• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ರಾಜಧಾನಿಯ ಕನ್ನಡಿಗರ ಹೆಮ್ಮೆ - ಡಾ। ವಿ.ಶ್ರೀನಿವಾಸ್‌

By Staff
|

*ಶ್ರೀವತ್ಸ ಜೋಶಿ, ವೆಸ್ಟ್‌ ಮಾಂಟ್‌

Dr. V. Shreenivas with the awardವಾಷಿಂಗ್ಟನ್‌ ಡಿ.ಸಿ ಅಮೆರಿಕದ ರಾಜಧಾನಿ. ಡಿ.ಸಿ ಎಂದರೇನು? ಡಿಸ್ಟ್ರಿಕ್ಟ್‌ ಆಫ್‌ ಕೊಲಂಬಿಯಾ. ಸುಮಾರು 65 ಚದರ ಮೈಲು ವಿಸ್ತೀರ್ಣದ ಈ ಪ್ರದೇಶ, ಇತರ ಐವತ್ತು ರಾಜ್ಯಗಳಲ್ಲೊಂದಲ್ಲ ! ವಾಸ್ತವವಾಗಿ ಮೇರಿಲ್ಯಾಂಡ್‌ ಮತ್ತು ವರ್ಜೀನಿಯಾ ರಾಜ್ಯಗಳಿಂದ ಒಟ್ಟು ನೂರು ಚದರ ಮೈಲು ಚಚ್ಚೌಕ ಪ್ರದೇಶವನ್ನು ‘ಡಿಸ್ಟ್ರಿಕ್ಟ್‌ ಆಫ್‌ ಕೊಲಂಬಿಯಾ’ ಆಗಿ ಪ್ರತ್ಯೇಕಿಸಿದ್ದು, ತರುವಾಯ ವರ್ಜೀನಿಯಾ ತನ್ನ ಪಾಲನ್ನು ವಾಪಸ್‌ ತೆಗೆದುಕೊಳ್ಳಲು, ಭೂಪಟದಲ್ಲಿ ಈಗ ‘ಅರ್ಧ ತಿಂದ ಶಂಕರಪೋಳೆ’ಯಂತಹ ವಿಚಿತ್ರ ಆಕಾರ ಉಳಿದಿರುವ ಪ್ರದೇಶ. ಇದಕ್ಕೆ ತನ್ನದೇ ಒಂದು ಸರಕಾರವಿದೆ. ಈ ಸರಕಾರದಲ್ಲಿ, ನಾವು-ನೀವು ಹೆಮ್ಮೆ ಪಡುವಂಥ ಒಬ್ಬ ಕನ್ನಡಿಗ ಉದ್ಯೋಗಿಯಿದ್ದಾರೆ.

ಏನವರ ಸ್ಪೆಷಾಲಿಟಿ?

ಡಾ। ವೆಂಕಟಯ್ಯ ಶ್ರೀನಿವಾಸ್‌ ಎಂದು ಹೆಸರು. ಉನ್ನತ ಅಧಿಕಾರಿಗಳೆಲ್ಲ ‘‘ಡಾ। ವಿ’’ ಎಂದೇ ಪ್ರೀತಿಯಿಂದ ಕರೆಯುವುದು. ಈ ಪ್ರದೇಶದ ಕನ್ನಡಿಗ ಸ್ನೇಹಿತರಿಗೆಲ್ಲ ‘‘ನಮ್ಮ ಶ್ರೀನಿವಾಸ್‌’’! ಮೊನ್ನೆ ಅಕ್ಟೋಬರ್‌ 9ರಂದು ವಿಶೇಷ ಸಮಾರಂಭವೊಂದರಲ್ಲಿ, 2002ರ ಅತ್ಯುತ್ತಮ ಸರಕಾರಿ ನೌಕರ - ‘ಕೇಫ್ರಿಟ್ಜ್‌ ಫೌಂಡೇಶನ್‌ ಅವಾರ್ಡ್‌’ ಪ್ರಶಸ್ತಿ ಸ್ವೀಕರಿಸಿದ ಕೀರ್ತಿ ಡಾ। ಶ್ರೀನಿವಾಸ್‌ ಅವರದು. ಬನ್ನಿ, ಅವರ ಪರಿಚಯ ಮಾಡಿಕೊಳ್ಳೋಣ ಮತ್ತು ಅವರಿಗೆ ಅಭಿನಂದನೆ ಸಲ್ಲಿಸೋಣ.

ಡಾ। ಶ್ರೀನಿವಾಸ್‌ ಅವರ ಈಗಿನ ಡೆಸಿಗ್ನೇಶನ್‌ ‘deputy bureau Chief for Hazardous Material and toxic substances, the DC department of Health’. ಕಂಟಾಮಿನೇಶನ್‌ ಹೆಚ್ಚಿರುವ ಪ್ರದೇಶಗಳ - ಉದಾಹರಣೆಗೆ ಪೆಟ್ರೋಲಿಯಂ ಅಥವಾ ಇನ್ನಿತರ ಖನಿಜ ತೈಲಗಳ ಸೋರುವಿಕೆಯಿಂದಾದ ಪರಿಸರ ಅಸಮತೋಲನ - ಇತ್ಯಾದಿಯ ಸರಿಪಡಿಸುವಿಕೆಗೆ ಡಿ.ಸಿ ಸರಕಾರದಲ್ಲಿ ಇಂದು ‘ಮಾರ್ಗದರ್ಶಿ’ ವ್ಯಕ್ತಿಯಾಬ್ಬರಿದ್ದರೆ ಅದು ಡಾ। ಶ್ರೀನಿವಾಸ್‌. ಒಬ್ಬ ಸರಕಾರಿ ಅಧಿಕಾರಿಯಾಗಿ ಅವರು ಬರೆದ ಪಾಲಿಸಿಗಳಿಂದ, ಪ್ರೊಸೀಜರ್‌ಗಳಿಂದ, ಡಿ.ಸಿ ಪ್ರದೇಶದಲ್ಲಿ ಸುಮಾರು 850 ರಷ್ಟು ಕಂಟಾಮಿನೇಟೆಡ್‌ ಪ್ರದೇಶಗಳನ್ನು, ಅದಕ್ಕೆ ಹೊಣೆಯಾದವರಿಂದಲೇ ಸ್ವಚ್ಛಗೊಳಿಸುವ ಕ್ರಮವನ್ನು ಡಾ। ಶ್ರೀನಿವಾಸ್‌ ಅವರ ಪಾಲಿಸಿಗಳು ಎನ್‌ಫೋರ್ಸ್‌ ಮಾಡಿರುವುದರಿಂದ, ಸುಮಾರು 90 ಮಿಲಿಯನ್‌ ಡಾಲರ್‌ಗಳಷ್ಟು ಸರಕಾರೀ ವೆಚ್ಚ (ಅದೆಲ್ಲ ಶ್ರೀಸಾಮಾನ್ಯನ ತೆರಿಗೆ ಪಾವತಿಯಿಂದಲೇ ಬರಬೇಕು ತಾನೆ?) ತಡೆಯಲಾಗಿದೆ ಎಂದರೆ ಯಾವ ಉನ್ನತಾಧಿಕಾರಿ ತಾನೆ ಮೆಚ್ಚಲಾರ!

ಟಾರ್ಗೆಟ್‌ಗೆ ಮುಂಚೆ ಕೆಲಸ ಚುಕ್ತ

ಜೂನ್‌ 2001ರಲ್ಲಿ ಬೀ.ಪಿ.ಆಮೋಕೊ ಗ್ಯಾಸ್‌ ಕಂಪೆನಿಯವರ ಅಚಾತುರ್ಯದಿಂದಾದ ಗ್ಯಾಸ್‌ ಲೀಕೇಜ್‌ನಿಂದಾಗಿ ಸುಮಾರು 15 ಮನೆಗಳವರನ್ನು ನಾಲ್ಕು ತಿಂಗಳ ಮಟ್ಟಿಗೆ ಸ್ಥಳಾಂತರಿಸಬೆಕಾಗಿ ಬಂದಾಗ ನೆರವಾದದ್ದು ಶ್ರೀನಿವಾಸ್‌ ಅವರ ಕಾರ್ಯದಕ್ಷತೆ. ಇವತ್ತು ಅವರ ಕಂಟಾಮಿನೇಶನ್‌-ಕ್ಲೀನ್‌ಅಪ್‌ ಪಾಲಿಸಿಗಳು ಡಿ.ಸಿ ಯಲ್ಲಿ ಮಾತ್ರವಲ್ಲದೆ ನೆರೆಯ ಮೇರಿಲ್ಯಾಂಡ್‌, ವರ್ಜೀನಿಯಾ, ಪೆನ್ಸಿಲ್ವೇನಿಯಾ, ಡೆಲವೇರ್‌ ಮತ್ತು ಪಶ್ಚಿಮ ವರ್ಜೀನಿಯಾ ರಾಜ್ಯಗಳವರೂ ಅನುಸರಿಸುತ್ತಿದ್ದಾರೆ! ಇದಕ್ಕೂ ಮುಂಚೆ 1999ರಲ್ಲಿ ಡೀ.ಸಿಯ ಪಬ್ಲಿಕ್‌ ಹೆಲ್ತ್‌ ಲ್ಯಾಬೋರೇಟರಿಯು ಹಳೆಯದಾದ ಮತ್ತು ಪ್ರದೂಷಿತ ಉಪಕರಣಗಳಿಂದಾಗಿ ಕಾರ್ಯನಿರ್ವಹಿಸದಾದಾಗ ಶ್ರೀನಿವಾಸ್‌ ಮತ್ತವರ ತಂಡ 90 ದಿನಗಳ ಟಾರ್ಗೆಟ್‌ ಇಟ್ಟುಕೊಂಡಿದ್ದರೂ 65 ದಿನಳಲ್ಲೇ ಆ ಲ್ಯಾಬೋರೇಟರಿಯನ್ನು ‘ಚಕಮಕ’ಗೊಳಿಸಿತ್ತು. ಸರಕಾರವು ಅನವಶ್ಯಕವಾಗಿ ಸ್ಯಾನಿಟೇಷನ್‌ ಕನ್ಸಲ್ಟೆಂಟ್‌ಗಳಿಗೆ ಸುರಿಯಬೇಕಿದ್ದ ಹಣವೆಲ್ಲ ಉಳಿತಾಯವಾಯಿತು. ಸಾರ್ವಜನಿಕ ಕಟ್ಟಡಗಳ ಮುಖ್ಯವಾಗಿ ಶಿಶುಮಂದಿರ, ವೃದ್ಧಾಶ್ರಮಗಳ ಗೋಡೆಗಳಿಗೆ ಉಪಯೋಗಿಸುವ ಪೈಂಟ್‌ನಲ್ಲಿ ಸೀಸದ ಅಂಶ ವಿಪರೀತವಾಗಿದ್ದನ್ನು ತಡೆಗಟ್ಟುವ ಸರಕಾರದ ಪ್ರಯತ್ನ ಸಫಲವಾಗುವಂತೆ ಮಾಡಿದವರೂ ಡಾ। ಶ್ರೀನಿವಾಸ್‌ ಅವರೇ.

ಸಹೋದ್ಯೋಗಿಗಳಿಗೆ, ಅಧಿಕಾರಿಗಳಿಗೆಲ್ಲ ಮೆಚ್ಚಿನವರಾದ ಶ್ರೀನಿವಾಸ್‌, ತಂಡದ ಸದಸ್ಯರಿಗೆಲ್ಲ ಸ್ಫೂರ್ತಿಯ ಚಿಲುಮೆ. ಸಾರ್ವಜನಿಕ ಜೀವನಮಟ್ಟ ಸುಧಾರಣೆಯಾಗುತ್ತಿರುವ ವಿಷಯ ಸ್ವತಃ ಶ್ರೀನಿವಾಸ್‌ ಅವರಿಗೆ, ಪ್ರಶಸ್ತಿ-ಪುರಸ್ಕಾರಗಳಿಗಿಂತಲೂ ಆನಂದ ನೀಡುವ ವಿಷಯ. ವಾಷಿಂಗ್ಟನ್‌ ಡಿ.ಸಿ ಸ್ವಚ್ಛ ಬದುಕಿಗೆ ನಂ.1 ನಗರ ಎಂದು ಹೆಸರಾಗುವ ಹೆಬ್ಬಯಕೆ ಶ್ರೀನಿವಾಸ್‌ ಅವರದು. ಈ ಸಲದ ಅವಾರ್ಡ್‌ಗೆ ಒಟ್ಟು 234 ನಾಮಿನೇಷನ್‌ಗಳ ಪೈಕಿ ಕೊನೆಗೂ ಆಯ್ಕೆಯಾದವರು ಸರಕಾರದ ವಿವಿಧ ಇಲಾಖೆಗಳ ಒಟ್ಟು ಐದು ಮಂದಿ. ಶ್ರೀನಿವಾಸ್‌ ಅವರಲ್ಲೊಬ್ಬರು.

ಎರಡು ಡಾಕ್ಟರೇಟ್‌

Dr. V. Shreenivas Familyಶ್ರೀನಿವಾಸ್‌ Environmental engineering and fluid Mechanics ನಲ್ಲಿ ಕ್ಯಾಥೋಲಿಕ್‌ ಯುನಿವರ್ಸಿಟಿಯಿಂದ ಮತ್ತು ಮೆನೆಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಜಾರ್ಜ್‌ ವಾಷಿಂಗ್ಟನ್‌ ಯುನಿವರ್ಸಿಟಿಯಿಂದ - ಹೀಗೆ ಎರಡು ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಕಳೆದ 15 ವರ್ಷಗಳಿಂದ ಡಿ.ಸಿ ಸರಕಾರದ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದಿದ್ದಾರೆ. ಕರ್ತವ್ಯದ ಮೇಲೆ ರಾತೋರಾತ್ರಿ ಕೂಡ ಕೆಲಸಕ್ಕೆ ಧಾವಿಸಿದ ಪ್ರಸಂಗಗಳು ಅನೇಕ. ಪತ್ನಿ ಲೀಲಾ ಅವರೂ ಸರಕಾರಿ ಉದ್ಯೋಗಿಯೇ! ಅದು ಸರಿ, ‘ಆಲ್‌ ವರ್ಕ್‌ ಏಂಡ್‌ ನೋ ಪ್ಲೇ...’ ಗುಂಪಿನವರೇ ಶ್ರೀನಿವಾಸ್‌? ಖಂಡಿತ ಅಲ್ಲ. ವಾರಾಂತ್ಯಗಳಲ್ಲಿ ನಗರದಲ್ಲಿ ನಡೆಯುವ ಸಾಂಸ್ಕೃತಿಕ ಮತ್ತಿತರ ಕಾರ್ಯಕ್ರಮಗಳಿಗೆಲ್ಲ ಮನೆಯವರನ್ನು ಕರಕೊಂಡು ಹೋಗುತ್ತಾರೆ.

ಕನ್ನಡ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಶಿವ-ವಿಷ್ಣು ದೇವಾಲಯ ಆರಂಭದ ದಿನಗಳಿಂದಲೂ ದೇವಸ್ಥಾನಕ್ಕೆ ರೆಗ್ಯುಲರ್‌ ಆಗಿ ಭೇಟಿ ಕೊಡುತ್ತಾರೆ. ಮಕ್ಕಳು ಸಂದೇಶ್‌ ಮತ್ತು ಸಂಭ್ರಮ್‌ ಅಮೆರಿಕದಲ್ಲಿ ಹುಟ್ಟಿ ಬೆಳೆದವರಾದರೂ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗಿ ಮೈಗೂಡಿಸಿಕೊಂಡಿದ್ದಾರೆ. ಸಂದೇಶ್‌ ಉತ್ತಮ ತಬಲಾ ವಾದಕ. ಚಿನ್ಮಯ ಮಿಷನ್‌ ಅವರ ‘ಭಜನ್‌ ಸಂಧ್ಯಾ’ ಸಂಗೀತ ಸಂಪುಟಕ್ಕೆ ತಬಲಾ ನುಡಿಸಿದ ಕಲಾವಿದ.

ನಿಮಗೆ ಇನ್ನೊಂದು ವಿಷಯ ಹೇಳಲು ಮರೆತೆ! ಅಮೆರಿಕಕ್ಕೆ ಬರುವ ಮೊದಲು ಶ್ರೀನಿವಾಸ್‌ ಅವರು ಇರಾಕ್‌, ಅಬುಧಾಬಿಯಲ್ಲೆಲ್ಲ ಇದ್ದರು. ಅದಕ್ಕಿಂತಲೂ ಮೊದಲು ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿದ್ದರು. ಶ್ರೀನಿವಾಸ ಎಂಬ ಅವರ ಹೆಸರೇ ಅವರನ್ನು ತಿರುಪತಿಯಲ್ಲಿ ಕರ್ನಾಟಕ ಸರಕಾರ ನಡೆಸುವ ಛತ್ರಕ್ಕೆ ಉಸ್ತುವಾರಿ ಅಧಿಕಾರಿಯಾಗಿ ನೇಮಕಕ್ಕೆ ಕಾರಣವಾಗಿತ್ತಂತೆ. ಬಹುಶಃ ತಿರುಪತಿಯ ಶ್ರೀನಿವಾಸನ ಅನುಗ್ರಹ-ಅಶೀರ್ವಾದಗಳು ಈ ಕರ್ಮಯೋಗಿ ಶ್ರೀನಿವಾಸನ ಜೋಳಿಗೆಗೆ ವಿಪುಲವಾಗಿ ದೊರಕಿದ್ದಿರಬೇಕು!

ಶ್ರೀನಿವಾಸ್‌ ಅವರಂಥ ವ್ಯಕ್ತಿ ನಮ್ಮಲ್ಲಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅವರಿಂದ ಇನ್ನೂ ಇಂತಹ ಅತ್ಯುತ್ತಮ ಸಾರ್ವಜನಿಕ ಸೇವೆಗಳು ಮೂಡಿ ಬರಲಿ. ತಿರುಪತಿಯ ಶ್ರೀನಿವಾಸನ ಕರುಣೆ ಅವರಿಗೆ, ಅವರ ಕುಟುಂಬಕ್ಕೆ ಸದಾ ಇರಲೆಂದು ಹಾರೈಸೋಣ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X