ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಂಗಭೂಮಿ ಇನ್ನೂ ಜೀವಂತಿಕೆಯಿಂದ ಕೂಡಿದೆ - ಲಕ್ಷ್ಮೀ ಚಂದ್ರಶೇಖರ್‌

By Staff
|
Google Oneindia Kannada News

*ಸಂದರ್ಶನ : ಎಂ. ಆರ್‌. ದತ್ತಾತ್ರಿ, ಕ್ಯಾಲಿಫೋರ್ನಿಯಾ

ಮಾಯಾಮೃಗದ ವಿಶಿಷ್ಟ ಪಾತ್ರದಿಂದ ಕರ್ನಾಟಕದಲ್ಲಿ ಮನೆಮಾತಾಗಿರುವ ಹಾಗೂ ಸುಮಾರು ಮೂರು ದಶಕಗಳಿಂದ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಯಾಶೀಲ ಪ್ರತಿಭೆ- ಲಕ್ಷ್ಮೀ ಚಂದ್ರಶೇಖರ್‌. ಹೆಸರಾಂತ ‘ಸಮುದಾಯ’ ದಲ್ಲಿ ಸಕ್ರಿಯ ಪಾತ್ರವಹಿಸಿದ ಅನುಭವವೂ ಅವರ ಬೆನ್ನಿಗೆದೆ.

ಮೈಸೂರು ವಿಶ್ವ ವಿದ್ಯಾಲಯ ಹಾಗೂ ಇಂಗ್ಲೆಂಡಿನ ಲೀಡ್ಸ್‌ ವಿವಿಯಲ್ಲಿ ಇಂಗ್ಲಿಷ್‌ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಕ್ಷ್ಮಿ ಚಂದ್ರಶೇಖರ್‌ ರಂಗಭೂಮಿಯ ನಂಟಿನೊಂದಿಗೆ ಬರವಣಿಗೆಯನ್ನೂ ಕೈಗೂಡಿಸಿಕೊಂಡವರು. ಹಿಂದೂ ಪತ್ರಿಕೆಗೆ ರಂಗಭೂಮಿಯ ಬಗ್ಗೆ ಅಂಕಣಕಾರರೂ ಹೌದು. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿ ನಡೆದ ವಸಂತೋತ್ಸವದಲ್ಲಿ ‘ಇವಳೊಬ್ಬ ಹೆಂಗಸು’ ಎಂಬ ರೂಪಕವನ್ನು ಪ್ರದರ್ಶಿಸಿ, ಪ್ರೇಕ್ಷಕರ ಮನ ಸೂರೆಗೊಂಡರು. ಅದೇ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

  • ಕನ್ನಡ ರಂಗಭೂಮಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೀರಾ ?
ಈ ಪ್ರಶ್ನೆಗೆ ಒಂದೊಂದು ಕೋನದಲ್ಲಿ ನಮ್ಮ ದೃಷ್ಟಿ ಒಂದೊಂದು ಉತ್ತರವನ್ನು ಕಂಡುಕೊಳ್ಳುತ್ತದೆ. ಕನ್ನಡ ರಂಗಭೂಮಿಯನ್ನೇ ಸೀಮಿತದಲ್ಲಿ ನೋಡಿದರೆ ಒಮ್ಮೊಮ್ಮೆ ಆನಂದವಾಗುತ್ತದೆ. ಆದರೆ ಇತರ ಭಾರತೀಯ ಭಾಷೆಗಳ ರಂಗಭೂಮಿಗಳಿಗೆ ತುಲನಾತ್ಮಕವಾಗಿ ಹೋಲಿಸಿ ನೋಡಿದಾಗ, ಕರ್ನಾಟಕದಲ್ಲಿ ರಂಗಭೂಮಿ ಉತ್ತಮವಾಗಿಯೇ ಇದೆ ಎನ್ನಿಸುತ್ತದೆ. ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ‘ನ್ಯಾಷನಲ್‌ ಥಿಯೇಟರ್ಸ್‌ ’ ಉತ್ಸವದಲ್ಲಿ ಪ್ರದರ್ಶಿತವಾದ ನಾಟಕಗಳನ್ನು ನೋಡಿದಾಗ ಕನ್ನಡ ರಂಗಭೂಮಿ ಇನ್ನೂ ಜೀವಂತವಾಗಿದೆ ಹಾಗೂ ಬೆಳೆಯುತ್ತಿದೆ ಎಂದೆನಿಸಿತು. ಉದಾಹರಣೆಗೆ ‘ನೀನಾಸಂ’ ತೆಗೆದುಕೊಳ್ಳಿ. ಅಲ್ಲಿಂದ ಬಂದ ಯುವ ನಿರ್ದೇಶಕರು ನಮ್ಮ ಅಭಿರುಚಿಗೆ ತಕ್ಕಂತೆ ನಮ್ಮ ಇತಿಮಿತಿಯಾಳಗೇ ನಡೆಸುತ್ತಿರುವ ಪ್ರಯೋಗಗಳು ನಿಜವಾಗಿಯೂ ನನ್ನನ್ನು ಬೆರಗುಗೊಳಿಸುವೆ.

ಅತ್ಯುತ್ತಮ ನಾಟಕಕಾರರು ಕನ್ನಡದಲ್ಲಿ ಮೂಡಿ ಬರುತ್ತಿದ್ದಾರೆ. ಬೇಸರದ ಸಂಗತಿಯೆಂದರೆ ಪ್ರಾಯೋಜಕರ ಸಂಖ್ಯೆ ಕಡಿಮೆಯಾಗುತ್ತಿರುವುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದು, ನಮ್ಮ ಆರ್ಥಿಕ ಸ್ವಾವಲಂಬನೆಯ ಸಮಸ್ಯೆಯಲ್ಲಿ ಬಿದ್ದಿದ್ದೇವೆ. ಪ್ರಾಯೋಜಕರಿಗೆ ದೂರದರ್ಶನ ಬಹು ಜನರನ್ನು ತಲುಪುವ ಅತ್ಯುತ್ತಮ ಮಾಧ್ಯಮವಾಗಿ ನಿರ್ಧಾರಿತವಾಗಿಯೇ ನಾಟಕರಂಗ ಹಿಂದೆ ಬಿದ್ದಿದೆ.

  • ಸುಮಾರು 70ರ ದಶಕದಲ್ಲಿ ಕನ್ನಡ ಮತ್ತು ಮರಾಠಿ ರಂಗಭೂಮಿಗಳು ಸ್ಪರ್ಧಾತ್ಮಕವಾಗಿ ಉಚ್ಛಾ ್ರಯ ಸ್ಥಿತಿಯಲ್ಲಿದ್ದವು. ಪುಣೆಯಲ್ಲಿ ಇಂದಿಗೂ ನಾಟಕ ಒಂದು ಮನರಂಜನಾ ಮಾಧ್ಯಮವಾಗಿ ಉಳಿದಿದೆ. ಆದರೆ ಕನ್ನಡದಲ್ಲಿ ಉತ್ತರ ಕರ್ನಾಟಕವನ್ನು ಹೊರತುಪಡಿಸಿ, ನಾಟಕ ಆ ಮಟ್ಟದಲ್ಲಿ ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ . ಏಕೆ?
  • ಕನ್ನಡ ಮತ್ತು ಮರಾಠಿ ರಂಗಭೂಮಿಗಳು ಸ್ಪರ್ಧಾತ್ಮಕವಾಗಿ ಮೇಲಿದ್ದುದು ನಿಜವೇ. ನಾವು ಮರಾಠಿ ರಂಗಭೂಮಿಯಿಂದ ಕಲಿತದ್ದು, ಹಾಗೂ ಅವರು ನಮ್ಮಿಂದ ಕಲಿತದ್ದು ಬೇಕಾದಷ್ಟಿದೆ. ಆದರೆ ಈಚಿನ ದಿನಗಳ ಕನ್ನಡ ಮತ್ತು ಮರಾಠಿ ರಂಗಭೂಮಿಗಳ ನಡುವಿನ ಒಂದು ಮುಖ್ಯವಾದ ವ್ಯತ್ಯಾಸವೆಂದರೆ ಮರಾಠಿ ರಂಗಭೂಮಿ ಕಮರ್ಷಿಯಲ್‌ ಆಗಿ ಮುಂದೆ ಬಂದಿದೆ. ಕಲಾತ್ಮಕ ದೃಷ್ಟಿಯಲ್ಲಿ ನೋಡಿದರೆ ಹೊಸ ಹೊಸ ಪ್ರಯೋಗಗಳು ಮರಾಠಿಗಿಂತ ಕನ್ನಡದಲ್ಲಿ ಬಹಳಷ್ಟು ನಡೆದಿವೆ.

    ಮರಾಠಿಯಿಂದ ಬಂದ ಕೆಲವು ಅತ್ಯುತ್ತಮ ನಾಟಕಗಳನ್ನು ನಮ್ಮೊಂದಿಗೆ ಹೋಲಿಸಿದಾಗ ಅವು ಬಹಳ ಸಾಮಾನ್ಯವಾದವು ಎನಿಸುತ್ತವೆ. ನಾಟಕದ ಸಂಖ್ಯೆ ಮತ್ತು ಪ್ರೇಕ್ಷಕರ ಸಂಖ್ಯೆ ಮರಾಠಿಗೆ ಹೋಲಿಸಿದಲ್ಲಿ ನಮ್ಮಲ್ಲಿ ಕಡಿಮೆಯಾದರೂ ಗುಣಮಟ್ಟದಲ್ಲಿ ಕನ್ನಡ ರಂಗಭೂಮಿ ಖಂಡಿತಾ ಮರಾಠಿಗಿಂತ ಮೇಲ್ಮಟ್ಟದಲ್ಲಿದೆ. ಪ್ರಸನ್ನ , ಇಕ್ಬಾಲ್‌ , ಬಸವಲಿಂಗಯ್ಯ ಮುಂತಾದ ನಿರ್ದೇಶಕರ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತಹವು.

  • ಕಲಾತ್ಮಕತೆಗೆ ಹೆಚ್ಚು ಬಾಗಿದ ನಾಟಕಗಳು ಪ್ರೇಕ್ಷಕರನ್ನು ಮಾತ್ರ ಗುರಿಯಲ್ಲಿಟ್ಟುಕೊಂಡು ಬರುತ್ತಿವೆ. ಆದರೆ ವ್ಯಾಪ್ತಿಯನ್ನು ವಿಸ್ತರಿಸುವುದರ ಮೂಲಕ ಬಹುಜನರನ್ನು ತಲುಪುವ ಮಾಧ್ಯಮವಾಗಿ ಬೆಳೆಯುವಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆಯೇ ?
  • ಪ್ರಯತ್ನಗಳು ಖಂಡಿತ ನಡೆಯುತ್ತಿವೆ. 70 ಹಾಗೂ 80ರ ದಶಕಕ್ಕೆ ಹೋಲಿಸಿದರೆ ಕನ್ನಡ ನಾಟಕ ರಂಗದ ವ್ಯಾಪ್ತಿ ಇತ್ತೀಚೆಗೆ ಬಹಳ ವಿಸ್ತರಿಸಿದೆ. ಕಲಾತ್ಮಕ ನಾಟಕಗಳ ಆಧಾರವಾದ ಸಂಕೇತತೆಗೆ ಪೂರಕವಾಗಿ ನಾಟಕಗಳಲ್ಲಿ ಕಥೆ ಹಾಡು, ನೃತ್ಯ, ಬಣ್ಣ, ವೇಷಭೂಷಣಗಳು ಮುಖ್ಯವಾದ ಸ್ಥಾನ ಪಡೆಯುತ್ತಿವೆ. ನಾಟಕವನ್ನು ಒಂದು ಗಣನೀಯವಾದ ದೃಶ್ಯ ಮಾಧ್ಯಮವಾಗಿ ದುಡಿಸಿಕೊಳ್ಳುವತ್ತ ಯುವ ನಿರ್ದೇಶಕರು ಹೆಚ್ಚು ಹೆಚ್ಚು ಗಮನಕೊಡುತ್ತಿದ್ದಾರೆ. ‘ನೀನಾಸಂ’ ಸಣ್ಣ ಪುಟ್ಟ ಊರುಗಳಲ್ಲಿಯೂ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ಕೊಟ್ಟು ಅವರಿಂದ ಹೆಚ್ಚು ಸ್ಥಳೀಯತೆಗೆ ಅನ್ವಯಿಸುವ ನಾಟಕಗಳನ್ನು ಆಡಿಸುತ್ತಿದ್ದಾರೆ. ಇಂತಹುದಕ್ಕೆ ಜನರ ಪ್ರತಿಕ್ರಿಯೆಯೂ ಚೆನ್ನಾಗಿದೆ.

    ‘ಶಿವಸಂಚಾರ್‌’ ಎಂದು ಸಿದ್ಧಗಂಗಾ ಮಠದವರ ಒಂದು ತಂಡ ಇದೇ ಉದ್ದೇಶ ಹೊಂದಿದ್ದು ಬಹಳ ಪ್ರಗತಿಯನ್ನು ಸಾಧಿಸುತ್ತಿದೆ. ರಂಗಾಯಣ, ಸೃಷ್ಟಿ ನೀನಾಸಂ ತಂಡಗಳು ಊರಿಂದ ಊರಿಗೆ ಸಂಚರಿಸಿ ನಾಟಕ ಪ್ರದರ್ಶನಗಳ ಮೂಲಕ ಬಹಳಷ್ಟು ಪ್ರೇಕ್ಷಕರನ್ನು ತಲುಪುತ್ತಿವೆ. ದೂರದರ್ಶನದ ಪ್ರಾರಂಭಿಕ ದಿನಗಳ ಆಕರ್ಷಣೆಗಳು ಕಳೆದು ಜನ ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ ಹಾಗೂ ಜನರನ್ನು ಮತ್ತೆ ಆಕರ್ಷಿಸಲು ಇದು ನಾಟಕರಂಗಕ್ಕೆ ಸುವರ್ಣಾವಕಾಶವಾಗಿ ಒದಗಿ ಬರುತ್ತಿದೆ.

    ಮುಖಪುಟ / ಸಾಹಿತ್ಯ ಸೊಗಡು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X