ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತಕ್ಕೂ ಕಾಲಿಟ್ಟ ಕಾಕತ್ಕರ್‌

By Staff
|
Google Oneindia Kannada News

Kakatkar
ಮೊದಲಿನಿಂದಲೂ ನನಗೆ ರೇಡಿಯೋ ಎಂದರೆ ಪ್ರಾಣ. ನಾನು ಆರನೇ ಕ್ಲಾಸ್‌ನಲ್ಲಿದ್ದಾಗ ನಮ್ಮ ಮನೆಗೆ ನಮ್ಮ ಹಿರಿಯಣ್ಣ ಒಂದು ಸೆಕೆಂಡ್‌ ಹ್ಯಾಂಡ್‌ ರೇಡಿಯೋ (National Ecko ಎಂಬ ಕಂಪೆನಿಯದು; 50 ವೋಲ್ಟ್‌ ಗಜಗಾತ್ರದ ಬ್ಯಾಟರಿಯಿಂದ ಚಾಲಿತ ರೇಡಿಯೋ) ತಂದಿದ್ದರು. ಸಂಗೀತದಲ್ಲಿ ನನ್ನ ಆಸಕ್ತಿಗೆ ಮೂಲಕಾರಣ ಆ ರೇಡಿಯೋ. ಶಾಲೆಗೆ ರಜೆ ಇದ್ದಾಗಲೆಲ್ಲ ನಾನು ಆ ರೇಡಿಯೋ ಹತ್ತಿರವೇ ಒಂದು ಕುರ್ಚಿ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದೆ. ವಿವಿಧ ಭಾರತಿ ಅಥವಾ ರೇಡಿಯೋ ಸಿಲೋನ್‌ ಬಿಟ್ಟರೆ ಬೇರಾವ ಸ್ಟೇಷನ್ನನ್ನೂ ಟ್ಯೂನ್‌ ಮಾಡಲು ನಾನಾರಿಗೂ ಬಿಡುತ್ತಿರಲಿಲ್ಲ. ಬುಧವಾರ ರಾತ್ರಿ ರೇಡಿಯೋ ಸಿಲೋನ್‌ನಲ್ಲಿ 'ಬಿನಾಕಾ ಗೀತ್‌ ಮಾಲಾ" ಅಂತ ನಮ್ಮ ತಾಯಿಯವರಿಗೂ ಗೊತ್ತಿತ್ತು, ಆದ್ದರಿಂದ ಬುಧವಾರಗಳಂದು ಸಂಜೆ ಏಳೂವರೆಗೆಲ್ಲ ನನ್ನ ಊಟ ಮುಗಿದು ರೇಡಿಯೋಗೇ ಅಂಟಿಕೊಳ್ಳಲು ಸಿದ್ಧನಾಗಿರುತ್ತಿದ್ದೆ.

'ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಪ್ರತೀ ವರ್ಷವೂ ನಾವು ಹೋಗುತ್ತಿದ್ದೆವು. ಒಮ್ಮೆ ನಾಲ್ಕಾಣೆ ಕೊಟ್ಟು ಒಂದು ಕೊಳಲನ್ನು ನಾನು ಖರೀದಿಸಿದೆ. ಏನೋ ಒಂದು ಖುಷಿ. ನುಡಿಸಿದ್ದೇ ರಾಗ. ಆ ಕೊಳಲು ಒಂದೆರಡು ತಿಂಗಳಿಗೆ ಮಾತ್ರ ಬರುತ್ತಿತ್ತು. ಮುಂದಿನ ದೀಪೋತ್ಸವದಲ್ಲಿ ಮತ್ತೆ ಕೊಳಲು ಖರೀದಿ, ಮತ್ತೆ ಪೀಪೀ ಹಾಡು ಶುರು. ಹೀಗೆ 'ಬೊಗಳಿ ಬೊಗಳಿ ರಾಗ...ನರಳಿ ನರಳಿ ರೋಗ.. " ಎಂಬಂತೆ ನಾಲ್ಕಾಣೆ ಕೊಳಲಿನಿಂದಲೇ, ಗುರು ಅಂತ ಇಲ್ಲದೇನೇ, ಯಾವ ಹಾಡನ್ನೇ ಆಗಲಿ, ನುಡಿಸುವುದನ್ನು ಕಲಿತೆ! ಧರ್ಮಸ್ಥಳ ಜಾತ್ರೆಯಲ್ಲಿ ಮಾರಲ್ಪಡುತ್ತಿದ್ದ ಆ ಕೊಳಲುಗಳೆಲ್ಲ ಉದ್ದುದ್ದ ಹಿಡಿದು ( ಪುಂಗಿ / ಸನಾದಿಗಳಂತೆ, ಅಥವಾ ಗೊಲ್ಲರು ಕೊಳಲು ನುಡಿಸಿದಂತೆ ) ನುಡಿಸುವಂಥವು. 'ಕೊಳಲು ವಾದನ"ಕ್ಕೆ ಅವು ಸೂಕ್ತವಲ್ಲ. ಹಾಗಾಗಿ ನಮ್ಮ ತೋಟದಲ್ಲೇ ನದಿಯ ಹತ್ತಿರವಿದ್ದ ಬಿದಿರುಮೆಳ್ಳೆಯಿಂದ ಒಂದು ಒಳ್ಳೆಯ ಬಿದಿರನ್ನು ಕತ್ತರಿಸಿ, ಕಾದ ಸಲಾಕೆಯಿಂದ ಅದಕ್ಕೆ ತೂತುಗಳನ್ನು ಮಾಡಿ ನಾನೇ ಒಂದು ಕೊಳಲು ತಯಾರಿಸಿದೆ. ಅದು ಅಡ್ಡ ಹಿಡಿದು ( ಕೃಷ್ಣ ಕೊಳಲೂದುವಂತೆ) ಊದುವ ಕೊಳಲು. ಅಬ್ಬಾ ! ಇದರ ಧ್ವನಿ ಮಧುರವಾಗಿತ್ತು. ಆ ಮೇಲೆ ನಮ್ಮೂರಿನ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವಗಳ ವೇಳೆ ನನ್ನ ಕೊಳಲು ವಾದನ ಇರುತ್ತಿತ್ತು. ಹಾಗೆಯೇ ಕಾಲೇಜಿನ ಸಾಂಸ್ಕೃತಿಕ ಸಮಾರಂಭಗಳಲ್ಲಿ ನಾನು ಮೌತ್‌ ಆರ್ಗನ್‌ ಕೂಡ ನುಡಿಸುತ್ತಿದ್ದೆ.

ಮಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಅಲ್ಲಿನ 'ಕಲಾನಿಕೇತನ"ದಲ್ಲಿ ಗೋಪಾಲಕೃಷ್ಣ ಐಯರ್‌ ಅವರಿಂದ ಶಾಸ್ತ್ರೀಯ ಸಂಗೀತದ 'ಅ..ಆ..." ಕಲಿತೆ. ಅದು ನನ್ನ 'ಏಕಲವ್ಯ" ವಿದ್ಯೆಯನ್ನು ತಿದ್ದಿ ತೀಡಿತು. ಶಾಸ್ತ್ರೀಯ ಸಂಗೀತವನ್ನು ಗಾಂಭೀರ್ಯದಿಂದ ನುಡಿಸಲು ನಾಗರ್‌ ಕೋಯಿಲ್‌ನಿಂದ ಒಂದು ಒಳ್ಳೆಯ ಕೊಳಲನ್ನೂ ತರಿಸಿದೆ. ಆಮೇಲೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ನನ್ನ ಕೊಳಲುವಾದನದ ಕಾರ್ಯಕ್ರಮಗಳನ್ನು ನೀಡಿದೆ. ಮಂಗಳೂರು ಸುತ್ತಮುತ್ತ ಭರತನಾಟ್ಯ ಅಥವಾ ಇತರ ಸಂಗೀತ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸಲು ಆಹ್ವಾನಗಳು ಬರತೊಡಗಿದವು. ಆಫೀಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನನ್ನ ಕೊಳಲು ವಾದನ, ಮುಖ್ಯವಾಗಿ ಆಯ್ದುಕೊಳ್ಳುವ ಹಾಡುಗಳನ್ನು ಜನ ಮೆಚ್ಚ ತೊಡಗಿದರು. ಪ್ರೊ. ಶಂಕರ್‌ ಅವರ ಯಕ್ಷಿಣಿ ತಂಡದ ಸಂಗೀತ ವಿಭಾಗದಲ್ಲಿ ಕೊಳಲು ವಾದಕನಾಗಿ ಅವರೊಂದಿಗೆ ದೇಶದ ಹಲವು ಕಡೆ ಸುತ್ತಾಡಿದ್ದೇನೆ. ಹಾಗೆ ಪ್ರಯಾಣ ಮಾಡುವಾಗ ರೈಲಿನಲಿ ್ಲ ವೇಳೆ ಕಳೆಯಲಿಕ್ಕಾಗಿಯೇ ಬೋಗಿಯಲ್ಲೇ ಒಂದು ಮಿನಿ ಆರ್ಕೆಸ್ಟ್ರಾ. ನನ್ನ ಕೊಳಲು, ತಂಡದ ಇತರರಿಂದ ಬ್ರೀಫ್‌ಕೇಸ್‌, ಬಕೆಟ್‌- ಮಗ್ಗ್‌ ಏನು ಸಿಕ್ಕಿತೋ ಅದರಿಂದ ತಾಳ. ಸಮೀಪದ ಬೋಗಿಗಳಿಂದ ಪ್ರಯಾಣಿಕರು ನಮ್ಮ ಆರ್ಕೆಸ್ಟ್ರಾ ಕೇಳಲು ಜಮಾಯಿಸಿದ್ದ ನೆನಪು ಈಗಲೂ ಹಚ್ಚಹಸಿರು !

ರೇಡಿಯೋ ಮತ್ತು ಮಾಧ್ಯಮದ ಗೀಳು
A paiting by Kakathkar ಆಗಲೇ ಹೇಳಿಂದಂತೆ ರೇಡಿಯೋ ನನ್ನ ಒಡನಾಡಿ. ಹಳೆಯ , ಹೊಸ ಹಿಂದಿ, ಕನ್ನಡ ಚಿತ್ರಗೀತೆಗಳೆಲ್ಲ ನನ್ನ ಸಂಗ್ರಹದಲ್ಲಿವೆ. ಕೆಲವರಿಗೆ ಎಲೆ ಡಿಕೆ ಮೆಲ್ಲುವ ನಶ್ಯ ಎಳೆಯುವ ಇತ್ಯಾದಿ ಚಟಗಳು ಇದ್ದಂತೆ ನನಗೆ ರೇಡಿಯೋ ಕೇಳುವ ಚಟ ಎಂದರೆ ತಪ್ಪಾಗಲಾರದು. ಕೇಬಲ್‌ ಸ್ಯಾಟಲೈಟ್‌ ಟೀವಿಯಲ್ಲಿ ಇಷ್ಟೊಂದು ಚಾನೆಲ್‌ಗಳೂ ವಿವಿಧ ಮನರಂಜನೆಯೂ ಇದ್ದರೂ ನನಗೆ ದಿನ ಮುಗಿದು ರಾತ್ರೆಯ ನಿದ್ದೆ ಬರುವುದು ವಿವಿಧ ಭಾರತಿಯ ಛಾಯಾಗೀತ್‌ ಮತ್ತು ಆಪ್‌ಕೀ ಫರ್ಮಾಯಿಷ್‌ ಕೇಳಿದರೆ ಮಾತ್ರ. ಮನೆಯವೆಲ್ಲ ಟೀವಿ ನೋಡಿ ಆದ ಮೇಲೆ ನಾನು ಟೀವಿಯನ್ನೂ ರೇಡಿಯೋದಂತೆ 'ಕೇಳು"ವುದುಂಟು. ಮಹಮ್ಮದ್‌ ರಫಿ ಮತ್ತು ಪಿ. ಬಿ.ಶ್ರೀನಿವಾಸ್‌ ನನಗೆ ಅತಿ ಮೆಚ್ಚುಗೆಯ ಹಿನ್ನೆಲೆ ಗಾಯಕರು.

ರೇಡಿಯೋದಂತೆಯೇ ನನ್ನ ಇತರ ಹವ್ಯಾಸವೆಂದರೆ ಪತ್ರಿಕೆಗಳಿಗೆ ಸಣ್ಣ ಪುಟ್ಟ ಲೇಖನಗಳನ್ನು (ಇತ್ತೀಚೆಗೆ ಕಂಪ್ಯೂಟರ್‌ ಕುರಿತಂತೆ ಅಥವಾ ಇತರ ತಾಂತ್ರಿಕ ವಿಷಯಗಳ ಬಗ್ಗೆ) ಬರೆದು ಕಳಿಸುವುದು. ವಾಚಕರ ವಾಣಿ ವಿಭಾಗಕ್ಕೆ (Letters to the Editor ) ಅಥವಾ ಆಕಾಶವಾಣಿಯ ಪತ್ರೋತ್ತರ ವಿಭಾಗಕ್ಕೆ ಪತ್ರ ಬರೆದು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯ ಸಲ್ಲಿಸುವುದೂ ನನ್ನ ಇಷ್ಟದ ವಿಷಯ. 'ಇಂಥಾ ದಿನದ ಪೇಪರ್‌ನಲ್ಲಿ ನಿಮ್ಮ ಪತ್ರ ಪ್ರಕಟವಾದದ್ದು ಓದಿದೆ..." ಎಂದು ಯಾರಾದರೂ ಹೇಳಿದರೆ ಅದೊಂದು ರೀತಿ ಸಂತೋಷ. ಹಾಗೆಯೇ ಕನ್ನಡದಲ್ಲಿ ಮತ್ತು ಚಿತ್ಪಾವನಿ ಭಾಷೆಯಲ್ಲಿ ಕೆಲವು ಹಾಡುಗಳನ್ನೂ ಚುಟುಕಗಳನ್ನೂ ನಾನು ರಚಿಸಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲಿ ಕುಂಚ ಬಣ್ಣಗಳಲ್ಲೂ ಕೈ ಆಡಿಸಿದ್ದುಂಟು. ಏನೋ, ಮನಕ್ಕೆ ಮುದನೀಡಲು 'ಕಲಾ ಸರಸ್ವತಿಯ ಸೇವೆ"!

ಪದಕ ಪ್ರಶಸ್ತಿ ಬಂದದ್ದು ಸಂತೋಷವಾಗಿದೆ. ನನ್ನ ಸಹೋದ್ಯೋಗಿಗಳು, ಮೇಲಧಿಕಾರಿಗಳು, ಹಿತೈಷಿ-ಬಂಧು--ಮಿತ್ರರಿಗೆಲ್ಲ ನಾನು ಋಣಿಯಾಗಿದ್ದೇನೆ. ಈಗಿನ್ನು ಸಹಜವಾಗಿಯೇ ಜವಾಬ್ದಾರಿ, ಜನರ ಅಪೇಕ್ಷೆ- ನಿರೀಕ್ಷೆ ಜಾಸ್ತಿ. ಆದರೂ ಪ್ರಸಿದ್ಧಿಗಿಂತ ಉಪಯುಕ್ತತೆಗೆ (Popularity is good; Usefulness is noble!) ಪ್ರಾಧಾನ್ಯ ಕೊಡುವ ನನಗೆ ಇಂಥ ಶಕ್ತಿ -ಉತ್ಸಾಹಗಳನ್ನು ದೇವರು ಸದಾ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

***

Srivathsa Joshi, The Authorಸರಿ, ಹೇಗನಿಸಿತು ಚಿದಂಬರ್‌ಕಾಕತ್ಕರ್‌ ಅವರ ಪರಿಚಯ? ಶ್ರಮಜೀವಿಯೇ ಸುಖಜೀವಿ ಎನ್ನುವಂತಿರುವ ಇವರದು ಸುಖಿ ಸಂಸಾರ ಕೂಡ. ಮಗಳು ಪಲ್ಲವಿ ಮೈಸೂರಲ್ಲಿ ಇಂಜಿನಿಯರಿಂಗ್‌ನ ಕೊನೇ ವರ್ಷದಲ್ಲಿದ್ದರೆ ಮಗ ಅತುಲ್‌ಮಂಗಳೂರಿನ ಸೈಂಟ್‌ಅಲೋಷಿಯಸ್‌ ಕಾಲೇಜಿನಲ್ಲಿ ಪಿಯೂಸಿ ಓದುತ್ತಿದ್ದಾನೆ. ಪತ್ನಿ ಸುನೀತಾ ಮಂಗಳಾಜ್ಯೋತಿ ಶಾಲೆಯಲ್ಲಿ ಸೇವೆಯಲ್ಲಿದ್ದಾರೆ. ಮಂಗಳೂರಿನ ಕಡಲ ತೀರದಲ್ಲಿ ಸಾಧನೆ ತಪಸ್ಸಿನ ಸರಳ ಜೀವನ ನಡೆಸುತ್ತಿರುವ ಚಿದಂಬರ್‌ ಕಾಕತ್ಕರ್‌ ಅವರಿಗೆ 'ಸಂಚಾರ ಸೇವಾ ಪದಕ" ಪ್ರಶಸ್ತಿಯ ಸಂದರ್ಭ ಅಭಿನಂದನೆ ಸಲ್ಲಿಸುತ್ತ ಅವರಿಂದ ಇದರಂತೆಯೇ ಜನೋಪಯೋಗಿ ಚಟುವಟಿಕೆಗಳು ಮುಂದುವರೆಯುತ್ತಿರಲಿ ಎಂದು ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X