ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಳ ಅಂತಸ್ತಿನಲ್ಲಿರುವ ಈತ ನಮ್ಮ ನಡುವಿನ ಮಹಡಿ ಮನುಷ್ಯ

By Staff
|
Google Oneindia Kannada News

ಬೆಂಗಳೂರು : ಮನೆಗಳಲ್ಲಿ ಮಹಡಿ ಮನೆ ಹೇಗೋ, ಮರಗಳಲ್ಲಿದು ಮಹಡಿ ಮರ. ಕವಿ ಜಿ.ಎಸ್‌. ಶಿವರುದ್ರಪ್ಪ ತೆಂಗಿನ ಮರವನ್ನು ವರ್ಣಿಸುವುದು ಹೀಗೆ. ಈ ಸಾಲನ್ನ ನಿಮಗೆ ನಾವೀಗ ನೆನಪಿಸಲು ಕಾರಣವೆಂದರೆ ಈಚೆಗೆ ಮಾಧ್ಯಮದ ಕಣ್ಣಿಗೆ ಬಿದ್ದ ಮಹಡಿ ಮನುಷ್ಯ. ತುಂಬಾ ಉದ್ದ ಬೆಳೆಯುವುದನ್ನು ಅಂಗವಿಕಲತೆ ಎನ್ನುವುದಾದರೆ ಈತನನ್ನು ಹಾಗೇ ಕರೆಯಬೇಕು. ಏಕೆಂದರೆ ಈತನ ಎತ್ತರ 7 ಅಡಿ 3 ಇಂಚು. ಹೆಸರು ಸಂತೋಷ್‌. ಊರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದ್ಗಲ್‌ ಎಂಬ ಹಳ್ಳಿ.

ಎತ್ತರದ್ದೇ ಸಮಸ್ಯೆ ಎದುರಿಸುತ್ತಿರುವ ಸಂತೋಷ್‌, ಬಸ್ಸಿಗೆ, ರೈಲಿಗೆ ಹತ್ತಲು, ಇಳಿಯಲು ತುಂಬಾ ಸರ್ಕಸ್ಸು ಮಾಡಬೇಕು. ಕಾರಿಗಂತೂ ಅಡ್ಡಡ್ಡ ಮಾತ್ರ ಹತ್ತಲು ಸಾಧ್ಯ. ವಿಚಿತ್ರ ಆದರೂ ಸತ್ಯ ಎಂಬಂತೆ ಸಂತೋಷ ಅವನ ಲಿಂಗಸೂಗೂರು ಮನೆಗೆ ಹೋಗುವುದೇ ಕಷ್ಟ . ಮನೆ ಬಾಗಿಲು ಇವನ ಎತ್ತರಕ್ಕಿಂತ ಕುಳ್ಳ. ಪಾಪ, ಅವರ ಪೂರ್ವಿಕರಿಗೇನು ಗೊತ್ತು ಸಂತೋಷ ಈ ಪಾಟಿ ಬೆಳೆಯುತ್ತಾನೆಂದು. ಒಳ್ಳೆ ಸುದ್ದಿ ಏನೆಂದರೆ ಆತ ಇನ್ನು ಮುಂದೆ ಬೆಳೆಯುವುದಿಲ್ಲವಂತೆ. ಬೆಳೆಯುವ ವಯಸ್ಸು ಸಂತೋಷನಿಗೆ ಕಳೆದಿದೆ, ಪುಣ್ಯಕ್ಕೆ.

ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ವೇಳೆಯಲ್ಲಿ , ಈಗ ಭಾರಿ ನೀರಾವರಿ ಸಚಿವರಾಗಿರುವ ಎಚ್‌. ಕೆ. ಪಾಟೀಲ್‌ ಕಣ್ಣಿಗೆ ಬಿದ್ದ ಪರಿಣಾಮವಾಗಿ ಈತನ ಕೀರ್ತಿ ಕರ್ನಾಟಕಾದ್ಯಂತ ಹಬ್ಬಿತು. ಇಲ್ಲದಿದ್ದರೆ ಈತ ಎಲೆಮರೆಯ ಕಾಯಿಯಂತೆ ತನ್ನೂರಲ್ಲೇ ಉಳಿಯುತ್ತಿದ್ದ. ಸಾಮಾನ್ಯವಾಗಿ ನಮ್ಮ ಕಡೆ, ನಿಮ್ಮ ಕಡೆಯೂ ಸಹ ಉದ್ದ ಇದ್ದವರನ್ನು ಊದನಕಡ್ಡಿ ಎಂತಲೂ, ಚನ್ನಗಿರಿ ಗಳ ಎಂತಲೂ ಅಥವಾ ಅಡಿಕೆ ಮರ ಎಂದು ತಮಾಷೆಗೆ ರೇಗಿಸುವುದುಂಟು. ಕ್ರೀಡೆಗಳಲ್ಲಿ ಆಸಕ್ತಿ ಉಳ್ಳವರು, ಬ್ಯಾಸ್ಕೆಟ್‌ ಬಾಲ್‌ ಆಡಯ್ಯ ಎಂದು ಸಲಹೆ ನೀಡಿ, ಬೆನ್ನು ತಟ್ಟುವುದುಂಟು. ಹಾಗೇನಾದರೂ ಆಗಿದ್ದರೆ, ಈತ ವಿಶ್ವಶ್ರೇಷ್ಠ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಉಳಿಯುತ್ತಿದ್ದ. ಅಮೆರಿಕ ಅಂಥ ಕಡೆ ಇದ್ದಿದ್ದರೆ ಚೆನ್ನಾಗಿ ಪ್ರಾಕ್ಟೀಸ್‌ ಮಾಡಿ ಮ್ಯಾಜಿಕ್‌ ಜಾನ್‌ಸನ್‌ ಜತೆ ಬ್ಯಾಸ್ಕೆಟ್‌ಬಾಲ್‌ ಆಡುತ್ತಿದ್ದ. ಎನ್‌ ಬಿ ಎ ಟೂರ್ನಿಗಳಲ್ಲಿ ಬ್ಯಾಸ್ಕೆಟ್‌ ಪ್ರಿಯರಿಗೆ ಇನ್ನಷ್ಟು ಹುಚ್ಚು ಹಿಡಿಸುತ್ತಿದ್ದ. ಆದರೆ ಕಂಡೆಯಾ ಇಂದು ಇಂಡಿಯಾ. ತುತ್ತು ಕೊಡುವ ನೌಕರಿಗಾಗಿ ಇವತ್ತು ಸಂತೋಷ ಅಧಿಕಾರಸ್ಥರ ನೆಲೆಗಳ ಕದ ತಟ್ಟುತ್ತಿದ್ದಾನೆ.

ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪಾಟೀಲರಿಗೆ ಹಾರ ಹಾಕಲು ಬಂದ ಈತ ಜನರ ಗುಂಪಿನ ನಡುವೆ ದೂರದಲ್ಲೆಲ್ಲೊ ನಿಂತಿದ್ದರೂ ಕೂಡ ಪಾಟೀಲರ ಗಮನವನ್ನು ತನ್ನ ಎತ್ತರದ ನಿಲುವಿನಿಂದ ಸೆಳೆದ. ಚುನಾವಣೆ ಸಮಯ ತಾನೆ... ಸಚಿವರು ಕೆಲಸ ಕೊಡಿಸುವ ಭರವಸೆ ಕೊಟ್ಟರು ಅಂತ ಊರು ಬಿಟ್ಟ. ಈಗ ಸಂತೋಷ್‌ ಬೆಂಗಳೂರು ತಲುಪಿದ್ದಾನೆ. ಸರಕಾರ ನಡೆಸುವ ಜನರಲ್‌ ಹಾಸ್ಟೆಲ್‌ನಲ್ಲಿ ದಿನ ನೂಕುತ್ತಾ , ಬಂದೀತೋ ಬಾರದೋ ಅಂತಾ ನೌಕರಿಯ ಆದೇಶಕ್ಕಾಗಿ ಕಾಯುತ್ತಿದ್ದಾನೆ.

ಕಳೆದ ಹದಿನೈದು ದಿನಗಳಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಸಂತೋಷ್‌, ತನ್ನ ಊರಿನಿಂದ ಬೆಂಗಳೂರು ತಲುಪಲು ಮಾಡಿದ ಖರ್ಚು ಒಂದೂವರೆ ಸಾವಿರ ರುಪಾಯಿಗಳು ಮಾತ್ರ. ಕೆಲಸ ಸಿಕ್ಕಿತೆಂದು ಕೊಳ್ಳಿ, ಆದೇಶ ಪಡೆದು ಊರಿಗೆ ಹಿಂದಿರುಗಬೇಕೆಂದರೂ ಮತ್ತೆ ಆತ ಅಷ್ಟೇ ಹಣಕ್ಕೆ ಪರದಾಡಬೇಕಿದೆ. ಪ್ರೌಢ ಶಿಕ್ಷಣ ಮುಗಿಯುವವರೆಗೂ ಇತರ ಎಲ್ಲ ಹುಡುಗರಂತಿದ್ದ ಸಂತೋಷ್‌, ದಿಢೀರನೆ ಬೆಳೆಯಲು ಪ್ರಾರಂಭಿಸಿದ್ದು 16ನೇ ವಯಸ್ಸಿನಲ್ಲಿ. ನಂತರ ವಿವಿಧ ಕಾರಣಕ್ಕಾಗಿ ಶಾಲೆಗೆ ನಮಸ್ಕಾರ ಹಾಕಿ ಹೊಟ್ಟೆ ಪಾಡಿಗಾಗಿ ಗ್ರಾನೈಟ್‌ ಪಾಲಿಷಿಂಗ್‌ ಕಾರ್ಖಾನೆಯಲ್ಲಿ ಕೆಲಸ ಹಿಡಿದ.

ಬಡಕುಟುಂಬದಲ್ಲಿ ಹುಟ್ಟಿದ ಸಂತೋಷ ತನ್ನನ್ನೇ ಮೆಚ್ಚಿದ ಐದೂವರೆ ಅಡಿ ಎತ್ತರದ ಹುಡುಗಿಯನ್ನು ವರಿಸಿ ಗೃಹಸ್ಥಾಶ್ರಮಕ್ಕೂ ಕಾಲಿಟ್ಟಿದ್ದಾನಂತೆ. ಸಂತೋಷ್‌ ಕುಮಾರ್‌ಗೆ 5 ಜನ ಅಕ್ಕಂದಿರು, ಮೂವರು ತಮ್ಮಂದಿರು. ಅಕ್ಕಂದಿರ ಮದುವೆಯಾಗಿದೆ. ತಮ್ಮಂದಿರ ಜವಾಬ್ದಾರಿ ಸಂತೋಷ್‌ ಹೆಗಲ ಮೇಲಿದೆ. ಅಸ್ವಾಭಾವಿಕ ಎತ್ತರದ ಹಾಗೂ ಅಗಲವಾದ ಭುಜವುಳ್ಳ ಸಂತೋಷ ಆನಂದದಿಂದ ಈ ಭಾರ ಹೊರಲು ಸಿದ್ಧನಾಗಿದ್ದಾನೆ. ಆದರೆ ಅದಕ್ಕೊಂದು ನೌಕರಿ ಬೇಕಷ್ಟೇ.

ಪಾಟೀಲರು ಈತನ ಎತ್ತರ ಪೊಲೀಸ್‌ ಇಲಾಖೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ಸಂತೋಷನಿಗೆ ವಿಶೇಷ ನೇಮಕಾತಿ ಯೋಜನೆಯಡಿ ಕೆಲಸವೊಂದನ್ನು ಕೊಡಬಹುದು ಎಂದು ಚುನಾವಣೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರಂತೆ. ಅದಕ್ಕಾಗೇ ಬೆಂಗಳೂರಿಗೆ ಬರಲೂ ಹೇಳಿದ್ದರಂತೆ. ಆದರೆ ಸಂತೋಷ ಈ ಆಜಾನುಭಾಹು ದೇಹದೊಂದಿಗೆ ಓಡುವ ಸಾಮರ್ಥ್ಯ ಇಲ್ಲದವನಾಗಿದ್ದಾನೆ. ತನ್ನ ಭಾರೀ ದೇಹ ಹೊತ್ತು ಓಡುವುದು ಆತನಿಗೆ ಕಷ್ಟದ ಕೆಲಸವೇ ಸರಿ. ಇಲಾಖೆಯ ದೇಹದಾರ್ಢ್ಯ ಪರೀಕ್ಷೆಯಲ್ಲಿ ಈತ ಪಾಸಾಗುವುದೂ ಕಷ್ಟ. ಆದರೆ, ಗಲಭೆ, ದೊಂಬಿ, ಗುಂಪು ಘರ್ಷಣೆಗಳು ನಡೆಯುವ ಸ್ಥಳದಲ್ಲಿ ಈತ ಬೆತ್ತ ಹಿಡಿದು ನಿಂತರೇ ಸಾಕು ಗುಂಪು ಕಟ್ಟಿ ಗಲಭೆಗೆ ನಿಲ್ಲುವ ಮಂದಿ ಕಾಲಿಗೆ ಬುದ್ಧಿ ಹೇಳುತ್ತಾರೆ ಎನ್ನುವುದು ಕೆಲವರ ಅಭಿಪ್ರಾಯ.

ಈತನೂ, ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಶಯದಿಂದ ಬೆಂಗಳೂರಿಗೆ ಬಂದಿದ್ದಾನೆ. ವಿಧಾನಸೌಧದ ಮೆಟ್ಟಿಲುಗಳನ್ನೂ ಏರಿದ್ದಾನೆ. ಸಚಿವರ ಕೊಠಡಿಗಳ ದ್ವಾರವನ್ನು ತಟ್ಟುತ್ತಲೇ ಇದ್ದಾನೆ.

ಅಂದಹಾಗೆ, ಸಂತೋಷ್‌ಗೆ ನೌಕರಿ ಸಿಕ್ಕೀತೆ? ಪಾಟೀಲ್‌ ಮಾತು ಉಳಿಸಿಕೊಳ್ಳುವರೇ? ಕಾದು ನೋಡೋಣ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X