ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮಾ ಭಾರದ್ವಾಜ್‌

By Staff
|
Google Oneindia Kannada News

ಯೋರ್ಬಾ ಲಿಂಡ (ಕ್ಯಾಲಿಫೋರ್ನಿಯಾ) : ಅಮೆರಿಕೆಯಲ್ಲಿರೋ ಭಾರತೀಯರಿಗೆ ಗೌರವ, ಹೊಗಳಿಕೆಗಳ ಹರಿವು ಮುಂದುವರೆದಿದೆ. ಹತ್ತು ದಿನಗಳ ಮುಂಚೆ ಭಾರತೀಯ ಮೂಲದ ಎಂಜಿನಿಯರ್‌ ವಾಧ್ವಾ ಅವರನ್ನು ಯುಎಸ್‌ ನ್ಯೂಸ್‌ ಮತ್ತು ವರ್ಲ್ಡ್‌ ರಿಪೋರ್ಟ್‌ ಕೊಂಡಾಡಿದ್ದನ್ನು ನೀವು ಓದಿಕೊಂಡಿರುವ ಬೆನ್ನಲ್ಲೇ ಭಾರತೀಯರ ಸಾಧನೆಯನ್ನು ಕ್ಯಾಲಿಫೋರ್ನಿಯಾದ ನಿಯತಕಾಲಿಕ ಮುಖಪುಟ ಲೇಖನದಲ್ಲಿ ಪ್ರಕಟಿಸಿದೆ. ಆದರೆ ಈ ಭಾರತೀಯರು ಎಂಜಿನಿಯರುಗಳಲ್ಲ, ಕಲೆಗಾರರು. ಭಾರತದಲ್ಲಿ ಪಾಪ್‌- ರ್ಯಾಪ್‌ ಸಂಗೀತ, ಎಂಟಿವಿ- ವಿಟಿವಿ ಸಂಸ್ಕೃತಿ ಛಾಪು ಮೂಡಿಸುತ್ತಾ, ಶಾಸ್ತ್ರೀಯ ಸಂಗೀತ, ನೃತ್ಯಗಳನ್ನು ಮಸುಕಾಗಿಸುತ್ತಿರುವ ಈವತ್ತಿನ ಸಂದರ್ಭದಲ್ಲಿ ಅಮೆರಿಕೆಯಲ್ಲಿ ಶಾಸ್ತ್ರೀಯ ಕಲೆಗಳು ಸಂಪ್ರದಾಯವಾಗಿ ಗಟ್ಟಿಯಾಗುತ್ತಿವೆ ಎಂದರೆ ನೀವು ನಂಬುತ್ತೀರಾ?

ನೃತ್ಯಕ್ಕೆ ಸಂಬಂಧಿಸಿದ ಸ್ಥಳೀಯ ನಿಯತಕಾಲಿಕದ ಹೋದ ತಿಂಗಳ ಸಂಚಿಕೆಯ ಮುಖಪುಟವನ್ನು ಭಾರತೀಯ ಮೂಲದ ಭರತನಾಟ್ಯಂ ನೃತ್ಯಗಾರ್ತಿ ರಮಾ ಭಾರದ್ವಾಜ್‌ ಹಾಗೂ ಅವರ ಪುತ್ರಿ ಅಲಂಕರಿಸಿದ್ದರು.

ಈ ನಿಯತಕಾಲಿಕದ ಮುಖಪುಟದಲ್ಲಿ ಫೋಟೋ ಬರುವುದು ಸುಲಭದ ವಿಷಯವಲ್ಲ. ಯಾಕೆಂದರೆ, ನೃತ್ಯದ ವಿವಿಧ ಪ್ರಕಾರಗಳು, ಸಮಗ್ರ ಲೇಖನಗಳು, ವ್ಯಕ್ತಿ ವಿಷಯ ಮುಂತಾದವುಗಳನ್ನು ಎರಡು ಮೂರು ಸಲ ಪರಿಶೀಲಿಸಿದ ನಂತರವೇ ಪ್ರಕಟಿಸುವುದು. ಅದರಲ್ಲೂ ಮುಖಪುಟ ಲೇಖನಕ್ಕೆ ತೀವ್ರ ತೆರನಾದ ಪೈಪೋಟಿ.

ಮೂವತ್ತು ಲಕ್ಷ ಪ್ರಸಾರವುಳ್ಳ ಹಳೆಯ (1927ರಿಂದ ಪ್ರಕಟವಾಗುತ್ತಿದೆ) ಹಾಗೂ ಪ್ರಸಿದ್ಧ ನಿಯತಕಾಲಿಕದ ಮುಖಪುಟದಲ್ಲಿ , ಅದೂ ತಾಯ್ನೆಲದ ಸಂಸ್ಕೃತಿ ಬಿಂಬಿಸುವ ಉಡುಗೆಯಲ್ಲಿರುವ ತಮ್ಮ ಹಾಗೂ ಮುದ್ದುಮಗಳ ಚಿತ್ರ ಕಂಡು ಭಾರದ್ವಾಜ್‌ಗೆ ಖುಷಿ, ಆಶ್ಚರ್ಯ ಎರಡೂ ಆಗಿದೆ. ಇದು ಸಾಧ್ಯವಾಗಿದ್ದು ಈ ತಾಯಿ-ಮಗಳ ಶ್ರಮದಿಂದಲೇ.

ನೃತ್ಯ ವಿಮರ್ಶಕರೂ, ಪತ್ರಕರ್ತರೂ ಆದ ಲೌರಾ ಬ್ಲೀಬರ್ಗ್‌ ಜೊತೆಯಲ್ಲಿ ಭಾರದ್ವಾಜ್‌ ಅಂಡ್‌ ಡಾಟರ್‌ ಸೇರಿ, ಅಮೆರಿಕೆಯ ಕುಟುಂಬಗಳಲ್ಲಿ ಭಾರತದ ಶಾಸ್ತ್ರೀಯ ನೃತ್ಯ ಸಂಪ್ರದಾಯವಾಗಿ ಹೇಗೆ ವ್ಯಾಪಕವಾಗುತ್ತಿದೆ ಎಂಬುದರ ಕುರಿತು ಲೇಖನವನ್ನು ಸಿದ್ಧಪಡಿಸಿದರು. ಆದರೆ ತಮ್ಮ ಕೆಲಸಕ್ಕೆ ಇಷ್ಟೊಂದು ಒಳ್ಳೆ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅನಿರೀಕ್ಷಿತ ಫಲವನ್ನು ಸವಿಯುತ್ತಲೇ ನಗುಮೊಗದಿಂದ ಹೇಳುತ್ತಾರೆ ಭಾರದ್ವಾಜ್‌.

ಲೇಖನದಲ್ಲಿ ಭಾರದ್ವಾಜ್‌ ಹಾಗೂ ಅವರ ಮಗಳು ಶೃತಿ ಪರಿಚಯ ಲೇಖನದ ಜೊತೆಗೆ ಅಂಜನಿ ಅಂಬೆಗಾಂವ್‌ಕರ್‌ ಮತ್ತು ಆಕೆಯ ಮಗಳು ಅಮರಪಾಲಿ, ವಿಜಿ ಪ್ರಕಾಶ್‌ ಮತ್ತು ಆಕೆಯ ಮಗಳು ಮೈಥಿಲಿ ಹಾಗೂ ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ನಂದಿತ ಬೆಹೆರಾ ಮತ್ತು ಆಕೆಯ 9 ವರ್ಷದ ಮಗಳು ನೂಪುರ್‌ ಪರಿಚಯ ಲೇಖನಗಳೂ ಇವೆ.

‘ಪ್ಯಾಸೇಜ್‌ ಫ್ರಂ ಇಂಡಿಯ : ಡ್ಯಾನ್ಸಿಂಗ್‌ ಡಾಟರ್ಸ್‌ ’ --ಶೀರ್ಷಿಕೆಯ ಈ ಲೇಖನ, ಪರಿಚಯ ಬರೆಹಗಳ ಜೊತೆಗೆ ಭಾರತೀಯ ನೃತ್ಯ ಪ್ರಕಾರಗಳಾದ ಭರತನಾಟ್ಯಂ, ಕಥಕಳಿ, ಕೂಚಿಪುಡಿ, ಮಣಿಪುರಿ, ಮೋಹಿನಿ ಅಟ್ಟಂ ಹಾಗೂ ಒಡಿಸ್ಸಿ ಬಗೆಗಿನ ವಿವರಣೆಗಳನ್ನೂ ಒಳಗೊಂಡಿದೆ.

ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಒತ್ತಡಗಳಿಲ್ಲದ ಅಮೆರಿಕೆಯಲ್ಲಿ ಭಾರತೀಯರು ತಮ್ಮ ಕಲೆ ಬೆಳೆಸಿಕೊಳ್ಳಲು, ಇತರರಿಗೂ ಅದನ್ನು ಹಂಚಲು ತಾವೇ ವೇದಿಕೆ ನಿರ್ಮಿಸಿಕೊಂಡಿದ್ದಾರೆ. ಸಂಗೀತ, ನೃತ್ಯ ಹೇಳಿಕೊಡುವ ಶಾಲೆಗಳು ಇಲ್ಲಿವೆ. ಅನೇಕ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನೂ ಭಾರತೀಯರು ಇಲ್ಲಿ ನೀಡುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ತಮ್ಮ ಸಂಸ್ಕೃತಿಯನ್ನು ಇಲ್ಲಿನ ಕುಟುಂಬಗಳಲ್ಲಿ ವ್ಯಾಪಕವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ ಅಸಾಮಾನ್ಯವಾದುದು, ಆಸಕ್ತಿಪೂರ್ಣವಾದುದು. ಒಂದು ಮೂಲ ಸಂಸ್ಕೃತಿಯ ವಾತಾವರಣದಲ್ಲಿ ತಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವ ಈ ಯತ್ನಕ್ಕೆ ಬೆನ್ನುತಟ್ಟಲೇ ಬೇಕು. ಸಂದರ್ಶನ ಮಾಡಲು ಕೆಲವು ವಾರಗಳೇ ಬೇಕಾಯಿತು. ಲೇಖನದಲ್ಲಿನ ವಿಷಯಗಳನ್ನು ಎರಡು ಮೂರು ಸಲ ಪರಿಶೀಲಿಸಿದೆ. ಇಷ್ಟೆಲ್ಲಾ ಮಾಡಿದ ನಂತರ ಡ್ಯಾನ್ಸ್‌ ನಿಯತಕಾಲಿಕದ ಸಂಪಾದಕರಿಗೆ ಲೇಖನ ತಲುಪಿಸಿ, ಪ್ರಕಟಿಸುವಂತೆ ಕೋರಿದೆ. ಅದು ಮುಖಪುಟ ಲೇಖನವಾಗುತ್ತದೆಂಬ ನಿರೀಕ್ಷೆಯೇ ಇರಲಿಲ್ಲ. ಅಂಗಡಿಯಲ್ಲಿ ಮ್ಯಾಗಜಿನ್‌ ಕಂಡಾಗ ಥ್ರಿಲ್ಲಾದೆ ಎಂದು ಬ್ಲೀಬರ್ಗ್‌ ವಿವರಿಸುತ್ತಾರೆ.

ಕ್ಲಬ್ಬು- ಪಬ್ಬು ಸಂಸ್ಕೃತಿಯಲ್ಲಿದ್ದುಕೊಂಡೂ ಭಾರತದ ನೃತ್ಯ-ಕಲೆಗಳಿಗೆ ಜೀವ ತುಂಬುತ್ತಾ, ಪಾಶ್ಚಿಮಾತ್ಯರಿಗೂ ಅದರ ರುಚಿ ಉಣಿಸಿ ನಮ್ಮತನವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಈ ಅನಿವಾಸಿ ಭಾರತೀಯರನ್ನು ನಿವಾಸಿ ಭಾರತೀಯರು ಆದರ್ಶವನ್ನಾಗಿ ತೆಗೆದುಕೊಳ್ಳಬೇಕಾಗಿದೆ. ರಾಸಾಯನಿಕ ಗೊಬ್ಬರ ಅತಿಯಾದರೆ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವಂತೆ ಒಂದು ಸಂಸ್ಕೃತಿಯಲ್ಲಿ ಇನ್ನೊಂದು ಸಂಸ್ಕೃತಿ ಅತಿಯಾಗಿ ಸೇರಿದರೆ ಸಹಜವಾಗೇ ಅದು ತನ್ನ ಸೊಗಡನ್ನು ಕಳೆದು ಕೊಳ್ಳುತ್ತದೆ. ಅಮೆರಿಕೆಯಲ್ಲಿ ಹರಡುತ್ತಿರುವ ನಮ್ಮ ಸಂಸ್ಕೃತಿಯ ಗಮಲು ನಿವಾಸೀ ಭಾರತೀಯರ ಮೂಗಿಗೂ ಬಡಿಯಲಿ ಎಂಬುದೇ ನಮ್ಮ ಆಶಯ.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X