• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿಮಾನಿ ಕ್ಷೌರಿಕನಿಗೆರಾಜ್ಯೋತ್ಸವ ಪುರಸ್ಕಾರ

By Staff
|

* ಟಿ.ಎಂ. ಸತೀಶ್‌

ಬೆಂಗಳೂರು : ಕ್ಷೌರಸೇವೆ (ಹೇರ್‌ ಕಟಿಂಗ್‌) ಗಾಗಿ ಈ ಬಾರಿ ಶ್ರಮಿಕ ವರ್ಗದಲ್ಲಿ ಎಂ.ಎಸ್‌. ಮುತ್ತುರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಕ್ಷೌರಸೇವೆಗೂ ಪ್ರಶಸ್ತಿಯೇ ಎಂದು ಹುಬ್ಬೇರಿಸಬೇಡಿ. ಕಾಯಕವೇ ಕೈಲಾಸ ಎಂದು ನಂಬಿರುವ ಮುತ್ತುರಾಜ್‌ ಸಾಧನೆ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಿ.

ನಿಜಕ್ಕೂ ಮುತ್ತುರಾಜ್‌ ಪ್ರಶಸ್ತಿಗೆ ಅರ್ಹ ವ್ಯಕ್ತಿ . ಇವರ ಸಾಧನೆ ಹತ್ತು ಹಲವು. ಕಾಲು ಶತಮಾನಕ್ಕೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದ ‘ದಕ್ಷಿಣ ಆಫ್ರಿಕಾದ ಗಾಂಧೀ’ ಎಂದೇ ಖ್ಯಾತರಾದ ನೆಲ್ಸನ್‌ಮಂಡೇಲಾರ 80ನೇ ಹುಟ್ಟುಹಬ್ಬದ ಅಂಗವಾಗಿ, ರಾಜ್ಯದ ನಾನಾ ಕೊಳಗೇರಿಗಳ ದಲಿತರಿಗೆ ಉಚಿತವಾಗಿ ಕ್ಷೌರ ಮಾಡಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದಾರೆ. ಈ ಚಳವಳಿಗೆ ಅವರಿಟ್ಟ ಹೆಸರು ‘ಸಮಭಾವ ಕ್ಷೌರ’.

ಈ ಚಳವಳಿಗಾಗಿ, ತಮ್ಮ ಕನಸಿನ ಸ್ವಂತ ಗೂಡು ಕಟ್ಟಿಕೊಳ್ಳಲು 20 ವರ್ಷಗಳ ಕಾಲ ಕೂಡಿಸಿಟ್ಟ ಲಕ್ಷಾಂತರ ರುಪಾಯಿಗಳನ್ನು ಮುತ್ತು ವಿನಿಯೋಗಿಸಿದ್ದಾರೆ. 25 ಜನರ ತಂಡದೊಂದಿಗೆ ಸತತ 9 ತಿಂಗಳು ನಾಡಿನಾದ್ಯಂತ ಸಂಚರಿಸಿ, ಅಂಗವಿಕಲರು, ಅನಾಥರು, 4000 ಕೈದಿಗಳು ಸೇರಿದಂತೆ ಒಂದು ಲಕ್ಷ ದಲಿತರಿಗೆ ಉಚಿತವಾಗಿ ಪವಿತ್ರ ಕ್ಷೌರ ಮಾಡಿದ ಸಾಧನೆ ಮೆರೆದಿದ್ದಾರೆ.

ತಾವು ಹೋದೆಡೆಯಲ್ಲೆಲ್ಲಾ ಅಸ್ಪೃಶ್ಯತೆಯ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ, ಶುಚಿತ್ವದ ಮಹತ್ವ ಸಾರಿ, ತಮಟೆ ಬಾರಿಸುತ್ತಾ ಮಂಡೇಲರ ಕಿರುಪರಿಚಯವನ್ನು ನಾಡಿನ ಜನತೆಗೆ ಮಾಡಿಕೊಟ್ಟಿದ್ದಾರೆ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ನಿಮಗೆ ಗೊತ್ತಿರುವ ವೃತ್ತಿಯಲ್ಲೇ ನೀವೂ ಸಾಧಕರಾಗಬಹುದು ಎಂದು ಸಾರಿದ್ದಾರೆ.

ಅಭಿಮಾನಿ ಕ್ಷೌರಿಕ : ಇಷ್ಟೇ ಅಲ್ಲ. ಮುತ್ತರಾಜ್‌ ಒಬ್ಬ ಅಭಿಮಾನಿ ಕ್ಷೌರಿಕ. ಕ್ಷೌರದಲ್ಲೆಂತಹ ಅಭಿಮಾನ ಎನ್ನುತ್ತೀರಾ? ಮುತ್ತುರಾಜ್‌ ಎಲ್ಲರೂ ಅಭಿಮಾನ ಪಡುವಂತೆ, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ನಾಡಿನ ಗಣ್ಯರಿಗೆಲ್ಲಾ ಇವರು ಕ್ಷೌರ ಮಾಡಿದ್ದಾರೆ.

ಹೆಸರಾಂತ ಕನ್ನಡದ ಸಾಹಿತಿಗಳು, ಕಲಾವಿದರು, ಚಲನಚಿತ್ರನಟರು, ಕ್ರೀಡಾಪಟುಗಳು, ಪತ್ರಕರ್ತರಿಗೆಲ್ಲಾ ಮುತ್ತರಾಜ್‌ ಕ್ಷೌರ ಮಾಡಿದ್ದಾರೆ. ಡಾ. ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್‌, ಗಿರೀಶ್‌ ಕಾರ್ನಾಡ್‌, ಹಾ.ಮಾ.ನಾಯಕ್‌, ಯು.ಆರ್‌. ಅನಂತಮೂರ್ತಿ, ವೈ.ಎನ್‌. ಕೃಷ್ಣಮೂರ್ತಿ, ಮಾ. ಹಿರಣ್ಣಯ್ಯ, ಜಿ.ಎಸ್‌.ಎಸ್‌, ಬರಗೂರು ರಾಮಚಂದ್ರಪ್ಪ, ಪಾಟೀಲ್‌ ಪುಟ್ಟಪ್ಪ, ಜಾವಗಲ್‌ ಶ್ರೀನಾಥ್‌.... ಹೀಗೆ ಸಾವಿರ ಗಣ್ಯರಿಗೆ ಕ್ಷೌರ ಮಾಡಿದ ಹಿರಿಮೆಯೂ ಇವರದು.

ಧ್ವನಿಸುರುಳಿ : ನಾನು ಓದಿರುವುದು ಕೇವಲ 5ನೇ ಕ್ಲಾಸು. ನಾನು ಅವರಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಇಲ್ಲ. ಅಂತಹ ಮಹಾನ್‌ ವ್ಯಕ್ತಿಗಳೊಂದಿಗೆ ಒಂದರ್ಧಗಂಟೆ ಕಳೆದು ಧನ್ಯನಾಗೋಣ ಎಂದು ಈ ಸಾಹಸಕ್ಕೆ ಕೈಹಾಕಿದೆ ಎನ್ನುವ ಮುತ್ತು, ಇವರೆಲ್ಲರ ಅಭಿಮಾನ, ಪ್ರೋತ್ಸಾಹ, ಆಶೀರ್ವಾದ ಮಿಗಿಲಾಗಿ ಅವರೆಲ್ಲರ ಸ್ಪರ್ಶ (ಅವರೇ ಹೇಳುವಂತೆ- ಶುಭ ಶುಕ್ರ ಸ್ಪರ್ಶ) ದಿಂದಾಗಿ ಮುತ್ತರಾಜ್‌ ಸಾಹಿತಿಯೂ ಆಗಿದ್ದಾರೆ.

‘ಹಜಾಮ ಅಲ್ಲವೋ ನಿಜಾಮ’ ಎಂಬ ಕೃತಿಯನ್ನೂ ರಚಿಸಿದ್ದಾರೆ. ತಾವೇ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿ, ನಿರ್ದೇಶಿಸಿ ‘ನಾಯಿಂದನ ಕ್ರಾಂತಿ ಗೀತೆಗಳು’ ಎಂಬ ಧ್ವನಿಸುರುಳಿಯನ್ನೂ ಹೊರತಂದಿದ್ದಾರೆ. ‘ಕ್ಷೌರ ಅಸ್ಪೃಶ್ಯತೆಗೆ ಧಿಕ್ಕಾರ’ ‘ಶೂದ್ರ ಕ್ಷೌರಿಕ’, ‘ಅನುಭವ ಅಮೃತವಾಣಿ’ ಎಂಬ ನಾಟಕಗಳನ್ನೂ ರಾಜ್‌ ಬರೆದಿದ್ದಾರೆ.

ವೃತ್ತಿಯಲ್ಲಿ ಕ್ಷೌರಿಕರಾದ ಮುತ್ತುರಾಜ್‌ ಪ್ರವೃತ್ತಿಯಲ್ಲಿ ಹವ್ಯಾಸಿ ರಂಗಕಲಾವಿದರು. 20ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ, 30ಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿರುವ ಇವರು, ಉದಯಟಿವಿಯಲ್ಲಿ ಪ್ರತಿ ಶುಕ್ರವಾರ - ಶನಿವಾರ ಪ್ರಸಾರವಾಗುವ ಹಾಸ್ಯಲಾಸ್ಯ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದಾರೆ.

ಪಡೆದಿರುವುದು ಮಾಧ್ಯಮಿಕ ಶಿಕ್ಷಣವಾದರೂ, ನೆಲ್ಸನ್‌ ಮಂಡೇಲಾ, ಬಸವಣ್ಣ, ಡಾ. ಅಂಬೇಡ್ಕರ್‌ ಅವರ ಜೀವನ ಚರಿತ್ರೆ ಓದಿ ಮನನ ಮಾಡಿಕೊಂಡಿದ್ದಾರೆ. ತಮ್ಮ ಮಾತಿನುದ್ದಕ್ಕೂ ವಚನಗಳು, ಅಂಬೇಡ್ಕರ್‌ರ ಅನುಭವಾಮೃತವಾಣಿಗಳು, ಬಸವಣ್ಣನವರ ವಚನಗಳನ್ನು ಉದ್ಧರಿಸುತ್ತಾರೆ.

ಜನರು, ಕ್ಷೌರಿಕರನ್ನು ‘ಹಜಾಮ’ ಎಂದು ಹೀಗಳೆಯುವ ಬಗ್ಗೆ ಕಿಡಿಕಾರುವ ಮುತ್ತುರಾಜ್‌, ‘ಕ್ಷೌರಿಕನಿಗೆ ನೀ ಹೇಳುವುದಾದರೆ ಹಜಾಮ, ಮುಂಜಾನೆದ್ದು ನೀ ಮಾಡಿಕೊಳ್ಳುವುದಾದರೂ ಏನು ನಿಜಾಮ? ಮುಂಜಾನೆದ್ದು ನೀ ಮಾಡಿಕೊಂಡರದು ಕ್ಷೌರ. ಅದೇ ಕ್ಷೌರ ನಾ ಮಾಡಿದರೆ ನಾ ಹಜಾಮನೇ ಹೇಳು ಪೈಜಾಮ...’ ಎಂಬ ತಮ್ಮ ಸ್ವರಚಿತ ಕವನದ ಮೂಲಕ ಪ್ರತ್ಯುತ್ತರ ಕೊಡುತ್ತಾರೆ.

ವಿಭಿನ್ನ ಸೆಲೂನ್‌ : ಸಾಮಾನ್ಯವಾಗಿ ನಾವು ಯಾವುದೇ ಹೇರ್‌ಕಟ್ಟಿಂಗ್‌ ಸೆಲೂನ್‌ ಒಳಹೊಕ್ಕರೆ ಅಲ್ಲಿ, ಸುಂದರ ಕೇಶವಿನ್ಯಾಸದ ಚಲನ ಚಿತ್ರ ನಟರ ಚಿತ್ರ ಇರುತ್ತದೆ. ಆದರೆ, ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಇವರ ಅಂಗಡಿಗೆ ಹೋದರೆ, ನಿಮಗೆ ಹೊಸ ಅನುಭವವೇ ಆಗುತ್ತದೆ.

ಅಂಗಡಿಯ ಒಳಗೆ ಮೇಲ್ಭಾಗದಲ್ಲಿ ಮಾಡಿಸಿರುವ ಗಾಜಿನ ಷೋಕೇಸ್‌ ತುಂಬಾ ಗಾಂಧಿ, ಮಾಸ್ತಿ, ಮಂಡೇಲ, ಗೋಕಾಕ್‌, ಅ.ನಾ.ಕೃ, ಕುವೆಂಪು, ಸುಬ್ಬಯ್ಯ ನಾಯ್ಡ ಅವರ ಭಾವಚಿತ್ರಗಳು, ಕನ್ನಡದ ಪ್ರಸಿದ್ಧ ನಿಯತಕಾಲಿಕಗಳು, ದುರ್ಗಾಸ್ತಮಾನ, ರಾಮಾಯಣ ದರ್ಶನವೇ ಮೊದಲಾದ ಪುಸ್ತಕಗಳನ್ನು ಕಾಣಬಹುದು.

ಇದಕ್ಕೂ ಮುನ್ನ ಅಂಗಡಿಯ ಮುಂದಿರುವ ಫಲಕ ನಿಮ್ಮನ್ನು ಆಕರ್ಷಿಸುತ್ತದೆ. ಆ ಫಲಕದಲ್ಲೇನಿದೆ ಗೊತ್ತೆ: ಕುವೆಂಪು ಮೆಶಿನ್‌ ಕಟಿಂಗ್‌, ದ.ರಾ. ಬೇಂದ್ರೆ ಬ್ಲೀಚಿಂಗ್‌, ಮಾಸ್ತಿ ಸಿಸರ್‌ ಕಟಿಂಗ್‌, ಕಾರಂತ್‌ ಹೇರ್‌ ಸೆಟ್ಟಿಂಗ್‌, ಗೋಕಾಕ್‌ ಫೇಸ್‌ ಮಸಾಜ್‌, ಮಾ.ಹಿರಣ್ಣಯ್ಯ ಹೆಡ್‌ ಮಸಾಜ್‌, ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್‌... ಆದರೆ, ಅಂಗಡಿಯ ಹೆಸರು ಅಮೆರಿಕನ್‌ ಹೇರ್‌ ಡ್ರೆಸರ್ಸ್‌. ಹೀಗೇಕೆ ಎಂದು ಪ್ರಶ್ನಿಸಿದರೆ, ಮುತ್ತುರಾಜ್‌ ಕೊಟ್ಟ ಉತ್ತರ : ಸಾರ್‌ ಕನ್ನಡಿಗರಿಗೆ ವಿದೇಶದ ವ್ಯಾಮೋಹ ಜಾಸ್ತಿ. ಅಮೆರಿಕಾ ಬಗ್ಗೆಯಂತೂ ಅಪಾರ ಅಭಿಮಾನ.

ಹೀಗಾಗಿ ನನ್ನ ಅಂಗಡಿಗೆ ಆ ಹೆಸರು ಇಟ್ಟಿದ್ದೇನೆ. ಅಂಗಡಿ ಹೆಸರು ನೋಡಿ ಒಳ ಬಂದಮೇಲೆ ಅವರು ಈ ಪರಿಸರ ನೋಡಿ, ಕನ್ನಡಾಭಿಮಾನಿಗಳಾಗ್ತಾರೆ ಅನ್ನೋದು ಮುತ್ತುರಾಜ್‌ರ ಅನುಭವ ಸಿದ್ಧಾಂತ.

ಮಗು ಹುಟ್ಟಿದ ಕೆಲವೇ ತಿಂಗಳಲ್ಲಿ ಮಾಡುವ ಚೌಲದಿಂದ (ಜುಟ್ಟು ಬಿಡಿಸುವ ವಿಧಿ) ಆರಂಭವಾಗುವ ಮನುಷ್ಯ ಮತ್ತು ಕ್ಷೌರಿಕನ ಸಂಬಂಧ ಸತ್ತಾಗ, ಕರ್ತೃಗಳ ಕೇಶಮುಂಡನದವರೆಗೂ ಇದೆ. ಹೀಗಾಗಿ ಕ್ಷೌರವೃತ್ತಿಯ ಬಗ್ಗೆ ಖಂಡಿತಾ ಕೀಳರಿಮೆ ಸಲ್ಲ ಎನ್ನುವುದು ಮುತ್ತುರಾಜರ ಅಭಿಮಾನದ ನುಡಿ.

ಅಸ್ಪೃಶ್ಯತೆಯ ವಿರುದ್ಧ ಸಮಭಾವ ಕ್ಷೌರಾಂದೋಲನ ನಡೆಸಿ ಯಶಸ್ವಿಯಾಗಿ, ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ಮುತ್ತುರಾಜ್‌ರನ್ನು ನಾವೂ ಅಭಿನಂದಿಸೋಣ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X