ಬಹುಮುಖ ವ್ಯಕ್ತಿತ್ವದ ಪ್ರೊ. ಕು.ಶಿ. ಹರಿದಾಸ ಭಟ್ಟರು

ಪ್ರೊ. ಕು.ಶಿ. ಅವರನ್ನು ಸಾಹಿತಿ ಎನ್ನುವುದೋ? ಜಾನಪದ ವಿದ್ವಾಂಸ ಎನ್ನುವುದೋ? ಉತ್ತಮ ಶಿಕ್ಷಕ ಎನ್ನುವುದೋ? ಸಂಶೋಧಕ ಎನ್ನುವುದೋ ಎಂಬ ಅನುಮಾನ ಅವರ ಆಪ್ತರನ್ನೇ ಕಾಡಿತ್ತು. ಭಟ್ಟರದು ಬಹುಮುಖ ವ್ಯಕ್ತಿತ್ವ. ಸಾಮಾನ್ಯವಾಗಿ ಯಾವುದೇ ಕ್ಷೇತ್ರದಲ್ಲಿ ಖ್ಯಾತನಾಮರಾದವರು, ಮೃತರಾದಾಗ ತುಂಬಲಾರದ ನಷ್ಟ ಎಂಬ ಪದ ಬಳಕೆ ಸಾಮಾನ್ಯ. ಭಾನುವಾರ ಹೃದಯಾಘಾತದಿಂದ ಕು.ಶಿ. ಹರಿದಾಸ ಭಟ್ಟರು ನಿಧರಾದರೆಂಬ ಸುದ್ದಿ ತಿಳಿದಾಗ ಹಲವು ಗಣ್ಯರು ಭಟ್ಟರ ನಿಧನದಿಂದ ಕನ್ನಡ ಸಾರಸ್ವತ ಲೋಕ ಅಮೋಘ ರತ್ನ ಕಳೆದುಕೊಂಡಿದೆ. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದೇ ಪ್ರತಿಕ್ರಿಯಿಸಿದ್ದಾರೆ.

ಭಟ್ಟರ ವಿಷಯದಲ್ಲಿ ಇದು ಉಪೇಕ್ಷೆಯ ಮಾತಾಗಲಾರದು. ಭಟ್ಟರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನುಪಮವಾದದ್ದು. ಅರ್ಥಶಾಸ್ತ್ರ ವಿದ್ವಾಂಸರಾಗಿದ್ದ ಹರಿದಾಸ ಭಟ್ಟರು ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೋಕಾಭಿರಾಮ ಅಂಕಣವನ್ನು ಓದಿದವರಿಗಂತೂ ಅವರ ವಿಚಾರಧಾರೆ ಎಂತಹುದು ಎಂಬ ಅರಿವು ಇದ್ದೀತು.

1924ರ ಮಾರ್ಚ್‌ 17ರಂದು ಉಡುಪಿ ತಾಲೂಕಿನ ಕುಂಜಿಬೆಟ್ಟುವಿನಲ್ಲಿ ಜನಿಸಿದ ಭಟ್ಟರು ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದವರು. ಎಂಜಿಎಂ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಅದೇ ಕಾಲೇಜಿನ ಪ್ರಾಂಶುಪಾಲರಾದ ಭಟ್ಟರ ಗರುಡಿಯಲ್ಲಿ ಪಳುಗಿದ ಸಾವಿರಾರು ವಿದ್ಯಾರ್ಥಿಗಳು, ತಾವು ಭಟ್ಟರ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ.

ಕಡಿಯಾಳ ಹೈಯರ್‌ ಪ್ರೆೃಮರಿ ಶಾಲೆಯಲ್ಲಿ ಶಿಕ್ಷಣ ಕಲಿತ ಅವರು ಮದ್ರಾಸಿನ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಬಿ.ಎ. ಹಾನರ್ಸ್‌ ಪದವಿ ಪಡೆದರು. ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಭಟ್ಟರು, ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ರಂಗಕಲೆ ಅಧ್ಯಯನ ಕೇಂದ್ರಗಳ ನಿರ್ದೇಶಕರಾಗಿಯೂ ಹಲವು ಉನ್ನತಾಧ್ಯಯನಿಗಳ ಸಂಶೋಧನೆಗೆ ನೆರವಾದರು.

ತಮ್ಮ ವಿದ್ಯಾರ್ಥಿಗಳಿಗೆ ನಾಡಿನ ಹಿರಿಯ ಲೇಖಕರ, ಸಾಹಿತಿಗಳ ದರ್ಶನ ಮಾಡಿಸಿದ ಭಟ್ಟರು, ಬೇಂದ್ರೆ, ಕಾರಂತರೇ ಮೊದಲಾದ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ತಮ್ಮ ಕಾಲೇಜಿಗೆ ಕರೆಸಿ ಅವರಿಂದ ಉಪನ್ಯಾಸ ಏರ್ಪಡಿಸಿ, ತಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯ ಶ್ರೇಷ್ಠರ ವಿಚಾರಧಾರೆಯ ಪರಿಚಯ ಮಾಡಿಸಿದರು.

1950ರಲ್ಲಿ ಭಟ್ಟರು ಬರೆದ ‘ಅರ್ಥಶಾಸ್ತ್ರ ’ ಅವರ ಮೊದಲ ಶಾಸ್ತ್ರೀಯ ಗ್ರಂಥ. ಕಾದಂಬರಿ, ಕತೆ, ಕವನ, ಇತಿಹಾಸ, ಸಂಶೋಧನೆ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚಿಸಿರುವ ಭಟ್ಟರು, ಸಮಗ್ರ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ, ‘ಪುಸ್ತಕ ಪುರಾಣ ’ (ಪ್ರಬಂಧ ಸಂಕಲನ), ಇಟಲಿಯಾ ನಾ ಕಂಡಂತೆ (ಪ್ರವಾಸ ಕಥನ), ಕಾರಂತ ಪ್ರಪ್ರಂಚ ಮುಂತಾದ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಮದರಾಸು ಸರ್ಕಾರದ ಸಾಹಿತ್ಯ ಪ್ರಶಸ್ತಿ, 1982ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1985), ಜಾನಪದ ಅಕಾಡಮಿ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ, ಫಿನ್‌ಲ್ಯಾಂಡ್‌ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಭಟ್ಟರು, ಯಕ್ಷಗಾನ ಕೇಂದ್ರದ ಮೂಲಕ ಹಾಂಕಾಂಗ್‌, ಜಪಾನ್‌, ಇಂಗ್ಲೆಂಡ್‌, ಇಟಲಿ, ರಷ್ಯಾ ಮುಂತಾದ ರಾಷ್ಟ್ರಗಳಲ್ಲಿ ನಮ್ಮ ಜಾನಪದ ಕಲೆಯನ್ನು ಪ್ರಚುರಪಡಿಸಿದವರು.

6 ಬೃಹತ್‌ ಸಂಪುಟಗಳಲ್ಲಿ ಪ್ರಕಟವಾದ ತುಳು ನಿಘಂಟಿನ ಸಂಪಾದಕರಾಗಿದ್ದರು. ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. 1988-89ರ ಸಾಲಿನಲ್ಲಿ ಅಮೆರಿಕದ ಫೋರ್ಡ್‌ ಫೌಂಡೇಷನ್‌ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ವಿಶ್ವದ ಗಮನವನ್ನೇ ಸೆಳೆಯಿತು. ಈ ಎಲ್ಲ ಚಟುವಟಿಕೆಗಳ ನಡುವೆಯೂ ಬಹುಮುಖ ವ್ಯಕ್ತಿತ್ವವನ್ನು ಕಾಯ್ದುಕೊಂಡ ಹರಿದಾಸ ಭಟ್ಟರು ಗದ್ಯ ಲೇಖಕರೆಂದೇ ಹೆಸರಾದವರು. ಇವರ ಪ್ರಬಂಧಗಳಲ್ಲಂತೂ ವೈಶಿಷ್ಟ್ಯ ಪೂರ್ಣ ವೈವಿಧ್ಯತೆಯನ್ನು ಕಾಣಬಹುದು.

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+