ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಜಿ ನಾಯ್ಕರ್‌ ಮಾಸ್ತರ್‌ಕಾರವಾರದ ಕಲರ್‌ಫುಲ್‌ ವ್ಯಕ್ತಿ

By Staff
|
Google Oneindia Kannada News

ಕಾರವಾರ : ಅದು ಪೊಲೀಸ್‌ ಪೆರೇಡೇ ಆಗಿರಲಿ, ಅಥವಾ ಸ್ವಾತಂತ್ರ್ಯ ಉತ್ಸವ, ಗಣರಾಜ್ಯೋತ್ಸವದಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳೇ ಆಗಿರಲಿ . ಕಾರವಾರದ ಪೊಲೀಸ್‌ ಪೆರೇಡ್‌ ಮೈದಾನದಲ್ಲಿ ನಡೆಯುವ ದೊಡ್ಡ ಪ್ರಮಾಣದ ಕಾರ್ಯಕ್ರಮಗಳಲ್ಲಿ ವ್ಯಕ್ತಿಗಳು, ಪಾತ್ರಗಳು ಬದಲಾದರೂ, ಆ ಒಂದು ಧ್ವನಿಯಂತೂ ಬದಲಾಗದು. ಹೌದು, ಸಮಾರಂಭಗಳಿಗೆ ಅಗತ್ಯವಿದ್ದಲ್ಲಿ ವೀಕ್ಷಕ ವಿವರಣೆಯನ್ನೋ, ಇಲ್ಲವಾದಲ್ಲಿ ಕಡೇ ಪಕ್ಷ ನಿರೂಪಣೆಯನ್ನಾದರೂ ಒದಗಿಸುವುದು ಪಿ.ಜಿ. ನಾಯ್ಕ್‌ ಮಾಸ್ತರ್‌ ಅವರ ಧ್ವನಿ.

ಕೊಂಕಣಿ ಭಾಷೆಯ ಪ್ರಾಬಲ್ಯವಿರುವ ಕಾರವಾರದಲ್ಲಿ ಕನ್ನಡವನ್ನು ಸ್ಫುಟವಾಗಿ, ಸುಂದರವಾಗಿ ಮಾತನಾಡುವವರೇ ಕಡಿಮೆ. ಅಂತಹ ಅಲ್ಪ ಸಂಖ್ಯಾತರಲ್ಲಿ ಇವರೂ ಒಬ್ಬರು. ಇವರು ಕನ್ನಡದಷ್ಟೇ ಸರಾಗವಾಗಿ, ಚೆಂದವಾಗಿ ಕೊಂಕಣಿ, ಮರಾಠಿಯನ್ನೂ ಮಾತನಾಡಬಲ್ಲರು.

ಇವರಿಗೆ ವೀಕ್ಷಕ ವಿವರಣೆ ನೀಡುವುದೇ ಕಾಯಕವಲ್ಲ. ಇವರು ಮೂಲತಃ ಪ್ರಾಥಮಿಕ ಶಾಲೆಯಲ್ಲಿ ಪಿ.ಟಿ. ಮಾಸ್ತರ್‌ (ದೈಹಿಕ ಶಿಕ್ಷಕ ). ಅದಕ್ಕೆ ಹೇಳಿ ಮಾಡಿಸಿದ ಆಕೃತಿ, ಪಟುತ್ವ. ಸ್ನಾತಕೋತ್ತರ ಶಿಕ್ಷಣ ಪೂರೈಸಿರುವ ಇವರು, ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕ್ರಿಕೆಟ್‌ ತರಬೇತಿಯಲ್ಲಿ ವಿಶೇಷ ಪರಿಶ್ರಮ. ಸೇವಾವಧಿಯಲ್ಲಿ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಹತ್ತು ಹಲವು ಸಮಾಜ ಸೇವಾ ಸಂಸ್ಥೆಗಳೊಂದಿಗೆ ಒಡನಾಟ.

ಕಳೆದ 30 ವರ್ಷಗಳಿಂದ ಕಾರವಾರದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪಾಂಡುರಂಗ ಗೋಪಾಳ ನಾಯ್ಕರು, ಜುಲೈ ಒಂದರಂದು ಸೇವೆಯಿಂದ ನಿವೃತ್ತಿ ಹೊಂದಿದರು. ಪಿ.ಜಿ. ನಾಯ್ಕ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 6 ವರ್ಷಗಳ ಕಾಲ ಕಿರಿಯ ಗುಮಾಸ್ತರಾಗಿ , ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಕೆಲ ಕಾಲ ಹಿರಿಯ ಗುಮಾಸ್ತರಾಗಿ, ಸಾಕ್ಷರತಾ ಜ್ಞಾನವಾಹಿನಿ ಕಾರ್ಯಕ್ರಮದಲ್ಲಿ ಕಾರವಾರ ತಾಲ್ಲೂಕು ಸಮನ್ವಯಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಹತ್ತು ಹಲವು ಪ್ರಶಸ್ತಿಗಳೂ ಇವರ ಹೆಗಲೇರಿವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ ಅನುಭವ ಇವರ ಬೆನ್ನಿಗಿದೆ. ನೂರಾರು ಜಂಜಡಗಳ ನಡುವೆ, ಆಗೀಗ ವಿವಾದ, ಕಟಕಿಗಳ ಸುಳಿಗೆ ಸಿಲುಕಿದರೂ, ಅವರು ಕೈಗೊಂಡ ಕಾಯಕ ನಿಲ್ಲಿಸಲಿಲ್ಲ.

ಕಳೆದ ಎರಡು ವರ್ಷಗಳಿಂದ ಅವರು ಜಿಲ್ಲೆಯ ಲೋಕಧ್ವನಿ ಪತ್ರಿಕೆಗೆ ಕಾರವಾರ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟು ಕಾಲ ಇವರ ಸಮಯವನ್ನು ಶಾಲಾ ಚಟುವಟಿಕೆಗಳಿಗೇ ಹೆಚ್ಚು ವ್ಯಯ ಮಾಡುತ್ತಿದ್ದರಿಂದ ಪತ್ರಿಕೋದ್ಯಮ ಅರೆಕಾಲಿಕವಾಗಿತ್ತು. ಇನ್ನು ಮುಂದೆ ಅದೇ ಪೂರ್ಣಾವಧಿ ಕಾಯಕವಾಗಲಿದೆ.

ಇವರಿಗೆ ಆಧ್ಯಾತ್ಮದತ್ತ ಹೆಚ್ಚಿನ ಒಲವು. ಸತ್ಯ ಸಾಯಿಬಾಬಾ ಅವರ ಅನುಯಾಯಿ. ನಿವೃತ್ತಿಯ ನಂತರದ ಜೀವನವನ್ನು ನಿಸ್ವಾರ್ಥ ಸಾಮಾಜಿಕ ಕಾರ್ಯಕರ್ತರಾಗಿ ಸಾಯಿ ಸಂಸ್ಥೆಯಲ್ಲಿ ಕಳೆಯಲು ನಿರ್ಧರಿಸಿರುವುದಾಗಿ ಹೇಳುತ್ತಾರೆ. ಒಟ್ಟಿನಲ್ಲಿ ಪಿಜಿ , ಕಾರವಾರದ ಕಲರ್‌ ಫುಲ್‌ ವ್ಯಕ್ತಿಗಳಲ್ಲೊಬ್ಬರು, ಸೇವೆಯಲ್ಲಿರಲಿ ಬಿಡಲಿ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X