ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮತ್‌ ಹೊಟೇಲು ಹೆಸರಿನ ರೂವಾರಿ : ಪಾಕ ಪಾಂಡು !

By Staff
|
Google Oneindia Kannada News

*ಅನ್ನಪೂರ್ಣ

Sheshagiri Panduranga Kamat is no moreಯಾರೋ ಸ್ವರ್ಗವಾಸಿ ಹೊಟೇಲಿನ ನೆನಪಾಗಿ, ಬಾಯಲ್ಲಿ ನೀರೂರಿಸಿಕೊಂಡಾಗ ಅಲ್ಲೊಬ್ಬ ಉಡುಪಿಯವ ಪ್ರತ್ಯಕ್ಷನಾಗಿ, ‘ಶುಡು ಟೀ ವೇಣುಮಾ ಸರ್‌’ ಅಂದನಂತೆ!

ಉಡುಪಿ ಹೊಟೇಲುಗಳ ವ್ಯಾಪಕತೆಯ ಬಗೆಗಿನ ಅರ್ಥಪೂರ್ಣ ಜೋಕ್‌ ಇದು. ಆದರೆ ಸುಳ್ಳಲ್ಲ. ಉಡುಪಿಯವರ ಅಡುಗೆ ಉಮೇದಿ ಗೋದಾವರಿಯಿಂದಾ ಕಾವೇರಿವರೆಗಷ್ಟೇ ಅಲ್ಲ, ನೈಲ್‌ ನದಿಯನ್ನೂ ದಾಟಿ ಬೆಳೆದಿದೆ. ಹೊಟೇಲ್‌ ಉದ್ದಿಮೆಯಲ್ಲಿ ಹೆಸರು ಮಾಡಿರುವ ಉಡುಪಿ ಮೂಲದ ಸಮೂಹಗಳ ಪೈಕಿ ಕಾಮತ್‌ ಕೂಡ ಒಂದು. ಹೆಸರಿನೊಟ್ಟಿಗೇ ಗುಣವನ್ನೂ ಕಾಯ್ದುಕೊಂಡು ಬಂದಿರುವ ಈ ಸಮೂಹ, ಉದ್ದಿಮೆಯಲ್ಲಿ ಗಗನಚುಂಬಿಯಾಗಲು ಸೌಟು ಹಿಡಿದು ನೆರವಾದವರು ಶೇಷಗಿರಿ ಪಾಂಡುರಂಗ ಕಾಮತ್‌.

ಕಾಮತ್‌ ಹುಟ್ಟಿನ ಹಿಂದೆ.....

ಭಟ್ಕಳ ತಾಲ್ಲೂಕಿನ ಬೆಂಗೆರೆ ಎಂಬ ಹಳ್ಳಿಯಲ್ಲಿ ಹುಟ್ಟಿದ ಶೇಷಗಿರಿ ಪಾಂಡುರಂಗ ಪಾಕ ಶಾಸ್ತ್ರ ಪ್ರವೀಣ. ಪುಟ್ಟ ಹಳ್ಳಿಯಲ್ಲಿ ಭವಿಷ್ಯ ಇಲ್ಲವೆಂದು 1944ರಲ್ಲಿ ಹುಬ್ಬಳ್ಳಿಗೆ ಹಾರಿದರು. ಇವರ ಕೈ ರುಚಿಗೆ ಬಾಯಲ್ಲಿ ನೀರೂರಿಸಿಕೊಂಡ ಮಂದಿ ಅದೆಷ್ಟೋ. ಪರಿಣಾಮವೇ 1945- 46ರಲ್ಲಿ ಹುಬ್ಬಳ್ಳಿಯಲ್ಲೊಂದು ಕ್ಯಾಂಟೀನ್‌.

ಅದರ ಉಸ್ತುವಾರಿಕೆ ಶೇಷಗಿರಿ ಪಾಂಡುರಂಗ ಅವರದ್ದು. ಇಬ್ಬರು ಹಿರಯಣ್ಣಂದಿರ ಗರಡಿಯಲ್ಲಿ ಪಳಗಿದ ಶೇಷಗಿರಿ ಕಾಮತರಿಗೆ ಹೊಟೇಲ್‌ ಉದ್ದಿಮೆಯ ಎಲ್ಲಾ ಮಜಲುಗಳೂ ಅಂಗೈ ನೆಲ್ಲಿ. ಪರಿಣಾಮ 1948ರಲ್ಲಿ ಹುಬ್ಬಳ್ಳಿಯಲ್ಲೇ ಸ್ವಂತ ಹೊಟೇಲ್‌ ತೆರೆದರು. ಪಕ್ಕದಲ್ಲಿ ಕಾಮತ್‌ ಕೂಡ ಸೇರಿತು. ಇದು ಮೊದಲ ಕಾಮತ್‌ ಹೊಟೇಲು!

ಪಾಂಡು ಪಾಕ ಉಂಡವರೆಲ್ಲಾ ಖಾಯಂ ಗಿರಾಕಿಗಳಾಗತೊಡಗಿದರು. ಪಾಂಡು ಹೆಸರು ಹುಬ್ಬಳ್ಳಿಯಲ್ಲಿ ಮನೆಮಾತು; ಜೊತೆಯಲ್ಲೇ ಕಾಮತ್‌ ಕೂಡ. ಇವರ ಪಾಕದ ಗಮಲು ಯೂರೋಪಿಯನ್‌ ರೈಲ್ವೆ ಪ್ರಾಧಿಕಾರದ ಮೂಗಿಗೂ ಬಡಿಯಿತು. ಗುಲ್ಬರ್ಗಾ ರಸ್ತೆಯಲ್ಲೊಂದು ಕ್ಯಾಂಟೀನ್‌ ತೆರೆಯುವಂತೆ ಪ್ರಾಧಿಕಾರ ಹುಡುಕಿಕೊಂಡು ಪಾಂಡು ಬಳಿಗೆ ಬಂತು. 1956ರಲ್ಲಿ ಕ್ಯಾಂಟೀನ್‌ ಬಾಗಿಲು ತೆರೆಯಿತು. ಇವತ್ತಿಗೂ ಈ ಹೊಟೇಲು ಫೇಮಸ್ಸು. ಇದರ ಈಗಿನ ಹೆಸರು ಕಾಮತ್‌ ಕೆಫೆ.

Kamat Cafe, Gulbergaಆಮೇಲೆ ಕಾಮತ್‌ ಸೋದರರ ಅಡುಗೆ ಖ್ಯಾತಿ ಸಾಕಷ್ಟು ಅವಕಾಶಗಳನ್ನು ಹುಟ್ಟುಹಾಕಿತು. ದುಡ್ಡೂ ಹುಡುಕಿಕೊಂಡು ಬಂತು. ಏನೇ ಆದರೂ, ಕಾಮತ್‌ ಹದ ಮಾಸಲೇ ಇಲ್ಲ. ಆ ಕಾರಣಕ್ಕೇ ನಿಪ್ಪಾಣಿ ಕೆಎಸ್ಸಾರ್ಟಿಸಿ ಬಸ್‌ ಸ್ಟ್ಯಾಂಡಿನಲ್ಲಿ ಕ್ಯಾಂಟೀನ್‌ ತೆಗೆಯಲು ಶೇಷಗಿರಿ ಪಾಂಡುರಂಗ ಕಾಮತ್‌ಗೆ ಅವಕಾಶ ಸಿಕ್ಕಿದ್ದು. ಆಗ 1963.

ಬೆಂಗಳೂರಿನಲ್ಲಿ ಕಾಮತ್‌

ಉತ್ತರ ಕರ್ನಾಟಕದಲ್ಲಿ ಮನೆಮಾತಾದ ಕಾಮತ್‌ ಬೆಂಗಳೂರಿಗೆ ಲಗ್ಗೆಯಿಟ್ಟಿದ್ದು 1967ರಲ್ಲಿ. ದಶಕಗಳು ಕಳೆದಂತೆ ಕಣ್ಣಾಡಿಸಿದ ಕಡೆಯೆಲ್ಲಾ ಕಾಮತ್‌ ಹೊಟೇಲುಗಳು. ಇವುಗಳಲ್ಲಿ ಕೆಲವು ಬೋಗಸ್ಸು ! 1996ರ ಹೊತ್ತಿಗೆ ಬೆಂಗಳೂರಲ್ಲಿ ಬಾಯಿರುಚಿ ಭರಿಸುತ್ತಿದ್ದ ಕಾಮತ್‌ ಹೊಟೇಲುಗಳ ಸಂಖ್ಯೆ 15.Kamat Yatrinivas, Bangalore ವಯಸ್ಸಾದಂತೆ ಶೇಷಗಿರಿ ಪಾಂಡುರಂಗ ಕಾಮತ್‌ ಸೌಟು ಬಿಟ್ಟರೂ, ರುಚಿಯ ಕಡೆ ನಿಗಾ ಇಡುವುದನ್ನು ಮರೆಯಲಿಲ್ಲ. ತಮ್ಮ ಹೊಟೇಲುಗಳ ಅನನ್ಯತೆ ಕಾಪಾಡಲು ಹೊಸ ಯೋಚನೆಗಳನ್ನು ಹೊಸೆದರು. ತ್ರಿಭುವನ್‌ ಟಾಕೀಸಿನ ಪಕ್ಕದಲ್ಲಿರುವ ಕಾಮತ್‌ ಯಾತ್ರಿ ನಿವಾಸಕ್ಕೆ ಜೋಳದ ರೊಟ್ಟಿ ಊಟ ಮಾಡಲು ಜನ ಮುಗಿಬೀಳುತ್ತಿರುವುದು ಈ ಕಾರಣಕ್ಕೇ.

ರಾಮನಗರ ಬಳಿಯ ಜನಪದ ಲೋಕಕ್ಕೆ ಹೋಗಿ ಎಚ್‌.ಎಲ್‌.ನಾಗೇಗೌಡರ ಜೊತೆ ಅರ್ಧ ತಾಸು ಮಾತಾಡಿ ಕೊಂಡು ಬಂದರೆ, ಅಲ್ಲೊಂದು ಕಾಮತ್‌ ಲೋಕಾರುಚಿ. ಕಾಯುತ್ತಿರುತ್ತದೆ ಕರಾವಳಿ ಖಾದ್ಯ ಬಿಸಿಬಿಸಿ.

ಶೇಷಗಿರಿ ಪಾಂಡುರಂಗ ಕಾಮತ್‌ ಇನ್ನಿಲ್ಲ. ಏಪ್ರಿಲ್‌ 9ರಂದು ನಿಧನರಾದರು. ‘ನಮ್ಮ ಪಾಂಡುರಂಗ ಕಾಮತರು ಮಾಡುತ್ತಿದ್ದ ಇಡ್ಲಿ- ಚಟ್ನಿ ಎಂಥದಿತ್ತು ಗೊತ್ತಾ ?’ ಅಂತ ಇವತ್ತೂ ಗುಲ್ಬರ್ಗಾ ರಸ್ತೆಯ ಕಾಮತ್‌ ಕೆಫೆಯಲ್ಲಿ ಪಾಂಡು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಅಂದಮೇಲೆ, ಪಾಂಡುರಂಗ ಕಾಮತ್‌ ಇನ್ನೂ ಇದ್ದಾರೆ !

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X