ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಗಳ ವ್ಯಾಪಾರಿ

By Staff
|
Google Oneindia Kannada News

*ಕೆ. ರಾಜಲಕ್ಷ್ಮಿ ರಾವ್‌

‘ನಾನು ಕನಸುಗಳನ್ನು ಮಾರಬಲ್ಲೆ . ಆಸ್ತಿ ಪಾಸ್ತಿ ಗಳಿಸುವುದು ಒಂದು ಅಪರಾಧ ಎಂದರೆ ನಾನು ಒಪ್ಪುವುದೇ ಇಲ್ಲ. ನೀವೂ ನನ್ನಂತಾಗಬೇಕೆಂದು ಬಯಸುವಿರಾದರೆ- ಸ್ಟಾಕ್‌ ಮಾರ್ಕೆಟ್‌ಗೆ ಬಂದುಬಿಡಿ.’
ವೆಬ್‌ಸೈಟ್‌ನ ಚಾಟೊಂದರಲ್ಲಿ 1992 ರಲ್ಲಿ ಸಾವಿರಾರು ಕೋಟಿ ರುಪಾಯಿಗಳ ಷೇರು ಹಗರಣ ಸೃಷ್ಟಿಸಿ ದೇಶದ ವಿತ್ತೀಯ ವ್ಯವಸ್ಥೆಯಲ್ಲಿ ಅಲ್ಲಕಲ್ಲೋಲ ಉಂಟು ಮಾಡಿದ ಷೇರುಗೂಳಿ ಹರ್ಷದ್‌ ಮೆಹ್ತಾ ಹೇಳಿದ್ದ ಮಾತುಗಳಿವು!
107 ದಿನಗಳ ಜೈಲು ಶಿಕ್ಷೆಯಿಂದ ಆಚೆಗೆ ಬಂದಾಗ ಆತ ಜಗತ್ಪ್ರಸಿದ್ಧ ವ್ಯಕ್ತಿಯಾಗಿದ್ದ. ನಮ್ಮ ಧನ ದಾಹಿ ಮಧ್ಯಮ ವರ್ಗದ ಜನ ಆತನನ್ನು ಭಾರತಕ್ಕೆ ಮೋಸ ಮಾಡಿದ ಮಹಾ ಭ್ರಷ್ಟ ಎಂದು ಜರೆಯುತ್ತಿದ್ದರು. ಆದರೆ, ಬಹುತೇಕ ಮಂದಿ ಆತನ ಬಗೆಗೊಂದು ಅಚ್ಚರಿ ಬೆರೆತ ಅಸೂಯೆಯ ನೋಟ ಬೀರಿದ್ದರು. ಸಿನಿಮಾ ಸ್ಟಾರ್‌ಗಳಂತೆ ಮೆಹ್ತಾನಿಗೂ ಅಭಿಮಾನಿಗಳು ಅನುಯಾಯಿಗಳು ಹುಟ್ಟಿಕೊಂಡರು. ಆತ ಜೈಲಿನಿಂದ ವಾಪಸ್ಸಾಗುವಾಗ ಸಾವಿರಾರು ಕುತೂಹಲಿಗಳು, ಮಾಧ್ಯಮ ಪ್ರತಿನಿಧಿಗಳು, ಷೇರು ಕುಳಗಳು ಕಾದು ನಿಂತಿದ್ದರು.

ಭಾರತದ ಅತಿ ದೊಡ್ಡ ಭ್ರಷ್ಟಾಚಾರದ ಆರೋಪ, ಬಿಲಿಯನ್‌ಗಟ್ಟಲೆ ರೂಪಾಯಿಗಳನ್ನು ಗುಳುಂ ಮಾಡಿದನೆಂಬ ಕುಖ್ಯಾತಿ ಮೆಹ್ತಾನಿಗಂಟಿತ್ತು . ಆ ಕುಖ್ಯಾತಿಯನ್ನು ಹೊತ್ತೇ ಹರ್ಷದ್‌ ಬದುಕಿದ. ಕುಖ್ಯಾತಿಯನ್ನೇ ಬಂಡವಾಳವಾಗಿ ಬದಲಿಸಿಕೊಂಡ. ಆತನಿಗೆ ಆರೋಪಗಳು ಖುಷಿ ಕೊಟ್ಟಿದ್ದವು. ಆತ ಪಕ್ಕಾ ವ್ಯಾಪಾರಿ!

ಷೇರು ಮಾರುಕಟ್ಟೆಯಲ್ಲಿ ಬಂಡವಾಳಗಾರರನ್ನು ತನ್ನ ಹಾಡಿಗೆ ತಕ್ಕಂತೆ ಕುಣಿಸುತ್ತಿದ್ದ ಮೆಹ್ತಾ , ಜೈಲುಪಾಲಾಗಿ ತನ್ನ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗುತ್ತಿದ್ದರೂ ನೆಲ ಕಚ್ಚಲಿಲ್ಲ. ‘ಹರ್ಷದ್‌ ಸ್ಟೈಲ್‌’ನಲ್ಲಿ ಅವನಿಗೆ ಬಲವಾದ ನಂಬಿಕೆ ಇತ್ತು. ಆದರೆ ಬೇನಾಮಿ ಷೇರು ಹಗರಣದಲ್ಲಿ ಮತ್ತೆ ಜೈಲಿಗೆ ಹೋದ. ಹತ್ತಾರು ಹಗರಣಗಳ ವಿಚಾರಣೆ ಆತನನ್ನು ಹಣ್ಣುಗಾಯಿ ಮಾಡಿತ್ತು . ಜೈಲಿಗೆ ಹೋಗುವುದು ಅಭ್ಯಾಸವಾಯಿತು. ಕೊನೆಗೆ ಜೈಲಿನಲ್ಲೇ ಕಾಯಿಲೆಬಿದ್ದ , ಎದೆನೋವಿಗೆ ಬಲಿಯಾದ.

ಮೆಹ್ತಾ ಐಶಾರಾಮದ ಬದುಕನ್ನು ದಟ್ಟವಾಗಿ ಪ್ರೀತಿಸಿದ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ 6 ಬಿಲಿಯನ್‌ ರೂಪಾಯಿ ಹಗರಣದಿಂದ ಬಿಡಿಸಿಕೊಳ್ಳಲು ಆತ ಓಡಾಡುತ್ತಿದ್ದ ಸಂದರ್ಭದಲ್ಲಿ (1992) ಆತ ಟೊಯೋಟಾ ಲೆಕ್ಸಸ್‌ ಕಾರ್‌ನಲ್ಲಿ ಓಡಾಡುತ್ತಿದ್ದ. ಅದು ಆಗಷ್ಟೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಕಾರು.

ಮಾರುತಿ ಉದ್ಯೋಗ್‌ನ ವಿಶೇಷ ನ್ಯಾಯಾಲಯದಿಂದ ಹರ್ಷದ್‌ ಅಪರಾಧಿ ಎಂದು ಸಾಬೀತಾಯಿತು. ಸೆಬಿ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡವನು ಮತ್ತೆ ಮೇಲೆ ಬರಲು ತನ್ನೆಲ್ಲ ಬುದ್ಧಿ ಕಾಸು ಖರ್ಚು ಮಾಡಿದ್ದ. ಮತ್ತೆ ಮೇಲೆ ಬರಬೇಕೆಂಬ ಅವನ ಆಸೆ. ಸ್ಟಾಕ್‌ ಮಾರ್ಕೆಟ್‌ ತನಗಾಗಿ ಕಾಯುತ್ತಿದೆ ಎಂದೇ ನಂಬಿದ್ದ . ಯ ಕನಸು ನನಸಾಗಲಿಲ್ಲ .

1997ರಲ್ಲಿ ಹೊಸ ಯುಗದ ಸ್ಟಾಕ್‌ ಮಾರ್ಕೆಟ್‌ ಗುರು ಎಂಬ ವೇಷದಲ್ಲಿ ಮೆಹ್ತಾ ಸಲಹೆಗಳನ್ನು ಆಹ್ವಾನಿಸಿದ. ತನ್ನ ಅಪಾರ ಅಭಿಮಾನಿ ಬಂಧುಗಳೊಡನೆ ಸಂಪರ್ಕ ಸೇತುವಾಗಿ ವೆಬ್‌ಸೈಟ್‌ ಒಂದನ್ನು ನಿರ್ಮಿಸಲು ಉದ್ದೇಶಿಸಿದ್ದ. ಬಾಂಬೆ ಸ್ಟಾಕ್‌ ಎಕ್ಸಚೇಂಚ್‌ನಲ್ಲೊಂದು ಆಪ್ತ ಬಳಗವಿತ್ತು. ಮಾಧ್ಯಮಗಳಿಗೆ ಹರ್ಷದ್‌ ಸ್ಕೂಪ್‌ ಸೋರ್ಸ್‌ ಎನಿಸಿಕೊಂಡಿದ್ದ.

ಕನಸ ಮಾರಿ ಮಾಳಿಗೆ ಕಟ್ಟುವ ಮಹತ್ವಾಕಾಂಕ್ಷಿ , ಮಾಳಿಗೆಯ ಕುರ್ಚಿಯಲ್ಲಿ ನೆಮ್ಮದಿ ಕಾಣಲಿಲ್ಲ. ಹರ್ಷದ್‌ ಗೆದ್ದು ಸೋತಿದ್ದ ಅನ್ನುವುದನ್ನು ಆತನ ಹತ್ತಿರದ ಗೆಳೆಯರು ಒಪ್ಪುತ್ತಾರೆ.

ಹರ್ಷದ್‌ ವೃತ್ತಿ ಜೀವನ ಆರಂಭವಾಗಿದ್ದು ನ್ಯೂ ಇಂಡಿಯಾ ಇನ್‌ಶ್ಯೂರೆನ್ಸ್‌ ಕಂಪೆನಿಯಲ್ಲಿ , ಕ್ಲರ್ಕ್‌ ಆಗಿ. ಆತನದ್ದು 47 ವರ್ಷದ ಬದುಕು. ಹೆಂಡತಿ, ಇಬ್ಬರು ಮಕ್ಕಳು ಮತ್ತಿಬ್ಬರು ಸಹೋದರರು ಆತನ ಕಾರುಬಾರಿನ ಪಾಲುದಾರರು. ಅಣ್ಣನೊಂದಿಗೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡು ಜೈಲಿಗೆ ಹೋದ ಖ್ಯಾತಿ ಸಹೋದರರರಾದ ಅಶ್ವಿನ್‌ ಮತ್ತು ಸುಧೀರ್‌ ಅವರದು. ಸದ್ಯಕ್ಕೆ ಹರ್ಷದ್‌ ಮೆಹ್ತಾ ಹಗರಣದ ವಾರಸುದಾರರು.

ಹರ್ಷದ್‌ ವ್ಯವಸ್ಥೆಯ ಲೋಪದೋಷಗಳನ್ನು ಎಪಯೋಗಿಸಿಕೊಂಡು ಕಾಸು ಗಿಟ್ಟಿಸಿಕೊಂಡ ಎನ್ನುವುದನ್ನು ಆತನ ವಕೀಲ ಜೇಠ್‌ ಮಲಾನಿ ಒಪ್ಪುವುದಿಲ್ಲ. ಅವರ ಪ್ರಕಾರ ಆತ ಮುಗ್ಧ. ಅಪರಾಧಿ ಅಲ್ಲ , ಬದಲಾಗಿ ಸಂತ್ರಸ್ತ. ಪರಿಸ್ಥಿತಿಯ ಪಿತೂರಿಯಿಂದ ಹರ್ಷದ್‌ಗೆ ಈ ಗತಿಯಾಗಿದೆ. ಅಂದರೆ ಪರಿಸ್ಥಿತಿಯೇ ಅಪರಾಧಿ. ಆದರೆ, ಕಾನೂನಿನ ಪ್ರಕಾರ ಅಪರಾಧ ಮಾಡುವುದು ಮನುಷ್ಯರು ಮಾತ್ರ!

ಹರ್ಷದ್‌ ಬಿಂದಾಸ್‌ಆಗಿ ಬದುಕಿದ್ದ ಜೊತೆಗೆ ಅಂತಹುದೇ ಯೋಚನೆಗಳನ್ನೂ ಹೊಂದಿದ್ದ. ಉದಾಹರಣೆಗೆ ಕೆಳಗಿನ ಹರ್ಷದ್‌ ಮಾತುಗಳನ್ನು ನೋಡಿ:

  • ನೀವು ಬ್ಲಾಕ್‌ ಮನಿಯಿಂದ ನೂರು ರೂಪಾಯಿ ಬೆಲೆಯ ಮನೆ ಕಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಅದಕ್ಕೆ 30 ರೂಪಾಯಿ ಆಸ್ತಿ ತೆರಿಗೆ ಕಟ್ಟಿದರಾಯ್ತು. ಅದು ಸಕ್ರಮವಾಗಿಬಿಡುತ್ತದೆ. (ವಿಡಿಎಸ್‌ ಯೋಜನೆಯ ಬಗ್ಗೆ )
  • ಎಲ್ಲ ಹಗರಣಗಳನ್ನೂ ನಾನು ಬೆಳೆವಣಿಗೆಯ ಸೋಪಾನ ಎಂದು ಭಾವಿಸುತ್ತೇನೆ. ಇಂತಹ ಹಗರಣಗಳು ಸ್ವ ವಿಮರ್ಶೆಗೆ, ಆತ್ಮಶುದ್ಧಿಗೆ ಅವಕಾಶ ಮಾಡಿಕೊಡುತ್ತವೆ.
  • ಸ್ಟಾಕ್‌ ಮಾರ್ಕೆಟ್‌ ಎಂದರೆ ಮಾನವ ಮಿದುಳಿನ ಒಂದು ಭಾಗ ಹಾಗೂ ಅದರ ಪರಿಣಾಮಗಳು. ಇಲ್ಲಿ ನನಗೆ 20 ವರ್ಷಗಳ ಅನುಭವಿದೆ. ಆದರೂ ನಾನೀಗಲೂ ಸ್ಟಾಕ್‌ ಮಾರ್ಕೆಟ್‌ನ ವಿದ್ಯಾರ್ಥಿ.
ಹರ್ಷದ್‌ ಮೆಹ್ತಾ ಇಹಲೋಕದ ಲೆಕ್ಕ ಚುಕ್ತ ಮಾಡಿಕೊಂಡಾಗ ಆತನ ಸ್ನೇಹಿತರು ಹರ್ಷದ್‌ ಪೂರ್ತಿ ದಿವಾಳಿಯಾಗುವ ಮುನ್ನವೇ ಸತ್ತ ಎಂದು ನಿಟ್ಟುಸಿರಿಟ್ಟರು. ಹರ್ಷದ್‌ ದಿವಾಳಿಯಾಗಿದ್ದನೇ? ಆತನ ಕನಸು- ಐಡಿಯಾಗಳು ದಿವಾಳಿಯಾಗಿದ್ದವೆ? ಉತ್ತರ ಹೇಳಲು ಹರ್ಷದ್‌ ಬದುಕಿಲ್ಲ . ಆದರೆ, ಅವನ ವಾರಸುದಾರರು ಮಾತ್ರ ಚಿರಂಜೀವಿಗಳು!

Post your views

ವಾರ್ತಾ ಸಂಚಯ

ಷೇರುಗೂಳಿ ಹರ್ಷದ್‌ ಮೆಹ್ತಾ ಹೃದಯಾಘಾತದಿಂದ ನಿಧನ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X