ಕಷ್ಟಗಳು ಬಂದರೆ ಸಾಲಾಗಿ ಬರುತ್ತದಂತೆ
ಇತಿಹಾಸ ಪುನರಾವರ್ತನೆಯಾಗುತ್ತದೆ ಎನ್ನುವ ಮಾತನ್ನು ಪುರಾಣಕ್ಕೂ ಅನ್ವಯಿಸುವುದಾದರೆ, ಈ ಮಾತಿಗೆ ಇಡೀ ರಾಜ್ಯಕ್ಕೆ ಆದರ್ಶ ಕುಟುಂಬ ಎನಿಸಿಕೊಂಡ ರಾಜ್ ಕುಟುಂಬ ಉತ್ತಮ ಉದಾಹರಣೆ ಆಗಬಲ್ಲದು. ಯಜಮಾನ ಕಾಡಿನಲ್ಲಿ ನರಹಂತಕನೊಬ್ಬನ ಒತ್ತೆಯಾಳಾಗಿದ್ದರೆ, ಮನೆಯಾಡತಿ ಆಸ್ಪತ್ರೆಯಲ್ಲಿದ್ದಾಳೆ. ರಾಜ್ ಅವರ ಸತ್ಯ ಹರಿಶ್ಚಂದ್ರ ಚಿತ್ರವನ್ನು ನೋಡಿದವರಿಗೆ ಈ ದುರಂತವನ್ನು ಅರ್ಥೈಸಿಕೊಳ್ಳುವುದು ಸುಲಭ.
ಕನ್ನಡಿಗರು ಕಂಡಂತೆ, ಪಾರ್ವತಮ್ಮ ಗಂಡನ ನೆರಳಾಗಿಯೇ ಬೆಳೆದವರು, ರಾಜ್ ಅವರ ಜನಪ್ರಿಯತೆಯ ಹಿನ್ನೆಲೆಯಲ್ಲಿಯೇ ಅಸ್ತಿತ್ವ ಕಂಡುಕೊಂಡವರು. ಹಣೆಯಲ್ಲಿ ಕಾಸಗಲ ಕುಂಕುಮದ, ಅಲಂಕಾರ ಇಲ್ಲದ, ಸಾದಾ ಸೀರೆಯ ಅಪ್ಪಟ ಭಾರತೀಯ ಹೆಣ್ಣಾಗಿಯೇ ಜನರಿಗೆ ಪರಿಚಿತರು. ಸಮಾರಂಭಗಳಲ್ಲಿ ರಾಜ್ ನೆರಳಂತೆ ಕಾಣಿಸಿಕೊಳ್ಳುತ್ತಿದ್ದುದು ಬಿಟ್ಟರೆ, ಉಳಿದಂತೆ ಅವರು ಅಷ್ಟೇನೂ ಜನಪ್ರಿಯರಲ್ಲ , ಅವರ ಧ್ವನಿಯನ್ನು ಕೇಳಿದವರು ಕಡಿಮೆಯೇ. ಆದರೆ, ಇವೆಲ್ಲಕ್ಕೂ ಮೀರಿದಂತೆ ಪಾರ್ವತಮ್ಮನವರಿಗೆ ಬೇರೆಯದೇ ಮುಖವಿದೆ. ದೇವಸ್ಥಾನದ ಮುಂದಿನ ಈಡುಗಾಯಿಗೆ ಕಾಯುತ್ತಿದ್ದ ಹುಡುಗ, ನಾಟಕಗಳಲ್ಲಿ ಬಂದು ಹೋಗುವ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಖಯಾಲಿಯ ಕಲಾವಿದ ಮುಂದಿನ ದಿನಗಳಲ್ಲಿ ಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿ ಬೆಳೆಯುವಲ್ಲಿ ಅವರ ಪಾಲು ದೊಡ್ಡದಿದೆ. ಮಕ್ಕಳನ್ನೂ ಚಿತ್ರರಂಗದಲ್ಲಿ ಪ್ರತಿಷ್ಠಾಪಿಸುವಲ್ಲಿ ಅವರ ಚಾಣಾಕ್ಷತೆಯಿದೆ. ಯಶಸ್ವಿ ಪುರುಷರ ಹಿಂದಿನ ಕೈ ಅವರದು.
ರಾಜ್ ಅಪಹರಣವಾದಾಗ, ಮಾಧ್ಯಮಗಳಲ್ಲಿ ಪಾರ್ವತಮ್ಮನವರನ್ನು ಕಂಡವರೆಲ್ಲರೂ ಅರೆಕ್ಷಣ ಬೆಕ್ಕಸ ಬೆರಗಾದರು. ಗಂಡನನ್ನು ನರಹಂತಕನ ಕೈಗೆ ಒಪ್ಪಿಸಿಬಂದರೂ ನಿರಾಳವಾಗಿದ್ದ ಅವರನ್ನು ಕಂಡ ಕೆಲವರು, ಈಯಮ್ಮನದು ಗಂಡೆದೆ ಎಂದಿದ್ದರು. ಅದಕ್ಕೆ ತಕ್ಕಂತೆಯೇ ಅವರು ಎಲ್ಲರಿಗೆ ಧೃತಿ ಹೇಳುತ್ತಾ, ಒಳಗೇ ಕೊರಗಿದರು. ಸಾಮಾನ್ಯರಿಗಿಂತ ಪಾರ್ವತಮ್ಮ ಭಿನ್ನವಾಗುವುದು ಇದರಿಂದಲೇ. ತನ್ನ ತುಸು ಉದ್ವಿಗ್ನತೆ, ಕಣ್ಣಲ್ಲಿ ಕಾಣಿಸಿಕೊಳ್ಳುವ ಹನಿ ನೀರು ನಾಡಿನಲ್ಲಿ ಉಂಟು ಮಾಡಬಹುದಾದ ಉತ್ಪಾತದ ಅರಿವು ಆಕೆಗಿತ್ತು . ನಾಡೇ ದಿಗ್ಭ್ರಮೆಗೊಳಗಾಗಿ ರೋಧಿಸುತ್ತಿದ್ದಾಗ ಈಕೆ ಗಟ್ಟಿಯಾಗಿ ಅಳಲೂ ಸಾಧ್ಯವಿರಲಿಲ್ಲ . ಇದು ಪಾರ್ವತಮ್ಮನವರಿಗೆ 60 ವರ್ಷಗಳ ಬದುಕು ಕಟ್ಟಿಕೊಟ್ಟ ಪ್ರಬುದ್ಧತೆ.
1 ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications