ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳುನಾಡ ದಾಸಯ್ಯ

By Staff
|
Google Oneindia Kannada News

ಅಲ್ಲೊಂದು ಸಾಹಿತ್ಯ ಸಮ್ಮೇಳನವಾದರೆ ಪಂಚೆ ಉಟ್ಟುಕೊಂಡ ಈ ಮನುಷ್ಯ ಊಟ ತಿಂಡಿಯ ವ್ಯವಸ್ಥೆ ಸರಿ ಇದೆಯಾ ಎಂದು ಅಡುಗೆ ಮನೆಯಲ್ಲಿ ಮೂಗಲ್ಲಿ ನೀರಿಳಿಸಿಕೊಂಡು ನಿಂತು ಗಮನಿಸುತ್ತಿದ್ದ. ಆತನ ಕೈಯ್ಯಲ್ಲಿ ನಡೆಯಬೇಕಿದ್ದ ಸಮಾರಂಭದ ರೂಪು ರೇಶೆಗಳ ಪಟ್ಟಿ. ಮತ್ತೆರಡು ನಿಮಿಷದಲ್ಲಿ ವೇದಿಕೆಯ ಕಾರ್ಯಕ್ರಮದ ನಿರ್ವಹಣೆಯನ್ನು ನೋಡಿಕೊಳ್ಳುವಲ್ಲಿ ವ್ಯಸ್ತರು. ಮೊಗದಲ್ಲಿ ಬಂದ ಅತಿಥಿಗಳ ಉಪಚಾರ ಸರಿಯಿದೆಯಾ ಅನ್ನುವ ಆತಂಕ, ಧಾವಂತ.

ಅವರು ಅ. ಬಾಲಕೃಷ್ಣ ಶೆಟ್ಟಿ ಪೊಳಲಿ. ಅವರದು ತುಳುನಾಡ ಚಾವಡಿಮನೆಯ ಯಜಮಾನನ ಆಳ್ತನ. ಸುಧಾರಿಕೆಗೆ ಹೆಸರಾಗಿದ್ದ ಮನುಷ್ಯ.

ಕರಾವಳಿಯಲ್ಲಿ ನಡೆವ ಕನ್ನಡ ಸಾಹಿತ್ಯ ಸಮ್ಮೇಳನವಾಗಲೀ ತುಳು ಸಾಹಿತ್ಯ ಚಟುವಟಿಕೆಯಾಗಲಿ, ಅಷ್ಟೇ ಯಾಕೆ ಯಾವುದೋ ಒಂದು ಪುಟ್ಟ ಲೇಖಕರ ಕಮ್ಮಟವಾಗಲಿ ಬಾಲಕೃಷ್ಣ ಶೆಟ್ಟರು ಅಲ್ಲಿ ಹಾಜರಿರುತ್ತಿದ್ದರು. ಕಾಲೇಜು ಹುಡುಗ ಹುಡುಗಿಯರ ಬರೆಯುವ ಹುಚ್ಚಿಗೆ ಬೆನ್ನು ತಟ್ಟುತ್ತಿದ್ದರು. ನೀನು ಇದಕ್ಕಿಂತ ಚೆನ್ನಾಗಿ ಬರೆಯಬೇಕು ಎನ್ನುವ ಶೆಟ್ಟರಿಗೆ ವಿದ್ಯಾರ್ಥಿಗಳ ಯಾವ ಕವನವೂ ಕೆಟ್ಟದಾಗಿ ಕಾಣಿಸಿದ್ದಿಲ್ಲ.

ನೀವು ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ ಊರಿನವರಾ?

ಕರಾವಳಿಯಿಂದ ವಲಸೆ ಹೋದವರು ತಮ್ಮ ಊರು ಪೊಳಲಿ ಎಂದು ಹೇಳಿಕೊಂಡರೆ, ಆ ಅಪರಿಚಿತ ನಿಮಗೆ ಬಾಲಕೃಷ್ಣ ಶೆಟ್ಟಿ ಪೊಳಲಿ ಗೊತ್ತಾ ? ಎಂದು ಕೇಳಿಬಿಡುತ್ತಾರೆ. ಶೆಟ್ಟರ ಪ್ರಸಿದ್ಧಿ ಅದು. ಪೊಳಲಿಯವರದು ದಕ್ಷಿಣ ಕನ್ನಡದ ಶೆಟ್ಟರ ಗುತ್ತಿನ ಮನೆತನ. ಓದು ಮುಗಿದ ಕೂಡಲೇ 1967ರಲ್ಲೇ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ನಂತರ ಬ್ಯಾಂಕ್‌ ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಗಿಟ್ಟಿಸಿಕೊಂಡರು. ಸಿಂಡಿಕೇಟ್‌ಬ್ಯಾಂಕಿನ ಮುಖ್ಯ ಶಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ , ನಂತರ 98ರಲ್ಲಿ ಸ್ವಯಂ ನಿವೃತ್ತಿ , ಮತ್ತೆ ಕನ್ನಡ ತುಳು ಸಾಹಿತ್ಯದ ಕೆಲಸ... ತುಳುವಿಗೊಂದು ಲಿಪಿಯಿದೆ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು, ತುಳು ಸಾಹಿತ್ಯ ತುಳುವರಿಗೆ ತಲುಪಬೇಕು..., ತುಳು ಪುಸ್ತಕಗಳ ಪ್ರಕಾಶನ ಮತ್ತೆ ತುಳುಭಾಷೆಗೆ ಸಂಬಂಧಿಸಿದ ಹೊಸಹೊಸ ಅವಿಷ್ಕಾರಗಳ ಹುಮ್ಮಸ್ಸು... ಈ ಪರಿ ಶೆಟ್ಟಿ ಯವರು ತುಳುಮಯವಾಗಿದ್ದರು.

ಡಾ. ಬಿ.ಎ. ವಿವೇಕ ರೈಗಳ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷತೆಯ ನಂತರ ಬಾಲಕೃಷ್ಣ ಶೆಟ್ಟರನ್ನು ಆ ಕುರ್ಚಿಗೆ ಆಯ್ಕೆ ಮಾಡಲಾಯಿತು. ಯಥಾ ಪ್ರಕಾರ ತುಳು ದೇವಿಯ ಸೇವೆ ಶೆಟ್ಟರಿಗೆ ಇಷ್ಟವಾದುದೇ. ತುಳು ಕವನ ಕಥೆ ಸ್ಪರ್ಧೆಗಳು, ಬರವಣಿಗೆ, ಹಿರಿಯ ಲೇಖಕರಿಗೆ ಸನ್ಮಾನ ಮತ್ತೆ ಸಮ್ಮೇಳನಗಳು, ಪುಸ್ತಕ ಪ್ರಕಟಣೆ, ಬರವಣಿಗೆಗಳಿಗೆ ಬಾಲಕೃಷ್ಣ ಶೆಟ್ಟರ ಬೆಂಬಲದಲ್ಲಿ ಕೊರತೆಯಿರಲಿಲ್ಲ.

ಪ್ರಸಿದ್ಧಿಗೆ ಮುಳುವು ತಂದದ್ದು ಪರಿಸರ ವಾದ ಮತ್ತು ವಿರೋಧ

ಶೆಟ್ಟರ ಪ್ರಸಿದ್ಧಿ ಅವರದೇ ಕೈಕಚ್ಚಿದ್ದು ಕಳೆದ ವರ್ಷ. ದಕ್ಷಿಣ ಕನ್ನಡದಲ್ಲಿ ಪರಿಸರ ರಕ್ಷಣೆಯ ಕೆಲಸಗಳು ಹಾಸ್ಯದ ಮಾತಾಗುವಷ್ಟು ಮುನ್ನಡೆಯುತ್ತಿರುವಾಗ ಅಲ್ಲಿನ ಸಾಹಿತಿಗಳು, ಬರಹಗಾರರು ಎಂದೂ ಬಹುರಾಷ್ಟ್ರೀಯ ಕಂಪೆನಿಗಳನ್ನು ಪ್ರೋತ್ಸಾಹಿಸಿದ್ದೇ ಇಲ್ಲ. ಮುಖ್ಯವಾಗಿ ಕೊಜೆಂಟ್ರಿಕ್ಸ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ. ಅವುಗಳನ್ನು ಬಹಿರಂಗವಾಗಿ ಖಂಡಿಸದೇ ಇದ್ದರೂ ನೇರವಾಗಿ ಬೆಂಬಲಿಸಿದ ಉದಾಹರಣೆಗಳೂ ಇಲ್ಲ.

ಪರಿಸರವಾದಿಗಳು ಕೊಜೆಂಟ್ರಿಕ್ಸ್‌ ಹೋರಾಟದಲ್ಲಿ ವ್ಯಸ್ತರಾಗಿದ್ದ ಸಂದರ್ಭವನ್ನೇ ಉಪಯೋಗಿಸಿಕೊಂಡು ಮುಂದುವರೆಯುತ್ತಿದ್ದ ನಾಗಾರ್ಜುನ ವಿದ್ಯುತ್‌ ಸ್ಥಾವರ ಸಂಸ್ಕೃತಿ, ಸ್ವದೇಶೀ ಎಂಬ ಪದಗಳನ್ನೇ ಬಳಸಿಕೊಂಡು ಸ್ಥಳೀಯರ ಮನ ಗೆಲ್ಲಲು ಯತ್ನಿಸುತ್ತಿತ್ತು. ಕಂಪೆನಿಯ ಈ ತಂತ್ರಕ್ಕೆ ಶೆಟ್ಟರು ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದರು.

ನಾಗಾರ್ಜುನ ವಿದ್ಯುತ್‌ ಸ್ಥಾವರದ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನಾಗಿ ದಕ್ಷಿಣ ಕನ್ನಡದ ಮನೆ ಮಾತಾಗಿದ್ದ ಬಾಲಕೃಷ್ಣ ಶೆಟ್ಟರನ್ನೇ ನೇಮಿಸಿಕೊಂಡು ಪರಿಸರವಾದದ ಬಾಯಿ ಮುಚ್ಚಿಸಲು ಕಂಪೆನಿ ಪ್ರಯತ್ನಿಸಿತು. ಶೆಟ್ಟರು ಒಪ್ಪಿಕೊಂಡು ಕೆಟ್ಟರು. ಬಹುರಾಷ್ಟ್ರೀಯ ಕಂಪೆನಿಯ, ಕೈತುಂಬ ಹಣ ತರುವ ಈ ಉದ್ಯೋಗವನ್ನು ನಿರ್ವಹಿಸುವುದು ಸಾರ್ವಜನಿಕ ವ್ಯಕ್ತಿಯಾದ ಬಾಲಕೃಷ್ಣ ಶೆಟ್ಟರಿಗೆ ಭೂಷಣವೆನಿಸಲಿಲ್ಲ. ವಿದ್ಯಾರ್ಥಿಗಳು, ಶಿಷ್ಯರೂ ಸೇರಿದಂತೆ ಸ್ಥಳೀಯರ ವಿರೋಧ ಕಟ್ಟಿಕೊಂಡ ಶೆಟ್ಟರು ರಾಜೀನಾಮೆಗೆ ಶರಣಾದರು. ಆ ಹೊತ್ತಿಗೆ ಅವರು ಹೈರಾಣಾಗಿದ್ದರು.

ಸ್ವತಃ ಸಾಹಿತಿಯೂ ಆಗಿದ್ದ ಪೊಳಲಿ ಅವರ ಕೃತಿಗಳು

ಹೆಬ್ಬೆರಳು ಕೃತಿದರ್ಶನ, ರಾಜ ರತ್ನಂ ವ್ಯಂಗ್ಯ ಸಾಹಿತ್ಯ, ಶ್ರೀಕ್ಷೇತ್ರ ಪೊಳಲಿ, ಗೌರವದ ಗರಿಗಳು, ಮರೆಯಬಾರದ ಮಹನೀಯರು, ಕಯ್ಯಾರ-80, ಪೊಳಲಿ ಶೀನಪ್ಪ ಹೆಗ್ಗಡೆ (ಕನ್ನಡ), ಪಾತೆರಕತೆ ಪೆಂಗದೂಮನ ಕಬಿತೊಲು, ತುಳುಮಲೆ ಶೀನಪ್ಪ ಹೆಗ್ಗಡೆ (ವ್ಯಕ್ತಿಚಿತ್ರ), ಪೊಳಲಿ ನುಡಿಮಾಲೆ (ಸ್ವತಂತ್ರ ಗಾದೆಗಳ ಸಂಗ್ರಹ), ತುಳು- ಕೋಡೆ,ಇನಿ, ಎಲ್ಲೆ (ತುಳು ಸಾಹಿತ್ಯಗಳು); ಪೊಡುಂಬ ತಿಮ್ಮನ ಕಗ್ಗ (ಮಂಕುತಿಮ್ಮನ ಕಗ್ಗದ ಕತೆಗಳ ಅನುವಾದ ತುಳುವಿಗೆ), ಮಿತ್ಯ ನಾರಾಯಣ ಕತೆ, ತುಳುವಾಲ ಬಲಿಯೇಂದ್ರ (ತುಳುವಿನಿಂದ ಕನ್ನಡಕ್ಕೆ).
ಶೆಟ್ಟರು ಪ್ರಕಟಿಸಿದ ಪ್ರಮುಖ ಪುಸ್ತಕಗಳು
ವೆಂಕಟರಾಜ ಪುಣಿಂಚತ್ತಾಯ ‘ತುಳು ಮಹಾಭಾರತ’, ‘ತುಳುಲಿಪಿ’, ಪಾವೆಂ ಆಚಾರ್ಯರ ‘ಬಯ್ಯಮಲ್ಲಿಗೆ’, ತ್ರೆೃಮಾಸಿಕ ‘ಮದಿಪು’ ಸಂಚಿಕೆ ಸೇರಿದಂತೆ 18 ತುಳು ಪುಸ್ತಕಗಳನ್ನು ಅಕಾಡೆಮಿಯಿಂದ ಹೊರತಂದಿದ್ದರು.
ಸೇಡಿಯಾಪು ಕೃಷ್ಣ ಭಟ್ಟರ ‘ತಥ್ಯದರ್ಶನ’ ಸಹಿತ ನಾಲ್ಕು ಪುಸ್ತಕಗಳು ಬೆಳಕಿಗೆ ಬಂದವು. ತುಳು ಚಾವಡಿಯ ಹಿರೀಕ, ಕೆದಂಬಾಡಿ ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’ , ಮತ್ತು ಇತರ ಮೂರು ಗ್ರಂಥಗಳನ್ನು ಶೆಟ್ಟರು ಪ್ರಕಟಿಸಲು ನೆರವಾದರು. ತೆಕ್ಕುಂಜ ಗೋಪಾಲಕೃಷ್ಣ ಭಟ್ಟ ಅವರ ‘ನವನೀತ’ ಕೃತಿ ಪ್ರಕಟಣೆಯಲ್ಲಿ ಶೆಟ್ಟಿ ಅವರು ವಿಶೇಷ ಶ್ರಮ ವಹಿಸಿದ್ದರು.

Post your opinion

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X