• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಕೆಟ್ಟಿನಲ್ಲೇ ಮುಳುಗಿರುವೆ, ಮದುವೆಯ ಕನಸು ಕಾಣಲೂ ಟೈಮಿಲ್ಲ- ದ್ರಾವಿಡ್‌

By oneindia staff
|

*ಸಂದರ್ಶನ : ರಾಮ್‌ರಾಜ್‌

Marriage, not now : Dravidಭಾರತದ ಹೆಮ್ಮೆಯ ಆಟ ಕ್ರಿಕೆಟಿನಲ್ಲೊಬ್ಬ ಕನ್ನಡ ಕಲೆಗಾರ. ಒಂದು ಕಡೆ ವಿಕೆಟ್‌ಗಳು ತುಪತುಪನೆ ಉದುರುತ್ತಿದ್ದರೂ ಮಾನಸಿಕ ಸಂತುಲನೆ ಕಳೆದುಕೊಳ್ಳದ ಸ್ಥಿತಪ್ರಜ್ಞ. ಅಡ್ಡಾದಿಡ್ಡಿ ಆಟಕ್ಕೆ ಯಾವುದೇ ಕಾರಣಕ್ಕೆ ಇಳಿಯದೆ, ಕಲಾತ್ಮಕ ಆಟವನ್ನೇ ತನ್ನ ವೈಶಿಷ್ಟ್ಯವನ್ನಾಗಿಸಿಕೊಂಡ ರಾಹುಲ್‌ ದ್ರಾವಿಡ್‌ ಕಣದಲ್ಲಿರಲಿ, ಮನೆಯಲ್ಲಿರಲಿ, ಗೆಳೆಯರ ಬಳಗದಲ್ಲಿರಲಿ- ತಣ್ಣಗಿನ ಮನುಷ್ಯ. ಎಂಥವರಿಗೂ ಇಷ್ಟವಾಗುವ ವ್ಯಕ್ತಿ.

ವೆಸ್ಟಿಂಡೀಸ್‌ ಪ್ರವಾಸಕ್ಕೆ ಹೋಗುವ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆವರಿಳಿಸುತ್ತಿದ್ದ ದ್ರಾವಿಡ್‌ ಮಾತಿಗೆ ಸಿಕ್ಕರು.

ಈವರೆಗಿನ ನಿಮ್ಮ ಕ್ರಿಕೆಟ್‌ ಕೆರಿಯರ್‌ನ ಹೇಗೆ ಅಳೆಯುವಿರಿ?
ಅದು ಕಷ್ಟಸಾಧ್ಯ. ಹಿಂದಿನ ದಿನಗಳಲ್ಲಿ ಕೆಲವು ಒಳ್ಳೆಯವು. ಇನ್ನು ಕೆಲವು ಕೆಟ್ಟವು. ಕೆಲವು ಪರವಾಗಿಲ್ಲ ಅನ್ನುವಂಥವು. ಕಲಿತದ್ದು ಸಾಕಷ್ಟು ಅಂದುಕೊಳ್ಳುವಷ್ಟರಲ್ಲಿ ಕಲಿಯಬೇಕಾದ್ದು ಬೇಕಾದಷ್ಟಿರುತ್ತದೆ. ನನ್ನ ಆಟದ ಕೆಲವು ವಿಭಾಗಗಳು ತೃಪ್ತಿ ಕೊಟ್ಟಿವೆ. ಇನ್ನು ಕೆಲವು ಬೇಜಾರು ಮಾಡಿರುವುದೂ ಉಂಟು. ಆಟದಲ್ಲಿ ಒಳ್ಳೆ ಅಡಿಪಾಯ ಹಾಕಿಕೊಂಡಿದ್ದೇನೆ. ಮುಂದಿನ ದಿನಗಳ ಅವಕಾಶ ಉಪಯೋಗಿಸಿಕೊಂಡು ಯಶಸ್ಸಿನ ಕಟ್ಟಡ ಕಟ್ಟಲು ಪ್ರಯತ್ನಿಸುವೆ.

ಭಾರತೀಯ ಕ್ರಿಕೆಟ್ಟನ್ನು ಇನ್ನಷ್ಟು ಹರಳುಗಟ್ಟುವಂತೆ ಮಾಡುವುದರಲ್ಲಿ ಒಬ್ಬ ಹಿರಿಯ ಆಟಗಾರ ಹಾಗೂ ಉಪ ನಾಯಕನಾಗಿ ನಿಮ್ಮ ಪಾತ್ರವೇನು?
ನನ್ನ ದೃಷ್ಟಿಯಲ್ಲಿ ಉಪ ನಾಯಕನ ಪಟ್ಟ ಯಾವುದೇ ಹಿರಿಯ ಆಟಗಾರನ ಜವಾಬ್ದಾರಿಗಿಂತ ಹೊರತಾಗೇನೂ ಇರುವುದಿಲ್ಲ. ಹೊಸ ಪ್ರತಿಭಾನ್ವಿತರಿಗೆ ಬೆನ್ನು ತಟ್ಟುವುದು ನಮ್ಮಂಥ ಹಿರಿಯ ಆಟಗಾರರಿಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಈಚಿನ ದಿನಗಳಲ್ಲಂತೂ ಸಾಕಷ್ಟು ಹೊಸಬರು ಬರುತ್ತಿದ್ದಾರೆ. ಚೆನ್ನಾಗಿ ಆಡುತ್ತಲೂ ಇದ್ದಾರೆ. ಇಂಥವರನ್ನು ಪ್ರೋತ್ಸಾಹಿಸುವ ವಾತಾವರಣವನ್ನು ನನ್ನಂಥವರು ಸೃಷ್ಟಿಸಬೇಕು.

ಒಂದು ತಿಂಗಳ ಕಾಲ ಕ್ರಿಕೆಟ್‌ ಆಡದಂತೆ ನಿಮ್ಮನ್ನು ಕಾಡಿದ ತೊಂದರೆಯ ಬಗ್ಗೆ ಹೇಳುತ್ತೀರಾ?
ನನಗೆ ಆಗಿದ್ದ ತೊಂದರೆಯನ್ನು ತಪರಾಕಿಪೆಟ್ಟು (slapped lesion) ಅಂತ ಕರೆಯುತ್ತಾರೆ. ಅದು ಮೊದಲ ಹಂತದಲ್ಲಿತ್ತು. ಶಸ್ತ್ರಚಿಕಿತ್ಸೆಯನ್ನು ತಡೆಯುವುದು ಸಾಧ್ಯ ಅಂತ ಸರ್ಜನ್‌ ಹೇಳಿದರು. ಅವರು ಹೇಳಿದ ತಾಲೀಮು ಮಾಡಿದೆ. ಈಗ ಯಾವುದೇ ತೊಂದರೆಯಿಲ್ಲ. ಆರಾಮಾಗಿದ್ದೇನೆ.

ವಿಶ್ವ ಕಪ್‌ ಹತ್ತಿರಾಗುತ್ತಿದೆ. ಸಾಕಷ್ಟು ಕ್ರಿಕೆಟ್‌ ಆಟ ಎಲ್ಲೆಡೆ. ಭುಜದ ಆರೈಕೆ ಅತ್ಯಗತ್ಯ. ಅದನ್ನು ನೀವು ಹೇಗೆ ಮಾಡುತ್ತೀರಿ?
ದಿನ ನಿತ್ಯ ವ್ಯಾಯಾಮ ಮಾಡುತ್ತೇನೆ. ಜೊತೆಗೆ ಸರ್ಜನ್‌ ಸೂಚಿಸಿರುವ ಕೆಲವು ಕಸರತ್ತುಗಳನ್ನೂ ಮಾಡುತ್ತೇನೆ. ಇದರಿಂದ ಭುಜಗಳು ಫಿಟ್‌ ಆಗಿರುತ್ತವೆ. ಜಿಂಬಾಬ್ವೆ ವಿರುದ್ಧ ಆಡಿದ ಪಂದ್ಯಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿವೆ. ಈಗ ನಾನು ಸಂಪೂರ್ಣ ಫಿಟ್‌.

ಬ್ಯಾಟಿಂಗ್‌ ಮೊನಚು ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ಏನು ಮಾಡಬೇಕಾಗುತ್ತದೆ?
ಸದಾ ಕಲಿಯುವುದು. ಕಲಿತದ್ದನ್ನು ಆಟದಲ್ಲಿ ಅಳವಡಿಸಿಕೊಳ್ಳುವುದು. ಅವಕಾಶ ಇರುವ ಕಡೆ ಹೊಸ ಪ್ರಯೋಗಗಳನ್ನು ಮಾಡುವುದು. ಇವುಗಳಲ್ಲಿ ಕೆಲವು ಯಶಸ್ವಿಯಾಗುತ್ತವೆ. ಇನ್ನು ಕೆಲವು ಫಲಿಸುವುದಿಲ್ಲ. ನಿರಂತರವಾಗಿ ಕಲಿಯುವುದು ಇದ್ದೇ ಇರುತ್ತದೆ.

ಪ್ರಜ್ಞಾಪೂರ್ವಕವಾಗಿ ನೀವು ನೆಟ್‌ನಲ್ಲಿ ಹೊಡೆತಗಳನ್ನು ಅಭ್ಯಾಸ ಮಾಡುತ್ತೀರಾ?
ಹೌದು. ಹೊಡೆತಗಳನ್ನು ಅಭ್ಯಾಸ ಮಾಡದೆಯೇ ನೇರವಾಗಿ ಪಂದ್ಯದಲ್ಲಿ ಜಾರಿಗೆ ತರುವುದು ಕಷ್ಟ. ಪೂರ್ವಾಭ್ಯಾಸ ತೀರಾ ಅವಶ್ಯ.

ಟೀಕೆಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ? ಅವುಗಳು ನಿಮ್ಮ ಮೇಲೆ ಒತ್ತಡ ಹೇರುವುದಿಲ್ಲವೇ?
Dravid : still a cricket student !ಇಲ್ಲ, ಟೀಕೆಗಳು ಒತ್ತಡ ಹೇರುವುದಿಲ್ಲ. ನಾನು ಕಣಕ್ಕೆ ಹೋದಾಗ ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಕಡೆಗೇ ಮನಸ್ಸಿಟ್ಟಿರುತ್ತೇನೆ. ಟೀಕೆಗಳಿರಬೇಕು. ಅವುಗಳಲ್ಲಿ ಕೆಲವು ಸಮಂಜಸವಾಗಿರುತ್ತವೆ, ಕೆಲವು ಅಸಮಂಜವಾಗಿರುತ್ತವೆ. ಕಾಲ ಕಾಲಕ್ಕೆ ನನ್ನ ಆಟದ ತಪ್ಪುಗಳನ್ನು ತಿದ್ದಿಕೊಳ್ಳಲೇಬೇಕಾಗುತ್ತದೆ. ಟೀಕೆಗಳ ಒತ್ತಡ ಯಾವತ್ತೂ ನನ್ನನ್ನು ಘಾಸಿಗೊಳಿಸಿಲ್ಲ. ಆರು ವರ್ಷಗಳಿಂದ ನನ್ನ ಆಟದಲ್ಲಿ ತಪ್ಪು- ಒಪ್ಪುಗಳನ್ನು ಅನುಭವಿಸಿದ್ದೇನೆ. ಕಲಿಯಬೇಕು, ಆಮೇಲೆ ಒಳ್ಳೆಯ ಶಾಟ್‌ ಹೊಡೆದ ಹೆಮ್ಮೆಯ ಅನುಭವ ಪಡೆಯಬೇಕು ಅನ್ನುವುದು ನನ್ನ ಜಾಯಮಾನ. ಬೇರೆಯ ಒತ್ತಡಗಳಿಗೆ ಕೇರ್‌ ಮಾಡೋಲ್ಲ.

ಎರಡು ತಿಂಗಳ ವಿಂಡೀಸ್‌ ಪ್ರವಾಸದ ಬಗೆಗೆ ನಿಮ್ಮ ಅಭಿಪ್ರಾಯಗಳೇನು?
ಅದೊಂದು ಒಳ್ಳೆಯ ಅನುಭವವಾಗಲಿದೆ. 6 ವರ್ಷಗಳಿಂದ ನಾವು ವಿಂಡೀಸ್‌ ಪ್ರವಾಸ ಮಾಡಿರಲಿಲ್ಲ. ಆಗಿನ ಪ್ರವಾಸ ಖುಷಿ ಕೊಟ್ಟಿತ್ತು. ಈಗಲೂ ಅದೇ ನಿರೀಕ್ಷೆಯಲ್ಲಿದ್ದೇನೆ. ನಮ್ಮ ತಂಡ ಸಮತೋಲಿತವಾಗಿದೆ. ಮೊದಲಿನಿಂದಲೇ ಅಂದುಕೊಂಡಂತೆ ಕ್ಲಿಕ್‌ ಆದರೆ, ಗೆಲುವು ನಮ್ಮದೇ.

ರಾಹುಲ್‌ ದ್ರಾವಿಡ್‌ ಬ್ಯಾಟಿಂಗ್‌ ಭಾರತಕ್ಕಿಂತ ವಿದೇಶಗಳಲ್ಲಿ ಚೆನ್ನಾಗಿರುತ್ತದೆ ಎನ್ನುತ್ತಾರೆ. ನಿಜವೇ?
ಭಾರತಕ್ಕಿಂತ ವಿದೇಶದಲ್ಲಿ ನನ್ನ ರೆಕಾರ್ಡ್‌ ಚೆನ್ನಾಗಿದೆ. ಆದರೆ ಇಬ್ಬರು ರಾಹುಲ್‌ ದ್ರಾವಿಡ್‌ ಇರೋಕೆ ಸಾಧ್ಯವಿಲ್ಲ. ವಿದೇಶಗಳಲ್ಲಿ ನಾನು ಚೆನ್ನಾಗಿ ಆಡುತ್ತೇನೆಂದರೆ, ಅತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತದೆ. ವಿಂಡೀಸ್‌ ಪ್ರವಾಸದ ನಂತರ ಇಂಗ್ಲೆಂಡಿಗೂ ಹೋಗುವುದರಿಂದ ಈ ಅಂಶ ಒಳ್ಳೆಯದೇ ಅಲ್ಲವೇ?


ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವಕಪ್‌ 2003ರ ಬಗ್ಗೆ ಏನಂತೀರಿ?
ಆ ಬಗ್ಗೆ ಅನಿಸಿಕೆ ಹೇಳಲು ಇನ್ನೂ ಕಾಲವಿದೆ. ವಿಶ್ವ ಕಪ್‌ ನಡೆಯಲು ಇನ್ನೂ ಒಂದು ವರ್ಷವಿದೆ. ಎರಡೂ ವಿದೇಶೀ ಪ್ರವಾಸಗಳ ನಂತರ ನಾವು ಅದರ ಬಗ್ಗೆ ಗಂಭೀರವಾಗಿ ಚಿಂತಿಸಿ, ಸಿದ್ಧರಾಗುತ್ತೇವೆ. ಮಾನಸಿಕ ಸಿದ್ಧತೆ ಈಗಾಗಲೇ ಶುರುವಾಗಿರುವುದು ನಿಜ.

ಅಂತರರಾಷ್ಟ್ರೀಯ ಕ್ರಿಕೆಟ್ಟಿನ ಒತ್ತಡದಿಂದ ಮನಸ್ಸನ್ನು ಹೊರ ತರಲು ಏನು ಮಾಡುತ್ತೀರಿ?
ಸಂಗೀತ ಕೇಳುತ್ತೀನಿ. ಪುಸ್ತಕ ಓದುತ್ತೀನಿ. ಗೆಳೆಯರ ಜೊತೆ ಕಾಲ ಕಳೀತೀನಿ. ಇಂಥಾ ಲೇಖಕನೇ ಆಗ ಬೇಕು ಎಂದೇನಿಲ್ಲ. ಯಾವ ಪುಸ್ತಕವಾದರೂ ಸರಿ, ಓದಬೇಕು ಅನ್ನಿಸಿದರೆ ಓದಿಬಿಡುತ್ತೇನೆ.

ಇಷ್ಟೆಲ್ಲಾ ಸುತ್ತಾಡಿರುವ ನಿಮಗೆ ಇಷ್ಟವಾಗುವ ಆಹಾರ ಯಾವುದು?
ಭಾರತೀಯ ಅಡುಗೆ; ಅದೂ ಮನೆಯಲ್ಲಿ ಮಾಡಿದ್ದು :)

ಭಾರತೀಯ ತಂಡದ ಮೋಸ್ಟ್‌ ಎಲಿಜಬ್‌ಲ್‌ ಬ್ಯಾಚುಲರ್‌ ಎನಿಸಿಕೊಂಡಿರುವ ನೀವು ಯಾರನ್ನಾದರೂ ಮೆಚ್ಚಿ, ಹೃದಯ ಕೊಡುವುದು ಯಾವಾಗ?
ಸದ್ಯಕ್ಕೆ ಆ ಯೋಚನೆ ಇಲ್ಲ. ಸಿಕ್ಕಾಪಟ್ಟೆ ಕ್ರಿಕೆಟ್‌ ಆಡುತ್ತಿದ್ದೇನೆ. ಅದರಲ್ಲೇ ನನ್ನ ಮನಸ್ಸು.

ಭಾರತೀಯ ಕ್ರಿಕೆಟ್‌ನ ಅಭಿವೃದ್ಧಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಲಿ ಇನ್ನೂ ಏನೇನು ಮಾಡಬಹುದು?
ಈಗ ಭಾರತ ಎ ತಂಡವನ್ನು ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಕಳಿಸಿಕೊಟ್ಟಿದೆ. ಈ ರೀತಿ ಪ್ರವಾಸ ಕಳಿಸುವುದನ್ನು ಮುಂದುವರಿಸಬೇಕು. ಯುವ ಕ್ರಿಕೆಟಿಗರು ತಾಯ್ನೆಲದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿ ಯಾವ ಮಟ್ಟದಲ್ಲಿ ಆಡುತ್ತಾರೆಂಬುದನ್ನು ತಿಳಿಯಬಹುದು. ಒಂದು ವೇಳೆ ತಂಡ ಸೋತರೂ ಪರವಾಗಿಲ್ಲ, ಹೊಸಬರಿಗೆ ಕಲಿಯಲು ಹೊಸ ವೇದಿಕೆ ಸಿಕ್ಕಂತಾಗುತ್ತದೆ.

ರಣಜಿ, ದುಲೀಪ್‌ ಟ್ರೋಫಿ ಕ್ರಿಕೆಟ್‌ಗಳಿಗೆ ಒಳ್ಳೆಯ ಪಿಚ್‌ಗಳನ್ನು ಸಿದ್ಧ ಪಡಿಸುವುದರ ಕಡೆಗೂ ಮಂಡಳಿ ಗಮನ ಹರಿಸಬೇಕು. ಜೊತೆಗೆ ಭಾರತದ ಎಲ್ಲಾ ಕಡೆ ಅಭ್ಯಾಸಕ್ಕೆ ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲ. ಕೆಲವು ಕಡೆ ತುಂಬಾ ಚೆನ್ನಾಗಿದ್ದರೆ, ಇನ್ನು ಕೆಲವು ಕಡೆ ಸಾಲದು. ಕ್ರಿಕೆಟಿಗರಿಗೆ ಸರಿಯಾದ ಅಭ್ಯಾಸ ಬಹಳ ಮುಖ್ಯ. ಇದರ ಕಡೆಗೆ ಮಂಡಳಿ ಆಸಕ್ತಿ ವಹಿಸಬೇಕು.

ವೃತ್ತಿಪರ ಅಂಪೈರ್‌ಗಳು ಹಾಗೂ ರೆಫರಿಗಳನ್ನು ನಿಯೋಜಿಸುವ ಐಸಿಸಿ ನಿರ್ಧಾರ ಕುರಿತು ಏನು ಹೇಳುತ್ತೀರಿ?
ಅದು ನನ್ನ ಅನುಭವಕ್ಕೆ ಬಂದ ನಂತರವಷ್ಟೇ ಹೇಳಲು ಸಾದ್ಯ. ಇನ್ನು 6 ತಿಂಗಳ ನಂತರ ಈ ಪ್ರಶ್ನೆ ಕೇಳಿದರೆ ಸರಿಯಾಗಿ ಉತ್ತರ ಕೊಡಬಹುದೇನೋ? ಅದು ಯಶಸ್ವಿಯಾದರೂ ಆಗಬಹುದು.

ಯಶಸ್ವಿಯಾದರೆ, ಸ್ಥಳೀಯ ಕ್ರಿಕೆಟ್‌ನಲ್ಲೂ ಈ ಪದ್ಧತಿ ಜಾರಿಗೆ ತರುವುದು ಒಳ್ಳೆಯದೇ?
ಖಂಡಿತ. ಆದರೆ ವೃತ್ತಿಪರರನ್ನು ನಿಯೋಜಿಸಲು ತಗಲುವ ವೆಚ್ಚ ಮತ್ತಿತರ ಅಂಶಗಳ ಬಗ್ಗೆ ನನಗೆ ಗೊತ್ತಿಲ್ಲ. ಸಾಧ್ಯವಾಗುವುದಾದರೆ ಮಂಡಳಿ ಇದನ್ನು ಜಾರಿಗೆ ತರಲು ಪ್ರಯತ್ನಿಸಲಿ.

Post Your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more