• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವರ ಬದುಕೇ ಒಂದು ನಾಟಕ ರಂಗ ...

By Staff
|

Special tribute to B.V.Karanthಬಂಟ್ವಾಳದ ಪಾಣೆ ಮಂಗಳೂರು ಬಳಿ ‘ಮಂಚಿ ಕೊಪ್ಪಳ್ಳಿ’ (ಬಾಬುಕೋಡಿ)ಯ ಹತ್ತು ಹಲವು ಪ್ರತಿಭೆಯ ಕಾರಂತರು ಬಡತನ ಕುಟುಂಬದಲ್ಲಿ ಹುಟ್ಟಿದರೂ ಸಾಂಸ್ಕೃತವಾಗಿ ಸಿರಿವಂತ ಮನೆತನದವರು. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಕಾರಂತರ ಪಾಲಿಗೆ ವರದಾನವಾಗಿತ್ತು . ಓದು, ಸಂಗೀತ, ನಾಟಕದ ಕಡೆ ಹೆಚ್ಚು ಗಮನ ಹರಿಸಿದ ಕಾರಂತರು ಕೊನೆಗೆ ಆಯ್ದುಕೊಂಡದ್ದು ರಂಗಭೂಮಿಯನ್ನು.

ಮೈಸೂರಿಗೆ ಸಂಗೀತ ಕಲಿಯಲು ಬಂದ ಕಾರಂತರು ಹೊಕ್ಕಿದ್ದು ಗುಬ್ಬಿ ಕಂಪನಿ ಬಿಡಾರಕ್ಕೆ. ಹಾಡಲಿಕ್ಕೆ ಸೇರಿ ಸ್ತ್ರೀ ಪಾತ್ರಗಳನ್ನೂ ಮಾಡಿ ನಂತರ ರಂಗ ಸಂಗೀತಕ್ಕೆ ವಿಶಿಷ್ಟ ಆಯಾಮ ಒದಗಿಸಿದರು. ಹಿಂದಿ ಚೆನ್ನಾಗಿ ಕಲಿತರು. ಗುಬ್ಬಿ ಕಂಪನಿ ಮುಚ್ಚಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಸ್ತರಿಕೆಗೆ ಸೇರಿದರು. ಹಿಂದಿಯಲ್ಲೇ ಬಿಎ ಮುಗಿಸಿ ಎಂಎ ಪದವಿಯನ್ನೂ ಪಡೆದರು. ಪ್ರೇಮಾ ಅವರನ್ನು ಕೈ ಹಿಡಿದರು.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ‘ದಿಶಾಂತರ್‌’ ರಂಗ ಸಮೂಹ ರೂಪಿಸಿದರು. ಗಿರೀಶ್‌ ಕಾರ್ನಾಡರ ‘ಹಯ ವದನ’, ‘ಹಿಟ್ಟಿನ ಹುಂಜ’, ‘ತುಘಲಕ್‌’ , ಶ್ರೀರಂಗರ ‘ಕೇಳು ಜನಮೇಜಯ’ , ‘ರಂಗ ಭಾರತ’, ‘ಕತ್ತಲೆ ಬೆಳಕು’ ಹಾಗೂ ಶಿವರಾಮ ಕಾರಂತರ ‘ಯಕ್ಷಗಾನ’ ಸೇರಿದಂತೆ 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದರು.

60-70 ರ ದಶಕಗಳಲ್ಲಿ ಬೆಂಗಳೂರು, ಹೆಗ್ಗೋಡು ಹಾಗೂ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ರಂಗಭೂಮಿಯನ್ನು ಚಳವಳಿ ಮಾದರಿಯಲ್ಲಿ ಮುನ್ನಡೆಸಿದರು. ಶ್ರೇಷ್ಠ ನಾಟಕಕಾರರಾದ ಶ್ರೀರಂಗ, ಸಂಸ, ಕಾರ್ನಾಡ್‌, ಲಂಕೇಶ್‌, ಬಿಎಂಶ್ರೀ, ಕಂಬಾರ, ಪ್ರಸನ್ನ , ಜಿ.ಬಿ.ಜೋಶಿ, ಚಂಪಾ, ಕುವೆಂಪು, ಷೇಕ್ಸ್‌ಪಿಯರ್‌, ಇಬ್ಸನ್‌, ಬರ್ನಾಡ್‌ ಷಾರ ನಾಟಕಗಳು ಸೇರಿದಂತೆ ಸುಮಾರು 104 ನಾಟಕಗಳನ್ನು ನಿರ್ದೇಶಿಸಿದರು. ಇವುಗಳಲ್ಲಿ ಇಟಾಲಿಯನ್‌, ಹಿಂದಿ, ಗುಜರಾತಿ, ತೆಲುಗು, ಮರಾಠಿ, ಬಂಗಾಳಿ, ಗ್ರೀಕ್‌ ಹಾಗೂ ಸಂಸ್ಕೃತ ನಾಟಕಗಳೂ ಸೇರಿವೆ. ಅನೇಕ ನಾಟಕಗಳಿಗೆ ಕಾರಂತರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಧ್ವನಿ ಬೆಳಕು ಪ್ರದರ್ಶನ, ನಾಲ್ಕು ಸಿನಿಮಾಗಳ ನಿರ್ದೇಶನ, ಸಾಕ್ಷ್ಯಚಿತ್ರಗಳ ತಯಾರಿ, 25 ಸಿನಿಮಾಗಳಿಗೆ ಸಂಗೀತ ನಿರ್ದೇಶನ... ಹೀಗೆ ಸಾಗುತ್ತದೆ ಕಾರಂತರ ಸಾಧನೆಯ ಹಾದಿ. 1989 ರಿಂದ 95 ರವರೆಗೆ ರಾಷ್ಟ್ರೀಯ ಸಂಗೀತ ಶಾಲೆ ನಿರ್ದೇಶಕರಾಗಿದ್ದರು. ಕರ್ನಾಟಕ ಸರ್ಕಾರದ ರಂಗಶಾಲೆ ‘ರಂಗಾಯಣ’ದ ಮೊದಲ ನಿರ್ದೇಶಕರಾಗಿ ಕನ್ನಡ ರಂಗಭೂಮಿಯ ಬೆಳವಣಿಗೆಗೂ ಕಾರಣರಾದರು.

‘ಗೋಕುಲ ನಿರ್ಗಮನ, ಈಡಿಪಸ್‌, ಸತ್ತವರ ನೆರಳು, ವಿಗಡ ವಿಕ್ರಮರಾಯ, ದಾರಿ ಯಾವುದಯ್ಯ ವೈಕುಂಠಕೆ, ಹಯವದನ, ಸಂಕ್ರಾಂತಿ, ಮಿಸ್‌ ಸದಾರಮೆ, ಅಶ್ವತ್ಥಾಮನ್‌, ಜೋಕುಮಾರಸ್ವಾಮಿ, ಟಿಂಗರ ಬುಡ್ಡಣ್ಣ , ಚಂದ್ರಹಾಸ’ ಇತ್ಯಾದಿ ನಾಟಕಗಳು ಕಾರಂತರ ಸ್ಪರ್ಶದಲ್ಲಿ ಹೊಸ ಅರ್ಥಗಳನ್ನು ಪಡೆದುಕೊಂಡವು. ನೀನಾಸಂ, ತಿಪಟೂರಿನ ಪ್ರೋಥಿಯೋ ಹಾಗೂ ಬೆಂಗಳೂರಿನ ನೇಪಥ್ಯ ತಂಡಗಳಿಗಾಗಿಯೂ ಕಾರಂತರು ನಾಟಕ ನಿರ್ದೇಶಿಸಿದ್ದರು.

ಹಿಂದಿಯ ‘ಅಂಧೇರಿ ನಗರಿ ಚೌಪಟ್‌ ರಾಜಾ’, ‘ಕಿಂಗ್‌ ಲಿಯರ್‌’, ‘ಸ್ಕಂದಗುಪ್ತ’ ನಾಟಕಗಳನ್ನು ನಿರ್ದೇಶಿಸಿದ್ದರು. ವಂಶವೃಕ್ಷ , ತಬ್ಬಲಿಯು ನೀನಾದೆ ಮಗನೆ ಹಾಗೂ 1975 ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಚೋಮನದುಡಿ ಚಲನಚಿತ್ರಗಳಲ್ಲಿ ಸಹ ನಿರ್ದೇಶಕರಾಗಿದ್ದರು.

1979 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , 1981 ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಕಾರಂತರಿಗೆ ಸಂದವು. ಕರ್ನಾಟಕ ಸರ್ಕಾರ ನೀಡುವ ಗುಬ್ಬಿ ವೀರಣ್ಣ ಹಾಗೂ ಮಧ್ಯಪ್ರದೇಶ ಸರ್ಕಾರದ ಕಾಳಿದಾಸ್‌ ಸಮ್ಮಾನ್‌ ಪ್ರಶಸ್ತಿಗಳೂ ಕಾರಂತ ಪ್ರತಿಭೆಗೆ ಸಂದಿವೆ.

ದೇಶಾದ್ಯಂತ ನೂರಾರು ಶಿಷ್ಯರನ್ನು ತಯಾರು ಮಾಡಿದ್ದ ಕಾರಂತರು ಸದಾ ಪ್ರಯೋಗಶೀಲರಾಗಿಯೇ ಇದ್ದವರು. ಬೆನಕ ಮಕ್ಕಳ ನಾಟಕ ತಂಡ ಅವರ ಪ್ರಯೋಗ ಶೀಲತೆಗೆ ಮತ್ತೊಂದು ಸಾಕ್ಷಿ .

ಯಾರಾದರೂ ನಿಧನರಾದಾಗ ‘ತುಂಬಲಾರದ ನಷ್ಟ’ ಎಂದು ಹೇಳುವುದು ವಾಡಿಕೆ. ಆದರೆ, ಕಾರಂತರ ನಿಧನ ಮಾತ್ರ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟ ಅನ್ನುವುದರಲ್ಲಿ ಬೇರೆ ಮಾತೇ ಇಲ್ಲ . ಕನ್ನಡ ಸಾಹಿತ್ಯಕ್ಕೊಬ್ಬರೇ ಶಿವರಾಮ ಕಾರಂತ; ಕನ್ನಡ ರಂಗಭೂಮಿಗೊಬ್ಬರೇ ಬಿ.ವಿ.ಕಾರಂತ.

ವಾರ್ತಾ ಸಂಚ-ಯ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more