• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸಾವು ನ್ಯಾಯವೇ ?

By Staff
|

*ರಘುನಾಥ ಚ. ಹ.

Nagappa victim of a vicious system‘ನಿರುಪದ್ರವಿ, ಸಜ್ಜನ, ಸೌಮ್ಯ ಸ್ವಭಾವದ ವ್ಯಕ್ತಿ, ಸಾತ್ವಿಕ ರಾಜಕಾರಣಿ..’

ಮಾಜಿ ಸಚಿವ ಎಚ್‌. ನಾಗಪ್ಪನವರ ವ್ಯಕ್ತಿಚಿತ್ರ ಆರಂಭವಾಗುವುದೇ ಹೀಗೆ. ನಾಗಪ್ಪ ಶಾಸಕರಾಗಿದ್ದರು, ಮಂತ್ರಿಗಳಾಗಿದ್ದರು. ಸಕ್ರಿಯ ರಾಜಕೀಯದಲ್ಲಿದ್ದುಕೊಂಡೂ ಸಾತ್ವಿಕತೆಯನ್ನು ಉಳಿಸಿಕೊಂಡಿದ್ದರು. ಇದೆಲ್ಲ ಅವರ ಅಗ್ಗಳಿಕೆ. ನಾಗಪ್ಪನವರ ರಾಜಕೀಯ ಎದುರಾಳಿ ಹಾಗೂ ಹರಕು ಬಾಯಿಯ ಸಚಿವ ರಾಜೂಗೌಡ ಅವರನ್ನೇ ಕೇಳಿ ; ನಾಗಪ್ಪನವರ ಸಾತ್ವಿಕತೆಯ ಕುರಿತು ಅಡ್ಡ ಮಾತು ಬರುವುದಿಲ್ಲ. ಆ ಮಟ್ಟಿಗೆ ನಾಗಪ್ಪ ಅಜಾತ ಶತ್ರು.

ಅವರು ಮಾತನಾಡುತ್ತಿದ್ದುದೇ ಕಡಿಮೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಅವರು ಯಾವತ್ತೂ ಮೊದಲ ಸಾಲಿನ ನಾಯಕರಾಗಲಿಲ್ಲ. ಸಿಂಧ್ಯಾ, ಭೈರೇಗೌಡರಂತೆ ಎರಡನೆ ಸಾಲಿನಲ್ಲಿ ಮಿಂಚುವ ಉತ್ಕಟ ಹಂಬಲವೂ ಅವರಿಗಿರಲಿಲ್ಲ. ಅವರ ಕಾರ್ಯಕ್ಷೇತ್ರವೇನಿದ್ದರೂ ಚಾಮರಾಜನಗರ ಸುತ್ತಮುತ್ತಲಿಗೆ ಮಾತ್ರ ಸೀಮಿತವಾಗಿತ್ತು.

*

ನಾಗಪ್ಪ ಅನ್ನುವ ವ್ಯಕ್ತಿ ಸಂಯುಕ್ತ ಜನತಾದಳದ ಮುಖಂಡರು. ಅವರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜೆ.ಎಚ್‌. ಪಟೇಲ್‌ ಅವರ ಸಚಿವ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ಸಚಿವರಾಗಿದ್ದರು. ರಾಜಕೀಯ ಪುಟಗಳಲ್ಲಿದ್ದ ಈ ಅಂಕಿಅಂಶಗಳೆಲ್ಲ ಮಹಾಜನತೆಯ ಗಮನಕ್ಕೆ ಬಂದದ್ದು ನಾಗಪ್ಪನವರನ್ನು ಕಳೆದ ಆಗಸ್ಟ್‌ 25 ರಂದು ವೀರಪ್ಪನ್‌ ಅಪಹರಿಸಿದಾಗಲೇ. 106 ದಿನಗಳ ವನವಾಸದ ನಂತರ ನಾಗಪ್ಪ ಮರಳಿ ನಾಡಿಗೆ ಬಂದದ್ದು ಹೆಣವಾಗಿ.

ನಾಗಪ್ಪನವರಿಗೆ 66 ವರ್ಷ ವಯಸ್ಸಾಗಿತ್ತು. ಕಳೆದ ಮೂರೂವರೆ ತಿಂಗಳಿಂದ ನಾಗಪ್ಪ ನವರ ಸುರಕ್ಷಿತ ಬಿಡುಗಡೆಗಾಗಿ ಬೆಂಗಳೂರು-ಚೆನ್ನೈ-ದೆಹಲಿ ನಡುವೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ ಎಲ್ಲರ ಮನೆ ಬಾಗಿಲು ಕಾದ ಅವರ ಪತ್ನಿ ಪರಿಮಳಾ, ಪುತ್ರ ಪ್ರೀತಮ್‌ ಹಾಗೂ ಪುತ್ರಿಯರಾದ ಪವನ್‌ ಮತ್ತು ಪ್ರಿಯಾಂಕ, ಅಳಿಯ ಡಾ.ಕಿರಣ್‌ ಈಗ ತಪ್ತರು. ನೆಮ್ಮದಿ ಹೇಳುವವರು ಯಾರು ? ಮುಖ್ಯಮಂತ್ರಿ ಕೃಷ್ಣ ಕ್ಷಮೆ ಯಾಚಿಸಿ ತೆಪ್ಪಗಾಗಿದ್ದಾರೆ. ನಾಗಪ್ಪ ಪ್ರಕರಣದಲ್ಲಿ ಕೃಷ್ಣ ಕೈಗೊಂಡ ಪ್ರಾಮಾಣಿಕ ಪ್ರಯತ್ನಗಳಲ್ಲಿ ಈ ಕ್ಷಮೆ ಯಾಚನೆಯೂ ಒಂದು.

*

ಮೈಸೂರಿನ ಜೆಎಸ್‌ಎಸ್‌ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ದಿನಗಳನ್ನು ಸವೆಸಿದ ನಾಗಪ್ಪ, ಮರಿಮಲ್ಲಪ್ಪ ಮತ್ತು ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಪಿಯೂಸಿವರೆಗೆ ಓದಿದರು. ಯುವರಾಜ ಕಾಲೇಜಲ್ಲಿ ಬಿ.ಎಸ್ಸಿ ಪದವಿ ಗಿಟ್ಟಿಸಿದರು. ಸ್ನಾತಕೋತ್ತರ ಪದವಿ ಓದುವಾಗಲೇ ರಾಜಕೀಯದತ್ತ ಹೊರಳಿದರು. 1962ರಲ್ಲಿ ವಿಧಾನಸಭಾ ಚುನಾವಣಾ ಕಣಕ್ಕೆ ಎಂಟ್ರಿ. ಮೊದಲ ಯತ್ನದಲ್ಲಿ ಸೋಲುಂಡರೂ, ಅದು ಆರೋಗ್ಯಕರ ಸ್ಪರ್ಧೆಯಾಗಿತ್ತು. ನಾಗಪ್ಪ ಆಗ ಸೋತಿದ್ದು ಕೇವಲ 150 ಮತಗಳ ಅಂತರದಿಂದ. ಸೋಲಿನ ನಂತರವೂ ರಾಜಕೀಯದ ಗೀಳು ಬಿಡದ ನಾಗಪ್ಪ 1967ರ ಚುನಾವಣೆಯಲ್ಲಿ ಗೆದ್ದರು.

Nagappas Family1971, 77, 85 ಹಾಗೂ 89ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲೂ ನಾಗಪ್ಪ ಸೋಲುಂಡರು. 1994ರ ಚುನಾವಣೆಯಲ್ಲಿ ಗೆದ್ದು, ಜೆ.ಎಚ್‌.ಪಟೇಲರ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವ ಖಾತೆ ಗಿಟ್ಟಿಸಿದರು.ಕಳೆದ ಐದು ವಿದಾನಸಭಾ ಚುನಾವಣೆಗಳಲ್ಲಿ ನಾಗಪ್ಪ ಹಾಗೂ ರಾಜೂಗೌಡ ನಡುವೆ ತುರುಸಿನ ಸ್ಪರ್ಧೆ ನಡೆದಿದೆ. ಆದರೆ ನಾಗಪ್ಪ ಗೆದ್ದಿದ್ದು ಒಂದೇ ಬಾರಿ. ಹೀಗಿದ್ದೂ 5 ವರ್ಷಗಳ ಹಿಂದೆ ಹೊಸದಾಗಿ ರಚಿತವಾದ ಚಾಮರಾಜನಗರ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರೆಂಬ ಅಗ್ಗಳಿಕೆ ಅವರದು. ಸ್ಥಳೀಯ ರಾಜಕಾರಣದಲ್ಲಿ ನಾಗಪ್ಪನವರ ಪ್ರಭಾವಳಿ ಇಂದಿಗೂ ದಟ್ಟವಾಗಿದೆ.

*

ನಾಗಪ್ಪ ವೀರಶೈವ ಸಮುದಾಯಕ್ಕೆ ಸೇರಿದವರು. ಸುತ್ತೂರು ಮಠಕ್ಕೆ ಹತ್ತಿರದ ನಂಟುಳ್ಳವರು. ಆ ಕಾರಣಕ್ಕೇ ನಾಗಪ್ಪನವರ ಬಿಡುಗಡೆ ಪ್ರಕ್ರಿಯೆಯಲ್ಲಿ ವೀರಶೈವ ಸಮುದಾಯ, ವಿಶೇಷವಾಗಿ ಸುತ್ತೂರು ಮಠ ಆಸಕ್ತಿ ವಹಿಸಿತು. ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ನಾಗಪ್ಪ ದುಡಿದಿದ್ದರು.

ಭೂಕಂಪವಾದಾಗ ಒಂದಾಗದ, ಯುದ್ಧ ನಡೆದಾಗ ಮಠ ಬಿಟ್ಟು ಬಯಲಿಗೆ ಬರದ, ಬರ ಬಂದಾಗ ಚಕಾರವೆತ್ತದ ಮಠಾಧೀಶರು- ಮೊದಲ ಬಾರಿಗೆ ಒಂದು ವೇದಿಕೆಯಲ್ಲಿ ಸೇರಿ ಟಾಡಾ ಕಾಯ್ದೆಯಡಿ ಬಂಧನದಲ್ಲಿದ್ದ ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದರು. ಇದು ನಾಗಪ್ಪನವರ ಧಾರ್ಮಿಕ (ವೀರಶೈವ ಸಮುದಾಯದಲ್ಲಿನ) ಜನಪ್ರಿಯತೆಗೆ ಸಾಕ್ಷಿ.

ಕಾಡುಗಳ್ಳ ವೀರಪ್ಪನ್‌ನೊಂದಿಗೆ ನಾಗಪ್ಪ ಸಂಪರ್ಕ ಹೊಂದಿದ್ದರು ಎನ್ನುವ ಗುಸುಗುಸು ಕೊಳ್ಳೇಗಾಲವನ್ನು ದಾಟಿ ಬೆಂಗಳೂರು ಪತ್ರಿಕೆಗಳನ್ನು ತಲುಪಿದ್ದುಂಟು. ರಾಜೂಗೌಡ ಕೂಡ ವೀರಪ್ಪನ್‌ ಸಂಪರ್ಕ ಹೊಂದಿರುವ ವದಂತಿಯಿತ್ತು. ಅದೆಲ್ಲ ಹಳೆಯ ಕಥೆ. ಆನಂತರ ನಾಗಪ್ಪನವರನ್ನು ಅಪಹರಿಸಲು ವೀರಪ್ಪನ್‌ ಸಂಚು ಹೂಡಿದ್ದಾನೆ ಎಂದು ಎಸ್‌ಟಿಎಫ್‌ನ ಅರಕೇಶ್‌ ಎರಡೂವರೆ ವರ್ಷಗಳ ಹಿಂದೆಯೇ ವರದಿ ಮಾಡಿದರು. ಹಾಗಿದ್ದೂ ನಾಗಪ್ಪನವರಿಗೆ ಬಿಗಿ ಪೊಲೀಸು ಬೆಂಗಾವಲು ದೊರೆಯಲಿಲ್ಲ.

*

ವೀರಪ್ಪನ್‌ ವರನಟ ರಾಜ್‌ಕುಮಾರ್‌ ಅವರನ್ನು ಅಪಹರಿಸಿ, 108 ದಿನಗಳ ನಂತರ ಬಿಡುಗಡೆ ಮಾಡಿದ್ದ. ರಾಜ್‌ ಬಿಡುಗಡೆಗಾಗಿ 20 ಕೋಟಿ ರುಪಾಯಿ ಕಪ್ಪ ಒಪ್ಪಿಸಲಾಗಿದೆ ಎನ್ನುವ ಆರೋಪ ಗಟ್ಟಿ ದನಿಯಲ್ಲಿ ಕೇಳುವ ಹೊತ್ತಿನಲ್ಲಿ ನಾಗಪ್ಪನವರ ಬಿಡುಗಡೆಗೆ ಪ್ರಯತ್ನಗಳು ನಡೆಯುತ್ತಿದ್ದವು. ವಾಮಮಾರ್ಗದಲ್ಲಿ ನಡೆಯುವ ಮೂಲಕ ಮತ್ತೊಮ್ಮೆ ಮಸಿ ಬಳಿದುಕೊಳ್ಳಲು ಸರ್ಕಾರ ಹಿಂದುಮುಂದು ನೋಡಿದ್ದು ನಿಜ. ಈ ಗೊಂದಲದಲ್ಲಿಯೇ ನಾಗಪ್ಪನವರ ಹತ್ಯೆಯ ಸುದ್ದಿ ಕಾಡಿನಿಂದ ಬಂದಿದೆ.

ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಅವರ Veerappan’s Prize catch: Rajkumar ಪುಸ್ತಕದ ಕನ್ನಡ ಅವತರಣಿಕೆ (ರಾಜರಹಸ್ಯ- ಅನುವಾದ : ರವಿಬೆಳಗೆರೆ) ಬಿಡುಗಡೆ ಸಂದರ್ಭದಲ್ಲಿ ಕನ್ನಡ ಚಳವಳಿಕಾರ ಜಾಣಗೆರೆ ವೆಂಕಟರಾಮಯ್ಯ ಹೇಳಿದ್ದರು :

‘ಒಂದು ವೇಳೆ ರಾಜ್‌ಕುಮಾರ್‌ ಕಾಡಿನಲ್ಲೇ ಸಾವನ್ನಪ್ಪಿದ್ದರೆ ಹುತಾತ್ಮರಾಗುತ್ತಿದ್ದರು. ಮನೆಮನೆಗಳಲ್ಲೂ ಅವರ ಫೋಟೊ ಇಟ್ಟುಕೊಂಡು ನಾಡು ಪೂಜಿಸುತ್ತಿತ್ತು.’

ರಾಜ್‌ ಕಾಡಿನಿಂದ ನಾಡಿಗೆ ಮರಳಿ ಬಂದರು. ಅದು ಇತಿಹಾಸ. ನಾಗಪ್ಪ ಕಾಡಿನಲ್ಲೇ ಸತ್ತರು. ಇದು ವರ್ತಮಾನ. ಜಾಣಗೆರೆ ಅವರ ಮಾತಿನಂತೆ ನಾಗಪ್ಪ ಹುತಾತ್ಮರಾ ? ನಾಡು ಅವರನ್ನು ಗೌರವಿಸುತ್ತದಾ ?- ಈ ಪ್ರಶ್ನೆಗೆ ಉತ್ತರ ಭವಿಷ್ಯದಲ್ಲಿ ಸಿಕ್ಕೀತು. ಆದರೆ, ಸೂತಕದ ಮನೆಯಲ್ಲಿ ಇಂಥ ಪ್ರಶ್ನೆಗಳಿಗೆ ಅರ್ಥವಿಲ್ಲ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X