ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಅಧ್ಯಾಯಕ್ಕೆ ತೆರೆ

By Staff
|
Google Oneindia Kannada News

ಒಂದು ದಿನ ಇದ್ದಕ್ಕಿದ್ದಂತೆ ಮನೆಬಿಟ್ಟು ಬಂದ ಏಳರ ಹುಡುಗನಿಗೆ ಅಂಥ ಸಮಸ್ಯೆಗಳೇನಿರಲಿಲ್ಲ . ಆಗ ತಾನೆ ಜಗತ್ತಿನ ಬಗ್ಗೆ ಅರಳುಕಂಗಳಾಗಿದ್ದ ಆ ಹುಡುಗ ಮನೆಬಿಟ್ಟು ಬರಲಿಕ್ಕೆ ಇದ್ದ ಪ್ರಬಲವಾದ ಆಕರ್ಷಣೆ- ‘ವೀರಪಾಂಡ್ಯ ಕಟ್ಟಬೊಮ್ಮನ್‌ ಬೀದಿ ನಾಟಕ’!

ಬ್ರಿಟಿಷರ ವಿರುದ್ಧ ಸಿಡಿದೇಳುವ ಪಾಳೇಗಾರನ ಕಥೆ ಹುಡುಗನಿಗೆ ಹುಚ್ಚುಹಿಡಿಸಿತ್ತು . ಮನೆ ಬಿಟ್ಟು ಬಂದ ಅದೇ ಹುಡುಗ ಮುಂದೊಂದು ದಿನ ಸಿನಿಮಾದಲ್ಲಿ ಕಟ್ಟಬೊಮ್ಮನ್‌ ಪಾತ್ರವನ್ನು ವಹಿಸಿ ತಮಿಳುನಾಡಿನಾದ್ಯಂತ ಮನೆ ಮಾತಾದ. 1950 ರ ಸುಮಾರಿಗೆ ನಡೆದ ಕೈರೋ ಚಿತ್ರೋತ್ಸವದಲ್ಲಿ ಕಟ್ಟಬೊಮ್ಮನ್‌ ಪಾತ್ರಕ್ಕಾಗಿ ‘ಆಫ್ರೋ- ಏಷ್ಯನ್‌’ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದುಕೊಂಡ. ಜೀವಂತ ದಂತಕಥೆಯಾದ ಆತನ ಹೆಸರು ಶಿವಾಜಿ ಗಣೇಶನ್‌ ಉರುಫ್‌ ವಿಜುಪುರಂ ಚಿನ್ನಯ್ಯ ಗಣೇಶನ್‌.

20 ರ ಯುವಕ ಶಿವಾಜಿಗೆ ಬ್ರೇಕ್‌ ಕೊಟ್ಟಿದ್ದು ‘ಪರಾಶಕ್ತಿ ’ ಸಿನಿಮಾದ ಪಾತ್ರ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಸಿನಿಮಾದಲ್ಲಿ ಸಾಹಿತಿಯಾಗಿ ಭವಿಷ್ಯ ಅರಸುತ್ತಿದ್ದ ದಿನಗಳವು. ಕರುಣಾನಿಧಿ ಚಿತ್ರಿಸಿದ್ದ ಆಂದಿನ ಜನಪ್ರಿಯ ನಾಯಕರು ನಟಿಸಲು ಒಲ್ಲದ ನಾಸ್ತಿಕ ಯುವಕನ ಪಾತ್ರದಲ್ಲಿ ನಟಿಸಿದ ಶಿವಾಜಿ ಅಪಾರ ಜನಪ್ರಿಯತೆಯನ್ನೂ , ಸ್ಟಾರ್‌ಗಿರಿಯನ್ನೂ ಪಡೆದರು. ಆನಂತರ ಶಿವಾಜಿ ಹಿಂದೆ ನೋಡಲಿಲ್ಲ . ನಾಲ್ಕು ದಶಕಗಳ ಕಾಲ ಅವರೊಳಗಿನ ನಟ ಎತ್ತರದ ಮಜಲುಗಳನ್ನು ಮುಟ್ಟುತ್ತಲೇ ಸಾಗಿದ್ದ.

ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದ ಶಿವಾಜಿ ಗಣೇಶನ್‌ ಜುಲೈ 21 ರ ರಾತ್ರಿ 74 ನೇ ವಯಸ್ಸಿನಲ್ಲಿ ಹೃದಯ ತೊಂದರೆಯಿಂದ ಕೊನೆಯುಸಿರೆಳೆದಾಗ ಅವರ ವೃತ್ತಿ ಜೀವನದ ಅಕೌಂಟಿನಲ್ಲಿದ್ದುದು 300 ಸಿನಿಮಾ ಮಾತ್ರ. ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು. ಬಿ.ಆರ್‌.ಪಂತುಲು ಅವರ ಕನ್ನಡದ ಸ್ಕೂಲ್‌ಮಾಸ್ಟರ್‌ ಸಿನಿಮಾದಲ್ಲಿನ ಅವರ ಪಾತ್ರ ಕನ್ನಡಿಗರ ಮನಸ್ಸಿನಲ್ಲಿ ಸದಾ ಗುಂಗುಡುತ್ತಲೇ ಇರುತ್ತದೆ. ಪಂತುಲು ಅವರ ಮತ್ತೊಂದು ಸಿನಿಮಾ ಮಕ್ಕಳರಾಜ್ಯದಲ್ಲೂ ಅವರು ನಟಿಸಿದ್ದರು. ಒಂಭತ್ತು ಪಾತ್ರಗಳಲ್ಲಿ ಅಭಿನಯಿಸಿದ ನವರಾತ್ರಿ, ಪ್ರಾಯೋಗಿಕ ಸಿನಿಮಾ ಅಂತನಾಲ್‌, ಗೌರವಂ, ಕರ್ಣನ್‌ ಮುಂತಾದ ಸಿನಿಮಾಗಳಲ್ಲಿ ಅವರು ಮಿಂಚಿದ್ದರು.

ಶಿವಾಜಿ ಹೆಸರು ಮಾಡಿದ್ದು ಕಟ್ಟಬೊಮ್ಮನ್‌ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವಿ.ಒ.ಚಿದಂಬರಂ ಪಿಳ್ಳೈ ಅಂತಹ ಪಾತ್ರಗಳಲ್ಲಿ . ನಿರರ್ಗಳ ಹಾಗೂ ಅಸ್ಖಲಿತ ಡೈಲಾಗ್‌ ಡೆಲಿವರಿಗೆ ಹೆಸರಾಗಿದ್ದ ಶಿವಾಜಿ 800 ಸಾಲುಗಳ ಸಂಭಾಷಣೆಯನ್ನು ‘ರಾಜರಾಣಿ’ ಸಿನಿಮಾಕ್ಕಾಗಿ ಒಂದೇ ಟೇಕ್‌ನಲ್ಲಿ ಹೇಳಿದ್ದರು ಎಂದು ಸಿನಿಮಾ ನೆನಪುಗಳನ್ನು ಮೆಲುಕು ಹಾಕುವಾಗ ಕರುಣಾನಿಧಿ ಈಗಲೂ ಹೇಳುತ್ತಿರುತ್ತಾರೆ.

ಶಿವಾಜಿ ಅನ್ನುವ ಹೆಸರು ಅವರಿಗೆ ಅಂಟಿಕೊಂಡಿದ್ದು ಇನ್ನೊಂದು ಕಥೆ. ಎಂ.ಜಿ. ರಾಮಚಂದ್ರನ್‌ ತಿರಸ್ಕರಿಸಿದ ಮರಾಠ ಸರದಾರ ಶಿವಾಜಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಗಣೇಶನ್‌ ಆ ಸಿನಿಮಾದ ನಂತರ ಶಿವಾಜಿ ಗಣೇಶನ್‌ ಎಂದೇ ಪ್ರಸಿದ್ಧರಾದರು. ಕಂಚಿ ಪರಮಾಚಾರ್ಯ ಅವರಿಂದ ಪ್ರಭಾವಿತರಾಗಿದ್ದ ಶಿವಾಜಿ, ‘ತಿರುವರುಚೆಲ್ವರ್‌’ ಸಿನಿಮಾದಲ್ಲಿ ಆಪ್ಪಾರ್‌ ಪಾತ್ರ ವಹಿಸಿ ಸೈ ಅನ್ನಿಸಿಕೊಂಡಿದ್ದರು.

ಸೀತೆ, ನೂರ್‌ ಜಹಾನ್‌ ಅಂತಹ ಸ್ತ್ರೀಪಾತ್ರಗಳಿಂದ ಶುರುವಾದ ನಟನೆ ಶಿವಾಜಿ ಅವರನ್ನು ಕಟ್ಟಬೊಮ್ಮನ್‌ವರೆಗೆ ಕೊಂಡೊಯ್ಯಿತು. ಅವರ ರಂಗಬದುಕು ಶುರುವಾಗಿದ್ದು ಮಧುರೈನ ಶ್ರೀ ಬಾಲಗಂಗ ಸಭಾ ಮೂಲಕ. ಪ್ರಾಥಮಿಕ ಶಿಕ್ಷಣಕ್ಕೆ ತೃಪ್ತಿ ಹೊಂದಿದ ಗಣೇಶನ್‌ ಕಲಾರಂಗದಲ್ಲಿ ಮಾತ್ರ ಕೊನೆತನಕ ಹೊಸತನಕ್ಕಾಗಿ ತಹತಹಿಸುತ್ತಿದ್ದರು. ಅವರೇ ಹೇಳುವಂತೆ ‘ಕಲೆ ಅಕ್ಷಯಪಾತ್ರೆಯಂತೆ. ಕಡಲಿದ್ದಂತೆ’. ಶಿವಾಜಿ ಗಣೇಶನ್‌ ಇಂದು ನಮ್ಮೊಡನಿಲ್ಲ . ಆದರೆ, ಹುಟ್ಟುವ ಪ್ರತಿಯಾಬ್ಬ ನಟನ ಕದಲಿಕೆಯಲ್ಲೂ ಅವರಿರುತ್ತಾರೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X