ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆಯ ಕನಸುಗಳು !

By Staff
|
Google Oneindia Kannada News
  • ಅಧಿಕಾರ ಎಂಬುದು ಸಾರ್ವಜನಿಕ ಸೇವೆಗೆ ಒದಗಿಬರುವ ಸಾಧನವೆ ಹೊರತು ವ್ಯಕ್ತಿತ್ವ ವಿಜೃಂಭಣೆಗೆ ಸಲಕರಣೆ ಅಲ್ಲ .
  • ಬಯಸಿದ್ದರೆ ರಾಜಕೀಯವಾಗಿ ಯಾವುದೇ ಪದವಿಯನ್ನು ಪಡೆಯುವುದು ನನಗೆ ಕಷ್ಟವಾಗಿರಲಿಲ್ಲ . ಆದರೆ, ಮೌಲ್ಯ, ತತ್ತ್ವಗಳಿಗೆ ಬದ್ಧನಾದವನು ನಾನು. ಆದರ್ಶಗಳ ಹಿಂದೆ ಸುತ್ತುವುದು ನನ್ನ ವ್ಯಕ್ತಿತ್ವವೇ ಹೊರತು, ಅಧಿಕಾರದಲ್ಲಿರುವ ವ್ಯಕ್ತಿಗಳ ಹಿಂದೆಯಲ್ಲ .
  • ಪರಿಪೂರ್ಣ ನಾಯಕತ್ವ ಅನ್ನುವುದು ಸಾಧ್ಯವೇ ಇಲ್ಲ . ಓರೆಕೋರೆಗಳಿಂದ ಮುಕ್ತನಾದ ಮನುಷ್ಯ ಇರುವುದುಂಟೆ?
  • ನನಗಿನ್ನೂ 57. ನೀವುಗಳೆಲ್ಲ 75 ಎಂದು ತಪ್ಪು ತಿಳಿದುಕೊಂಡಿದ್ದೀರಿ.

- ಎಪ್ಪತ್ತೆೈದರ ಸಂಭ್ರಮದ ಕೇಂದ್ರದಲ್ಲಿರುವ ರಾಮಕೃಷ್ಣ ಹೆಗಡೆ ಅವರ ಈ ಹೊತ್ತಿನ ಸ್ಥಿತಿಯನ್ನು ಈ ಮಾತುಗಳು ಹೆಚ್ಚೂ ಕಡಿಮೆ ಸರಿಯಾದ ದಿಕ್ಕಿನಲ್ಲಿ ಸೂಚಿಸುತ್ತವೆ. ಹೆಗಡೆ ಈ ಹೊತ್ತು ಅಧಿಕಾರದಲ್ಲಿ ಇಲ್ಲ . ರಾಜಕೀಯವಾಗಿ ಅವರ ಸ್ಥಾನಮಾನ, ಪ್ರಭಾವ ಹಾಗೂ ಪ್ರಸ್ತುತತೆ ಎಂಥದ್ದೆನ್ನುವುದು ಅಸ್ಪ ಷ್ಟವಾಗಿದೆ. ಅವರ ಪಕ್ಷ ಅನಾಥವಾಗಿದೆ ಎನ್ನುವಂತಿದ್ದರೆ, ಅನುಯಾಯಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಹೆಗಡೆ ಹುಟ್ಟುಹಬ್ಬ ನಡೆದಿದೆ, ಅಪ್ಪಟ ಸಿನಿಮೀಯ ರೀತಿಯಲ್ಲಿ .

ಹೆಗಡೆ ಹುಟ್ಟುಹಬ್ಬ ಸಾಕಷ್ಟು ಅದ್ದೂರಿಯಾಗಿಯೇ ನಡೆದಿದೆ. ಕಾರ್ಯಕ್ರಮದ ಖರ್ಚು ಎರಡು ಕೋಟಿ ರುಪಾಯಿ ಅನ್ನುವುದು ಒಂದು ಲೆಕ್ಕಾಚಾರ. ಸಂಘಟಕರನ್ನು ಕೇಳಿದರೆ, ಅಭಿಮಾನದ ಲೆಕ್ಕವನ್ನು ಯಾರು ಇಡುತ್ತಾರೆ ಎನ್ನುತ್ತಾರೆ. ಅಂದರೆ, ಹೆಗಡೆ ಅವರಿಗಾಗಿ ಖರ್ಚು ಮಾಡುವ ಅಭಿಮಾನಿಗಳು ಇನ್ನೂ ಇದ್ದಾರೆ ಎಂದಾಯಿತು.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬಳಿ 1927 ರ ಆಗಸ್ಟ್‌ 27 ರಂದು ಜನಿಸಿದ ಹೆಗಡೆ, ದೇಶ ಕಂಡ ಕೆಲವೇ ಪ್ರಖರ ಬೌದ್ಧಿಕ ನಾಯಕರಲ್ಲೊಬ್ಬರು ಎಂದು ಗುರ್ತಿಸಿಕೊಂಡವರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಜನಿಸಿದ ಅವರಿಗೆ ಜೈಲೂ ಹೊಸತಲ್ಲ . ಕೇರಳದ ಮಾಜಿ ಸಚಿವ ಕೆ.ಚಂದ್ರಶೇಖರನ್‌ ಹೇಳುವಂತೆ- ಭಾರತ ಕಂಡ ನೂರಾರು ಮುಖ್ಯಮಂತ್ರಿಗಳಲ್ಲಿ , ಹೆಗಡೆ ಟಾಪ್‌-5 ರಲ್ಲೊಬ್ಬರು. ಇಂಥ ಹೆಗಡೆ ಸಂಧ್ಯಾಕಾಲದಲ್ಲಿ ಹುಟ್ಟುಹಬ್ಬದ ನೆಪದಲ್ಲಿ ಅರಮನೆಯ ಬಯಲಿಗೆ ಬರುವುದೆಂದರೆ...!?

ಇಳಿ ವಯಸ್ಸಿನಲ್ಲಿ ಬಯಲಾಟ ಅರಗಿಸಿಕೊಂಡ ಮೌಲ್ಯವಂತ !

ಹೆಗಡೆ ಹುಟ್ಟುಹಬ್ಬ ಅನೇಕ ಕಾರಣಗಳಿಂದ ಕುತೂಹಲ ಹುಟ್ಟಿಸಿದೆ. ಬರದ ದವಡೆಗೆ ರಾಜ್ಯ ತುತ್ತಾಗಿರುವಾಗ ಹೆಗಡೆ ಮದುಮಗನ ವೇಷದಲ್ಲಿ ನಿಂತ ಔಚಿತ್ಯದ ಕುರಿತ ಪ್ರಶ್ನೆಗಳನ್ನು ಸುಲಭವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ . ಸಂಯುಕ್ತ ಜನತಾದಳದ ಕೆ.ಎನ್‌.ನಾಗೇಗೌಡ ಅವರೇ ಈ ವೈಭವದ ಕುರಿತು ಅಪಸ್ವರ ಎತ್ತಿದ್ದರು ಅನ್ನುವುದನ್ನು ಗಮನಿಸಿಸಬೇಕು. ಆದರೆ, ಎಲ್ಲ ಅಪಸ್ವರಗಳನ್ನು ಮೀರಿ ಹೆಗಡೆ ಹುಟ್ಟುಹಬ್ಬ ನಡೆದಿದೆ. ಕೇಂದ್ರ ಸಚಿವರು ಸೇರಿದಂತೆ ರಾಷ್ಟ್ರೀಯ ನಾಯಕರೊಂದಿಗೆ ಸ್ಥಳೀಯ ನಾಯಕರೂ ಹೆಗಡೆ ಅವರ ಸೇವೆ, ಸದ್ಗುಣಗಳನ್ನು ಹಾಡಿ ಹೊಗಳಿದ್ದಾರೆ. ವ್ಯಕ್ತಿಪೂಜೆಯನ್ನು ಬಲವಾಗಿ ವಿರೋಧಿಸುವ ಹೆಗಡೆ, ಈ ಬಯಲಾಟದ ಎಲ್ಲ ದೃಶ್ಯಗಳನ್ನೂ ಅರಗಿಸಿಕೊಂಡಿದ್ದಾರೆ.

ಹೆಗಡೆ ಅವರಿಗೆ ಹುಟ್ಟುಹಬ್ಬ ದ ಆಚರಣೆ ಬೇಕಿರಲಿಲ್ಲ ಅನ್ನುವ ವಾದಗಳೂ ಇವೆ. ಆದರೆ, ಈ ಸಂಭ್ರಮವೆಲ್ಲ ಅವರ ಅನುಮತಿಯಿಲ್ಲದೆ ನಡೆದಿವೆ ಅನ್ನುವುದನ್ನು ನಂಬುವುದು ಸಾಧ್ಯವಿಲ್ಲ . ಹುಟ್ಟುಹಬ್ಬ ಅಭಿಮಾನಿಗಳಿಗೆ ಯಾವ ಕಾರಣಗಳಿಗೆ ಬೇಕಾಗಿದ್ದಿತೋ, ಹೆಗಡೆ ಅವರಲ್ಲೂ ಅಷ್ಟೇ ಕಾರಣಗಳಿದ್ದವು. ವಾಜಪೇಯಿ ಸಂಪುಟದಲ್ಲಿ ಸ್ಥಾನ ವಂಚಿತರಾದ ನಂತರ ಹೆಗಡೆ ರಾಜಕೀಯ ಅಸ್ಪೃಶ್ಯತೆಯಿಂದ ನರಳುತ್ತಿದ್ದರು. ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗುವ, ದೊಡ್ಡ ಪ್ರಮಾಣದಲ್ಲಿ ಎದ್ದುನಿಲ್ಲುವ-ಶಕ್ತಿ ಪ್ರದರ್ಶಿಸುವ ಅವಕಾಶವೊಂದನ್ನು ಅವರು ನಿರೀಕ್ಷಿಸುತ್ತಿದ್ದರು. ಹುಟ್ಟುಹಬ್ಬದ ಆಚರಣೆ ಹೊಸ ಹುಮ್ಮಸ್ಸು ತುಂಬುತ್ತದೆಂದು ಅವರು ನಿರೀಕ್ಷಿಸಿದ್ದಲ್ಲಿ ಆಶ್ಚರ್ಯವೇನೂ ಇಲ್ಲ . ಈ ಹಿನ್ನೆಲೆಯಲ್ಲೇ ಅವರು ನನಗಿನ್ನೂ 57 ಎಂದಿರಬಹುದು.

ಪುನರಪಿ ಜನನಂ ! ಅದು ಸಾಧ್ಯವಾದೀತಾ?
ಸಂಯುಕ್ತ ಜನತಾದಳದ ನಾಯಕರಿಗೆ ಮಾತ್ರ ಹೆಗಡೆ ಹುಟ್ಟುಹಬ್ಬದ ಕಾರ್ಯಕ್ರಮ ಸಂಪೂರ್ಣ ತೃಪ್ತಿ ತಂದಿಲ್ಲ . ಹುಟ್ಟುಹಬ್ಬ ದ ಕಾರ್ಯಕ್ರಮ ಹೆಗಡೆ- ದೇವೇಗೌಡರನ್ನು ಒಟ್ಟುಗೂಡಿಸುತ್ತದೆಂದು, ದಳಗಳ ಪುನರ್ಮಿಲನಕ್ಕೆ ವೇದಿಕೆಯಾಗುತ್ತದೆಂದು ಭೈರೇಗೌಡ, ಸಿಂಧ್ಯಾ ಸೇರಿದಂತೆ ಎಲ್ಲರೂ ನಂಬಿದ್ದರು. ಆದರೆ, ಪಟ್ಟು ಸಡಿಲಿಸದ ದೇವೇಗೌಡ ಹಾಗೂ ಅವರ ಪಕ್ಷ ಹುಟ್ಟುಹಬ್ಬದ ಕಾರ್ಯಕ್ರಮವನ್ನೇ ಬಹಿಷ್ಕರಿಸಿದರು. ಇದರೊಂದಿಗೆ ವಿಲೀನ ಪ್ರಕ್ರಿಯೆ ಮತ್ತೆ ನೆನೆಗುದಿಗೆ ಬಿದ್ದಿದೆ. ಎಸ್‌.ಎಂ.ಕೃಷ್ಣ ನೆಮ್ಮದಿಯಾಗಿದ್ದಾರೆ.

ಮೆಚ್ಚುಗೆ ವಿರೋಧಗಳೇನೇ ಇರಲಿ, ಹೆಗಡೆ ಅವರ ಅದ್ದೂರಿ ಹುಟ್ಟುಹಬ್ಬದ ಕಾರ್ಯಕ್ರಮವಂತೂ ಮುಗಿದಿದೆ. ಅದರ ಫಲಶ್ರುತಿ ಎಂಥದೆನ್ನುವುದು ಸ್ಪಷ್ಟವಾಗಲು ಸ್ವಲ್ಪ ಕಾಲಾವಕಾಶ ಬೇಕು. ಸಾರ್ವಜನಿಕ ಬದುಕಿನಲ್ಲಿ ಬೌದ್ಧಿಕತೆಯ ಪ್ರಭಾವ ಅಥವಾ ಮನ್ನಣೆಯನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷೆ ಹೆಗಡೆ ಅವರ ಕಣ್ಣುಗಳಲ್ಲಿ ಹಸಿಯಾಗಿದೆ. ಹೆಗಡೆ ಯಶಸ್ವಿಯಾಗುತ್ತಾರಾ?

ಬಾಲಂಗೋಚಿ: ಹುಟ್ಟುಹಬ್ಬದ ಸಂದರ್ಭದಲ್ಲಿ ಜನತೆ ಹೆಗಡೆ ಅವರಿಂದ ಏನನ್ನು ನಿರೀಕ್ಷಿಸುತ್ತಾರೆ?‘ರಾಜಕೀಯ ಸನ್ಯಾಸವಲ್ಲದೆ ಇನ್ನೇನು’ ಎಂದು ಕೆಮ್ಮುತ್ತಾರೆ ದೇವೇಗೌಡರು. ಸಿದ್ಧರಾಮಯ್ಯ ಅಂಗವಸ್ತ್ರ ದ ಮಡಿಕೆಗಳನ್ನು ಸರಿಪಡಿಸಿಕೊಳ್ಳುತ್ತಾರೆ.

Post your opinion

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X