• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಸು ಹುಂಬತನ, ಸ್ವಲ್ಪ ಜಾಣತನ, ಅಪಾರ ಒಳ್ಳೆಯತನ - ಇವರು ರಾಜಾರಾವ್‌

By Staff
|

*ಎಂ.ಎನ್‌. ಚಕ್ರವರ್ತಿ, ವಿಶೇಷ ವರದಿಗಾರ, ನ್ಯೂಸ್‌ಟೈಮ್‌

ಸರ್‌ ಎಂ. ವಿ. ಅವರು ಅಥವಾ ಅವರ ಚಿತ್ರವನ್ನು ಕಡೆ ಕಡೆಯಲ್ಲಿ ನೋಡಿದವರು, ಅವರು ಸದಾ ಹಾಗೇ ಬಾಗಿದ್ದರು ಎಂದು ತಿಳಿಯುವುದು ಹೇಗೆ ತಪ್ಪೋ, ಹಾಗೆ ಸೊಂಟಕ್ಕೆ ಪಟ್ಟಾ ಕಟ್ಟಿಕೊಂಡು ಬಾಗಿ ನಡೆಯುವ ಕೆ. ರಾಜಾರಾಯರೂ ಸದಾ ಹಾಗೇ ಇದ್ದರು ಎಂದು ತಿಳಿಯುವುದೂ ತಪ್ಪಾಗುತ್ತೆ .

ರಾಜಾರಾಯರು ರಂಗು ರಂಗಿನ ರಂಜನೀಯ ವ್ಯಕ್ತಿ . ಮುಷ್ಠಿಯಿಂದ ದಿನಕ್ಕೆ 60-70 ಸಿಸರ್‌ ಸಿಗರೇಟ್‌ ಎಳೆಯುತ್ತ , ಬ್ರಾಂದಿ ಕುಡಿಯುತ್ತ , ಸಂಜೆ ಪ್ರೆಸ್‌ ಕ್ಲಬ್ಬಿನಲ್ಲಿ ಮನುಷ್ಯರು ಸಿಗದಿದ್ದರೆ, ಸೊಳ್ಳೆ, ನಾಯಿಗಳನ್ನೂ ಮಾತಿಗೆಳೆದು ಮಜ ತೆಗೆದುಕೊಳ್ಳುವ ವ್ಯಕ್ತಿ . ಈ ಸ್ವಂತ ಆಸ್ಥಾನದಲ್ಲಿ ವಿರಾಜಿಸುವುದೂ, ಸದಾ ತಮ್ಮನ್ನು ಯಾವುದಾದರೊಂದರಲ್ಲಿ ತೊಡಗಿಸಿಕೊಳ್ಳುವುದು, ಬಹಳ ಮಂದಿಯಂತೆ, ಸ್ವಂತ ಗೋಳನ್ನು ಮರೆಯುವ ಪರಿ. ಈಗ ಸ್ವಲ್ಪ ಅನಾರೋಗ್ಯದಿಂದ ಸಿಗರೇಟು, ಗುಂಡು ಬಿಡಬೇಕಾಗಿದೆ. ದೇಹ, ಮನಸ್ಸು ಸ್ವಲ್ಪ ಮಾಗಿ, ಬಾಗಿದೆ ಅಷ್ಟೇ.

ರಾಜಾರಾಯರು ನಮ್ಮಲ್ಲಿರುವ ಉತ್ತಮ ನ್ಯೂಸ್‌ಮನ್‌. ಇವರ ಸುದ್ದಿ ಸಂಗ್ರಹ ಮಾಡುವ ಶಕ್ತಿ ಅಪಾರ. ಮುಖ್ಯ ವರದಿಗಾರರಾಗಿ ಹಲವು ಕಿರಿಯ ಪತ್ರಕರ್ತರಿಗೆ ದಾರಿ ತೋರಿದ್ದಾರೆ. ಎಳೆಯರನ್ನು ಹುರಿದುಂಬಿಸಿ ಕೆಲಸ ಕಲ್ಪಿಸಿದ್ದಾರೆ. ಜಿಲ್ಲೆಯಾಂದರಲ್ಲಿ ವರದಿಗಾರರಾಗಿದ್ದಾಗ, ಪತ್ರಕರ್ತರನ್ನು ಕಂಡರೆ ತಾತ್ಸಾರವಿದ್ದ ಐಎಎಸ್‌ ಅಧಿಕಾರಿಯಾಬ್ಬ , ರಾಜಾರಾಯರು ಸಣ್ಣ ಚೀಟಿಗಳಲ್ಲಿ ನೋಟ್ಸ್‌ ಮಾಡಿಕೊಂಡ ರೀತಿ ಕಂಡು ಇನ್ನಷ್ಟು ಜಿಗುಪ್ಸೆ ಪಟ್ಟನಂತೆ. ಆದರೆ ಮಾರನೆ ದಿನ ಅವರು ನೀಡಿದ ವಿಷಯ ಪ್ರಕಟವಾದ ರೀತಿ ಕಂಡು ರಾಜಾರಾಯರ ಬಗ್ಗೆ ಗೌರವ ಬಂದಿತಂತೆ. ಹೊರಗಡೆಯಿಂದ ಫೋನು ಮೂಲಕ ನೀಡುವ ವರದಿ ರಾಜಾರಾಯರಷ್ಟು ವೇಗವಾಗಿ, ಅದು ಕೆಲವೊಮ್ಮೆ ಸಿಗರೇಟು ಪ್ಯಾಕಿನ ಹಿಂಭಾಗದಲ್ಲಿ , ಬರೆದುಕೊಳ್ಳುವವರು ವಿರಳ. ಇದೊಂದು ಸಣ್ಣ ವಿಷಯವಾದರೂ ಟ್ರಂಕ್‌ಕಾಲ್‌ ಮೂಲಕ ಲೈನ್‌ ಪಡೆದು ವರದಿ ಒಪ್ಪಿಸುವ ಜಿಲ್ಲಾ ಪತ್ರಕರ್ತರಿಗೆ ಅದರ ನೋವು ನಲಿವು ಅರ್ಥವಾಗುತ್ತೆ . ಚುನಾವಣಾ ಸಮೀಕ್ಷೆಗೆ ರಾಜಾರಾಯರೊಡನೆ ಊರೂರು ಅಲೆದ ಕಿರಿಯ ಪತ್ರಕರ್ತರಿಗೆ ಇವರೊಡನೆ ಕೆಲಸ ಮಾಡಿದ್ದೇ ಒಂದು ಶಿಕ್ಷಣ .

ತಮ್ಮ ಸಹಜ ಸ್ನೇಹಮಯ ವ್ಯಕ್ತಿತ್ವದಿಂದ ಅಪಾರ ಕಂಟ್ರಾಕ್ಟ್ಸ್‌ ಬೆಳೆಸಿರುವ ರಾಜಾರಾಯರಿಗೆ ಸಚಿವರು, ಪೊಲೀಸ್‌ ಅಧಿಕಾರಿ, ಶಾಸಕರ ಅಡಿಗೇ ಮನೆಗೆ ನುಗ್ಗುವಷ್ಟು ಸಲಿಗೆ ಬೆಳೆಸಿಕೊಂಡವರು. ತಾವು ಕಿರಿಯ ಪತ್ರಕರ್ತರಾಗಿದ್ದಾಗ ತಮ್ಮೊಡನೆ ಬೆಳೆದ ಶಾಸಕ, ಪೊಲೀಸ್‌ ಆಫೀಸರ್‌ಗಳು ಈಗ ಮಂತ್ರಿ, ಮುಖ್ಯಮಂತ್ರಿಗಳಾಗುವುದು ಎಲ್ಲರಿಗೂ ಸಹಜ. ಆದರೆ ರಾಜಾರಾಯರು ಇವರನ್ನು ಮರೆಯದೆ, ಇವರಿಂದ ಕೈಲಾದಷ್ಟು ಆದ ಸಹಾಯದ ಮೂಲಕ ಸ್ನೇಹವನ್ನು ಮುಂದುವರಿಸಿದವರು.

ರಾಜಾರಾಯರ ಈ ಪ್ರಭಾವವನ್ನು ಎಲ್ಲರೂ ಬಳಸಿಕೊಂಡು, ರಾಯರ ನೆತ್ತಿಗೆ ಕೆಟ್ಟ ಪಟ್ಟವನ್ನು ಕಟ್ಟಿ ಕೈ ತೊಳೆದುಕೊಂಡವರೇ ಹೆಚ್ಚು . ಇವರ ಶ್ರಮಕ್ಕೆ ದಕ್ಕಿದ್ದು ಕಡಿಮೆ.

ನನ್ನ ಮಗುವಿಗೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಕೊಡಿಸಿದವರು ಹೆಚ್‌.ಡಿ. ದೇವೇಗೌಡರು ಎಂದು ಅನೇಕ ಬಾರಿ ಹೆಮ್ಮೆಯಿಂದ ಸ್ಮರಿಸುತ್ತಾರೆ. ಈ ಉಪಕಾರ ಸ್ಮರಣೆ ಎಷ್ಟು ಮಂದಿಗೆ ಸಾಧ್ಯ ..?

ಅದೃಷ್ಟವಶಾತ್‌ ಇವರ ವಾರಿಗೆಯ ಪತ್ರಕರ್ತರಂತೆ ರಾಜಾರಾಯರು ಬುದ್ಧಿಜೀವಿಯಲ್ಲ . ಕಂಡದ್ದನ್ನು , ಕೇಳಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು ತುಲನಾತ್ಮಕ ವಿಶ್ಲೇಷಣೆಯಲ್ಲಿ ತೊಡಗುವುದಿಲ್ಲ . ಮನುಷ್ಯ- ಮನುಷ್ಯ ಸಂಬಂಧ, ವ್ಯಕ್ತಿಯ ಘಟನೆಗಳ ಓರೆಕೋರೆಗಳನ್ನು , ಸ್ವಲ್ಪ ವೇಮನ, ತುಸು ಸರ್ವಜ್ಞ ಪದಗಳನ್ನು ಅನುಕೂಲಕ್ಕೆ ತಿರುಚಿ, ಗೇಲಿ ಮಾಡಿ, ಖುಷಿ ಕೊಟ್ಟು ಪಡೆಯುವ ವ್ಯಕ್ತಿ .

ಇವರ ಜಿಲ್ಲೆಯ ಶಾಸಕರೊಬ್ಬರು ಇಸ್ಪೀಟು, ಚುನಾವಣೆ ಸಾಲದಿಂದ ತತ್ತರಿಸಿ ಸಾಲಗಾರರಿಂದ ತಲೆ ಮರೆಸಿಕೊಂಡಿದ್ದರು. ಮರುದಿನ ಇವರು ಸಂಪುಟ ಸದಸ್ಯರಾಗಬೇಕಿದ್ದು , ಪ್ರಮಾಣ ವಚನಕ್ಕೆ ಇವರನ್ನು ತುಮಕೂರಿನಿಂದ ಬೆಂಗಳೂರಿಗೆ ಸಾಗಿಸುವುದೇ ಒಂದು ಸಾಹಸವಾಗಿಬಿಟ್ಟಿತ್ತು . ಲೋಕಲ್‌ ಬಿಡಿಓ ಬಂದು ಹೇಳಿದರೂ, ಇವರು ಕೋಣೆಯಿಂದ ಹೊರ ಬರಲಿಲ್ಲ . ಸಾಲಗಾರರು ಮನೆ ಒಳಗೆ ಎಂಟ್ರಿ ತೆಗೆದುಕೊಳ್ಳುವುದೇ ಈ ರೀತಿಯ ಸುಳ್ಳಿನಿಂದ, ನೀನದನು ನಂಬಿದೆಯಲ್ಲ , ದಡ್ಡಿ ಎಂದು ಹೆಂಡತಿಗೇ ಬೈದರು. ಕಡೆಗೆ ಇವರ ಡ್ರೆೃವರ್‌ ಮಹಡಿಯ ಗವಾಕ್ಷಿಯಿಂದ ನೆಗೆದು ಬಳಿ ಬಂದು ಇವರನ್ನು ನಂಬಿಸಬೇಕಾಯಿತು. ರಾಜಭವನದಲ್ಲಿ ಮರುದಿನ ಬೇರೆಯವರ ಕನ್ನಡಕದಿಂದ ಪ್ರಮಾಣಪತ್ರವನ್ನು ಓದುವಾಗ, ಅದು ಸಡಿಲವಾಗಿ, ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಮಾಣಪತ್ರ ಗಾಳಿಗೆ ಹಾರಿದ್ದು .. . ಇದನ್ನು ರಾಜಾರಾಯರಿಂದಲೇ ಕೇಳಬೇಕು.

ಮಂಗಳೂರು ಬೀಡಿ ಕಾರ್ಖಾನೆ ಭೇಟಿಗೆ ಬೆಂಗಳೂರಿನಿಂದ ತೆರಳಿದ್ದ ಹಿರಿಯ ಪತ್ರಕರ್ತರಲ್ಲಿ ಕೆಲವರು, ಹೋದಾಗ ಇದ್ದ ಉತ್ಸಾಹವನ್ನು ಕಳಕೊಂಡು, ಬೆಂಗಳೂರಿನಲ್ಲಿ ಮಾರನೇ ದಿನವೇ ಅರ್ಜೆಂಟ್‌ ಕೆಲಸವಿದೆಯೆಂದೂ, ತತ್‌ಕ್ಷಣ ವಿಶೇಷ ವಾಹನ ಸೌಕರ್ಯ ಬೇಕೆಂದು ತಕರಾರೆತ್ತಿದರಂತೆ. ಆಗ ಮರುದಿನ ಬೀಡಿ ಕಾರ್ಖಾನೆಯ ಒಡತಿಯೇ ವಿಶೇಷ ಉಪಹಾರ ಪತ್ರಿಕಾಗೋಷ್ಠಿ ಕರೆದಿರುವ ವಿಷಯ ತಿಳಿಯಿತು. ಅದರೊಡನೆ ವಿಶೇಷವಾದ ಗಿಫ್ಟ್‌ ಸಿಗುವ ವಾಸನೆಯೂ ಇದ್ದುದರಿಂದ ಹಿರಿಯ ಪತ್ರಕರ್ತರು ಗೊಣಗುತ್ತಲೇ ರಾತ್ರಿ ಕಳೆದರಂತೆ.

ಬೆಳಿಗ್ಗೆ ಡಾಗ್‌ ಬಿಸ್ಕಟ್‌ ಉಪಹಾರದೊಡನೆ ನೀಡಿದ ಆಕರ್ಷಕ ಪಾಕೆಟನ್ನು ಬಸ್ಸಿನಲ್ಲಿ ಅವಸರ ಅವಸರವಾಗಿ ತರಿದು ನೋಡಿದಾಗ, ಕಂಡದ್ದು ನೀಟಾಗಿ ಪ್ಯಾಕ್‌ ಮಾಡಿದ್ದ ಬೀಡಿ ಕಟ್ಟುಗಳು... ಆ ನಿರಾಸೆಯಲ್ಲಿ ಹಿರಿಯ ಪತ್ರಕರ್ತರ ವರ್ತನೆ, ಆಡಿದ ಮಾತುಗಳು, ನೀಡಿದ ಫಿಲಾಸಫಿಕ್‌ ಸಮಜಾಯಿಷಿ.. ಇವೆಲ್ಲವನ್ನು ನೀವು ರಾಜಾರಾಯರಿಂದಲೇ ಕೇಳಬೇಕು.

ಈ ರೀತಿಯ ನೂರಾರು ಅಥವಾ ಹತ್ತಾರು ಪ್ರಸಂಗಗಳು, ವ್ಯಕ್ತಿಚಿತ್ರ ರಾಜಾರಾಯರ ಬತ್ತಳಿಕೆಯಲ್ಲಿವೆ. ಯಾವ ವರದಿ, ಸಣ್ಣಕಥೆ, ಕಾದಂಬರಿಗೆ ಚೌಕಟ್ಟಿಗೆ ಒಳಪಡದ ಈ ಸರಕನ್ನು ರಾಜಾರಾಯರು ಎಷ್ಟು ಬೇಡಿದರೂ ದಾಖಲಿಸುವುದಿಲ್ಲ . ಸಂಜೆ ಹೊತ್ತು ಬೇರೆಯವರ ರಂಜನೆಗೆ ಮೀಸಲಾಗಿಟ್ಟಿದ್ದಾರೆ. ಬಹುಶಃ ಇದೇ ಸರಿಯೇನೋ.

ರಾಜಾರಾಯರು ಇನ್ನಷ್ಟು ಆರೋಗ್ಯವನ್ನು ಕಾಯ್ದುಕೊಂಡು ಇನ್ನಷ್ಟು ಜನರನ್ನು ರಂಜಿಸುತ್ತಿರಲಿ.

(‘ಅಜಾತಶತ್ರು’ ಕೆ. ರಾಜಾರಾವ್‌ ಅಭಿನಂದನಾ ಗ್ರಂಥದಿಂದ ಆಯ್ದದ್ದು)

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more