• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್‌ ಆರ್‌ ಐ ಮಕ್ಕಳ ಭಾರತ್‌ ಏಕ್‌ ಖೋಜ್‌

By Staff
|

ಪುಣೆ : ರಾಖಿ ಕೊಹ್ಲಿ ಪುಸ್ತಕವೊಂದರ ಓದಿನಲ್ಲಿ ತಲ್ಲೀನಳಾಗಿದ್ದಾಳೆ. ಅದು ಸಾಮಾನ್ಯವಾಗಿ ವಿದ್ಯಾರ್ಥಿಗಳು ಓದುವಂಥ ಯಾವುದೋ ಪಠ್ಯವಲ್ಲ, ಕಥೆ- ಕಾದಂಬರಿಯೂ ಅಲ್ಲ, ಹಿಂದಿ ಕಲಿಕೆಯ ಬಿಗಿನರ್ಸ್‌ ಗೈಡ್‌.

ಅಮೆರಿಕೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾದ ರಾಖಿ ಹಿಂದಿಯಲ್ಲಿ ಪಳಗುವ ಯತ್ನದಲ್ಲಿದ್ದರೆ, ಆಕೆಯ ಗೆಳತಿ ಹಿಮಾನಿ ಕುಲಕರ್ಣಿ ಹಿಂದೂಸ್ಥಾನಿ ಸಂಗೀತದಲ್ಲಿ ಮೈಮರೆತಿದ್ದಾಳೆ. ಉಳಿದ ಗೆಳತಿಯರು ಭಾರತದ ಖೋಜ್‌ನಲ್ಲಿ ತೊಡಗಿದ್ದಾರೆ. ಇದೇನಪ್ಪಾ ಭಾರತ ಹುಡುಕೋದು ಅಂದ್ಕೊಂಡ್ರ. ಅಲ್ಲ, ಇವರಿಗೆ ಗೊತ್ತಿಲ್ಲದ ಇವರದೇ ದೇಶದ ಬಗೆಗೆ ಅರಿಯೋ ಯತ್ನ ಮಾಡ್ತಿದಾರೆ. ಇವರೆಲ್ಲಾ ಭಾರತೀಯ ಮೂಲದ ಅಮೆರಿಕಾ ಪ್ರಜೆಗಳು.

ಇವರಲ್ಲಿ ಅನೇಕರು ಹುಟ್ಟಿದ್ದು, ಬೆಳೆದದ್ದು ಅಮೆರಿಕದಲ್ಲೆ. ಅಪ್ಪ-ಅಮ್ಮ ಹುಟ್ಟಿ, ಬೆಳೆದು, ಆಡಿದ ಈ ನೆಲದ ಸೊಗಡನ್ನು ಉಸಿರಾಡುವ, ಸಂಸ್ಕೃತಿಯೆನಿತು ಎಂದು ತಿಳಿಯುವ ಕುತೂಹಲ ಇವರೆಲ್ಲರನ್ನೂ ಪುಣೆವರೆಗೆ ಕರೆ ತಂದಿದೆ. ಅಮೆರಿಕೆಯ ವಿವಿಧ ವಿಶ್ವವಿದ್ಯಾಲಯಗಳ 19-20 ವರ್ಷದ ಈ ವಿದ್ಯಾರ್ಥಿಗಳು ಪೆನ್‌-ಇನ್‌-ಇಂಡಿಯಾ ಅನ್ನುವ ಆರು ವಾರಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಪುಣೆ ವಿಶ್ವವಿದ್ಯಾಲಯ ಹಾಗೂ ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯಕ್ರಮ ‘ತಾಯ್‌ನೆಲ’ದ ಬಗೆಗೆ ತಿಳಿಯುವ ಉತ್ತಮ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ.

ಇದು ಹೊಸದೇನಲ್ಲ. ಪ್ರತಿ ವರ್ಷವೂ ಅಪ್ಪ-ಅಮ್ಮ ಹುಟ್ಟಿದ ಈ ದೇಶವನ್ನು ತಿಳಿಯುವ ಈ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಅನೇಕ ಅಮೆರಿಕಾ ವಿದ್ಯಾರ್ಥಿಗಳು ತವರಿಗೆ ಬಂದು, ಗಂಗೆ ಕುಡಿದು, ಅಪ್ಪ-ಅಮ್ಮ ಇದ್ದ ಜಾಗೆಯನ್ನು ನೋಡಿ, ತಾತ-ಅಜ್ಜಿ ಅಥವಾ ನೆಂಟರಿಷ್ಟರಿದ್ದರೆ ಅವರನ್ನು ಮಾತಾಡಿಸಿಕೊಂಡು ಸುಂದರ ಅನುಭವಗಳನ್ನು ಇಲ್ಲಿಂದ ಕಟ್ಟಿಕೊಂಡು ಹೋಗಿ, ಅಮೆರಿಕೆಯಲ್ಲಿ ಹಂಚಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಹಿಮಾನಿ ಕುಲಕರ್ಣಿ ತನ್ನ ತಾಯ್ನಾಡಾದ ಪುಣೆಯನ್ನು ನೋಡಿ, ಮಾತೃಭಾಷೆ ಕಲಿಯುವ ಉದ್ದೇಶದಿಂದ ಬಂದಿದ್ದರೆ, ರಾಯ್‌ ಮೆಹ್ತಾಗೆ ಭಾರತವನ್ನ ಅಪ್ಪ-ಅಮ್ಮ , ಬಂಧುಗಳು ನೋಡೋ ರೀತಿ ಬಿಟ್ಟು , ತನ್ನದೇ ಆದ ದೃಷ್ಟಿಕೋನ ಬೆಳೆಸಿಕೊಂಡು ನೋಡೋ ಆಸೆ.

ರಾಖಿ ಐದು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ಮತ್ತೆ ಇಲ್ಲಿಗೆ ಬರಬೇಕೆಂಬ ಆಕೆಯ ಬಯಕೆ ಈ ರೀತಿ ಈಡೇರಿರುವುದು ಆಕೆಗೆ ಸಂತೋಷ ತಂದಿದೆ. ‘ಇಲ್ಲಿಗೆ ಬರಲು ಪ್ರತಿಯಾಬ್ಬರಿಗೂ ಅವರವರದೇ ಆದ ಕಾರಣಗಳಿರಬಹುದು. ಆದರೆ ತಮ್ಮ ಮೂಲ ದೇಶದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಉದ್ದೇಶ ಎಲ್ಲರದ್ದೂ ಆಗಿದ’ ಎನ್ನುತ್ತಾಳೆ ರಾಖಿ. ಫಿಲಿಡೆಲ್ಫಿಯಾದ ಹಿರಿಯ ವಿದ್ಯಾರ್ಥಿ ರಾಯ್‌ ಮೆಹ್ತಾ , ‘ನಮ್ಮಲ್ಲಿ ಕೆಲವರು ಎರಡು ಮೂರು ಸಲ ಇಲ್ಲಿಗೆ ಬಂದಿದ್ದೇವೆ. ಪ್ರತಿ ಬಾರಿಯೂ ನೆಂಟರಿಷ್ಟರ, ಸ್ನೇಹಿತರ ಮನೆಗೆ ಹೋಗೋದರಲ್ಲೇ ಕಾಲ ಕಳೆದು ಹೋಗುತ್ತದೆ. ಯಾವುದೋ ಒಂದು ಸಣ್ಣ ಟೂರ್‌ ಮುಗಿಸಿ, ಮತ್ತೆ ಅಮೆರಿಕಕ್ಕೆ ತೆರಳುತ್ತೇವೆ. ಆದರೆ ಇಲ್ಲಿ ಹಾಗಲ್ಲ. ಭಾರತದ ಬಗ್ಗೆ ಸ್ವತಂತ್ರವಾಗಿ ಅಭ್ಯಾಸ ಮಾಡಿ, ನಮ್ಮದೇ ಆದ ದೃಷ್ಟಿಕೋನ ಬೆಳೆಸಿಕೊಳ್ಳುವುದು ಸಾಧ್ಯ’ ಎನ್ನುತ್ತಾನೆ.

‘ಹಿಂದೆಲ್ಲಾ ಇಲ್ಲಿಗೆ ಬಂದಾಗ ಮನೆಯಲ್ಲೇ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆದು ಹೋಗುತ್ತಿದ್ದೆವು. ನಮ್ಮ ಸೊಫೆಸ್ಟಿಕೇಟೆಡ್‌ ಜಗತ್ತಿನಿಂದ ಹೊರಬಂದು ಭಾರತದ ಜನಜೀವನ ತಿಳಿಯಲು ಈ ಕಾರ್ಯಕ್ರಮ ನೆರವಾಗುತ್ತಿದೆ. ಹಳ್ಳಿ, ಕೊಳಗೇರಿ ಎನ್ನದೆ ಎಲ್ಲೆಡೆ ನಾವೇ ಸುತ್ತುವುದರಿಂದ ಸಮಾಜದ ಸ್ಥಿತಿ ಗತಿಗಳನ್ನು ಅರಿಯುವುದು ಸಾಧ್ಯವಾಗುತ್ತಿದೆ’ ಎಂದು ಹೊಸ ಅನುಭವ ಪಡೆದ ಖುಷಿಯಲ್ಲಿ ಹೇಳುತ್ತಾನೆ ಕಾರ್ತಿಕೇಯ.

ಕೇವಲ 100 ಅಡಿಗಳ ಅಂತರದಲ್ಲಿ ವಾಸಿಸುವ ಬಡವ- ಬಲ್ಲಿದರ ನಡುವಿನ ವ್ಯತ್ಯಾಸವನ್ನು ಈ ವಿದ್ಯಾರ್ಥಿಗಳು ಮನಗಂಡಿದ್ದಾರೆ. ಫೋನ್‌ ಹಾಕಿಸಿಕೊಂಡಿರುವ ಹಳ್ಳಿಗಳ ಮನೆಗಳು, ಟೀವಿ-ಫ್ರಿಡ್ಜ್‌ ಇರುವ ನಗರದ ಕೊಳಗೇರಿಗಳ ಮನೆಗಳನ್ನು ನೋಡಿ ವಿದ್ಯಾರ್ಥಿಗಳು ‘ಹೀಗೂ ಉಂಟೆ’ ಎಂದಿದ್ದಾರೆ. ನಗರದಲ್ಲಿರುವ ಕೊಳಗೇರಿಗಳ ದುಸ್ಥಿತಿಯೂ ಇವರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇವರಲ್ಲಿ ಕೆಲವರು ಸರ್ಕಾರೇತರ ಸಂಸ್ಥೆಯ ಮೂಲಕ ಪುಣೆಯ ಕೊಳಗೇರಿಯಾಂದರಲ್ಲಿ ಸ್ವಯಂ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಕಾರ್ತಿಕೇಯ ಸಹ ಇವರಲ್ಲಿ ಒಬ್ಬ. ‘ಅವ್ಯವಸ್ಥೆಯಲ್ಲಿ ಕೊಚ್ಚಿ ಹೋಗುತ್ತಿದ್ದರೂ ಇಲ್ಲಿನ ಜನರಲ್ಲಿ ಪುಟಿದೇಳುವ ಚೈತನ್ಯವಿದೆ. ಆದರೆ ಅಮೆರಿಕೆಯ ಕೌಂಟರ್‌ಪಾರ್ಟ್‌ಗಳ ಜನರಲ್ಲಿ ಈ ಉತ್ಸಾಹವಿಲ್ಲ. ಇಲ್ಲಿನ ಜನರಲ್ಲಿರುವ ಹುರುಪು ನನಗಿಷ್ಟವಾಗಿದೆ’ ಎನ್ನುತ್ತಾನೆ ಕಾರ್ತಿಕೇಯ.

ಒಂದಿಷ್ಟು ಸಂತಸ , ಇನ್ನೊಂದಿಷ್ಟು ಬೇಸರ

ಸೋನಾ ಷಾಗೆ ಅಂಗಡಿಗಳ ವರ್ತಕರ, ಆಟೋರಿಕ್ಷಾ ಚಾಲಕರ ದುರ್ವರ್ತನೆ ಬೇಸರ ಉಂಟು ಮಾಡಿದೆ. ಈಕೆ ತನ್ನ ಅಮೆರಿಕೆಯ ಬಿಳಿ ಗೆಳೆಯ-ಗೆಳತಿಯರೊಡನೆ ಓಡಾಡುವಾಗ ಛೇಡಿಸುವ ಈ ಜನರ ಬಗ್ಗೆ ಅಸಮಾಧಾನವುಂಟಾಗಿದೆ. ಈ ವಿದ್ಯಾರ್ಥಿಗಳು ಹೇಳುವಂತೆ, ‘ನಾವು ವಿದೇಶೀಯರಾದ್ದರಿಂದ ಸುಲಭವಾಗಿ ಮೋಸ ಮಾಡಬಹುದು ಎಂಬ ಇಲ್ಲಿನ ಜನರ ಧೋರಣೆ ಬೇಸರ ತರಿಸಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಒಂದೆರಡು ದಿನ ಕಳೆದ ಮೇಲೆ ಇಂಥ ಅವಿವೇಕಿಗಳ ಜೊತೆ ಹೇಗೆ ವ್ಯವಹರಿಸಬೇಕು ಎಂಬುದು ಗೊತ್ತಾಗಿದೆ’.

ಲಲಿತಕಲೆ ಅಭ್ಯಾಸ, ಭಾರತೀಯ ಸಂಪ್ರದಾಯದ ಮೂಲಗಳು, ಆರೋಗ್ಯ ಹಾಗೂ ಸಮಾಜ ಮತ್ತು ಜನಜೀವನ ಅಭಿವೃದ್ಧಿ ಎಂಬ ವಿಷಯಗಳ ಪೈಕಿ ಯಾವುದಾದರೂ 2 ವಿಷಯಗಳನ್ನು ಆರಿಸಿಕೊಂಡು, ಅವಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಸತತವಾದ ಉಪನ್ಯಾಸಗಳು, ಕ್ಷೇತ್ರ ಪರಿಚಯ ಪ್ರವಾಸಗಳಲ್ಲಿ ವಿದ್ಯಾರ್ಥಿಗಳು ಬಿಜಿಯಾಗಿದ್ದಾರೆ. ಕಲೆಯನ್ನು ಹೆಚ್ಚು ವಿದ್ಯಾರ್ಥಿಗಳು ಆರಿಸಿಕೊಂಡಿದ್ದು, ಕೆಲವರು ತಬಲಾ, ಶಹನಾಯಿ ಅಭ್ಯಾಸ ಮಾಡುತ್ತಿದ್ದರೆ, ಮತ್ತೆ ಕೆಲವರು ನೃತ್ಯ ಕಲಿಕೆಯಲ್ಲಿ ತೊಡಗಿದ್ದಾರೆ.

ಇಲ್ಲಿನ ಸಂಸ್ಕೃತಿಯ ಸಾರ ಸವಿದು, ತಮ್ಮ ಮೂಲ ದೇಶದ ಬಗೆಗೆ ಸಾಕಷ್ಟು ತಿಳಿದುಕೊಂಡು ಹೋದಲ್ಲಿ , ತಮ್ಮ ಅಮೆರಿಕೆಯ ಕೌಂಟರ್‌ಪಾರ್ಟ್‌ನ ಬಿಳಿ ಗೆಳೆಯನಿಗೆ ಚಕ್ಕಳಮುಕ್ಕಳ ಹಾಕಿಕೊಂಡು ನಮ್ಮಮ್ಮನ ದೇಶ ಹಾಗೆ, ನನ್ನಪ್ಪನ ದೇಶ ಹೀಗೆ ಅಂತ ದೊಡ್ಡ ಕಥೆಯನ್ನೇ ಹೇಳಬಹುದು. ತನ್ನನ್ನು ಬುದ್ಧಿಸ್ಟ್‌ ಎಂದು ಕರೆದುಕೊಳ್ಳುವ ಡೇವಿಡ್‌ ರೋಸ್‌ಮನ್‌ಗೆ ಭಾರತದ ಧರ್ಮಗಳ ಬಗ್ಗೆ ತಿಳಿದುಕೊಂಡು, ನೈಋತ್ಯ ಮಿಸಿಸಿಪ್ಪಿಯಲ್ಲಿರುವ ತನ್ನ ಗೆಳೆಯರಿಗೆ ಹಂಚುವ ಆಸೆ. ನ್ಯೂಯಾರ್ಕ್‌ನ ವ್ಯಾನ್‌ ರೆಸಿನ್‌ ಜಾನ್‌ಸನ್‌ ಹಿಂದೂಸ್ತಾನಿ ಸಂಗೀತ ಮೆಲುಕು ಹಾಕುತ್ತಲೇ ಇಲ್ಲಿನ ಮನಸೆಳೆವ ರೇಷ್ಮೆ ಸೀರೆಗಳನ್ನು ಹೊಗಳುತ್ತಾನೆ.

ಪುಣೆಯಾದ್ಯಂತ ಪ್ರವಾಸ ಮಾಡಿರುವ ವಿದ್ಯಾರ್ಥಿಗಳು, ಅಜಂತಾ-ಎಲ್ಲೋರ ಕೂಡ ನೋಡಿ ಬಂದಿದ್ದಾರೆ. ಆಯುರ್ವೇದದ ಆಸ್ಪತ್ರೆಯ ಚೂರ್ಣವನ್ನೂ ಸವಿದಿದ್ದಾರೆ. ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯದ ಸುರೇಂದರ್‌ ಗಂಭೀರ್‌, ‘ಈ ಕಾರ್ಯಕ್ರಮಕ್ಕೆ ದೊರಕುತ್ತಿರುವ ಪ್ರತಿಕ್ರಿಯೆ ಆರು ವಾರಗಳ ಈ ಪ್ರವಾಸವನ್ನು 4 ತಿಂಗಳ ಅವಧಿಯ ಸೆಮಿಸ್ಟರ್‌ ಆಗಿ ಪರಿವರ್ತಿಸುವ ಕುರಿತು ವಿಶ್ವವಿದ್ಯಾಲಯ ಚಿಂತಿಸುವಂತೆ ಮಾಡಿದೆ’ ಎನ್ನುತ್ತಾರೆ.

ಈ ತಂಡದಲ್ಲಿ ಬೆಂಗಳೂರಿನ ಲಕ್ಷ್ಮಿಯೋ, ಭಾರತಿಯೋ ಇದ್ದರೂ ಇರಬಹುದು. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಗೋ ಹೂವಿನ ಪಕ್ಕದಲ್ಲೇ ಇರುವ ಕೊಳಗೇರಿ ಜನರ ಬಾಡಿದ ಬದುಕು ಈಗ ಇವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಕಾರಿನಲ್ಲಿ ಸುತ್ತುತ್ತಾ ಶಾಪಿಂಗ್‌ ಮಾಡಿ, ಪಿಡ್‌ಜಾ, ಹ್ಯಾಂಬರ್ಗರ್‌ ತಿನ್ನೋ ಜೀವಗಳ ಮೂಗಿಗೆ ರಾಗಿ ರೊಟ್ಟಿ ವಾಸನೆ ಬಡಿದಿದೆ. ತಾಯ್ನೆಲ ಬಿಟ್ಟು ಹೋಗಿದ್ದರೂ ತನ್ನಮ್ಮ ಹುಟ್ಟಿದ ದೇಶವನ್ನು ಅರಿಯುವ ಇವರ ತುಡಿತವನ್ನು ಮೆಚ್ಚಲೇಬೇಕು. ದೇಶ ತೊರೆದ ಇನ್ನೂ ಹೆಚ್ಚೆಚ್ಚು ಜನ ತಮ್ಮ ಮಕ್ಕಳನ್ನು ಆಗಾಗ ತವರಿಗೆ ಕಳಿಸೋ ಮನಸ್ಸು ಮಾಡಲಿ ಅನ್ನೋದೇ ನಮ್ಮ ಬಯಕೆ.

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more