ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ನಾಡಿನ ಸರ್ವಜ್ಞ : ತಿರುವಳ್ಳುವರ್‌

By Super
|
Google Oneindia Kannada News

ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪಿಸಬೇಕು ಎನ್ನುವುದು ವೀರಪ್ಪನ್‌ ಬೇಡಿಕೆಗಳಲ್ಲಿ ಒಂದು. ಕಾಡುಗಳ್ಳ ಕವಿಯಾದದ್ದಕ್ಕೆ ನಮ್ಮಲ್ಲಿ ವಾಲ್ಮೀಕಿಯಂಥವರ ಉದಾಹರಣೆ, ಕಾಡುಗಳ್ಳ ಕರಗಿದ್ದಕ್ಕೆ ಅಂಗುಲಿಮಾಲಾ ಅಂಥವರ ಸಾಕ್ಷಿಯಿದೆ. ಆದರೆ ಕಾಡುಗಳ್ಳನಿಗೆ ಕವಿತ್ವ ರುಚಿಸಿದ್ದಕ್ಕೆ ಉದಾಹರಣೆ ಕಮ್ಮಿ. ಅದು ಹೇಗೋ ಏನೋ ವೀರಪ್ಪನ್‌ ಎಂಬ ದಂತಚೋರನಿಗೆ ಕೃದಂತಗಳ ಕೃತಿಗಳು ಇಷ್ಟವಾಗಿದ್ದು ಪವಾಡವೇ ಸರಿ. ಅಥವಾ ವೀರಪ್ಪನ ತಿರುವಳ್ಳುವರ್‌ ಆಸಕ್ತಿ , ನಮ್ಮ ರಾಜಕಾರಣಿಗಳ ಕಾವ್ಯಾಸಕ್ತಿಯಂತೆ ಹುಸಿಯಿರಬಹುದೇ ?

ಅಂದಹಾಗೆ ಈ ತಿರುವಳ್ಳುವರ್‌ ಯಾರು ? ಅವನ ಪ್ರತಿಮೆಯನ್ನೇಕೆ ಕರ್ನಾಟಕದಲ್ಲಿ ಸ್ಥಾಪಿಸಬೇಕು . ಪ್ರತಿಮೆ ಇಟ್ಟೊಡನೆ ಪ್ರತಿಮಾತ್ಮಕವಾಗಿ ಬರೆಯುವ ಕವಿ ಜನಮನದಲ್ಲಿ ನೆಲೆ ನಿಲ್ಲುತ್ತಾನೆಯೇ ?

ಈ ಎಲ್ಲ ಪ್ರಶ್ನೆಗಳನ್ನು ಬದಿಗಿಟ್ಟು ತಿರುವಳ್ಳುವರ್‌ ಚರಿತ್ರೆಯನ್ನು , ಕವಿತೆಯನ್ನೂ ಗಮನಿಸೋಣ :

ವಳ್ಳುವರ್‌ ನಮ್ಮ ಸರ್ವಜ್ಞನ ತರಹದ ಕವಿ. ಅವನ ಹೆಸರಿನ ಮುಂದೆ ಕನ್ನಡದ ಶ್ರೀ-ತಮಿಳಿನ ತಿರು -ಸೇರಿ ತಿರುವಳ್ಳುವರ್‌ ಆಗಿರುವ ಈತನ ಕಾಲಮಾನದ ಬಗ್ಗೆ ಯಾರಿಗೂ ಸ್ಪಷ್ಟ ಕಲ್ಪನೆ ಇದ್ದಂತಿಲ್ಲ. ಕ್ರಿಸ್ತಪೂರ್ವ ಎರಡನೇ ಶತಮಾನ ಹಾಗೂ ಕ್ರಿಸ್ತ ಶಕ ಎಂಟನೆಯ ಶತಮಾನದ ನಡುವಣ ಅವಧಿಯಲ್ಲಿ ಬದುಕಿದ್ದ ಎಂದು ಇತಿಹಾಸಕಾರರು ಊಹಿಸುತ್ತಿರುವ ತಿರುವಳ್ಳುವರ್‌ ಹುಟ್ಟೂರು ಮದ್ರಾಸಿನ ಮೈಲಾಪುರ. ಈತನ ತಂದೆ ಬ್ರಾಹ್ಮಣ, ತಾಯಿ ಹರಿಜನರಾಕೆ ಎಂದೂ, ಈತನ ತಂದೆ ನೇಕಾರನೆಂದೂ, ವಳ್ಳುವನಾಡಿನ ರಾಜನಾಗಿದ್ದ ಎಂದೂ ವದಂತಿಗಳು ಹೇಳುತ್ತವೆ. ಆದರೆ ಸಾಕ್ಷಿಯಾಗಿ ಉಳಿದಿರುವುದು ಚೆನ್ನೈನಲ್ಲಿರುವ ದೇವಸ್ಥಾನ ಮಾತ್ರ.

ತಿರುವಳ್ಳುವರ್‌ ಬರೆದದ್ದು ದ್ವಿಪದಿಗಳನ್ನು . ಅಂಥ 1330 ದ್ವಿಪದಿಗಳ ಸಂಕಲನದ ಹೆಸರು ತಿರುಕ್ಕುರಳ್‌ . ಅವು ದ್ವಿಪದಿಗಳಾಗಿಯೇ ಪ್ರಸಿದ್ಧವಾಗಿದ್ದರೂ ಅವನ್ನು ಬರೆಯುವ ಹೊತ್ತಿಗೆ ತಿರುವಳ್ಳುವರ್‌ ತಲೆಯಲ್ಲಿದ್ದದ್ದು ತ್ರಿಪದಿಗಳೇ ಇರಬೇಕು. ಅದಕ್ಕೇ ಆತ ಅದನ್ನು 'ಮೂಪ್ಪಾಲ್‌' ಎಂದೂ ಕರೆದ. ಪುರುಷಾರ್ಥಗಳ ಪೈಕಿ ಧರ್ಮ,ಅರ್ಥ ಹಾಗೂ ಕಾಮಗಳನ್ನು ಆತ ತನ್ನ ಕವಿತೆಗೆ ವಸ್ತು ಮಾಡಿಕೊಂಡ . ಈ ಮೂರನ್ನು ಪಾಲಿಸಿದವನಿಗೆ ನಾಲ್ಕನೆಯದು ಮೋಕ್ಷ , ತಾನೇ ತಾನಾಗಿ ಸಿಗುತ್ತದೆ ಎಂದ.

ಮೂರೂ ವಿಭಾಗದ ತಿರುವಳ್ಳುವರ್‌ ಕವಿತೆಗಳ ಆಯ್ದ ಅನುವಾದಗಳು ಇಲ್ಲಿವೆ. ಇವು ನಿಮಗೆ ಇಷ್ಟವಾಗುವುದಕ್ಕೆ ಅವುಗಳ ಸರಳತೆಯೂ ಕಾರಣವಿರಬಹುದು.

LOVE IS SWEETER THAN WINE
ITS MERE THOUGHT INTOXICATES

ಪ್ರೇಮ ಮದಿರೆಗಿಂತಲೂ ಮಧುರ
ನೆನಪೆ ಅಮಲೇರಿಸುವುದು ಗೆಳೆಯ

ಮೂರ್ಖನ ಸ್ನೇಹವದು ಮಧುರ ಗೊತ್ತಾ ?
ಮುರಿದರೆ ಆಗದು ನೋವು ನಷ್ಟ !

ಅರಿತುದನು ಆಡದ ಅರಿತವರು
ಅತ್ತರಿಲ್ಲದ ಹೂವುಗಳಂತೆ ಘಮ ಘಮಿಸರು

ಅವಳ ಕಣ್ಣುಗಳಲ್ಲಿ ಬಿಡುಗಡೆಯ ಭಾವ
ಕೈಗಳು ಇನ್ನೂ ನನ್ನ ನಡುವ ಬಿಡಲೊಲ್ಲವು

ಹಿಂದೆ ತಿಂದುದು ಅರಗಿದ ನಂತರವೇ
ಮತ್ತೆ ತಿನ್ನುವವನು ನಿರೋಗಿ

ವೈದ್ಯ ಗಮನಿಸಬೇಕು ರೋಗಿಯನ್ನಷ್ಟೇ ಅಲ್ಲ
ಅವನ ರೋಗ ಹಾಗೂ ಕಾಲ.

ಗೆದ್ದರೂ ಮುಟ್ಟಬೇಡ ಚದುರಂಗದ ದಾಳ
ಗೆಲುವು ನಿನ್ನನ್ನು ಸೆಳೆಯುವ ಗಾಳ

ಅವಸರದಲ್ಲಿ ಸ್ನೇಹ ಮಾಡು
ವಿರಾಮದಲ್ಲಿ ದುಃಖಪಡು

ಹೋಗ್ತಾ ಇದ್ರೂ ನಮ್‌ ಪ್ರಾಣ, ಮಾಡಬಾರದು ಪ್ರಾಣಾಪಹರಣ - ಇದು ತಿರುವಳ್ಳುವರ್‌ ಇನ್ನೊಂದು ರಚನೆ . ಆದರೆ ಅವನನ್ನು ಪೂಜಿಸುವ ಮಂದಿಗೆ ಅವನೇನು ಬರೆದಿದ್ದಾನೆ ಎಂದು ಗೊತ್ತಿಲ್ಲ. ಕೆಟ್ಟವನಿಗೆ ಒಳ್ಳೆಯ ಕೆಲಸ ಮಾಡುವ ಮೂಲಕ ಶಿಕ್ಷೆ ಕೊಡು ಎಂದೂ ಆತ ಬರೆದಿದ್ದಾನೆ.

ಆತನ ಪ್ರತಿಮೆಗಾಗಿ ಹೋರಾಟ ನಡೆಸುವವರ ಹೃದಯದಲ್ಲಿ ಅವನು ಬರೆದ ಸಾಲುಗಳು ನಿಲ್ಲಲಿ. ಅವನ ಚಿಂತನೆ ಅರ್ಥವಾಗಲಿ. ಆತ ರಾಜಕೀಯದ ದಾಳವಾಗುವ ಬದಲು, ಎಲ್ಲರ ಚಾಂಚಲ್ಯವೆಂಬ ಮೀನಿಗೆ ಗಾಳವಾಗಲಿ.

English summary
Thitruvallvar the poet and a reformer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X