ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹೊಕ್ಕುಳಲ್ಲಿತ್ತು ಕವಿತೆ’

By Staff
|
Google Oneindia Kannada News

* ಎ.ಆರ್‌. ಮಣಿಕಾಂತ್‌
ಅದು ಕಥೆ, ಕಾವ್ಯ, ವಿಮರ್ಶೆಯ ಮೇಲೆ ಒಂದರ ಹಿಂದೊಂದು ಸಮಾವೇಶ ನಡೆಯುತ್ತಿದ್ದ ಕಾಲ. ಅಂಥದೇ ಒಂದು ಸಮಾವೇಶದಲ್ಲಿ ಧಾರವಾಡದ ಕವಿ ಮೋಹನ ನಾಗಮ್ಮನವರ ಕವಿತೆಯೆಂದರೆ ಹೀಗೆ, ಸ್ಖಲನದ ಹಾಗೆ ಎಂದು ನೇರವಾಗಿ ಹೇಳಿ ಸಂಪ್ರದಾಯವಾದಿ ಕವಿಗಳು ಬೆಚ್ಚಿ ಬೀಳುವಂತೆ ಮಾಡಿದ್ದರು. ಕವಿತೆಯೆಂದರೆ ನಿಜಕ್ಕೂ Dr. H.S.Venkateshamurthy ಏನು ಎಂಬ ಕುರಿತು ಗಂಭೀರ ಚರ್ಚೆ ಆರಂಭವಾದದ್ದೇ ಆಗ. ಕವಿತೆಯಂದರೆ ಅರ್ಥವಾಗದ ಪದಗಳ ಗೊಂಚಲು, ಕವಿತೆಯೆಂದರೆ ಮಧುರ ಗೀತೆ, ಎದೆಯಾಳದ ಭಾವನೆಗಳು ಚೆಂದದ ಪದಗಳಾಗಿ ಮಾರ್ಪಾಡಾಗುವುದೇ ಕವಿತೆ. ಗದ್ಯದ ಇನ್ನೊಂದು ರೂಪವೇ ಪದ್ಯ. ಅದಕ್ಕಿರುವ ಮತ್ತೊಂದು ಹೆಸರೇ ಕಾವ್ಯ ಉರುಫ್‌ ಕವಿತೆ. ಇತ್ಯಾದಿ, ಇತ್ಯಾದಿ ಸ್ಪಷ್ಟನೆಗಳು ಕೇಳಿ ಬಂದದ್ದೂ ಅದೇ ಸಂದರ್ಭದಲ್ಲಿ. ಕವಿತೆ...ನೀನೇಕೆ ಪದಗಳಲ್ಲಿ ಅವಿತೆ ಅಂತ ಆವತ್ತಿನ ಮದ್ಯ ವಯಸ್ಕರ ಪರಮಗುರು ವೈಎನ್ಕೆ ಆರ್ದ್ರ ಧ್ವನಿಯಲ್ಲಿ ಕೇಳಿದ್ದು ಕೂಡ ಬಹುಶಃ ಅದೇ ಸಂದರ್ಭದಲ್ಲಿ.

ಹೀಗೆ ಪ್ರತಿಯಾಬ್ಬ (ಕು) ಕವಿಗಳೂ ಕಾವ್ಯವನ್ನು ಅದರ ಮೂಲವನ್ನು, ಮೂಲದ ಆಳವನ್ನು ಹುಡುಕಲು ಹೊರಟಾಗಲೇ, ಕಾವ್ಯದ ಅರ್ಥ ಹುಡುಕಿ ‘ಹೋರಾಟ’ಕ್ಕೆ ನಿಂತಿದ್ದಾಗಲೇ ‘ಇವರು’ ಕಾವ್ಯ ಬರೆದರು. ಅದು ಹೀಗೆ-
ಹುಡುಗರು ಕುಣಿಸುತ್ತಾರೆ ಮಕ್ಕಳ,
ಹುಡುಗಿಯರು ಕುಣಿಸುತ್ತಾರೆ ಹೊಕ್ಕುಳ
ಒಂದು ಬೆಚ್ಚನೆ ಧಾಟಿಗೆ

ಈ ಪದ್ಯ ಓದಿದ ಮಂದಿ ‘ಹುಡುಗೀರ ಹೊಕ್ಕಳು’ ಎಂಬ ಪದವನ್ನೇ ಮತ್ತೇ ಮತ್ತೆ ಓದಿ ಬೆಚ್ಚಗಾದರು. ‘ಕವಿತೆ ನೀನೇಕೆ ಪದಗಳಲ್ಲಿ ಅವಿತೆ’ಅಂತ ಕೇಳುವ ಬದಲಿಗೆ ‘ಕವಿತೆ ನೀನೇಕೆ ಹೊಕ್ಕುಳಲ್ಲಿ ಕುಳಿತೆ’ಎಂದು ಕೇಳುತ್ತ ಕೇಳುತ್ತ ಅಂಥ ಬೆಚ್ಚನೆಯ ಪದ್ಯ ಬರೆದ ಕವಿಯನ್ನೇ ಮರೆತರು. ಅಂದ ಸಂದರ್ಭದಲ್ಲೇ-
ಪುಟ್ಟ ಕಂದ ಹೈ
ಪಾಪ ಬರೀ ಮೈ
ಚೆಡ್ಡಿ ಕೂಡ ನೈ-
ಎಂಬ ಕಾವ್ಯವೂ ಬಂದಾಗ ರಸಿಕ ಕವಿಗಳು ಬೆರಗಿನಿಂದ ತಿರುಗಿದರೆ ಇವರೆಂದರಂತೆ ನಾನು- ಎಚ್‌. ಎಸ್‌. ವೆಂಕಟೇಶಮೂರ್ತಿ !

*

ಇವತ್ತು ನಾಡಿನ ವಿಮರ್ಶಕರಿಂದ ‘ಕಥನ ಕವಿ’ ‘ಮಕ್ಕಳ ಕವಿ’ ಎಂದೂ ಟೀಕಾಕಾರರಿಂದ ನವ್ಯ ಕವಿ ಎಂದೂ ಕರೆಸಿಕೊಳ್ಳುತ್ತಿರುವ ಎಚ್‌. ಎಸ್‌. ವೆಂಕಟೇಶಮೂರ್ತಿ ನಿಜಕ್ಕೂ ಸುಕೋಮಲ ಹೃದಯದವರು. ಗಟ್ಟಿಯಾಗಿ ಮಾತನಾಡಿದರೆ ಎಲ್ಲಿ ಜೊತೆಗಿರುವವರು ನೊಂದುಕೊಳ್ಳುತ್ತಾರೆ ಎಂದು ಭಾವಿಸುವ ಎಚ್‌ಎಸ್‌ವಿ ಕಟುವಾಗಿ ಮಾತೇ ಆಡರು. ಜನರ ಜೊತೆಗಿದ್ದಾಗ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ ನಡೆವ ಎಚ್‌ಎಸ್‌ವಿ ಕಾವ್ಯ ಬರೆವ ಸಂದರ್ಭದಲ್ಲಿ ಮಾತ್ರ ತಾವೇ ತಾವಾಗುತ್ತಾರೆ. ತಮ್ಮ ಮನದ ಅಪ್ಪಣೆಯನ್ನು ಎಡಗೈಯಿಂದ ನಿವಾಳಿಸುತ್ತಾರೆ.

ಅದಕ್ಕೊಂದು ಸಾಕ್ಷಿ ಬೇಕೆಂದರೆ ಮತ್ತೆ ಅವರು ಕವಿಯಾದ ಸಂದರ್ಭಕ್ಕೇ ಮರಳಬೇಕು. ಎಲ್ಲರೂ ನವ್ಯ ಕಾವ್ಯದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದಾಗ ‘ ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು’ ಎಂದು ಬರೆದರು. ತಮ್ಮ ವಾರಿಗೆಯವರು ಒಂದರ ಹಿಂದೊಂದರಂತೆ ಕವನ ಸಂಕಲನ ತಂದಾಗ, ಅವುಗಳ ಬಗೆಗೆ ಮೆಚ್ಚುಗೆಯ ಮಹಾಪೂರವೇ ಬಂದಾಗ, ತಮ್ಮ ಕಾವ್ಯವನ್ನು ವಿಮರ್ಶಕರು ಕಣ್ಣೆತ್ತಿಯೂ ನೋಡದಾಗ ಉಹೂಂ, ಅವರು ಮುಖ ಸಣ್ಣದು ಮಾಡಿಕೊಳ್ಳಲಿಲ್ಲ. ಸಮಕಾಲೀನ ಕಾವ್ಯದಿಂದ ಪ್ರಭಾವಿತರಾಗಲಿಲ್ಲ. ಕಾಲದ ಜಾಯಮಾನಕ್ಕೆ ತಕ್ಕಂತೆ ಬರೆಯಲೂ ಇಲ್ಲ. ತಮ್ಮ ಮನಸ್ಸಿನ ಬಿಗುಮಾನಕ್ಕೆ ಸ್ಪಂದಿಸಿದರು. ಹಾಗೆಯೇ ಬರೆದರು.

ಹೆಚ್ಚು ಓದಿ, ಕಡಿಮೆ ಬರೀರಿ ಅಂತ ಒಂದು ಮಾತಿದೆ. ಎಚ್‌ಎಸ್‌ವಿ ಕಾವ್ಯದ ಬಗ್ಗೆ ಹಚ್ಚೆಚ್ಚು ಓದಿದ್ದಾರೆ. ಅವರು ಎಲ್ಲರ ಕವಿತೆಗಳಿಂದಲೂ ಇಷ್ಟಿಷ್ಟೇ ಸತ್ವ ಹೀರಿಕೊಂಡಿದ್ದಾರೆ. ಅದೆಲ್ಲ ಸೇರಿ ಒಂದು ಕವಿತೆ ಆಗುತ್ತೆ. ಹಾಗಾಗಿ ಅವರು ‘ಸಾರ್ವಕಾಲಿಕ’ ಕವಿ. ಎಲ್ಲರಿಗೂ ‘ಸಮಕಾಲೀನ ಕವಿ’ ಕೂಡ ಎಂದು ಹಲವರು ತಮಾಷೆ ಮಾಡುವುದುಂಟು. ಇದಕ್ಕೆಲ್ಲ ಎಚ್‌ಎಸ್‌ವಿ ಪ್ರತಿಕ್ರಿಯಿಸುವುದೇ ಇಲ್ಲ. ಆ ಮಟ್ಟಿಗೆ ಅವರು ಸ್ಥಿತಪ್ರಜ್ಞರು. ಸಂತೃಪ್ತರು.

*

ಎಲ್ಲ ಸರಿ, ಎಚ್‌ಎಸ್‌ವಿ ಕಾವ್ಯ ಯಾವ ಪ್ರಕಾರದ್ದು ? ಇದು ಬಹುಮಂದಿಯ ಪ್ರಶ್ನೆ. ವಿಪರ್ಯಾಸ ಗೊತ್ತೇ ? ಅನೇಕಾನೇಕ ಪ್ರಶಸ್ತಿಗಳನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಯನ್ನು ಮೂರ್ತಿ ಗಳಿಸಿದ್ದಾರೆ. ನಿಜ. ಆದರೆ ಅವರು ಭಾವಗೀತ ರಚನೆಕಾರರಾಗಿ, ಯಾಕೋಪ್ಪ, ಕೇಳುಗರನ್ನು ತಲುಪಲಿಲ್ಲ. ಕವಿಯಾಗಿಯೂ ಹತ್ತಿರವಾಗಲಿಲ್ಲ. ಸಿನಿಮಾ ಗೀತೆ ಬರೆದಾಗ ಅವರಿಗೆ ಪ್ರಶಸ್ತಿ ಗುಚ್ಛವೇ ಬಂತಲ್ಲ, ಆಮೇಲೆ ಕೂಡ ಅವರು ಆತ್ಮೀಯರೆನಿಸಲಿಲ್ಲ. ಮಕ್ಕಳ ಕತೆ, ಕವಿತೆ ಬರೆದರಲ್ಲ, ಆಗ ಅವರನ್ನು ಮಕ್ಕಳ ಕವಿಯೆಂದು ಕರೆಯುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಇದೆಲ್ಲದರಿಂದ ಮೂರ್ತಿ ಬೇಜಾರಾಗಲಿಲ್ಲ. ಬರೆಯುವುದು ಕವಿಧರ್ಮ. ತುಲುಪುವುದು, ತಲುಪದೇ ಇರುವುದು ಯುಗಧರ್ಮ ಅಂದುಕೊಂಡರು. ಹಿಂದೆಯೇ ‘ಮೂವತ್ತು ಮಳೆಗಾಲ’ ಹೆಸರಿನ ಸಮಗ್ರ ಕವಿತಾ ಸಂಕಲನ ತಂದು ಹ್ಯಂಗೆ ಅಂದರು.

ಆದರೆ ಕಾವ್ಯಾಸಕ್ತರು ಸಮಗ್ರ ಸಂಕಲನದತ್ತ ನೋಡಲೇ ಇಲ್ಲ. ಎಚ್‌ಎಸ್‌ವಿ ಅಂದಾಕ್ಷಣ ಅವರಿಗೆ ‘ಪುಟ್ಟ ಕಂದ ಹೈ, ಪಾಪ ಬರೀ ಮೈ, ಚೆಡ್ಡಿ ಕೂಡ ನೈ’ ಎಂಬ ಸಾಲಿನ ಜೊತೆಗೇ, ‘ಹುಡುಗೀರು ಕುಣಿಸುತ್ತಾರೆ ಹೊಕ್ಕುಳ’ ಎಂಬ ಬೆಚ್ಚನೆ ಸಾಲಷ್ಟೇ ನೆನಪಾಯಿತು. ಅವರು ಬೆಚ್ಚಗಾದವರಂತೆ ನಕ್ಕರು. ಇತ್ತ ಎಚ್‌ಎಸ್‌ವಿಗೆ ಅದೇ ನೆನಪಾಯಿತು. ಅವರೂ ನಕ್ಕರು !

ಆಮೇಲೆ ಕವಿತೆಯೆಂದರೆ ಹೇಗೆ ಅಂತ ಯಾರೂ ಕೇಳಲಿಲ್ಲ. ಬದಲಿಗೆ ಕವಿಯೆಂದರೆ ಹೇಗೆ ಅಂದರಂತೆ. ಉತ್ತರಿಸಬೇಕು ಅನ್ನುವಷ್ಟರಲ್ಲಿ ಎದುರಿಗೆ ಎಚ್‌ಎಸ್‌ವಿ ಇದ್ದರಂತೆ. ಹೀಗೇೕೕೕ....

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X