ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಂಥಲ್ಲದ ಪಟೇಲ್‌

By Staff
|
Google Oneindia Kannada News

j.h.patelಜಯದೇವಪ್ಪ ಹಾಲಪ್ಪ ಪಟೇಲರು ತೀರಿಕೊಂಡಿದ್ದಾರೆ. ಕರ್ನಾಟಕದ ಅತ್ಯಂತ ವರ್ಣರಂಜಿತ ಮುಖ್ಯಮಂತ್ರಿ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪಟೇಲರು ಸೃಷ್ಟಿಸಿರುವ ಶೂನ್ಯ ಅವರನ್ನು ಬಲ್ಲವರಿಗಷ್ಟೇ ಗೊತ್ತು. 1930 ಅ.1ರಂದು ಆಗಿನ ಶಿವಮೊಗ್ಗ ಜಿಲ್ಲೆಯ ಕಾರಿಗನೂರಿನಲ್ಲಿ ಹುಟ್ಟಿದ ಪಟೇಲರದು ಶ್ರೀಮಂತಿಕೆಯ ಹಿನ್ನೆಲೆ. ತಂದೆ ಹಾಲಪ್ಪ ಪಟೇಲ್‌ ಊರಿಗೆ ಪಟೇಲರು. ಕುಟುಂಬದಲ್ಲಿ ಐದನೇ ಮಗನಾಗಿ ಹುಟ್ಟಿದ ಪಟೇಲರು ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಸಮೀಪದ ಕುಂದೂರಿನಲ್ಲಿ ಮಾಧ್ಯಮಿಕ ಶಿಕ್ಷಣ, ದಾವಣಗೆರೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ. ಎ, ಬೆಳಗಾವಿಯಲ್ಲಿ ಕಾನೂನು ಪದವಿ ಪಡೆದು, ದಾವಣಗೆರೆಯಲ್ಲಿ ಕೆಲ ಕಾಲ ವಕೀಲಿ ವೃತ್ತಿಯನ್ನೂ ನಡೆಸಿದರು.

ಮೈಸೂರಿನ ವಿದ್ಯಾಭ್ಯಾಸದ ದಿನಗಳಲ್ಲಿಯೇ ಲೋಕನಾಯಕ ಜಯಪ್ರಕಾಶ ನಾರಾಯಣರನ್ನು ಭೇಟಿ ಮಾಡಿದ್ದರು, ಖ್ಯಾತ ಸಮಾಜವಾದಿ ಲೋಹಿಯಾ ಹಾಗೂ ಮಧುಲಿಮೆಯಿ ಅವರಿಂದ ಪ್ರಭಾವಿತರಾಗಿದ್ದರು. 1942ರ ಕ್ವಿಟ್‌ ಇಂಡಿಯಾ ಚಳುವಳಿ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟ ಪಟೇಲರು, ಮೊದಲ ಬಾರಿಗೆ ಜೈಲುವಾಸದ ರುಚಿಯನ್ನು ಕಂಡರು. ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಜಮೀನ್ದಾರರ ವಿರುದ್ಧ ನಡೆದ ಕಾಗೋಡು ಸತ್ಯಾಗ್ರಹದಲ್ಲಿ ಜಮೀನ್ದಾರರೊಬ್ಬರ ಮಗ ಭಾಗವಹಿಸಿದ್ದು, ಅವತ್ತಿನ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು. ಇದು ಇವತ್ತಿಗೂ ಪಟೇಲರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

1967ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆರಿಸಿ ಹೋಗಿದ್ದ ಪಟೇಲರು ಅಧಿವೇಶನದಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಪ್ರಾದೇಶಿಕ ಭಾಷೆಗಳಿಗೆ ನೀಡಬೇಕಾದ ಪ್ರಮಾಖ್ಯತೆಯನ್ನು ಪ್ರತಿಪಾದಿಸಿದ್ದರು.

ಪಟೇಲರಂಥ ವರ್ಣರಂಜಿತ, ಬಹುಮುಖ ಪ್ರತಿಭೆಯನ್ನು ಶಬ್ಧಗಳಲ್ಲಿ ಹಿಡಿದಿಡುವುದು ಕಷ್ಟ. ಅಪಾರ ಅನುಭವ, ಓದು, ಮಹಾನ್‌ ವ್ಯಕ್ತಿಗಳ ಒಡನಾಟ ಅವರನ್ನು ಮಾಗಿಸಿದ್ದವು. ಹಾಸ್ಯ ಪ್ರವೃತ್ತಿ ಹೊಂದಿದ್ದ ಪಟೇಲರು ಕಡು ಕೋಪಿ, ಹಠವಾದಿಯೂ ಹೌದು. ನೇರ ನಡೆ-ನುಡಿ, ಹಾಸ್ಯ ಪ್ರವೃತ್ತಿ , ಮೊನಚು ಮಾತಿನಿಂದ ಸದಾ ಸುದ್ದಿಯಲ್ಲಿದ್ದ ಪಟೇಲರು ಎಂದೂ ಸುದ್ದಿಯ ಬೆನ್ನು ಹತ್ತಿದವರಲ್ಲ. ಅವರ ವಿಶಿಷ್ಟ ವ್ಯಕ್ತಿತ್ವದಿಂದಾಗಿಯೇ ವಿವಾದಗಳೂ ಅವರನ್ನು ಬಿಡಲಿಲ್ಲ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದ ಸಂದರ್ಭದಲ್ಲಿ ಪಟೇಲರು ಆಡಿದ ಮದಿರೆ- ಮಾನಿನಿ ತಮ್ಮ ವೀಕ್‌ನೆಸ್‌ ಎಂಬ ಮಾತುಗಳು ಅನೇಕರನ್ನು ಬೆಚ್ಚಿ ಬೀಳಿಸಿದವು. ಇದು ಪಟೇಲರ ನೇರವಂತಿಕೆ.

1 ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X