ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರೀಶ ಕಾಯ್ಕಿಣಿ : ಪ್ರಖರ ವಿಚಾರವಾದಿ, ಮೌಲಿಕ ಸಾಹಿತಿ

By Staff
|
Google Oneindia Kannada News

* ಗುರುಲಿಂಗ ಕಾಪಸೆ

Special tribute to Gowrish Kaikiniಗೌರೀಶ ಕಾಯ್ಕಿಣಿಯವರ ‘ವಿಚಾರವಾದ’ 1958ರಲ್ಲಿ ಪ್ರಕಟವಾದಾಗ ನನ್ನ ಓರಿಗೆಯ ಅಂದಿನ ಯುವಕರು ಹೊಸ ದಿಗಂತವೊಂದನ್ನು ಕಂಡಂತಹ ಸೋಜಿಗದಲ್ಲಿದ್ದರು. ಅದು ಪುಟ್ಟಪುಸ್ತಕ. ಆದರೆ ಪರಿಣಾಮ ಅಗಾಧವಾದುದು. ಅದರ ಎಳೆಯನ್ನು ಹಿಡಿದು ಸ್ವಲ್ಪ ಹಿಂದಕ್ಕೆ ಹೋದಾಗ 1941ರಲ್ಲಿ ಪ್ರಕಟವಾದ ‘ವಿಚಾರ ಸಾಹಿತ್ಯ ಹಾಗೂ ಸಾಹಿತ್ಯ ವಿಮರ್ಶೆ’ ನಮ್ಮ ಗಮನ ಸೆಳೆಯಿತು. ನವೋದಯ ಸಾಹಿತ್ಯದ ಧೋರಣೆಗಳನ್ನು ದೂರದೆ ಕಾಯ್ಕಿಣಿಯವರು ತಮ್ಮದೇ ಆದ ದಾರಿಯಲ್ಲಿ ಆಗಲೇ ನಡೆಯಲು ಪ್ರಾರಂಭಿಸಿದ್ದರು. ಬಹುಶಃ ಅದು ಅವರ ಪ್ರಥಮ ಗದ್ಯಕೃತಿ.

ನಲವತ್ತರ ದಶಕದಲ್ಲಿಯೇ ಗಂಡು- ಹೆಣ್ಣು, ‘ಮಾರ್ಕ್ಸ್‌ವಾದ’ ಇತ್ಯಾದಿ ಕೃತಿಗಳನ್ನು ಅವರು ಪ್ರಕಟಿಸಿದರು. ಇಲ್ಲಿಯ ಅವರ ಅಧ್ಯಯನ, ಚಿಂತನಶೀಲತೆ, ವಿವೇಚನಾ ಶಕ್ತಿ ಓದುಗರ ಗಮನ ಸೆಳೆದವಷ್ಟೇ ಅಲ್ಲ, ಅವರನ್ನು ವಿಚಾರಶೀಲರನ್ನಾಗಿ ಮಾಡಿದವು.

ಇತ್ತೀಚೆಗೆ ಗೌರೀಶ ಕಾಯ್ಕಿಣಿಯವರ ಸಮಗ್ರ ಸಂಪುಟ ಅಂಕೋಲೆಯ ವಿಷ್ಣು ನಾಯಕರು ಪ್ರಕಟಿಸಿದ್ದಾರೆ. ಕಾಯ್ಕಿಣಿಯವರ ಬಹುಶತ್ರುತತ್ವ, ವೈವಿಧ್ಯಪೂರ್ಣ ಚಿಂತನೆ ಅಚ್ಚರಿಗೊಳಿಸುತ್ತವೆ.

ಸ್ಥೂಲವಾಗಿ ಅವರ ಸಾಹಿತ್ಯವನ್ನು ಹೀಗೆ ಪರಿಚಯಿಸಬಹುದು. ಅವರು ಒಂದೆಡೆಯಲ್ಲಿ ಹೇಳಿದಂತೆ ‘ಕವಿತೆ ನನ್ನ ಪ್ರಥಮ ಪ್ರೇಯಸಿ’ ಎಂಬುದನ್ನು ಗಮನಿಸಬೇಕು. ಸುಮಾರು ಮೂರು ಸಂಗ್ರಹವಾಗುವಷ್ಟು ಅವರ ಕವಿತೆಗಳಿವೆ. ಅಲ್ಲಿಯೂ ಕಾಯ್ಕಿಣಿಯವರ ವೈಚಾರಿಕೆ ಕಂಡುಬರುತ್ತದೆ. ಸ್ವಾತಂತ್ರ್ಯ ಚಳವಳಿಯ ಪ್ರತಿಸ್ಪಂದನಗಳಿರುವುದನ್ನೂ ಗಮನಿಸಬಹುದು.

ಕಾಯ್ಕಿಣಿಯವರ ಇನ್ನೊಂದು ಆಸಕ್ತಿ- ರೂಪಕಗಳನ್ನು ಸೃಷ್ಟಿಸುವುದು. ಒಂದು ಕಾಲದಲ್ಲಿ ಆಕಾಶವಾಣಿಗಾಗಿ ರಚಿಸಿದ ‘ಚೈತ್ರ- ಚಿತ್ರ’, ‘ರಂಗ ಪಂಚಮಿ’, ‘ಕಾಮ ದಹನ’, ‘ಕ್ರೌಂಚ ಧ್ವನಿ’- ಈ ರೂಪಕಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದರೂ ಹೊಸ ದೃಷ್ಟಿಕೋನವುಳ್ಳವಾಗಿವೆ. ನಾಲ್ಕು ರೇಡಿಯೋ ರೂಪಕಗಳ ಸಂಗ್ರಹ ಪ್ರಕಟವಾಗಿವೆ.

‘ನಾಟ್ಯವೀರ’, ‘ಮನೆ ಯಾರದು’, ‘ಏಕ ಲವ್ಯ’, ‘ಅತ್ತೆಗೆ ಲತ್ತೆ’- ಇವು ಅವರ ಕೆಲವು ನಾಟಕ ಕೃತಿಗಳು. ಈ ನಾಟಕದಲ್ಲಿ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ವಿಚಾರಗಳನ್ನು ಬೆಳೆಸುವುದು ಅವರಿಗೆ ಮುಖ್ಯವಾಗಿತ್ತು. ಸ್ವಲ್ಪ ವಿನೋದವಿದ್ದರೂ ವೈಚಾರಿಕತೆಗೆ ಧಕ್ಕೆಯಿಲ್ಲ.

ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ಕಾಯ್ಕಿಣಿಯವರಿಗೆ ವಿಶೇಷವಾದ ಆಸಕ್ತಿಯಿತ್ತು. ಅವರು ಯಾರ ಬಗೆಗೆ ಓದಿದರೋ ಆ ಲೇಖಕರು, ವಿಜ್ಞಾನಿಗಳು, ಕಲಾವಿದರು- ಅವರ ಮನಸ್ಸನ್ನು ತುಂಬಿಕೊಂಡಿದ್ದರಿಂದ ಅವರನ್ನು ಕುರಿತು ಬರೆಯುವುದು ಅವರಿಗೆ ಪ್ರಿಯವಾಗಿತ್ತು. ಸಾಕ್ರೆಟೀಸ್‌ ಅರಿಸ್ಟಾಟಲ್‌ ಆದಿಯಾಗಿ, ರುಸೋ, ಡಾರ್ವಿನ್‌ರನ್ನು ಕುರಿತೂ ಅವರು ಬರೆದದ್ದು ಅಪರೂಪದದ್ದಾಗಿದೆ. ಥಾಮಸ್‌ ಎಡಿಸನ್‌ನನ್ನು ಕುರಿತೇ ಸ್ವತಂತ್ರ ಗ್ರಂಥ ಪ್ರಕಟಿಸಿದ್ದಾರೆ.

ಬೇಂದ್ರೆ, ಕಾರಂತ, ಗೋಕಾಕ, ಮುಗಳಿ ಇತ್ಯಾದಿ ನಮ್ಮ ಗಣ್ಯ ಲೇಖಕರನ್ನು ಪರಿಚಯಿಸಿದಂತೆ ಗಂಗಾಧರ ಚಿತ್ತಾಲ, ಶಂಭಾ, ಭೈರಪ್ಪನವರನ್ನು ಕುರಿತೂ ಅವರು ಬರೆದಿದ್ದಾರೆ.

‘ಕಣವಿ ಅವರ ಕಾವ್ಯ ದೃಷ್ಟಿ’ ಮತ್ತು ‘ ಕಂಪಿನ ಕರೆ’ (ಬೇಂದ್ರೆಯವರ ಕಾವ್ಯದೃಷ್ಠಿ) ಈ ಎರಡೂ ಗ್ರಂಥಗಳು ಅವರ ಕಾವ್ಯಾಭ್ಯಾಸದ ಆಳವಾದ ಗಂಭೀರವಾದ ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಭಾರತೀಯ ವಿಜ್ಞಾನಿಗಳು- ಭಾಗ-1, ಮತ್ತು 2 ಗ್ರಂಥಗಳು ಜಗದೀಶ ಚಂದ್ರಬೋಸ್‌, ಸಿ. ವಿ. ರಾಮನ್‌, ರಾಮಾನುಜನ್‌, ಹೋಮಿ ಭಾಭಾ ಅವರನ್ನು ಸಮರ್ಥವಾಗಿ ಪರಿಚಯಿಸುತ್ತವೆ.

ಮರಾಠಿ, ಕೊಂಕಣಿ ಹಿಂದಿ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳ ಮೇಲೆ ಅವರಿಗೆ ಅಗಾಧ ಪ್ರಭುತ್ವವಿತ್ತು. ಬೇರೆ ಭಾಷೆಯಿಂದ ಕಾದಂಬರಿ, ಸಣ್ಣಕತೆ, ವೈಚಾರಿಕ ಕಾದಂಬರಿ, ಸಣ್ಣಕತೆ, ವೈಚಾರಿಕ ಪ್ರಬಂಧಗಳನ್ನು ಅವರು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ.

ಶ್ರೀಅರವಿಂದ ‘ಭವಿಷತ್ಕಾವ್ಯ’ ಕನ್ನಡಕ್ಕೆ ತಂದ ಶ್ರೇಯಸ್ಸು ಅವರದು. ಹೀಗೆ ವಿವಿಧ ಮುಖ ಸಾಹಿತ್ಯ ಸಾಧನೆ ಮಾಡಿದ ಅವರು ಗೋಕರ್ಣದಲ್ಲಿದ್ದೂ ಆಸ್ತಿಕರಾಗಲಿಲ್ಲ. ನಾನು ಗೋಕರ್ಣಕ್ಕೆ ಹೋದರೆ ಕಾಣುವುದು, ದರ್ಶನ ಪಡೆಯುತ್ತಿದ್ದುದು ಮುಖ್ಯವಾಗಿ ಗೌರೀಶ ಅವರನ್ನೇ. ಅವರ ಪತ್ನಿ ಶ್ರೀಮತಿ ಶಾಂತಾ ಅವರು ನಮ್ಮನ್ನೆಲ್ಲ ಆತ್ಮೀಯವಾಗಿ ಸತ್ಕರಿಸುತ್ತಿದ್ದರು.

ಜೀವನದುದ್ದಕ್ಕೂ ಅವಿರತವಾಗಿ ಸಾಧನೆ ಮಾಡಿದ ಗೌರೀಶರ ಕೊಡುಗೆ ಅಸಾಧಾರಣವಾದದ್ದೇ ಆಗಿದೆ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬರಲಿಲ್ಲ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿಲ್ಲ ಎಂಬುದು ನಮ್ಮಂಥವರ ಕೊರಗು. ಅವರು ಈ ದೃಷ್ಟಿಯಿಂದ ನಿರ್ಲಿಪ್ತರು.

ಕಾಯ್ಕಿಣಿಯವರ ಸಾಹಿತ್ಯ ನಿಜವಾದ ಅರ್ಥದಲ್ಲಿಯೇ ಮೌಲಿಕವಾದುದು. ವೀಸಿ ಒಂದೆಡೆಯಲ್ಲಿ ಹೇಳಿದ್ದಾರೆ ‘ಗೌರೀಶರು ಆಳವಾದ ಅಭ್ಯಾಸಿಗಳು, ಪ್ರಗಲ್ಭ ವಿಚಾರ ಪರಂಪರೆಯವರು. ಒಂದು ಬಗೆಯ ಗಂಡು ಶೈಲಿಗೆ ಅವರು ಪ್ರತಿನಿಧಿಯಾಗಿದ್ದಾರೆ. ಇದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.’

(ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X