ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಧಾನಿಗೆ ಸಿಂಹಕಾವಲು !

By Staff
|
Google Oneindia Kannada News

ಕಾರಾಗೃಹದಲ್ಲಿ ನ ಹೆಡ್‌ ವಾರ್ಡರ್‌ ಹುದ್ದೆಗೆ ಸಂದರ್ಶನ. ಕೇಂದ್ರ ಕಾರಾಗೃಹದ ಸಹಾಯಕ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯ ಮುಂದೆ ನೂರಾರು ಜನ. ಸಂದರ್ಶನಾಕಾಂಕ್ಷಿಗಳ ಕಣ್ಣುಗಳಲ್ಲಿ ಕಾಮನಬಿಲ್ಲು . ಸಿಂಹದ ಗುಹೆಗೆ ಹೊಕ್ಕ ನರಿಯಂತೆ, ದೈಹಿಕ ಸಾಮರ್ಥ್ಯ ಪರೀಕ್ಷೆಯ ನಂತರ ಸಂದರ್ಶನ ಕೊಠಡಿಯಾಳಗೆ ಹೊಕ್ಕ ಪರೀಕ್ಷಾರ್ಥಿಗೆ ಒಮ್ಮೆಗೇ ಸಂಭ್ರಮಾಶ್ಚರ್ಯ. ಎದುರಿಗೆ ಆಜಾನುಬಾಹು ಶರೀರಿ- ಎಚ್‌.ಟಿ.ಸಾಂಗ್ಲಿಯಾನ!

ಅದು ಏಕ ವ್ಯಕ್ತಿ ಸಮಿತಿಯ ಸಂದರ್ಶನ. ಬೆಳಗ್ಗೆ 8 ಕ್ಕೆ ಸಂದರ್ಶನ ಕೊಠಡಿಯಾಳಗೆ ಕಾಲಿಟ್ಟ ಸಾಂಗ್ಲಿಯಾನ, ಮತ್ತೆ ಹೊರಬಂದದ್ದು ಶುರುರಾತ್ರಿ 8 ರ ನಂತರವೇ. ಕೆಲ ನಿಮಿಷಗಳಲ್ಲೇ ಸಂದರ್ಶನದ ಫಲಿತಾಂಶವೂ ಪ್ರಕಟ. ಎಲ್ಲ ಕರಾರುವಾಕ್ಕು, ಕನ್ನಡಿಯಷ್ಟು ಪಾರದರ್ಶಕ. ಅದು ಸಾಂಗ್ಲಿಯಾನ ಸ್ಟೈಲ್‌! ಆದರೆ, ಇನ್ನೇನು ಉದ್ಯೋಗಾಕಾಂಕ್ಷಿಗಳ ಕೈಗೆ ಆಯ್ಕೆ ಪತ್ರ ತಲುಪಬೇಕು, ಅಷ್ಟರಲ್ಲಿ ಇಡೀ ಆಯ್ಕೆ ಪ್ರಕ್ರಿಯೆ ರದ್ದಾಯಿತು. ಕಾರಾಗೃಹ ಸಹಾಯಕ ಪೊಲೀಸ್‌ ಮಹಾ ನಿರ್ದೇಶಕ ಹುದ್ದೆಯಿಂದ ಸಾಂಗ್ಲಿಯಾನ ಎತ್ತಂಗಡಿಯಾಗಿದ್ದರು. ಅದು ಸರ್ಕಾರದ ಸ್ಟೈಲ್‌!!

ಕಾಲನ ಹೊಳೆಯಲ್ಲಿ ಜನ ಮನ್ನಣೆ ಪಡೆದ ಸಾಂಗ್ಲಿಯಾನ ಅವರದ್ದು ಪ್ರವಾಹದ ವಿರುದ್ಧದ ಈಜು. ಈ ಪ್ರವಾಹದಲ್ಲಿ - ಇವತ್ತು ಸಾಂಗ್ಲಿಯಾನ ಮುಟ್ಟಿರುವುದು ಬೆಂಗಳೂರು ಮಹಾನಗರ ಪೊಲೀಸ್‌ ಕಮೀಷನರ್‌ ಹುದ್ದೆಗೆ. ರಾಜಧಾನಿಯ ಜನರಿಗೆ ತಾವಿನ್ನು ನೆಮ್ಮದಿಯ ನಿದ್ದೆ ಮಾಡಬಹುದು ಅನ್ನಿಸಿದ್ದರೆ ಆಶ್ಚರ್ಯವಿಲ್ಲ . ಆಶ್ವಾಸನೆಯನ್ನಂತೂ ಸಾಂಗ್ಲಿಯಾನ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವ ಕೊಡುಗೆ!

ರಾಜ್ಯೋತ್ಸವ ಮುನ್ನಾದಿನ (ಅ.31) ಬೆಂಗಳೂರು ಮಹಾನಗರ ಪೊಲೀಸ್‌ ಕಮೀಷನರ್‌ ಹುದ್ದೆಗೆ ಸಾಂಗ್ಲಿಯಾನ ಅವರ ನೇಮಕದ ಆದೇಶವನ್ನು ಹೊರಡಿಸುವ ಮೂಲಕ ಎಸ್‌.ಎಂ.ಕೃಷ್ಣ ಸರ್ಕಾರ ರಾಜಧಾನಿಯ ನಾಗರಿಕರಿಗೆ ಅರ್ಥಪೂರ್ಣ ಉಡುಗೊರೆಯನ್ನೇ ಕೊಟ್ಟಿದೆ. ನಗರ ಪೊಲೀಸ್‌ ಕಮೀಷನರ್‌ ಹುದ್ದೆಗೆ ಭಾರೀ ಸ್ಪರ್ಧೆಯೇ ಸೃಷ್ಟಿಯಾಗಿತ್ತು . ಎಸ್‌.ಎಂ. ಕೃಷ್ಣ ಸಾಂಗ್ಲಿಯಾನ ಬಗೆಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಸಾಂಗ್ಲಿಯಾನ ಅವರು ಮಣಿಪುರಕ್ಕೆ ವಾಪ್ಸಸಾಗುವರೆನ್ನುವ ಸುದ್ದಿ ದಟ್ಟವಾಗಿ ಹಬ್ಬಿತ್ತು . ವೀರಪ್ಪನ್‌ ಶಿಕಾರಿಗೆ ನಿಯೋಜಿತವಾಗಿರುವ ರಾಜ್ಯ ವಿಶೇಷ ಪೊಲೀಸ್‌ ಪಡೆಯ ಮುಖ್ಯಸ್ಥರಾದ ನಂತರ, ಸಾಂಗ್ಲಿಯಾನ ತೆರೆಮರೆಗೆ ಸರಿಯಲಾರಂಭಿಸಿದ್ದರು. ವೀರಪ್ಪನ್‌ ಶಿಕಾರಿ ವ್ಯರ್ಥ, ಆತನ ಶರಣಾಗತಿಗೆ ಯತ್ನಿಸುವುದೇ ಜಾಣತನ ಅನ್ನುವ ನಿರಾಶೆಯ ಮಾತುಗಳನ್ನು ಸಾಂಗ್ಲಿಯಾನ ಆಡಿದ್ದಾರೆನ್ನುವ ಸುದ್ದಿಗಳೂ ರಾಜ್ಯದಿಂದ ಸಾಂಗ್ಲಿಯಾನ ನಿರ್ಗಮನದ ಸುದ್ದಿಗೆ ಪುಷ್ಟಿ ಕೊಟ್ಟಿದ್ದವು. ಆದರೆ, ಬೆಂಗಳೂರು ಪೊಲೀಸ್‌ ಕಮೀಷನರ್‌ ಆಗಿ ಆಯ್ಕೆಯಾಗುವುದರೊಂದಿಗೆ ಸಾಂಗ್ಲಿಯಾನ ಅವರ ಕರ್ನಾಟಕ ವಾಸ ಮುಂದುವರಿದಂತಾಗಿದೆ.

ಸಾಂಗ್ಲಿಯಾನ! ಮನೆ ಮನೆಯ ಹೆಸರು ...

ಸಾಂಗ್ಲಿಯಾನ ಕನ್ನಡಿಗರಿಗೆ ಹೊಸ ಪರಿಚಯವೇನೂ ಅಲ್ಲ . ಜೀವಂತ ದಂತಕಥೆಯಾದವರು ಅವರು. ದಕ್ಷ ಅಧಿಕಾರಿಯೆಂದು ಒಂದೆಡೆ ಜನಪ್ರಿಯತೆ, ಇನ್ನೊಂದೆಡೆ ಶೀಘ್ರಕೋಪಿ, ಅಹಂಕಾರಿ, ಪ್ರಚಾರಪ್ರಿಯ ಎನ್ನುವ ಟೀಕೆಗಳನ್ನೂ ಎದುರಿಸಿದವರು. ಆದರೆ, ಸಾಂಗ್ಲಿಯಾನ ಪ್ರಾಮಾಣಿಕತೆ ಬಗೆಗೆ ಒಡಕು ಮಾತು ಯಾವತ್ತಿಗೂ ಕೇಳಿಸಿದ್ದಿಲ್ಲ .

ಅವರ ಹೆಸರಿನಲ್ಲೇ ಎರಡು ಸಿನಿಮಾ(ಸಾಂಗ್ಲಿಯಾನ ಹಾಗೂ ಸಾಂಗ್ಲಿಯಾನ ಭಾಗ-2) ತಯಾರಾಗಿ ಯಶಸ್ಸು ಕಂಡದ್ದು ಅವರ ಜನಪ್ರಿಯತೆಗೆ ಸಾಕ್ಷಿ. ಅಂದಹಾಗೆ, ಸಾಂಗ್ಲಿಯಾನ ಹುಟ್ಟಿದ್ದು ಮಿಜೋರಾಂನಲ್ಲಿ - ಜುಲೈ 1, 1943 ರಲ್ಲಿ . ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದ ಸಾಂಗ್ಲಿಯಾನ, ಪೊಲೀಸ್‌ ಇಲಾಖೆಗೆ ಸೇರಿದ್ದು-1967 ರ ಜುಲೈ 18 ರಂದು.

1967 ರ ಐಪಿಎಸ್‌ ಬ್ಯಾಚ್‌ನ ಸಾಂಗ್ಲಿಯಾನ ಕರ್ನಾಟಕಕ್ಕೆ ಬಂದದ್ದು 1968 ರಲ್ಲಿ . ಅಂದಿನಿಂದ ಇಂದಿನವರೆಗೆ ಯಾವ ಪ್ರಕರಣದಲ್ಲೂ ಹೆಸರು ಕೆಡಿಸಿಕೊಳ್ಳದಿರುವುದು ಅವರ ಅಗ್ಗಳಿಕೆ. 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ಸ್ಪರ್ಧಿಸಿದಾಗ, ಗುಲ್ಬರ್ಗಾದಿಂದ ಚಿಕ್ಕಮಗಳೂರಿಗೆ ರಾಜ್ಯ ಸರ್ಕಾರ ಅವರನ್ನು ವರ್ಗಾಯಿಸಿದ್ದು , ಸಾಂಗ್ಲಿಯಾನ ಸಾಮರ್ಥ್ಯಕ್ಕೊಂದು ಪುರಾವೆ. 80 ರ ಸುಮಾರಿಗೆ ಪಾವಗಡದಲ್ಲಿ ಮಕ್ಕಳನ್ನು ಹೊತ್ತೊಯ್ಯುವ ತೋಳಗಳ ಗುಲ್ಲು ಕಾಣಿಸಿಕೊಂಡಾಗ, ಅಲ್ಲಿನ ಜನ ಸಾಂಗ್ಲಿಯಾನ ಅವರನ್ನು ಪಾವಗಡಕ್ಕೆ ರವಾನಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದದ್ದೂ ಉಂಟು.

ದೇವರಾಜು ಅರಸು ಮುಖ್ಯಮಂತ್ರಿಗಳಾಗಿದ್ದ ಸಮಯ. ಮೈಸೂರಿನಲ್ಲಿ ಶವ ಸಂಸ್ಕಾರವೊಂದರಲ್ಲಿ ಅರಸು ಭಾಗಿಯಾಗಿದ್ದರು. ಬಳಿಯಲ್ಲಿದ್ದ ಸಾಂಗ್ಲಿಯಾನ ಅವರಿಗೆ ಹೂ ಹಾರವೊಂದನ್ನು ಒದಗಿಸುವಂತೆ ಅರಸು ಸೂಚಿಸಿದರು. ಹಾರವೇನೋ ಬಂತು, ಬಿಲ್‌ ಮಾತ್ರ ಮುಖ್ಯಮಂತ್ರಿಗಳ ಮನೆಗೆ ತಲುಪಿತು. ಆ ಎದೆಗಾರಿಕೆ ಸಾಂಗ್ಲಿಯಾನ ಅವರದ್ದು. ಸೇವಾ ಶ್ರೇಷ್ಠತೆಗೆ ಬಾಂಗ್ಲಾದೇಶ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶೌರ್ಯ ಪದಕವನ್ನು ಸಾಂಗ್ಲಿಯಾನ ಪಡೆದಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ , ಗುಲ್ಬರ್ಗಾ ಹಾಗೂ ಬೆಂಗಳೂರುಗಳಲ್ಲಿ ಕಾರ್ಯ ನಿರ್ವಹಿಸಿರುವ ಸಾಂಗ್ಲಿಯಾನ- ಬೆಂಗಳೂರು ನಗರ ಸಂಚಾರಿ ಡಿಸಿಪಿ, ಆಹಾರ ವಿಭಾಗದ ಡಿಐಜಿ, ರೈಲ್ವೆ ಎಡಿಜಿ, ಕೆಎಸ್‌ಆರ್‌ಪಿ, ಕೇಂದ್ರ ಕಾರಾಗೃಹದ ಎಡಿಜಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1982 ರಲ್ಲಿ ಜಪಾನಿನ ಟೋಕಿಯೋಗೆ ತೆರಳಿ ಅಲ್ಲಿನ ಸಾರಿಗೆ ನಿರ್ವಹಣೆ ಪದ್ಧತಿಯನ್ನು ಅಧ್ಯಯನ ಮಾಡಿದ ಸಾಂಗ್ಲಿಯಾನ, ನಗರ ಸಂಚಾರ ವ್ಯವಸ್ಥೆಗೆ ಹೊಸ ದಿಕ್ಕು ನೀಡಲು ಪ್ರಯತ್ನಿಸಿದ್ದರು. ಆದರೆ, ಹೆಚ್ಚು ಕಾಲ ಒಂದೇ ಕಡೆ ಅವರು ಉಳಿಯಲಿಲ್ಲ .

ಪೊಲೀಸ್‌ ಇಮೇಜ್‌ ಬದಲಿಸುತ್ತೇನೆ

ನಗರ ಪೊಲೀಸ್‌ ಕಮೀಷನರ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಸಾಂಗ್ಲಿಯಾನ ಹೇಳಿದ್ದು-
ಬೆಂಗಳೂರು ಪೊಲೀಸರ ಇಮೇಜ್‌ ಬದಲಿಸುವುದು ನನ್ನ ಗುರಿ. ನನ್ನ ಜವಾಬ್ದಾರಿ ಏನೆಂಬುದು ನನಗೆ ಗೊತ್ತು. ಅದೇನೂ ಚಿಕ್ಕದಲ್ಲ . ಸಾರ್ವಜನಿಕರ ನಿರೀಕ್ಷೆ ದೊಡ್ಡದು. ಅವುಗಳನ್ನು ಸುಳ್ಳು ಮಾಡದಿರಲು ಪ್ರಯತ್ನಿಸುತ್ತೇನೆ.

ಸಾಂಗ್ಲಿಯಾನ ಅಜೆಂಡಾದಲ್ಲಿರುವುದು-

  • ನಿದ್ದೆ ಅಥವಾ ಪೂಜೆಗೆ ಸಮಯವಿಲ್ಲದಂತೆ ದಿನದ ಇಪ್ಪತ್ತನಾಲ್ಕೂ ಗಂಟೆ ಪೊಲೀಸರು ಸಾರ್ವಜನಿಕರಿಗೆ ಲಭ್ಯರಿರುವಂತೆ ಮಾಡುವುದು.
  • ರೌಡಿಗಳನ್ನು ಹಾಗೂ ಅಪರಾಧ ಹಿನ್ನೆಲೆ ಹೊಂದಿರುವವರ ವಿರುದ್ಧ ಪೊಲೀಸ್‌ ಪ್ರಹಾರ ಭಾರಿಯಾಗಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು.
  • ನಿಗದಿತ ಅವಧಿಯಾಳಗಷ್ಟೆ ಲೈವ್‌ಬ್ಯಾಂಡ್‌, ಬಾರ್‌ ಹಾಗೂ ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಿಸುವಂತೆ ನಿಗಾ ವಹಿಸಲಾಗುವುದು.
  • ಸಿಂಗಲ್‌ ನಂಬರ್‌ ಲಾಟರಿ, ವಿಡಿಯೋ ಪಾರ್ಲರ್‌ಗಳ ಬಗೆಗೆ ಕಠಿಣ ಕ್ರಮ.
ರಾಜಧಾನಿಯಲ್ಲಿ ಅಪರಾಧಗಳ ಸಂಖ್ಯೆ, ಹಿರಿಯ ನಾಗರಿಕರ ಹತ್ಯೆ, ಕಳವು ಹೆಚ್ಚುತ್ತಿರುವ ಜೊತೆಗೇ ಮುಂಬಯಿ ಮಾಫಿಯಾ ವಕ್ರದೃಷ್ಟಿ ನಗರದತ್ತ ಬಿದ್ದಿರುವ ಹೊತ್ತಿನಲ್ಲಿ ಸಾಂಗ್ಲಿಯಾನ, ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿದ್ದಾರೆ. ವಯಸ್ಸಿನ ದೃಷ್ಟಿಯಿಂದ ನೋಡುವುದಾದರೆ ಸಾಂಗ್ಲಿಯಾನ ಅವರ ಸೇವೆಯ ಕೊನೆಯ ದಿನಗಳಿವು. ಬಹುಶಃ ಅವರು ರಾಜ್ಯದಲ್ಲಿಯೇ ನಿವೃತ್ತರಾಗಬಹುದು. ನಿವೃತ್ತಿ ಹೊಂದುವ ಕ್ಷಣಗಳಲ್ಲಿ ಸಾಂಗ್ಲಿಯಾನ ಸಾರ್ಥಕ ಭಾವ ಅನುಭವಿಸುತ್ತಾರಾ? ಉತ್ತರ ಇನ್ನೇನು ಸಿಗಲಿದೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X