ಕಷ್ಟಗಳು ಬಂದರೆ ಸಾಲಾಗಿ ಬರುತ್ತದಂತೆ
ಪ್ರತಿಯಾಬ್ಬ ಯಶಸ್ವಿ ಪುರುಷನ ಹಿಂದೆ ......
ರಾಜ್ ಎನ್ನುವ ಸಸಿ ಹೆಮ್ಮರವಾಗುವ ಹಿಂದೆ ಕಾರ್ಯ ನಿರ್ವಹಿಸಿದ ಪಾರ್ವತಮ್ಮನವರ ದೃಢ ನಿಲುವುಗಳು ಅನೇಕರ ಟೀಕೆಗೆ ಒಳಗಾದದ್ದೂ ಉಂಟು. ಗಂಡ, ಮನೆ, ಮಕ್ಕಳು ಎನ್ನುವ ಪಟ್ಟ, ರಾಜ್ ಅವರನ್ನು ಜನ ಸಂಪರ್ಕದಿಂದ ಬೇರ್ಪಡಿಸಿದರು ಎನ್ನುವ ಆಪಾದನೆ, ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಿಲ್ಲ ಎನ್ನುವ ದೂರು, ಮುಂತಾಗಿ ಪಾರ್ವತಮ್ಮನವರ ವಿರುದ್ಧ ಒಡಕು ಮಾತುಗಳು ಕೇಳಿ ಬರುತ್ತವೆ. ಇವೆಲ್ಲ ಪೂರ್ಣ ಸುಳ್ಳು ಎಂದು ತಳ್ಳಿಹಾಕುವುದು ಸಾಧ್ಯವಿಲ್ಲ . ಆದರೆ, ಹೆಜ್ಜೆ ಹೆಜ್ಜೆಗೂ ಕಾಲೆಳೆವ ರಂಗದಲ್ಲಿ , ಬೆಳವಣಿಗೆಯ ದಾರಿಯಲ್ಲಿ ಪಾರ್ವತಮ್ಮನವರಿಗೆ ಬೇರೆ ಆಯ್ಕೆಗಳಿರಲಿಲ್ಲ . ಆಕೆ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ರಾಜ್ ಕುಟುಂಬ ಈ ಹೊತ್ತು ಇರುತ್ತಿದ್ದ ಸ್ವರೂಪವೇ ಬೇರೆಯದಾಗಿರುತ್ತಿತ್ತು .
ರಾಜ್ ಜನಪ್ರಿಯತೆಯ ಶೃಂಗದಲ್ಲಿದ್ದಾಗ, ಚಿತ್ರಗಳೆಲ್ಲಾ ಸಿಲ್ವರ್ ಜ್ಯುಬಿಲಿ ಆಚರಿಸುತ್ತಿದ್ದಾಗ, ನಿರ್ಮಾಪಕರು ಮಾತ್ರ ರಾಜ್ ಚಿತ್ರ ಮಾಡಿ ನಷ್ಟ ಮಾಡಿಕೊಂಡೆವು ಎನ್ನುತ್ತಿದ್ದರು. ಈ ಸೋಜಿಗ ಒಡೆಯಲೆಂದೇ ಪಾರ್ವತಮ್ಮ ವಜ್ರೇಶ್ವರಿ ಕಂಬೈನ್ಸ್ ಹುಟ್ಟು ಹಾಕಿದರು. ಮೈದುನ ಹಾಗೂ ತಮ್ಮನ ನೆರವಿನಲ್ಲಿ ಸ್ವಂತ ಚಿತ್ರ ನಿರ್ಮಾಣ ಮಾಡಿದರು. ರಾಜ್ ಚಿತ್ರಗಳ ಹಿಂದೆ ಇದ್ದ ಕೊಪ್ಪರಿಗೆ ಅವರಿಗೆ ಅರ್ಥವಾದದ್ದು ಆಗಲೇ. ಪರಿಣಾಮವಾಗಿ ರಾಜ್‌ಕುಮಾರ್ ಕಾಲ್‌ಷೀಟ್ ಸ್ವಂತ ಬ್ಯಾನರ್‌ಗಷ್ಟೆ ಸೀಮಿತವಾಯಿತು. ಇದರಿಂದಾಗಿ ಹಲವು ನಿರ್ಮಾಪಕರ ಕಣ್ಣು ಕೆಂಪಾದವು.
ಇಂದು ವಜ್ರೇಶ್ವರಿ ಕಂಬೈನ್ಸ್ ಗಾಂಧಿನಗರದ ಅವಿಭಾಜ್ಯ ಅಂಗವಾಗಿ ಬೆಳೆದಿದೆ, ಪಾರ್ವತಮ್ಮ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಪಕಿಯಾಗಿ ಬೆಳೆದಿದ್ದಾರೆ. ಚಿತ್ರಕ್ಕೆ ಕತೆಯನ್ನು ಆಯುವುದು, ನಿರ್ದೇಶಕ- ನಾಯಕಿಯರನ್ನು ಗೊತ್ತು ಮಾಡುವುದು ಸೇರಿದಂತೆ ಉದ್ಯಮದ ಎಲ್ಲಾ ವರಸೆಗಳೂ ಅವರಿಗೆ ಕರಗತವಾಗಿವೆ. ಈ ರೂಪಾಂತರದ ಹಿಂದಿನ ಹೆಜ್ಜೆ ಗುರುತುಗಳಲ್ಲಿನ ಶ್ರಮ ಅವರಿಗಷ್ಟೇ ಗೊತ್ತು .
ರಾಜ್‌ರೊಂದಿಗೆ ಪಾರ್ವತಮ್ಮನವರ ಮದುವೆಯಾದಾಗ, ಅವರಿನ್ನೂ ಜನಪ್ರಿಯರಾಗಿರಲಿಲ್ಲ . ರಾಜ್‌ಗೆ ಕಣ್ಣಪ್ಪನ ಪಾತ್ರ ಸಿಕ್ಕಿದ್ದೇ ಮದುವೆಯಾದ ನಂತರ. ರಾಜ್ ಕುಟುಂಬಕ್ಕೆ ಹೋಲಿಸಿದರೆ, ಪಾರ್ವತಮ್ಮನರ ಮನೆಯವರ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು . ರಾಜ್ ಓದಿದ್ದು ನಾಲ್ಕನೇ ಇಯತ್ತೆಯಾದರೆ, ಪಾರ್ವತಮ್ಮ ಆಗಿನ ಕಾಲದಲ್ಲೇ ಎಲ್‌ಎಸ್(10 ನೇ ತರಗತಿ) ಪಾಸು ಮಾಡಿದ್ದರು. ಆ ದಿನಗಳ ಬಡತನ, ಮೆಟ್ಟಿಲುಗಳನ್ನು ಏರುವಾಗಿನ ಆತಂಕಗಳನ್ನು ರಾಜ್ ದಂಪತಿಗಳು ಇಂದಿಗೂ ಮರೆತಿಲ್ಲ . ಸಮಾಜದ ಚಟುವಟಿಕೆಗಳಲ್ಲಿ ತಲೆ ತೂರಿಸದೆ ನಿರ್ಲಿಪ್ತವಾಗಿದ್ದರೂ, ಯಾರಿಗೂ ಕೇಡೆಣಿಸುವ ಜಾಯಮಾನ ಅವರದ್ದಲ್ಲ .
ಪತ್ರಿಕೆಗಳಲ್ಲಿ ರಾಜ್‌ರ ತುಂಬು ಕುಟುಂಬದ ಚಿತ್ರವನ್ನು ಕಂಡ ಅನೇಕರಿಗೆ, ಆ ಕುಟುಂಬ ನಾಡಿನ ಆದರ್ಶ ಕುಟುಂಬ ಅನ್ನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ . ಆ ಕುಟುಂಬವೀಗ ಆತಂಕ ಎದುರಿಸುತ್ತಿದೆ. ಕುಟುಂಬವನ್ನು ಕಟ್ಟಿದ ಈ ಶತಮಾನದ ಹೆಣ್ಣು ಆಸ್ಪತ್ರೆಯಲ್ಲಿದ್ದಾರೆ. ಇಂದು ಬಂದಾರು, ನಾಳೆ ಬಂದಾರು ಎನ್ನುವ ಅವರ ಐವತ್ತು ದಿನಗಳ ನಿರೀಕ್ಷೆ ಜೀವವನ್ನು ಹಣ್ಣಾಗಿಸಿದೆ. ಈ ಅವಸ್ಥೆಯಲ್ಲೂ ನಾನು ಕ್ಷೇಮವಾಗಿದ್ದೇನೆ, ನೀವು ಶಾಂತಿಯಿಂದಿರಿ ಎಂದು ಪಾರ್ವತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ಅದು ಪಾರ್ವತಮ್ಮನವರಿಗಷ್ಟೆ ಸಾಧ್ಯವಾಗುವ ನಡವಳಿಕೆ. ಈ ಸಜ್ಜನಿಕೆ ಕಂಡವರೆಲ್ಲರದೂ ಮುತ್ತು ಕಟ್ಟಿದ ಕೈ ಬರಿದಾಗುವುದಿಲ್ಲವೆನ್ನುವ ನಿರೀಕ್ಷೆ.
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications