ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಮೀರಿಸಿದ ಮಗ!

By Staff
|
Google Oneindia Kannada News

ಜೂನಿಯರ್‌ ಶಂಕರ್‌ ಪ್ರತಿಭೆಯಲ್ಲಿ ವಾಮನ. ಅಪ್ಪ ಪ್ರೊ.ಶಂಕರ್‌ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ. ಅಮ್ಮ ಲಕ್ಷ್ಮಿಗೂ ಯಕ್ಷಿಣಿ ಅಚ್ಚುಮೆಚ್ಚು . ಆ ಕಾರಣದಿಂದಲೇ ಜೂ.ಶಂಕರ್‌ಗೆ ಹುಟ್ಟಿನಿಂದಲೇ ಜಾದೂ ಕರಗತ.

ಮನೆ ಮಂದಿಯಿಂದ ತೇಜಸ್ವಿ ಎಂದು ಕರೆಸಿಕೊಳ್ಳುವ ಜೂ.ಶಂಕರ್‌ ಹುಟ್ಟಿದ್ದು 1978 ನೇ ಇಸವಿ ಜುಲೈ 29 ರಂದು. ಬಿಸಿನೆಸ್‌ ಮೇನೇಜ್‌ಮೆಂಟ್‌ನಲ್ಲಿ ಪದವಿ(1999). ಕಂಪ್ಯೂಟರ್‌ ಅಪ್ಲಿಕೇಶನ್ಸ್‌ನಲ್ಲಿ ಸ್ನಾತಕೋತ್ತರ ಪದವಿ. ಆದರೆ, ತೇಜಸ್ವಿಗೆ ಹೆಚ್ಚು ಇಷ್ಟವಾದದ್ದು ಮ್ಯಾಜಿಕ್ಕು. ಜಾದೂಗಾರನ ಮಗ ಜಾದೂಗಾರನಾಗಬೇಕೆನ್ನುವುದು ಅವರ ಲಾಜಿಕ್ಕು.

ಎರಡೂವರೆ ವರ್ಷದ ಹುಡುಗನಾಗಿದ್ದಾಗಿನಿಂದಲೇ ಮ್ಯಾಜಿಕ್ಕೆಂದರೆ ತೇಜಸ್ವಿ ಕಣ್ಣರಳಿಸುತ್ತಿದ್ದ . ಅಪ್ಪನ ಜಾದೂಗೆ ಅಳು ಮರೆಯುತ್ತಿದ್ದ . ತೇಜಸ್ವಿ ಮೊದಲ ಪ್ರದರ್ಶನ ನೀಡಿದ್ದು ನವಂಬರ್‌ 14, 1981 ರಂದು. ಅಂದು ಮಕ್ಕಳ ದಿನ. ತೇಜಸ್ವಿಗೆ ಆಗಿನ್ನೂ ಮೂರು ವರ್ಷ. ಆದರೆ, ಆ ಪ್ರದರ್ಶನ ನೋಡಿದ ಮಣಿಪಾಲದ ಜನತೆ ಬೆಕ್ಕಸ ಬೆರಗಾಗಿತ್ತು . ಎಳೆ ವಯಸ್ಸಿನಲ್ಲಿ ಹಿರಿದನ್ನು ಸಾಧಿಸಿದ ಸಾಧಕರ ಯಾದಿಯಲ್ಲಿ ತೇಜಸ್ವಿ ಅವರನ್ನೂ ಸೇರಿಸಬೇಕೆಂದು ಅಮೆರಿಕಾದ ಜಾದೂಗಾರ ಡೌಗ್‌ ಹೆನ್ನಿಂಗ್‌ ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಶಿಫಾರಸ್ಸು ಮಾಡಿದ್ದರು. ಜೂನಿಯರ್‌ ಶಂಕರ್‌ : ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು.

ಭಾರತ ಮಾತ್ರವಲ್ಲದೆ ಅಮೆರಿಕಾ, ಯುಎಇ, ಬಹರೈನ್‌, ಮಸ್ಕತ್‌, ಜರ್ಮನಿ, ಇಂಗ್ಲೆಂಡ್‌, ಹಾಲೆಂಡ್‌ ಹಾಗೂ ಸ್ವಿಟ್ಜರ್‌ಲೆಂಡ್‌ಗಳಲ್ಲಿ ಜ್ಯೂ. ಶಂಕರ್‌ ಪ್ರದರ್ಶನ ನೀಡಿದ್ದಾರೆ. ಸಾವಿರಾರು ಪ್ರದರ್ಶನಗಳನ್ನು ನೀಡಿರುವ ಅವರು, ಅಮೆರಿಕಾದ ಮಡಿಸನ್‌ ಅವೆನ್ಯೂ(Madison Avenue)ನಲ್ಲಿ , ಭಾರತದ ಸ್ವಾತಂತ್ರ್ಯೋತ್ಸವ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ 50 ಸಾವಿರ ಮಂದಿಯ ಎದುರು ಜಾದೂ ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. 1982 ರಲ್ಲಿ ಹೌಸ್ಟನ್‌ನಲ್ಲಿ ಜರುಗಿದ ಅಮೆರಿಕನ್‌ ಜಾದೂಗಾರರ ಸಮಾಜ ಸಮ್ಮೇಳನದಲ್ಲೂ ಶಂಕರ್‌ ಭಾಗವಹಿಸಿದ್ದರು. ವಿಶ್ವದ ಅತಿ ಕಿರಿಯ ಜಾದೂಗಾರ ಎನ್ನುವ ಗೌರವ ಅವರಿಗೆ ಪ್ರಾಪ್ತವಾಗಿದ್ದು ಅಲ್ಲಿಯೇ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಮಾಜಿ ರಾಷ್ಟ್ರಪತಿಗಳಾದ ಶಂಕರ್‌ ದಯಾಳ್‌ ಶರ್ಮ ಹಾಗೂ ಗ್ಯಾನಿ ಜೇಲ್‌ಸಿಂಗ್‌ರ ಸಮ್ಮುಖದಲ್ಲಿ ಪ್ರದರ್ಶನ ನೀಡಿದ ಅಗ್ಗಳಿಕೆ ಜೂ. ಶಂಕರ್‌ ಅವರದು. ಅಖಿಲ ಭಾರತ ಬಾಲ ಜಾದೂಗಾರರ ಸ್ಪರ್ಧೆ ಸೇರಿದಂತೆ 1986 ರಿಂದ ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲಾ ಜೂ. ಶಂಕರ್‌ಗೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ . 1991 ರಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ- ಅಂತರರಾಷ್ಟ್ರೀಯ ಜಾದೂಗಾರರ ಸಮ್ಮೇಳನದಲ್ಲಿ ಜ್ಯೂರಿಗಳ ವಿಶೇಷ ಪ್ರಶಸ್ತಿಗೆ ಜೂ. ಶಂಕರ್‌ ಪಾತ್ರರಾಗಿದ್ದರು.

ಅಂದಹಾಗೆ, ಅಂತರರಾಷ್ಟ್ರೀಯ ಜಾದೂಗಾರರ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಅನ್ನುವ ಅಗ್ಗಳಿಕೆ ಇವರದು. 1996 ರಲ್ಲಿ ನೆದರ್‌ಲ್ಯಾಂಡ್‌ನ ಲೀವಾರ್ಡನ್‌ನಲ್ಲಿ ಪ್ರದರ್ಶನ ಹಾಗೂ ಭಾರತೀಯ ಜಾದೂ ಬಗೆಗೆ ಉಪನ್ಯಾಸ ನೀಡಿದ ಅಗ್ಗಳಿಕೆಯೂ ಜೂ.ಶಂಕರ್‌ ಅವರದೇ. 1991 ರಲ್ಲಿ ಮದ್ರಾಸ್‌ನ ತೆಲುಗು ಅಕಾಡೆಮಿ ಉಗಾದಿ ಪುರಸ್ಕಾರಂ ಪ್ರಶಸ್ತಿ ನೀಡಿ ಗೌರವಿಸಿದೆ. ಶಿಷ್ಯ ಗುರುವನ್ನು ಮೀರಿಸಬೇಕಂತೆ, ಮಗ ಅಪ್ಪನನ್ನು. ಈ ಮಟ್ಟಿಗೆ ಪ್ರೊ.ಶಂಕರ್‌ ತೃಪ್ತರು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X