು. ಆ ಪಾತ್ರಕ್ಕೆ ನಿರ್ಮಾಪಕರು ಸಿಂಹನನ್ನು ಕರೀಬೇಕು. ಹಾಗಾದಾಗ ಮಾತ್ರ ನನಗೆ ಒಂದು ಒಳ್ಳೇ ಪಾತ್ರ ಸಿಗಬೇಕು. ಈ ಮೂರೂ ಸಂಭವ ಆಗಬೇಕು. ಒಳ್ಳೆ ಪಾತ್ರಗಳು ಸಿಕ್ಕರೆ ಸಂತೋಷ. ಸಿಗದಿದ್ದರೆ ನನ್ನ ಇಷ್ಟವಾದ ಪಾತ್ರಗಳಿಗೆ ಹೇಗೂ ನಾಟಕ ಇದ್ದೇ ಇದೆ.

ಇತ್ತೀಚಿಗೆ ಚಿತ್ರ ನಿರ್ದೇಶನ ನಿಲ್ಲಿಸಿದ್ದೀರಲ್ಲ. ಏಕೆ?
10 ವರ್ಷದಿಂದ ಚಿತ್ರ ನಿರ್ದೇಶನ ಮಾಡಿಲ್ಲ. ಕಾರಣ ನಿರ್ಮಾಪಕರು ಸಿಗುತ್ತಿಲ್ಲ. ಅಷ್ಟೆ.

‘ವೇದಿಕೆ’ ನಾಟಕಗಳನ್ನು ಬಿಟ್ಟು ಬೇರೆ ನಾಟಕಗಳಲ್ಲಿ ನಟಿಸುತ್ತಿಲ್ಲ. ಏಕೆ?
‘ತುಘಲಕ್‌’, ‘ಕಾಕನ ಕೋಟೆ’ ನಾಟಕಗಳು ನಟರಂಗ ಎಂಬ ತಂಡದ್ದು. 3 ವರ್ಷದ ಹಿಂದೆ ಗಿರೀಶ್‌ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನಟರಂಗದಿಂದ ‘ತುಘಲಕ್‌’ನ ರಿವೈವ್‌ ಮಾಡಿ ನಟಿಸಿದ್ವಿ.

ನಿಮ್ಮ ಹಳೆಯ ನಾಟಕಗಳು ಹೊಸ ಪ್ರೇಕ್ಷಕರಿಗೆ ತಲುಪುವುದು ಹೇಗೆ?
ಚಾಲ್ತಿಯಲ್ಲಿ ಇಲ್ಲದಿರುವ ಹಳೆಯ ನಾಟಕಗಳು ಬಹಳ ಬೋರಿಂಗ್‌. 30 ವರ್ಷದ ಹಳೆ ನಾಟಕಗಳನ್ನು ಹೊಸ ನಟರೊಂದಿಗೆ ರಿವೈವ್‌ ಮಾಡುವುದು ಬಹಳ ಕಷ್ಟ. ಹಾಗೆ ಮಾಡಿದರೂ ಅದು ಜನಪ್ರಿಯ ಆಗತ್ತೆ ಅಂತ ಹೇಳೋದು ಬಹಳ ಕಷ್ಟ. ಎಷ್ಟೋ ಬಾರಿ ಅದು ಹಳೆಯ ಜನಕ್ಕೆ ಇಷ್ಟ ಆಗುವುದಿಲ್ಲ. ಅದರ ಬದಲು ಹೊಸ ಹೊಸ ಪ್ರಯೋಗ ಮಾಡುವುದು ಒಳ್ಳೆಯದು.

ನಟನೆ, ನಿರ್ದೇಶನ ಮತ್ತು ರಚನೆ- ಇವುಗಳಲ್ಲಿ ನಿಮಗೆಯಾವುದು ಬಹಳ ಇಷ್ಟ?
ಬೇಸಿಕಲಿ ನಾನು ಒಬ್ಬ ನಟ. ನಟನೆಯನ್ನು ನಾನು ಬಹಳ ಇಷ್ಟಪಡುತ್ತೇನೆ. ಅದರ ಜತೆಗೆ ನಿರ್ದೇಶನ ಯಾವತ್ತಿದ್ದರೂ ಸವಾಲಿನ ಕೆಲಸ. ನಟನಾದರೆ ಬರೆ ನಟನೆಯ ಬಗ್ಗೆ ಯೋಚಿಸುತ್ತಿರಬೇಕು. ಆದರೆ ನಿರ್ದೇಶಕನಾದರೆ ಲೈಟ್ಸ್‌, ಟೀಂ, ಬ್ಯಾಕ್‌ ಸ್ಟೇಜ್‌ ಎಲ್ಲದರ ಬಗ್ಗೆಯೂ ಯೋಚಿಸುತ್ತಿರಬೇಕು. ಅಂಡ್‌ ಐ ಲವ್‌ ದಟ್‌.

ನಿಮ್ಮ ಈ ಎಲ್ಲಾ ಕೆಲಸಗಳಿಗೆ ನಿಮ್ಮ ಸಂಸಾರದ ಪ್ರೋತ್ಸಾಹ ಹೇಗಿದೆ?
ನನ್ನ ಹೆಂಡತಿ ಶಾರದ, ಮಗ ಋತ್ವಿಕ್‌ ಸಿಂಹ ಮತ್ತು ಸೊಸೆ ಜಸ್ಲೀನ್‌ ಋತ್ವಿಕ್‌ ಸಿಂಹ ಎಲ್ಲರೂ ನಾಟಕ ರಂಗದ ಬೇರೆ ಬೇರೆ ವಿಭಾಗಳಲ್ಲಿ ಕೆಲಸ ಮಾಡುತ್ತಿರುವುದರಿಂದ, ನನಗೆ ಎಲ್ಲಾ ರೀತಿಯ ಸಹಕಾರ ಸಿಗುತ್ತಿದೆ. ನಾವು ಹಗಲು ರಾತ್ರಿ ನಾಟಕದ ಬಗ್ಗೆ ಯೋಚನೆ ಮಾಡುತ್ತಿರುತ್ತೇವೆ. ಮನೆಯಲ್ಲಿ ಅಲ್ಲದೇ ನಮ್ಮ ಇಷ್ಟವಾದ ರಂಗದಲ್ಲೂ ಕೂಡ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ.

ಈಗಿನ ಯುವ ಜನಾಂಗಕ್ಕೆ ನಾಟಕಗಳ ಬಗ್ಗೆ ಅಷ್ಟು ಆಸಕ್ತಿ ಇಲ್ಲ. ನಿಮ್ಮ ಪ್ರತಿಕ್ರಿಯೆ?
ಬೆಂಗಳೂರಿನ ಕೆಲವು ಕಾಲೇಜುಗಳ ನಾಟಕದ ಕ್ಲಬ್‌ಗಳು ಆಸಕ್ತಿ ತೋರಿಸಿ ನಾಟಕಗಳನ್ನು ಮಾಡಬೇಕು. ಅಂತರ ಕಾಲೇಜು ನಾಟಕೋತ್ಸವಗಳನ್ನು ಏರ್ಪಡಿಸಬೇಕು. ಹೊಸ ಹೊಸ ನಾಟಕಗಳನ್ನು ಮಾಡುತ್ತಿರಬೇಕು. ಹೊಸ ಹೊಸ ಕಲಾವಿದರನ್ನು ಪರಿಚಯಿಸಬೇಕು. ಇಂತಹ ನಾಟಕೋತ್ಸವಗಳು ನಡೆಯುತ್ತಿದ್ದರೆ ಆಗ ನಾಟಕ ನೋಡುವ ಅಭ್ಯಾಸ ತಂತಾನೇ ಶುರುವಾಗುತ್ತದೆ.

ಒಂದು ನಾಟಕ ಮಾಡಬೇಕಾದರೆ, ಯಾವ ಅಂಶ ಗಮನದಲ್ಲಿಟ್ಟುಕೊಂಡು ನಾಟಕ ಮಾಡುತ್ತೀರಿ?
ಶೇಕ್ಸ್‌ಪಿಯರ್‌ ಆಗಲಿ, ಕಾಳಿದಾಸನಾಗಲಿ ಯಾರೇ ಒಂದು ಕತೆ ಬರೆದರೂ ಅದರ ಮೊದಲ ಆದ್ಯತೆ ಮನರಂಜನೆ. ಮನರಂಜನೆ ಅಂದರೆ ಕಾಮೆಡಿ, ಟ್ರಾಜಿಡಿ, ಐತಿಹಾಸಿಕ, ಸಾಮಾಜಿಕ, ಏನಾದರೂ ಆಗಬಹುದು. ಒಟ್ಟಿನಲ್ಲಿ ಜನರಿಗೆ ಮನರಂಜನೆ ಕೊಡಬೇಕು ಮತ್ತು ಹೊಸತನ ಇರಬೇಕು.

‘ರಂಗಶಂಕರ’ದ ಬಗ್ಗೆ ನಿಮ್ಮ ಅನಿಸಿಕೆ?
ಅದು ಒಂದು ಅತ್ಯುತ್ತಮ ರಂಗಮಂದಿರವಾಗುತ್ತದೆ. ಅರುಂಧತಿ ಕೂಡ ಒಳ್ಳೆಯ ರಂಗಭೂಮಿ ಕಲಾವಿದೆ. ಅದನ್ನು ಕಡಿಮೆ ಬೆಲೆಯಲ್ಲಿ ಬಾಡಿಗೆಗೆ ಕೊಡಬೇಕು. ಕನ್ನಡ ರಂಗಭೂಮಿಯ ಇತರ ತಂಡಗಳಿಗೆ ಅನುಕೂಲವಾಗುವ ಹಾಗೆ ಅದರ ಬಾಡಿಗೆ ಇಡಬೇಕು. ಅಂತಹ ರಂಗಮಂದಿರ ಕಟ್ಟಿ ಖಾಲಿ ಬಿಡುವ ಹಾಗಾಗಬಾರದು. ಅದು ಎಲ್ಲರಿಗೂ ಪ್ರಯೋಜನವಾಗಬೇಕು. ಇತರ ತಂಡಗಳಿಗೆ ನಾಟಕ ಮಾಡುವ ಪ್ರೇರೇಪಣೆ ಮಾಡುವ ಹಾಗಾಗಬೇಕು.

ನಮ್ಮ ಓದುಗರಿಗೆ ನಿಮ್ಮ ಸಂದೇಶ
ಜನ ರಂಗಭೂಮಿಯ ಖುಷಿ ಅನುಭವಿಸಬೇಕು. ನಾಟಕ ನೋಡುವುದು ಒಂದು ಅಭ್ಯಾಸವಾಗಬೇಕು. ಬೆಂಗಳೂರಿನ ಜನ ಮಾತ್ರ ಅಲ್ಲ, ಬೇರೆ ದೇಶಗಳಿಂದ ಕರ್ನಾಟಕಕ್ಕೆ ಬರುವ ಜನರು ಕೂಡ ಸಮಯ ಮಾಡಿಕೊಂಡು ನಾಟಕ ನೋಡಿ ಪ್ರೊತ್ಸಾಹಿಸಬೇಕು. ಆಗ ರಂಗಭೂಮಿ ಬೆಳೆಯಲು ಸಾಧ್ಯ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X