ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗಿದ್ದರು ಅಂಬರ ಚುಂಬಿ ಅಂಬಾನಿ...

By Staff
|
Google Oneindia Kannada News

*ಸುಷ್ಮಾ ಅರೊರಾ, ನವ ದೆಹಲಿ

Dheerubai Ambani (Centre) with sons Anil and Mukeshಈಗ್ಗೆ ನಲವತ್ತನಾಲ್ಕು ವರ್ಷಗಳ ಹಿಂದೆ ಯಮೆನ್‌ನ ಶೆಲ್‌ ಸರ್ವಿಸ್‌ ಸ್ಟೇಷ್ನನಿನಲ್ಲಿ ಕೆಲಸ ಮಾಡಿ 50 ಸಾವಿರ ರುಪಾಯಿ ಸಂಪಾದಿಸಿದ ಇಪ್ಪತ್ತೆಂಟರ ಹರೆಯದ ಹುಡುಗ ಭಾರತಕ್ಕೆ ಮರಳಿದ. ಆಗ ಹಾಗೂ ಹೀಗೂ ಮಾಡಿ 2.8 ಲಕ್ಷ ಬಂಡವಾಳ ಹೂಡಿ, ಜವಳಿ ಕಂಪನಿ ತೆರೆದ. ಆ ಬಂಡವಾಳ ಇವತ್ತು 60 ಸಾವಿರ ಕೋಟಿಗೂ ಮೀರಿ ಬೆಳೆದಿದೆ. ಹತ್ತು ಸುರಿದು ಮುತ್ತು ಹೆಕ್ಕಿದ ಈ ಪಕ್ಕಾ ವ್ಯವಹಾರಸ್ಥನೇ ಧೀರೂಬಾಯಿ ಅಂಬಾನಿ.

ವಾರದ ಹಿಂದೆ ಪಾರ್ಶ್ವ ವಾಯು ಹೊಡೆತ ಬಿದ್ದ ನಂತರ ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಮಿಂಚಿನ ಸಂಚಲನ. ಧೀರೂಬಾಯಿ ಅಂಬಾನಿ ಆರೋಗ್ಯ ಸ್ಥಿತಿ ಗಂಭೀರ. ವೈದ್ಯರ ಹಿಂಡಿನ ತೀವ್ರ ನಿಗಾ. ಕೆಮೆರಾ ಹಿಡಿದ ಟಿವಿ ಚಾನೆಲ್‌ನವರ ದೊಡ್ಡ ದಂಡು. ಬಂದು- ಹೋಗುವ ಮಂತ್ರಿ ಮಹೋದಯರು, ಉದ್ದಿಮೆದಾರರ ಹಿಂಡು. ಪ್ರತಿದಿನವೂ ಹೇಳಿದ್ದೇ ಮಾತು- ‘ಧೀರೂಬಾಯಿ ಆರೋಗ್ಯದ ಸ್ಥಿತಿ ಹಾಗೆಯೇ ಇದೆ’. ಯಾರೀ ಧೀರ? ಯಾಕೆ ಈತನಿಗೆ ಈಪಾಟಿ ಪ್ರಾಮುಖ್ಯ?

ಈ ಧೀರ ಆಫೀಸಿನಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಕುರ್ಚಿ ಮೇಲೆ ಕೂತರಾಯಿತು. ಷೇರು ಮಾರುಕಟ್ಟೆ ಕಿಲಕಿಲ ನಗುತ್ತದೆ. ರಿಲಯನ್ಸ್‌ ಕಂಪನಿಯ ಅಟ್ಟಹಾಸ ಎಣೆಯಿಲ್ಲದೆ ಮೆರೆಯುತ್ತದೆ. ಆ ಮೂಲಕ ಜಾಗತಿಕ ಮಾರುಕಟ್ಟೆಯ ಒಂದೊಂದು ಕದಲಿಕೆಯೂ ಜೀವಂತವಾಗಿರುತ್ತದೆ. ಇದು ಭಾರತದ ದಿಗ್ಗಜಾತಿ ದಿಗ್ಗಜ ಉದ್ದಿಮೆದಾರರ ಅಂಬೋಣ.

ಅಂಬಾನಿ ಅಂಬರ ಮುಟ್ಟಿದ್ದು ಹೇಗೆ?

ಒಬ್ಬ ಸಾಮಾನ್ಯ ಮೇಷ್ಟ್ರ ಮಗನಾಗಿ ಹುಟ್ಟಿದ ಧೀರಜ್‌ಲಾಲ್‌ ಹೀರಾಚಂದ್‌ ಅಂಬಾನಿ ಹುಟ್ಟಿನಿಂದಲೇ ಲೆಕ್ಕದಲ್ಲಿ ಮುಂದು. ಆ ಕಾಲದಲ್ಲೇ ಮೆಟ್ರಿಕ್ಯೂಲೇಷನ್‌ ಗಿಟ್ಟಿಸಿಕೊಂಡು, ವಿದೇಶಕ್ಕೆ ಹೋಗಿ ಕೆಲಸದ ಅನುಭವದ ಜೊತೆಗೆ ಉದ್ದಿಮೆಗಳ ಕೆಮಿಸ್ಟ್ರಿಯನ್ನು ಕರತಲಾಮಲಕ ಮಾಡಿಕೊಂಡು ಬಂದವ. ಜೇಬಲ್ಲಿ ನೂರು ರುಪಾಯಿ ಇದ್ದರೆ, ಅದನ್ನು ಸಾವಿರ ಮಾಡೋದು ಹೇಗೆ ಅಂತ ಯೋಚಿಸುತ್ತಲೇ ಆಕಾಶದತ್ತ ಕಣ್ಣು ನೆಟ್ಟಾತ.

ಮೊದಲು ಜವಳಿ ಉದ್ದಿಮೆ ಶುರು ಮಾಡಿದ್ದು ದೊಡ್ಡ ರಿಸ್ಕು. ಯಾಕೆಂದರೆ, ಅದಕ್ಕಾಗಿ ಹೂಡಲಾದ 2.8 ಲಕ್ಷ ರುಪಾಯಿಯಲ್ಲಿ ಅಂಬಾನಿ ಗೆಳೆಯರದ್ದೇ ಸಿಂಹ ಪಾಲು. ಉದ್ದಿಮೆ ಮುಳುಗಿದರೆ ಅಂಬಾನಿ ಫುಟ್‌ಪಾತ್‌ಗೆ ಬರುವುದು ಗ್ಯಾರಂಟಿ ಎಂಬಂಥಾ ಸ್ಥಿತಿ. ಆದರೆ ಅಂಬಾನಿ ದೂರದೃಷ್ಟಿ, ಮಾರುಕಟ್ಟೆ ಧಾಟಿಯನ್ನು ಜೀರ್ಣ ಮಾಡಿಕೊಂಡಿದ್ದ ಪರಿ ಸೋಲೆಂಬುದು ಹತ್ತಿರವೂ ಸುಳಿಯಕೂಡದು ಎಂಬಂತಿತ್ತು. ವಿಮಲ್‌ ಎಂಬ ಬಟ್ಟೆ ವ್ಯಾಪಾರ ಮೊಗೆ ಮೊಗೆದು ಸಂಪಾದಿಸಿ ಕೊಟ್ಟಿತು. ಹನಿ ಹನಿಗೂಡಿ ಹಳ್ಳವಾಯಿತು.

ಮಧ್ಯಮವರ್ಗದವರ ಪಾಲಿನ ಮನ್ವಂತರ

ಇಡೀ ಜೀವನ ನೌಕರೀಲೇ ಸವೆಸಬೇಕಾ ಅಂತ ಗೊಣಗುತ್ತಿದ್ದ ಬೊಗಸೆ ಕನಸಿನ ಮಧ್ಯಮವರ್ಗದವರನ್ನೂ ಬಂಡವಾಳದಾರರನ್ನಾಗಿ ಮಾಡಿ ಮತ್ತೊಂದು ಚಾಲೆಂಜ್‌ಗೆ ಅಂಬಾನಿ ಎದೆಗೊಟ್ಟರು. ಉಳಿಸಿದ್ದನ್ನೆಲ್ಲಾ ಹೂಡಿದ ಮಧ್ಯಮ ವರ್ಗದ ಜನರ ಕೈಲೂ ಕಾಸಾಡುವಂತಾಯಿತು. ಉದ್ದಿಮೆ ಎತ್ತರೆತ್ತರ ಬೆಳೆಯಿತು. ಹೂಡಿಕೆ ಜೋರಾಯಿತು. ಷೇರು ಮಾರುಕಟ್ಟೆಯ ಬೇರುಗಳು ಬಲವಾದವು. ಜಾಗತೀಕರಣದ ದೆಸೆಯಿಂದ ಅಂಬಾನಿ ಆಕಾಶಕ್ಕೇ ಏಣಿ ಹಾಕುವಂತಾಯಿತು.

ಈ ನಡುವೆ ವಿದೇಶದಲ್ಲಿ ಓದಿ ಬಂದ ಮಕ್ಕಳು ಮುಕೇಶ್‌ ಮತ್ತು ಅನಿಲ್‌ ಅಂಬಾನಿ ನೊಗಕ್ಕೆ ಹೆಗಲು ಕೊಟ್ಟರು. 1986ರಲ್ಲೇ ಒಮ್ಮೆ ಪಾರ್ಶ್ವ ವಾಯು ಹೊಡೆತ ಬಿದ್ದಾಗ, ಅಂಬಾನಿಗೆ ವಯಸ್ಸಿನ ಚುರುಕು ಮುಟ್ಟಿತು. ರೆಸ್ಟು ಎಂಬದನ್ನೇ ಮರೆತಿದ್ದ ಅಂಬಾನಿಗೆ ಅದು ಅನಿವಾರ್ಯವಾಯಿತು. ಆದರೆ ಉದ್ದಿಮೆದಾರರಿಗೆ ಮಾರುಕಟ್ಟೆ ಚಾಲೂ ಆಗಬೇಕಲ್ಲ. ಅಂಬಾನಿ ಕುರ್ಚಿ ಮೇಲೆ ಕೂರಲೇಬೇಕಾಯಿತು. ಇವತ್ತು 85 ಸಾವಿರಕ್ಕೂ ಹೆಚ್ಚು ‘ಮ್ಯಾನ್‌ ಪವರ್‌’ ಇರುವ ಜಲಲ ಜಲ ಧಾರೆ ಈ ರಿಲಯನ್ಸ್‌ ಸಮೂಹ.

‘ನನ್ನನ್ನು ಎದುರು ಹಾಕಿಕೊಳ್ಳಬೇಡಿ. ಹಾಕಿಕೊಂಡರೆ ಸಾಯ್ತುತೀರಿ. ನಿಮ್ಮ ಪಾಡಿಗೆ ನೀವಿದ್ದರೆ ಬದುಕೀರಿ’- ಬಹಿರಂಗವಾಗೇ ಪ್ರತಿಸ್ಪರ್ಧಿಗಳಿಗೆ ಅಂಬಾನಿ ಎಚ್ಚರಿಸ್ತುತಿದ್ದುದು ಹೀಗೆ. ಬಾಂಬೆ ಡೈಯಿಂಗ್‌ನ ಮ್ಯಾನೇಜರ್‌ ಕೊ ಲೆಯಾದಗ ಪೊಲೀಸರು ಮೊದಲು ಗುಮಾನಿ ಪಟ್ಟಿದ್ದೇ ಅಂಬಾನಿ ಮೇಲೆ. ಈ ಬಗ್ಗೆ ವಿಚಾರಣೆಗಳೂ ನಡೆದವು. ಆದರದು ಅಂಬಾನಿಗೆ ದೊಡ್ಡ ಎಡರೇನಾಗಲಿಲ್ಲ. ವಿವಾದಗಳ ಸಾಗರದಲ್ಲೇ ಈಜ್ತುತಿದ್ದ ಅಂಬಾನಿಯದ್ದು ಇಲ್ಲಿ ಕಾಲೆಳೆದರೇ ಮೇಲೇರಲು ಸಾಧ್ಯ ಅನ್ನುವ ತಂತ್ರ.

ಎದುರಾಳಿಗಳ ಕೊಂಡು ಕೊಳ್ಳುವುದು, ಇಲ್ಲ ಮಟ್ಟ ಹಾಕುವುದು ಅಂಬಾನಿಗೆ ಅಂಗೈನೆಲ್ಲಿ. ಆತನ ಬತ್ತಳಿಕೆಯ ಯಾವ ಬಾಣ ಹೊರ ಬರುತ್ತಿತ್ತೋ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಒಟ್ಟಿನಲ್ಲಿ ಅಂಬಾನಿಯದ್ದು Think big ಎಂಬ ಮಂತ್ರ. ವೈರಿಗಳ ಮುಂದೆಯೇ ನಿಂತು I am not a loser ಅಂತ ಹೇಳುವಷ್ಟು ದಾರ್ಷ್ಟ್ಯ. ಪರಿಣಾಮ ಜವಳಿಯಿಂದ ಮಾಹಿತಿ ತಂತ್ರಜ್ಞಾನದವರೆಗೆ ರಿಲಯನ್ಸ್‌ನ ಕಬಂಧ ಬಾಹು ವಿಸ್ತುತವಾಯಿತು.

ನಗುವೇ ಅಪರೂಪವಾಗಿದ್ದ ಅಂಬಾನಿ ಎಂಬಾತ ಏಣಿ ಹಾಕಿದ್ದು ಅಂಬರಕ್ಕೆ. ಕಟ್ಟಿದ್ದು ಎವರೆಸ್ಟ್‌ ಶಿಖರ. ನಿಮಗೇನಿಷ್ಟ ಅಂತ ಯಾರೋ ಕೇಳಿದಾಗ, ಗಂಟಿಕ್ಕಿದ ಮುಖದ ಅಂಬಾನಿ ಒಮ್ಮೆ ಹೇಳಿದ್ದರು- ಬ್ಲೂ ಲೇಬಲ್‌ ವಿಸ್ಕಿ ಕುಡಿದ ನಂತರದ ಸುಖ ನಿದ್ದೆ. ಈಗ ಅಂಬಾನಿ ಮಾಡುತ್ತಿರುವುದು ಚಿರ ನಿದ್ದೆ. ಅವರು ಕಟ್ಟಿ ಹೋಗಿರುವ ಎವರೆಸ್ಟ್‌ ಶಿಖರ ಗತಿ ಮುಂದೇನು ?

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X