ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಫೂಲನ್‌’ ಎಂಬ ದುರಂತ

By Staff
|
Google Oneindia Kannada News

ಒಂದು ಬೈಸಿಕಲ್‌ ಮತ್ತು ಒಂದು ಹಸುವಿಗೆ ಆಕೆಯನ್ನು ಮಾರಿದರು !

ಕೆಳಜಾತಿಯವರೆಂದು ಗುರುತಿಸಿಕೊಂಡಿದ್ದ ಅನಕ್ಷರಸ್ಥ ಕುಟುಂಬದಲ್ಲಿ ಎರಡನೇ ಮಗಳಾಗಿ ಹುಟ್ಟಿದ ಫೂಲನ್‌ದೇವಿ ಎನ್ನುವ ಹೆಣ್ಣಿನ ಮೊದಲ ಅಳು ಶುರುವಾದದ್ದು ಹೀಗೆ. 11ನೇ ವಯಸ್ಸಿನಲ್ಲಿ ನಡೆದ ಈ ಮಾರಾಟವನ್ನು ಆಕೆಯ ಅಸಹಾಯಕ ಅಪ್ಪ ಮದುವೆ ಎಂದು ತನ್ನನ್ನು ತಾನು ಸಮಾಧಾನಿಸಿಕೊಂಡ.

ಮರಕೋತಿಯಾಟ ಆಡಬೇಕಾಗಿದ್ದ ಹುಡುಗಿಗೆ ಸೀರೆ ಹೊದೆಸಿ ಗೃಹಿಣಿಯಾಗು ಎಂದು ಗಂಡನ ಮನೆಯವರು ದಬಾಯಿಸಿದರು. ಕೈಲಾಗದ ಕೆಲಸದ ಹೊರೆಯನ್ನು ಆಕೆಯ ಮುಂದಿಟ್ಟಾಗ ಗಂಡನ ಮನೆಯವರೊಂದಿಗೆ ಏಗಲಾರದ ಹುಡುಗಿ ಅಪ್ಪನ ಪ್ರೀತಿ ಅಮ್ಮನ ಅಕ್ಕರೆಯನ್ನು ಹುಡುಕಿಕೊಂಡು ವಾಪಾಸಾದಳು. ತವರಲ್ಲೂ ಆಕೆಗೆ ಕಾದಿದ್ದುದು ಆಘಾತವೇ.

ಸಂಕಟ ಏನಾದರೂ ಇರಲಿ, ಸಹಿಸಿಕೊಂಡು ಬದುಕುವುದೆಂದು ದೃಢ ನಿರ್ಧಾರ ಮಾಡಿಕೊಂಡು ಮತ್ತೆ ಗಂಡನ ಮನೆಯ ಹೊಸಿಲು ತುಳಿದ ಫೂಲನ್‌ಗೆ ಆ ಆಸರೆ ಬಹುಕಾಲ ಉಳಿಯಲಿಲ್ಲ. ಗಂಡನ ಮನೆಯಲ್ಲಿ ನಲುಗುತ್ತಿದ್ದ 20 ರ ವಯಸ್ಸಿಗೇ ಕನಸು ಕರಗಿದ್ದ ಫೂಲನ್‌ಳನ್ನು ಡಕಾಯಿತನೊಬ್ಬ ಅಪಹರಿಸಿದ.

ಕನಸುಗಳನ್ನು ಸುಟ್ಟ ಗಂಡನನ್ನು ಚಚ್ಚಿ ಹಾಕಿದ ‘ದಸ್ಯು ಸುಂದರಿ’

ಆಕೆ ಉತ್ತರ ಪ್ರದೇಶದ ಚೆಂಬಲ್‌ ಕಣಿವೆಗೆ ಕಾಲಿಟ್ಟುದು ಬತ್ತಿದ ಕನಸುಗಳೊಂದಿಗೆ. ಅಲ್ಲಿ ಹಿಂಸೆಯಿರಲಿಲ್ಲ. ಎರಡು ಹೊತ್ತಿನ ಊಟಕ್ಕೆ ತೊಂದರೆಯಿರಲಿಲ್ಲ. ಡಕಾಯಿತರೆಂದು ಕರೆಸಿಕೊಳ್ಳುತ್ತಿದ್ದರೂ ಅವರೆಲ್ಲ ಗಂಡನ ಮನೆಯವರಿಗಿಂತ ಒಳ್ಳೆಯವರಾಗಿ ಕಂಡರು.

ಫೂಲನ್‌ಳ ನಿಜವಾದ ವೈವಾಹಿಕ ಬದುಕು ಪ್ರಾರಂಭವಾದದ್ದೇ ಚಂಬಲ್‌ನ ದುರ್ಗಮ ಕಣವೆಗಳ ನಡುವೆ. ಆಕೆ ಗ್ಯಾಂಗ್‌ ಲೀಡರ್‌ ವಿಕ್ರಂ ಮಲ್ಲಾ ಎಂಬಾತನ ಹೆಂಡತಿಯಾದಳು. ಸ್ವರಕ್ಷಣೆಯ ಅಭ್ಯಾಸವನ್ನು ಕಣಿವೆಯ ಕಠಿಣತೆಯೇ ಬೋಧಿಸಿತು. ಆದರೆ ಆ ಸಂಸಾರ ಬಹುಕಾಲ ಉಳಿಯಲಿಲ್ಲ. ವಿಕ್ರಂ ಮಲ್ಲಾನನ್ನು ಆತನ ಸ್ನೇಹಿತನೇ ಕೊಂದು ಬಿಟ್ಟ. ಫೂಲನ್‌ಳನ್ನು ಬೆಹ್ಮಾಯಿಯ ಗುಡಿಸಲಿನಲ್ಲಿ ವಾರಗಟ್ಟಲೆ ಕೂಡಿ ಹಾಕಲಾಯಿತು. ಮೇಲ್ಜಾತಿಯ ಠಾಕೂರ್‌ ಕುಟುಂಬದ ಶ್ರೀಮಂತರ ಸಮೂಹ ಅತ್ಯಾಚಾರಕ್ಕೆ ಬಂಧಿನಿ ಒಳಗಾದಳು. ಅಲ್ಲಿಂದ ಹೇಗೋ ಪಾರಾದ ಫೂಲನ್‌ ಮತ್ತೊಂದು ಡಕಾಯಿತ ಗುಂಪಿಗೆ ಸಿಕ್ಕಿಬಿದ್ದಳು. ಡಕಾಯಿತಿ,ಕಳವು, ಲೂಟಿ, ಶುರುವಾದದ್ದು ಅಲ್ಲಿಂದಲೇ. ಕಲ್ಲಾಗಿದ್ದ ಮನಸ್ಸಿನಲ್ಲಿ ದ್ವೇಷ ಚಿಗಿತದ್ದೂ ಆಗಲೇ.

ತೊಂದರೆ ಕೊಟ್ಟವರ ವಿರುದ್ಧ ದ್ವೇಷ ಸಾಧನೆ... ಹೀಗೆ.. ಹಳೇ ಗಂಡನನ್ನು ಚಚ್ಚಿ ಹಾಕಿದಳು. ಶೋಷಿತರ ರಾಣಿಯೆನ್ನುವ ಹೆಸರು ಆಕೆ ಬಯಸದೆಯೇ ಪ್ರಾಪ್ತವಾಯಿತು. ಫೂಲನ್‌ಳ ಇನ್ನೊಂದು ಹೆಸರು ದಸ್ಯು ಸುಂದರಿ.

20 ವರ್ಷಗಳ ನಂತರ ಸುಂದರ ಸಂಸಾರದ ಕನಸು ಚಿಗುರಿತು

ಕಾಡಿನ ಬಿಳಲುಗಳ ನಡುವೆ, ಗುಹೆಯ ಕತ್ತಲಲ್ಲಿ 20 ವರ್ಷಗಳ ಕಾಲ ಎದೆಗುದಿಯಾಂದಿಗೆ ಬದುಕು ಸವೆಯಿಸಿದ ಚಂಬಲ್‌ರಾಣಿಗೆ ಸಾವಿರಾರು ಮಂದಿ ಅಭಿಮಾನಿಗಳೂ ಇದ್ದರು. ಕಡೆಗೊಮ್ಮೆ ಸೇಡು ಮುಗಿದ ಬಳಿಕ ಶರಣಾಗಿ, ನಂತರ ಗೃಹಿಣಿಯಾಗಿ ಜನಪ್ರತಿನಿಧಿಯಾಗಿ ಬದಲಾದ ಡಕಾಯಿತ ರಾಣಿ ಮಾತನಾಡುತ್ತಿದ್ದುದು ಮಹಿಳೆಯರ ಏಳಿಗೆ ಬಗ್ಗೆ.

ಮೇಲ್ಜಾತಿಯ ಕಾಲ್ತುಳಿತಕ್ಕೆ ಒಳಗಾದ ಫೂಲನ್‌ಗೆ 1981ರ ಫೆಬ್ರವರಿ 14 ಸುದಿನ. ಬೆಹ್ಮಾಯಿಯ ಠಾಕೂರ್‌ ಕುಟುಂಬದ 22 ಮಂದಿಯನ್ನು ಕೊಂದು ಹಾಕಿದಳು. ಆಕೆಯನ್ನು ಹುಡುಕಲು ಪೊಲೀಸರು ಓಡಾಡಿದರು. ಬಲೆ ಬೀಸಿದರು. ಆದೇಶಗಳನ್ನು ಹೊರಡಿಸಿದರು. ಫೂಲನ್‌ ಕೈಗೆ ಸಿಗಲಿಲ್ಲ. ಕೊನೆಗೆ ಸಂಧಾನ ಮಾತುಕತೆ ಶುರುವಾಯಿತು. 1983ರ ಫೆಬ್ರವರಿ 12ರಂದು ಫೂಲನ್‌ ದೇವಿ ಸಾವಿರಾರು ಮಂದಿ ಸಾರ್ವಜನಿಕರ ಮುಂದೆ, ತನ್ನ ಅಭಿಮಾನಿಗಳ ಮುಂದೆ ಶರಣಾದಳು. ಮತ್ತೆ 11 ವರ್ಷಗಳ ಕಾಲ ಮಧ್ಯಪ್ರದೇಶದ ಗ್ವಾಲಿಯರ್‌ ಜೈಲಿನಲ್ಲಿ ಬಂಧನ.
11 ವರ್ಷಗಳ ಕಾಲ ಜೈಲಿನಲ್ಲಿದ್ದ ಚಂಬಲ್‌ ಕಣಿವೆ ಡಕಾಯಿತ ರಾಣಿ ಫೂಲನ್‌ ದೇವಿ 1994ರಲ್ಲಿ ಬಿಡುಗಡೆಯಾದಳು. ಮರುವರ್ಷವೇ ಆಕೆ ಬೌದ್ಧ ಧರ್ಮದ ಅನುಯಾಯಿಯಾದಳು. ಡಕಾಯಿತ ರಾಣಿ ಬಿರುದಿಗೆ ಎಳ್ಳು ನೀರು ಬಿಟ್ಟು , ಮರು ಮದುವೆಯಾಗಿ ಗಂಡ ಮಕ್ಕಳೊಂದಿಗೆ ದೆಹಲಿಯಲ್ಲಿ ಸುಂದರ ಸಂಸಾರ ಕಟ್ಟಿಕೊಂಡಳು.

‘ನಮ್ಮ ಪಕ್ಷದ ಸರಕಾರ ಬರಲಿ, ಮಹಿಳೆಯರ ಏಳಿಗೆಗೆ ಶ್ರಮಿಸುತ್ತೇನೆ’

ಜನಪರ ಕೆಲಸ ಮಾಡಬೇಕು, ಹಿಂದುಳಿದವರು ಎಲ್ಲರಿಂದ ತುಳಿಸಿಕೊಳ್ಳಬಾರದು. ಅವರಿಗೆ ಬದುಕುಕೊಡಬೇಕು ಎಂಬ ಆಕೆಯ ಇಚ್ಛೆ ಏಕಲವ್ಯ ಮಂಚವನ್ನು ಹುಟ್ಟು ಹಾಕಿತು. ದುರ್ಗಮ ಪ್ರದೇಶ ಚೆಂಬಲ್‌ ಕಣಿವೆಯ ಡಕಾಯಿತ ರಾಣಿ ಎಂಬ ಬಿರುದಿಗೆ ಹಿಂದೆ ಸಂಭ್ರಮಿಸುತ್ತಿದ್ದ ಫೂಲನ್‌ ದೇವಿ ಜನಪ್ರತಿನಿಧಿಯಾಗಿ ಆಯ್ಕೆಯಾದಳು.

ಚೆಂಬಲ್‌ ಕಣಿವೆಯ ರಾಣಿ ಫೂಲನ್‌ ದೇವಿಯಿ ಖ್ಯಾತಿಯಿಂದಾಗಿ ಶೇಖರ್‌ ಕಪೂರ್‌ ನಿರ್ದೇಶನದಲ್ಲಿ ಆಕೆಯ ಬಗೆಗೆ ಬ್ಯಾಂಡಿಟ್‌ ಕ್ವೀನ್‌ ಎಂಬ ಸಿನೆಮಾ ಹೊರಬಂತು. ಲೇಖಕಿ ಮಾಲಾ ಸೇನ್‌ ಎಂಬಾತ ‘ಇಂಡಿಯಾಸ್‌ ಬ್ಯಾಂಡಿಟ್‌ ಕ್ವೀನ್‌’ ಎನ್ನುವ ಹೆಸರಿನಲ್ಲಿ ಆಕೆಯ ಜೀವನ ಚರಿತ್ರೆ ಬರೆದ.

ಜೈಲಿನಿಂದ ಬಿಡುಗಡೆಯಾದಾಗ ಫೂಲನ್‌ ಬದಲಾಗಿದ್ದಳು. 1996 ರಲ್ಲಿ ಮಧ್ಯಪ್ರದೇಶದ ಮಿರ್ಜಾಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಳು. ಮಿರ್ಜಾಪುರವನ್ನೇ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ, ಅಲ್ಲಿ ನನಗೆ ಹೆಚ್ಚು ಮಂದಿ ಅಭಿಮಾನಿಗಳಿದ್ದಾರೆ ಎಂದು ಆನ್‌ಲೈನ್‌ ಚಾಟ್‌ ಒಂದರಲ್ಲಿ ಫೂಲನ್‌ ಹೇಳಿದ್ದಳು.

ಪೌಡರು, ಲಿಪ್‌ ಸ್ಟಿಕ್‌, ಜರಿ ಸೀರೆಯಾಂದಿಗೆ ಚಂಬಲ್‌ ಕಣಿವೆಯ ಡಕಾಯಿತೆ ನಾಗರಿಕಳಾಗಿದ್ದಳು. ನಮ್ಮ ಪಕ್ಷದ ಸರಕಾರ ಬರಲಿ, ಮಹಿಳೆಯರ ಏಳಿಗೆಗೆ ಶ್ರಮಿಸುತ್ತೇನೆ ಎನ್ನುತ್ತಿದ್ದಳು. ಆಕೆ ಆಸೆಪಟ್ಟಿದ್ದ ಪ್ರತಿಷ್ಠಿತ ನಾಗರಿಕ ಬದುಕು ಆಕೆಗೆ ಸಿಕ್ಕಿದ್ದು ಬರೀ ಏಳು ವರ್ಷ. ಅನಕ್ಷರಸ್ಥೆ ಪಾರ್ಲಿಮೆಂಟಿನಲ್ಲಿ ಏನು ಮಾಡಿಯಾಳು ಎಂಬ ಉಡಾಫೆಗಳಿಗೆ, ಅನಕ್ಷರಸ್ಥರು ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಎಂಬ ಚರ್ಚೆಗಳಿಗೆ ತನಗರಿವಿಲ್ಲದಂತೆಯೇ ವಸ್ತುವಾಗಿದ್ದ ಫೂಲನ್‌ ದೆಹಲಿಯ ತನ್ನ ವಿಶಾಲ ಮನೆಯ ಮುಂದೆ ಜುಲೈ 25 ರಂದು ಹಂತಕರ ಗುಂಡೇಟಿಗೆ ಬಲಿಯಾದಾಗ ಆಕೆಗೆ 44 ವರ್ಷ.

ಸರ್ಕಾರಕ್ಕೆ ಸವಾಲೊಡ್ಡಿದ ಮಹಿಳೆ, ಸಾವಿರಾರು ಜನರ ಎದೆಗಳಲ್ಲಿ ಭಯ ಬಿತ್ತಿದ ಹೆಣ್ಣು , ಅನ್ಯಾಯ ಮಾಡಿದವರನ್ನು ಕೊಚ್ಚಿದ ಫೂಲನ್‌ ಇನ್ನಿಲ್ಲ . ಆದರೆ, ಭಾರತದ ಸ್ತ್ರೀಯರ ಬಗ್ಗೆ ಮಾತನಾಡುವಾಗೆಲ್ಲ ನಾವು ಫೂಲನ್‌ ಬಿಟ್ಟು ಮುಂದೆ ಹೋಗುವಂತಿಲ್ಲ . ಫೂಲನ್‌ ಓರ್ವ ವ್ಯಕ್ತಿಯಲ್ಲ . ಇದೇ ‘ಭವ್ಯ ಭಾರತ’ ಸಮಾಜದ ಸೃಷ್ಟಿ .

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X