ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇರಣಾ ಪ್ರಸಂಗ-2

By Staff
|
Google Oneindia Kannada News

ಎಂ.ವಿ.ನಾಗರಾಜ ರಾವ್‌

A Pen Portrait of Sai Prakashಸ್ವಾಮಿ ದರ್ಶನಾನಂದರು ಆರ್ಯ ಸಮಾಜದ ಕಾರ್ಯಕರ್ತರಾಗಿದ್ದರು. ಅವರು ಸ್ಪಷ್ಟವಾದಿಗಳಾಗಿದ್ದು ಸರಿ ಎನಿಸಿದ್ದನ್ನು ಸಂಕೋಚವಿಲ್ಲದೆ ಹೇಳುತ್ತಿದ್ದರು. ಆದರೂ ಅವರು ನಮ್ರ ಹಾಗೂ ಉದಾರ ಸ್ವಭಾವದವರಾಗಿದ್ದರು. ಜನರು ಅವರನ್ನು ಅತ್ಯಂತ ಶ್ರದ್ಧೆಯಿಂದ ಆದರಿಸುತ್ತಿದ್ದರು. ಅವರ ಬಗ್ಗೆ ಜನರು ವಿಶೇಷ ಗೌರವಾದರ ಹೊಂದಿದ್ದರು.

ಒಂದು ದಿನ ದೊಡ್ಡ ಸಭೆಯಾಂದು ಏರ್ಪಾಟಾಗಿತ್ತು. ಅಲ್ಲಿಗೆ ಸ್ವಾಮಿ ಶ್ರದ್ಧಾನಂದರು ಸಹ ಬಂದಿದ್ದರು. ದರ್ಶನಾನಂದರು ಅವರನ್ನು ಹತ್ತಿರ ಕರೆದರು. ಇಬ್ಬರೂ ಪಕ್ಕ ಪಕ್ಕದಲ್ಲಿ ಕುಳಿತು ಮಾತನಾಡತೊಡಗಿದರು. ಯಾವುದೋ ಗಹನವಾದ ವಿಷಯದ ಬಗ್ಗೆ ಇಬ್ಬರಲ್ಲೂ ಸ್ವಲ್ಪ ಬಿರುಸಿನ ವಾಗ್ವಾದ ನಡೆಯತೊಡಗಿತು. ಸುತ್ತಲಿನ ಜನರು ಕುತೂಹಲದಿಂದ ಅವರ ಮಾತುಕತೆ ಆಲಿಸುತ್ತಿದ್ದರು. ಮಾತಿನ ಮಧ್ಯೆ ಶ್ರದ್ಧಾನಂದರು ಕೋಪಗೊಂಡು ದರ್ಶನಾನಂದರನ್ನು ಕಟು ಮಾತಿನಿಂದ ನೋಯಿಸಿದರು. ಸ್ವಭಾವತಃ ಶಾಂತಿಪ್ರಿಯರೂ, ಮೃದು ಮತ್ತು ಸರಳರೂ ಆಗಿದ್ದ ಶ್ರದ್ಧಾನಂದರು ಈ ರೀತಿ ತುಟಿ ಮೀರಿ ಮಾತನಾಡಿದ್ದನ್ನು ಕಂಡು ಜನರು ಹೌಹಾರಿದರು. ಇದರಿಂದ ದರ್ಶನಾನಂದರ ಮನಸ್ಸಿಗೆ ಘಾಸಿಯಾಗಿರಬಹುದೆಂದು ಅವರು ತವಕಿಸಿದರು. ಮುಂದಿನ ಪರಿಣಾಮ ಏನಾಗುವುದೋ ಎಂದು ಚಿಂತಿತರಾದರು. ಆದರೆ ಜನರು ತಿಳಿದಂತೆ ಏನೊಂದೂ ನಡೆಯಲಿಲ್ಲ . ಸ್ವಾಮಿ ದರ್ಶನಾನಂದರು ಏನೂ ಪ್ರತಿಕ್ರಿಯಿಸದೆ ಮೌನವಾಗಿದ್ದರು. ಒಂದು ಘಂಟೆ ಕಳೆಯಿತು. ಸಭೆ ಮುಕ್ತಾಯವಾಯಿತು. ಎಲ್ಲರೂ ತಮ್ಮ ತಮ್ಮ ಬಿಡಾರಗಳಿಗೆ ಹಿಂದಿರುಗಿದರು.

ಸ್ವಾಮಿ ಶ್ರದ್ಧಾನಂದರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ತಾನು ದುಡುಕಿ ದರ್ಶನಾನಂದರಿಗೆ ಕಟು ನುಡಿಯಾಡಿದ್ದು ಅವರಿಗೆ ತುಂಬ ದುಃಖವನ್ನುಂಟುಮಾಡಿತ್ತು. ಕೂಡಲೇ ಅವರು ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿ ಸ್ವಾಮಿ ದರ್ಶನಾನಂದರಿಗೆ ಒಂದು ಪತ್ರವನ್ನು ಬರೆದು ತಮ್ಮ ಶಿಷ್ಯನ ಸಂಗಡ ಕಳುಹಿಸಿದರು. ಸ್ವಾಮಿ ದರ್ಶನಾನಂದರು ಪತ್ರವನ್ನು ಓದಿದರು. ಅವರ ಮುಖದಲ್ಲಿ ಮಂದಹಾಸ ಚಿಮ್ಮಿತು. ಅವರ ಪತ್ರಕ್ಕೆ ಉತ್ತರವಾಗಿ ಒಂದು ಸುಭಾಷಿತವನ್ನು ಬರೆದು ಕಳಿಸಿದರು.

‘ಎಲೈ ಮಿತ್ರವರ್ಯ !...ಭತ್ತವನ್ನು ಚೆನ್ನಾಗಿ ಬಡಿದರೆ ಅದು ತನ್ನ ಸಿಪ್ಪೆಯನ್ನು ಕಳೆದು ಥಳಥಳಿಸುವ ಅಕ್ಕಿಯಾಗುತ್ತದೆ. ಕಪ್ಪು ಹೊಟ್ಟು ಕಳೆದು ಚಮಕಿಸುವ ಬಿಳಿ ಎಳ್ಳು ಹೊರಬರುತ್ತದೆ... ನಿಮ್ಮ ಕಟು ನುಡಿಯಿಂದ ನನ್ನಲ್ಲಿನ ಅವಗುಣ ಕಳೆದು ಸಾರ್ಥಕ ಗುಣ ಜಾಗೃತವಾಯಿತು. ನಿಮ್ಮ ಮಾತಿನಿಂದ ನನಗೆ ನೋವಿಲ್ಲ.’

ಸ್ವಾಮಿ ಶ್ರದ್ಧಾನಂದರು ಅವರ ಪತ್ರವನ್ನು ಓದಿ ಗದ್ಗದಿತರಾದರು. ಮನಸ್ಸಿನಲ್ಲೇ ಸ್ವಾಮಿ ದರ್ಶನಾನಂದರಿಗೆ ಅನೇಕ ನಮನಗಳನ್ನು ಸಲ್ಲಿಸಿದರು.

(ಅನೇಕ ಪೆಟ್ಟುಗಳನ್ನು ತಿಂದ ಸ್ನೇಹವೇ ಪವಿತ್ರ ಸ್ನೇಹವಾಗುತ್ತದೆ)
ಪ್ರೇರಣಾ ಪ್ರಸಂಗ 1:ಸತ್ಯ ಮತ್ತು ಪ್ರಾಮಾಣಿಕತೆ ಮುಗಿಲಿಗಿಂತ ಎತ್ತರ

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X