ಕುಂಬ್ಳೆ ನಂತರ ಯಾರು ? ಉತ್ತರ ಸಿಕ್ಕಿದೆ

(ಇನ್ಫೋ ವಿಶೇಷ)

ಚಿಕ್ಕ ವಯಸ್ಸು. ಅದಕ್ಕೆ ತಕ್ಕಂಥ ಮುಗ್ಧತೆ. ತಣ್ಣಗಿನ, ತೆಳ್ಳಗಿನ ಈ ಆಸಾಮಿ ವೈಯಕ್ತಿಕವಾಗಿ ಇತಿಹಾಸ ಬರೆದುದಷ್ಟೇ ಅಲ್ಲ, ಕ್ರಿಕೆಟ್ಟಿನಲ್ಲಿ ಭಾರತಕ್ಕೂ ಐತಿಹಾಸಿಕ ಗೆಲುವು ತಂದಿತ್ತರು. ಹೌದು, ಇವರೇ ಪಂಜಾಬಿನ ಇಪ್ಪತ್ತರ ಹರೆಯದ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌.

ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಸ್ಥಾನ ಗಿಟ್ಟಿಸಬಲ್ಲ ಸಾಮರ್ಥ್ಯವನ್ನು ಹದಿನೇಳರ ಹರೆಯದಲ್ಲೇ ತೋರಿದ ಹರ್ಭಜನ್‌ ಈ ಹೊತ್ತಿನ ಹೀರೋ. ಎಡರು- ತೊಡರು, ತುರುಸಿನ ಪೋಟಿ, ಎಳೆತನ ಎಲ್ಲಾ ಟೂ ಅಂಡ್‌ ಫ್ರೋಗಳ ನಡುವೆ ಕುಂಬ್ಳೆ ನಂತರ ಭರವಸೆ ಹುಟ್ಟಿಸಿರುವ ಭಾರತದ ಏಕೈಕ ಸ್ಪಿನ್ನರ್‌ ಈತ.

ಮಾರ್ಚ್‌ 11ರ ಭಾನುವಾರ ಆ್ಯಸೀಸ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ರಿಕಿ ಪಾಂಟಿಂಗ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌ ಹಾಗೂ ಶೇನ್‌ ವಾರ್ನ್‌ ವಿಕೆಟ್‌ಗಳನ್ನು ಎಡೆಬಿಡದೆ ಕಸಿದು, ಹ್ಯಾಟ್ರಿಕ್‌ ಗೌರವಕ್ಕೆ ಪಾತ್ರರಾದ ಹರ್ಭಜನ್‌, ಎರಡನೇ ಇನ್ನಿಂಗ್ಸ್‌ನಲ್ಲೂ ತಮ್ಮ ಮೊನಚು ಮೆರೆದರು. ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ 7, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಉರುಳಿಸಿದರು. ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಹೆಚ್ಚು ವಿಕೆಟ್‌ ಪಡೆದ ಗೌರವಕ್ಕೆ ಪಾತ್ರರಾಗಿದ್ದ ಕರ್ನಾಟಕದ ಜಾವಗಲ್‌ ಶ್ರೀನಾಥ್‌ (13 ವಿಕೆಟ್‌) ಜಾಗೆಗೆ ಹರ್ಭಜನ್‌ ಕೂಡ ಸೇರಿದರು.

ಹರ್ಭಜನ್‌ ಕ್ರಿಕೆಟ್‌ ಹಾದಿ ಸುಗಮವಾಗೇನೂ ಇರಲಿಲ್ಲ. ಏಪ್ರಿಲ್‌ 1998ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧ ಅಂತರರಾಷ್ಟ್ರೀಯ ಟೆಸ್ಟ್‌ ಗೆ ಪಾದಾರ್ಪಣೆ. ಅದೇ ವರ್ಷ 9 ರಾಷ್ಟ್ರಗಳ ವಿಲ್ಸ್‌ ಟ್ರೋಫಿ ಆಯ್ಕೆ ವೇಳೆ ಹರ್ಭಜನ್‌ ಬೌಲಿಂಗ್‌ ಆ್ಯಕ್ಷನ್‌ ಬಗ್ಗೆ ಬಿಸಿಸಿಐ ತಕರಾರು. ಕೊನೆಗೆ ಐಸಿಸಿಯ ಒಬ್ಬ ಅಧಿಕಾರಿ ಈತನ ಕೈತಿರುಗಿಸುವಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ತಕರಾರಿನಲ್ಲಿ ಹುರುಳಿಲ್ಲ ಅಂದರು. ಹುಡುಗ ಹರ್ಭಜನ್‌ ಕೆರಿಯರ್ರು ಬಚಾವಾಯಿತು. ಆಗ ಐಸಿಸಿ ಏನಾದರೂ ಬಿಸಿಸಿಐ ಮಾತನ್ನೇ ವೇದವಾಕ್ಯ ಎಂದು ನಂಬಿದ್ದರೆ ಇವತ್ತು ಭಾರತಕ್ಕೆ ಈ ಭರವಸೆಯ ಪ್ರತಿಭೆ ಸಿಕ್ಕುತ್ತಿರಲಿಲ್ಲ.

ಸಾಧನೆಯ ಸಂಭ್ರಮದಲ್ಲಿ ಅಪ್ಪನ ನೆನೆದ ಹುಡುಗ

ಮೊನ್ನೆ ಹ್ಯಾಟ್ರಿಕ್‌ ಸಾಧನೆ ಮಾಡಿದಾಗ, ತಾನು ಇತಿಹಾಸ ನಿರ್ಮಿಸಿದ್ದೇನೆ ಎಂಬುದನ್ನೂ ಅರಿಯದ ಈ ಹುಡುಗನ ಕಣ್ಮುಂದೆ ಬಂದದ್ದು 6 ತಿಂಗಳ ಹಿಂದಷ್ಟೇ ನಿಧನರಾದ ಆತನ ತಂದೆ ಸರ್‌ದೇವ್‌ ಸಿಂಗ್‌. ಇವತ್ತು ಅಪ್ಪ ಇದ್ದಿದ್ದರೆ... ಅನ್ನುವಷ್ಟರಲ್ಲಿ ಹುಡುಗನ ಕಣ್ಣು ತುಂಬಿಬಿಟ್ಟಿತ್ತು. ಈ ಸಾಧನೆ ಪ್ರಶಸ್ತಿ, ಇಂಡಿಯನ್‌ ಏರ್‌ಲೈನ್‌ ಕೆಲಸದಲ್ಲಿ ಬಡ್ತಿ, ಹಣ - ಹೆಸರು ಎಲ್ಲವನ್ನೂ ತಂದಿತ್ತಿದೆ. ಈವರೆಗೆ 9 ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯಗಳಿಂದ 25 ವಿಕೆಟ್‌ ಗಳಿಸಿದ್ದ ಹರ್ಭಜನ್‌, ತಮ್ಮ ಹತ್ತನೇ ಪಂದ್ಯವೊಂದರಲ್ಲೇ 13 ವಿಕೆಟ್‌ ಕಬಳಿಸಿದ್ದಾರೆ. ಈ 13 ವಿಕೆಟ್ಟುಗಳೂ ಅವರ ಪಾಲಿಗೆ ಅನನ್ಯ ರತ್ನಗಳಿದ್ದಂತೆ. ಯಾಕೆಂದರೆ ಅವು ಗೆಲುವಿನ ಕುದುರೆ ಆಸ್ಟ್ರೇಲಿಯಾದ ಜೀನು ಹಿಡಿದಿದ್ದ ಕ್ರಿಕೆಟಿಗರದ್ದು.

ಮೊದಲ ಪಂದ್ಯದಲ್ಲೂ ಆಸ್ಟ್ರೇಲಿಯಾಕ್ಕೆ ಮಾಂಜಾ ಕೊಟ್ಟಿದ್ದ ಹರ್ಭಜನ್‌ ಈಗ ಕಾಂಗರೂಗಳ ಕನಸಲ್ಲೂ ಬಂದು ಕಾಡುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಭಾರತದ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚಚ್ಚಿದ್ದ ಗಿಲ್‌ಕ್ರಿಸ್ಟ್‌ ಕೂಡ ಹರ್ಭಜನ್‌ಗೆ ಶಹಭಾಸ್‌ಗಿರಿ ಹೇಳಿದರು. ಅಷ್ಟೇ ಯಾಕೆ, ಕರ್ನಾಟಕದ ಹಳೆಯ ಸ್ಪಿನ್‌ ಹುಲಿ ಪ್ರಸನ್ನ ಅವರಿಗೆ ಹರ್ಭಜನ್‌ ತಮ್ಮ ಹ್ಯಾಟ್ರಿಕ್‌ ಸಾಧನೆಯಲ್ಲಿ ಪಡೆದ ವಾರ್ನ್‌ ವಿಕೆಟ್‌, ತಮ್ಮ ನೂರನೇ ವಿಕೆಟ್‌ ಕಿತ್ತ ರೀತಿಯನ್ನು ನೆನಪಿಸಿತು. ಈತನ ಲೈನ್‌ ಅಂಡ್‌ ಲೆಂಗ್ತ್‌ ಕರಾರುವಾಕ್ಕಾಗಿದೆ. ಅದನ್ನೇ ಮುಂದುವರೆಸಿದಲ್ಲಿ ಉತ್ತಮ ಭವಿತವ್ಯ ಈತನದಾಗಲಿದೆ ಎನ್ನುತ್ತಾರೆ ಪ್ರಸನ್ನ.

ಸ್ವಲ್ಪದರಲ್ಲಿ ತಪ್ಪಿದ ಇನ್ನೊಂದು ದಾಖಲೆ

ಮೊದಲ ದರ್ಜೆ ಕ್ರಿಕೆಟ್ಟಿನಲ್ಲಿ ಕೇವಲ 35 ಪಂದ್ಯಗಳಲ್ಲಿ 128 ವಿಕೆಟ್‌ ದಾಖಲಿಸಿರುವ ಹರ್ಭಜನ್‌ ಕೂದಲೆಳೆಯಲ್ಲಿ ಇನ್ನೊಂದು ದಾಖಲೆ ತಪ್ಪಿಸಿಕೊಂಡಿದ್ದಾರೆ. ಅದೇ, ಅತಿ ಚಿಕ್ಕ ವಯಸ್ಸಿನಲ್ಲೇ ಹ್ಯಾಟ್ರಿಕ್‌ ಸಾಧನೆ ಮಾಡಿದ ಕ್ರಿಕೆಟಿಗನೆಂಬ ಹೆಗ್ಗಳಿಕೆ. ಹರ್ಭಜನ್‌ ಹ್ಯಾಟ್ರಿಕ್‌ ಸಾಧನೆ ಮಾಡಿದಾಗ ಅವರ ಸರಿಯಾದ ವಯಸ್ಸು 20 ವರ್ಷ 251(ಜನ್ಮ ದಿನಾಂಕ ಜೂನ್‌ 3, 1980) ದಿನ. 1998ರಲ್ಲಿ ಪಾಕ್‌ನ ಅಬ್ದುಲ್‌ ರಜಾಕ್‌ ಇದೇ ಸಾಧನೆಯನ್ನು, ಅವರಿಗೆ 20 ವರ್ಷ 202 ದಿನ ವಯಸ್ಸಾಗಿದ್ದಾಗ ಮಾಡಿದ್ದರು.

ಚೆನ್ನೈನಲ್ಲಿ ಕುಂಬ್ಳೆ ನನಗೆ ಸಾಕಷ್ಟು ಹೇಳಿಕೊಟ್ಟರು. ದೇಶಕ್ಕೆ ಏನಾದರೂ ಸ್ವಲ್ಪ ಮಾಡುತ್ತಿದ್ದೇನಲ್ಲ ಅನ್ನೋ ತೃಪ್ತಿ ನನ್ನದು. ಸೋಲಿನ ದವಡೆಯಿಂದ ಭಾರತವನ್ನು ಲಕ್ಷ್ಮಣ್‌ ಹಾಗೂ ದ್ರಾವಿಡ್‌ ಬಚಾವು ಮಾಡಿದರು. ಗೆಲುವನ್ನು ದಕ್ಕಿಸಿಕೊಟ್ಟವರ ಪೈಕಿ ಜನ ನನ್ನನ್ನೂ ನೆನೆಯುತ್ತಾರೆ ಎಂಬುದೇ ನಿಜವಾದ ಸಂತೋಷ ಅನ್ನುವ ಹರ್ಭಜನ್‌ ತಮ್ಮನ್ನು ನಂಬಿ, ಅವಕಾಶ ಕೊಟ್ಟ ಕೋಚ್‌ ಜಾನ್‌ ರೈಟ್‌ ಮತ್ತು ನಾಯಕ ಗಂಗೂಲಿಗೆ ಧನ್ಯವಾದ ಹೇಳುತ್ತಾರೆ.

ಹರ್ಭಜನ್‌ರಂಥ ಇನ್ನಷ್ಟು ಪ್ರತಿಭೆಗಳು ನಮ್ಮೆದುರಿಗೇ ಇದ್ದರೂ, ಆಯ್ಕೆ ಸಮಿತಿ ಅಧ್ಯಕ್ಷ ಚಂದೂ ಬೋರ್ಡೆ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ. ಹರ್ಭಜನ್‌ ಹುಟ್ಟಿಸಿರುವ ಭರವಸೆ ಪ್ರತಿಭಾವಂತ ಹೊಸಬರ ಆಯ್ಕೆಗೆ ನಾಂದಿಯಾಗಲಿ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+