ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲರ್ಕ್‌ನಿಂದ ಕಂಪ್ಯೂಟರ್‌ ತಜ್ಞನಾದ ಕೊಳಲು ವಾದಕ ಕಾಕತ್ಕರ್‌ !

By Staff
|
Google Oneindia Kannada News

*ಶ್ರೀವತ್ಸ ಜೋಶಿ, ವೆಸ್ಟ್‌ಮಾಂಟ್‌

‘ಊಟಕ್ಕೆ ಒಳಗೆ ಬನ್ನಿ’
ಈಗಲೂ ನನಗೆ ನೆನಪಿದೆ, ಚಿಕ್ಕಂದಿನಲ್ಲಿ ನಾವು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದಾಗ ಅಲ್ಲಿನ ಆಕರ್ಷಣೆಗಳಲ್ಲಿ ಪ್ರಮುಖವಾದದ್ದು ಈ ವಿದ್ಯುತ್‌ ಚಾಲಿತ ಕರೆಗಂಟೆ / ಬೋರ್ಡ್‌. ಅವಿಭಕ್ತ ಕುಟುಂಬ, ದೊಡ್ಡ ಮನೆ- ಸಂಸಾರದ ನಮ್ಮ ಅಜ್ಜಿ ಮನೆಯಲ್ಲಿ ಬೇಸಿಗೆ ರಜೆ ಬಂತೆಂದರೆ, ಅದರಲ್ಲೂ ಸಮಾರಂಭಗಳೇನಾದರೂ ಇದ್ದರೆ, ನಾವೆಲ್ಲ ತುಂಬ ಮಂದಿ ಜಮಾಯಿಸುತ್ತಿದ್ದೆವು. ಮಧ್ಯಾಹ್ನ ಅಥವಾ ರಾತ್ರೆಯ ಊಟಕ್ಕೆ ಎಲ್ಲರನ್ನೂ ಊಟದ ಹಾಲ್‌ಗೆ ಕರೆಯುವಷ್ಟರಲ್ಲಿ ನಮ್ಮ ಸೋದರತ್ತೆಗೆ, ಅಜ್ಜಿಗೆ ಸಾಕು ಸಾಕಾಗುತ್ತಿತ್ತು. ಅದಕ್ಕೆಂದೇ ಆ ದೊಡ್ಡ ಮನೆಯ ಮೂರ್ನಾಲ್ಕು ಕಡೆ ಈ ಬೋರ್ಡು. ಅಡುಗೆ ತಯಾರಾದ ಮೇಲೆ ನಮ್ಮಜ್ಜಿ ಅಡುಗೆಮನೆಯಿಂದಲೆ ಒಂದು ಸ್ವಿಚ್‌ ಅದುಮಿದರೆ ಸಾಕು- ಎಲ್ಲ ಬೋರ್ಡ್‌ಗಳಲ್ಲಿ ದೀಪ ಬೆಳಗಿ ಗಂಟೆ ಮೊಳಗಿ, ‘ಊಟಕ್ಕೆ ಬನ್ನಿ ’ ಎಂಬ ಮುದ್ದಾದ ಕನ್ನಡ ಅಕ್ಷರಗಳು ಹೊಳೆಯುತ್ತಿದ್ದವು ! ನೆನಪಿರಲಿ- ಇದು ಎಪ್ಪತ್ತರ ದಶಕದ ಮಾತು. ಆಗಿನ್ನೂ ಹಳ್ಳಿಗಳಿಗೆ ವಿದ್ಯುತ್‌ ಸೌಕರ್ಯ ಬಂದಿತ್ತಷ್ಟೇ. ಅಂಥಾದ್ದರಲ್ಲಿ ಈ ‘ರಿಮೋಟ್‌ ಕಾಲಿಂಗ್‌’ ವ್ಯವಸ್ಥೆಯನ್ನು ರೂಪಿಸಿದ ರೂವಾರಿ ನಮ್ಮ ಸೋದರ ಮಾವ (ಐದು ಮಂದಿ ಸೋದರರಲ್ಲಿ ಕಿರಿಯರು) ಚಿದಂಬರ ಕಾಕತ್ಕರ್‌. ಅವರನ್ನು ನಿಮಗೆಲ್ಲ ಪರಿಚಯಿಸುವುದಕ್ಕಾಗಿ ಈ ಲೇಖನ.

Pen Portrait of Chidananda Kakathkarಮಂಗಳೂರಲ್ಲಿ ದೂರಸಂಪರ್ಕ ಇಲಾಖೆಯ ಒಬ್ಬ ಗುಮಾಸ್ತ (ಕ್ಲರ್ಕ್‌) ನಾಗಿ ಸೇರಿ ಈ ಮೂವತ್ತು ವರ್ಷಗಳಲ್ಲಿ ಸ್ವಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳನ್ನೇರುತ್ತ ಇಂದು ಇಲಾಖೆಯಲ್ಲಿ ಒಬ್ಬ ಸಮರ್ಥ ಆಫೀಸರ್‌ ಆಗಿ, ‘ಕಂಪ್ಯೂಟರ್‌ ತಜ್ಞ’ನಾಗಿ ಎಲ್ಲಕ್ಕಿಂತ ಮೇಲಾಗಿ ಈ ಸಲದ ‘ಸಂಚಾರ ಸೇವಾ ಪದಕ’ಕ್ಕೆ ಆಯ್ಕೆಯಾದ ಅವರ ವೃತ್ತಿ- ಪ್ರವೃತ್ತಿಗಳ ವಿವಿಧ ಮಜಲುಗಳಿಗೊಂದು ದರ್ಪಣ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸರಿಯಾಗಿ ನಾಲ್ಕು ವರ್ಷ, ಒಂದು ತಿಂಗಳಲ್ಲಿ (15 ಸೆಪ್ಟೆಂಬರ್‌ 1951) ಜನಿಸಿದ ಈ ಸೃಜನಶೀಲ ‘ದುಡಿಮೆಗಾರ’ ಭಾರತ ಸರಕಾರದ ಇಲಾಖೆಯಾಂದರ ಉದ್ಯೋಗಿಯಾಗಿ ತನ್ನ ಪ್ರತಿಭೆಯನ್ನು ಪ್ರಚಾರ ಬಯಸದೆ, ಇಲಾಖೆಯ ಅಭ್ಯುದಯಕ್ಕೇ ಉಪಯೋಗಿಸಿದ್ದು ಮತ್ತು ಇನ್ನೂ ಉಪಯೋಗಿಸುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ.

ಚಿದಂಬರ ಕಾಕತ್ಕರ್‌ ಅವರ ಬಗ್ಗೆ ಪರಿಚಯ ಲೇಖನವೊಂದನ್ನು ಬರೆಯಬೇಕೆಂದು ಎಣಿಸಿದಾಗ ನನಗೆ ನೆನಪಾದದ್ದು, ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು...ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು...’ ಎಂಬ ನನ್ನ ಆರನೆಯ ತರಗತಿಯ ಕನ್ನಡ ಪಠ್ಯಪುಸ್ತಕದ ‘ಧ್ರುವ’ ಪಾಠದ ಸಾಲುಗಳು. ಏಕೆಂದರೆ ಅವರು ಇದಕ್ಕೊಂದು ಅಕ್ಷರಶಃ ಉದಾಹರಣೆ. ‘ಕಠಿಣ ದುಡಿಮೆ, ಮಾತು ಕಡಿಮೆ’ ಎನ್ನುವುದರ ಪ್ರತಿರೂಪವೂ ಅವರೇ. ಇರಲಿ; ಗಾದೆಗಳಿಂದಿ ಉಪಮೆಗಳಿಂದ ವೈಭವೀಕರಿಸುವುದಕ್ಕಿಂತ ಅವರ ಮಾತುಗಳಲ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ. ಆಗಬಹುದಲ್ಲವೇ ?

***

ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ‘ಉದಯವಾಣಿ’ ಕನ್ನಡ ದಿನಪತ್ರಿಕೆಯ ಓದುಗರಿಂದ ಕರ್ನಾಟಕದ ಅತ್ಯಂತ ಕುಗ್ರಾಮ ಎಂದು ಗುರುತಿಸಲ್ಪಟ್ಟ ‘ದಿಡುಪೆ’ಗೆ ಪಕ್ಕದ್ದೇ ನಮ್ಮೂರು- ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ‘ಮುಂಡಾಜೆ’. ಸಹ್ಯಾದ್ರಿಯ ತಪ್ಪಲು, ಸುತ್ತಲೂ ಅಡಿಕೆ ತೋಟ. ಸನಿಹದಲ್ಲೇ ಧರ್ಮಸ್ಥಳ, ಸುಂದರವಾಗಿ ಹರಿವ ಮೃತ್ಯುಂಜಯ ನದಿ, ಮಳೆಗಾಲದಲ್ಲಿ ಉಜಿರೆ- ಬೆಳ್ತಂಗಡಿ ಪೇಟೆಗೆ ಹೋಗಬೇಕಿದ್ದರೆ ದೋಣಿಯವನ ಆಸರೆ ಬೇಕು, ಇಲ್ಲವೇ ಆರು ಮೈಲು ನಡೆದು ಬಸ್ಸು ಹಿಡಿಯಬೇಕು. ಹೀಗೆ ದಿಡುಪೆಯಷ್ಟಲ್ಲದಿದ್ದರೂ ನಮ್ಮೂರು ಕೂಡ ಸುಭಿಕ್ಷ ವೇನೂ ಅಲ್ಲ. ಅಂಥಾದ್ದರಲ್ಲೂ ಉಜಿರೆ ಮಂಜುನಾಥೇಶ್ವರ ಕಾಲೇಜು ಹತ್ತಿರದಲ್ಲೇ ಇದ್ದುದರಿಂದ ಮತ್ತು ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಪ್ರೋತ್ಸಾಹವೂ ಇದ್ದುದರಿಂದ ಬಿ.ಎಸ್ಸಿ. ಪದವಿ ಮುಗಿಸಿದೆ. 1973ರಲ್ಲೇ ಮಂಗಳೂರು ದೂರಸಂಪರ್ಕ (ಆಗ P & T ಅಂತ ಕರೆಯಲ್ಪಡುತ್ತಿದ್ದ ) ಇಲಾಖೆಯಲ್ಲಿ ಕ್ಲರ್ಕ್‌ ಆಗಿ ಸೇರಿದೆ. ನಾಲ್ಕು ವರ್ಷಗಳಲ್ಲೇ, ಅಂದರೆ 1977ರಲ್ಲಿ ಜ್ಯೂನಿಯರ್‌ ಟೆಲಿಕಾಂ ಆಫೀಸರ್‌ ಆಗಿ ಬಡ್ತಿ ಸಿಕ್ಕಿತು. 1993ರಿಂದೀಚೆಗೆ ಸಬ್‌ ಡಿವಿಜನಲ್‌ ಇಂಜಿನಿಯರ್‌ ಆಗಿ ಮಂಗಳೂರಲ್ಲೇ ಕೆಲಸ ಮಾಡುತ್ತಿದ್ದೇನೆ. ಅವತ್ತು P & T ಇದ್ದದ್ದು ಆಮೇಲೆ DOT BX, ಈಗ BSNL ಆಗಿದೆಯೆನ್ನಿ. ಆದರೆ ನನ್ನ ಕಛೇರಿ (ಕರ್ಮಭೂಮಿ) ಮಾತ್ರ ಅದೇ.

ಯೂವುದೇ ಕೆಲಸವನ್ನು ಸುಲಭವನ್ನಾಗಿಸಿ ಮಾಡಲು, ಈವರೆಗೆ ಜನ ಪ್ರಯೋಗಿಸದೆ ಇರುವ ಸಾಧನ- ವಿಧಾನಗಳೇನಾದರೂ ಇವೆಯೇ ಎಂದು ಮೊದಲಿನಿಂದಲೂ ನನಗೆ ಒಂದು ತರಹದ ಹುಮ್ಮಸ್ಸು. ಕಂಪ್ಯೂಟರೈಸ್ಡ್‌ ಟೆಲಿಫೋನು ಮೊದಲು ಎಕ್ಸ್‌ಚೇಂಜ್‌ಗಳೆಲ್ಲ ‘ಸ್ಟ್ರೌಜರ್‌’ ಎಂಬ ತಾಂತ್ರಿಕತೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಆಗಲೇ ನಾನು ನನ್ನದೇ ಆದ ಮೀಟರ್‌ ಟೆಸ್ಟರ್‌, ಕೆಲಸವನ್ನು ಸುಲಭಗೊಳಿಸುವ ಹೊಸ ಸರ್ಕ್ಯೂಟ್‌ ಇತ್ಯಾದಿಗಳನ್ನು ಅಳವಡಿಸುವುದರಲ್ಲಿ ಯಶಸ್ಸು ಕಂಡಿದ್ದೆ.

ಕಂಪ್ಯೂಟರ್‌ ವ್ಯಾಮೋಹ
Kakathkar, Centre of Attraction in his office ! ‘1984ರಷ್ಟು ಹಿಂದೆಯೇ ನಮ್ಮ ಇಲಾಖೆಗೆ ಕಂಪ್ಯೂಟರ್‌ ಒಂದು ಸಾಂಕ್ಷನ್‌ ಆಗಿ ಬಂದಿತ್ತು. ಟೆಲಿಫೋನ್‌ ಮೀಟರ್‌ ರೀಡಿಂಗ್‌ಗಳನ್ನು ಸಂಗ್ರಹಿಸಿಡಲು. ಆದರೆ ಕೇಳಿ : ಇಲಾಖೆಗೆ ಆ ಕಂಪ್ಯೂಟರ್‌ನ್ನು ಮಾರಿದ್ದ ಕಂಪೆನಿಯವರಾರೂ ಅದನ್ನು ಇನ್‌ಸ್ಟಾಲ್‌ ಮಾಡಲು ಬಂದಿರಲಿಲ್ಲ. ಸುಮಾರು ಎರಡು ತಿಂಗಳು ಅದು ಹಾಗೇ, ಮುಚ್ಚಿದ ಬಟ್ಟೆಯ ಕವರ್‌ ಒಳಗೇ ಇತ್ತು ! ಆವಾಗ ನನಗನ್ನಿಸಿತು- ಇದನ್ನಿಲ್ಲಿ ಸುಖಾಸುಮ್ಮನೇ ಇಡುವುದಕ್ಕಿಂತ ಯಾಕೆ ಉಪಯೋಗಿಸಬಾರದು ? Wordstar, Lotus, dBase ಇತ್ಯಾದಿ ತಂತ್ರಾಂಶಗಳೆಲ್ಲ ಅದರಲ್ಲಿದ್ದುವು. ಸರಿ, ಕೆಲವು ವ್ಯರ್ಥ ಪ್ರಯತ್ನಗಳ ನಂತರ ನಾನು ಆ ಕಂಪ್ಯೂಟರನ್ನು ಆನ್‌-ಆಫ್‌ ಮಾತ್ರವಲ್ಲದೆ ಆಪರೇಟ್‌ ಮಾಡುವುದನ್ನೂ ರೂಢಿಸಿಕೊಂಡೆ. ಕಲಿಸಿಕೊಡಲು ಯಾರೂ ಇಲ್ಲ. ಆದರೂ ಇಲಾಖೆಯ ಸಿಬ್ಬಂದಿ ಡ್ಯೂಟಿ- ಚಾರ್ಟ್ಸ್‌, ಸಲಕರಣೆಗಳ ಇನ್ವೆಂಟರಿ, ಎಕ್ಸ್‌ಚೇಂಜ್‌ನ ಟ್ರಾಫಿಕ್‌ ಅಂಕಿ ಅಂಶ ಇತ್ಯಾದಿ ಸಣ್ಣ ಪುಟ್ಟ ಕೆಲಸಗಳಿಗೆ ಹೇಗೋ ಮಾಡಿ ಆ ಕಂಪ್ಯೂಟರನ್ನು ಉಪಯೋಗಿಸಲು ತೊಡಗಿದೆ. ಆ ಬಳಿಕ ಕಂಪ್ಯೂಟರೈಸ್ಡ್‌ ಎಕ್ಸ್‌ಚೇಂಜ್‌ಗಳು ಆರಂಭವಾದಂತೆಲ್ಲ ನನ್ನ ಪ್ರಯೋಗಗಳು ಜಾಸ್ತಿಯಾಗತೊಡಗಿದವು. ನಾನು ರಚಿಸಿದ ಉಪಯುಕ್ತ ತಂತ್ರಾಂಶಗಳನ್ನೆಲ್ಲ ನಮ್ಮ ಮಂಗಳೂರು ಎಕ್ಸ್‌ಚೇಂಜ್‌ ಮಾತ್ರವಲ್ಲದೇ ಇಡೀ ಕರ್ನಾಟಕ ಟೆಲಿಕಾಂನ ಇತರ ಎಕ್ಸ್‌ಚೇಂಜ್‌ನವರೂ ಉಪಯೋಗಿಸತೊಡಗಿದರು.’

90ರ ದಶಕದಲ್ಲಿ windows ಬಂದ ಮೇಲಂತೂ Visual basic, HTML ಇತ್ಯಾದಿಯನ್ನೆಲ್ಲ ಒಂದು ಕೈ ನೋಡೋಣ ಎಂದು ಪ್ರಯತ್ನಿಸತೊಡಗಿದೆ. ಬಹುವಾಗಿ ‘ಕೆಲವಂ ಬಲ್ಲವರಿಂದ ಕಲ್ತು...ಕೆಲವಂ ಮಾಳ್ಪವರಿಂದ ನೋಡಿ’ಯೇ ಹೊರತು ಸಾಂಪ್ರದಾಯಿಕ ಟ್ರೆೃನಿಂಗ್‌ ಯಾವುದೂ ಇಲ್ಲ. ಆದರೂ ಅಪರೂಪಕ್ಕೊಮ್ಮೆ ಇಲಾಖೆ ಒಂದೆರಡು ದಿನ ಅಥವಾ ವಾರದ ಅವಧಿಯ ಕಂಪ್ಯೂಟರ್‌ ಕೋರ್ಸ್‌ಗೆ ನನ್ನನ್ನು ಪ್ರಾಯೋಜಿಸಿದ್ದುಂಟು. ಅವುಗಳನ್ನೂ ಸದುಪಯೋಗಿಸಿ, ಕೆಲವೊಂದು ತಂತ್ರಾಂಶಗಳನ್ನು ಬರೆದೆ.ಅವೆಲ್ಲದರಲ್ಲಿ ಕಿರೀಟ ಪ್ರಾಯವಾದುದೆಂದರೆ ಮಂಗಳೂರು ಟೆಲಿಕಾಂ ಜಿಲ್ಲೆಯ Online directory (http://www.mangaloretelecom.com ನೋಡಿ). ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ತಂತ್ರಾಂಶ ತುಂಬ ಮಂದಿಯ ಪ್ರಶಂಸೆಗೆ ಪಾತ್ರವಾಗಿದೆ. ಈಗ ಆಫೀಸಿನಲ್ಲಿ, ಸಹೋದ್ಯೋಗಿಗಳಿಂದ ಮಾತ್ರವಲ್ಲದೆ ನೆರೆಯವರಿಂದಲೂ ಸಣ್ಣ ಪುಟ್ಟ ಕಂಪ್ಯೂಟರ್‌ ತೊಂದರೆಗಳನ್ನು ಸರಿಪಡಿಸಲು ಬೇಡಿಕೆ ಬರುತ್ತದೆ ! ದೂರಸಂಪರ್ಕ ಇಲಾಖೆಯ ಕಂಪ್ಯೂಟರೀಕರಣದಲ್ಲಿ ನಾನು ತೋರಿಸಿದ ಆಸಕ್ತಿ ಮತ್ತು ಶ್ರಮಗಳನ್ನು ಗುರುತಿಸಿಯೇ ಈ ವರ್ಷದ ‘ಸಂಚಾರ ಸೇವಾ ಪದಕ’ಕ್ಕೆ ನನ್ನ ಆಯ್ಕೆಯಾಗಿದೆಯೆಂಬುದು ನನ್ನ ಭಾವನೆ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X