ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧವಳಕೇಶಿಯ ‘ಧವಳ ಕೀರ್ತಿ’

By Staff
|
Google Oneindia Kannada News

ಕನ್ನಡ ಭಾಷಾ ವಿಜ್ಞಾನ ತಜ್ಞರೆಂದು ಕರೆಸಿಕೊಂಡಿದ್ದ ಧವಳಕೇಶಿ ಹಾ.ಮಾ.ನಾ ಅವರು 1931ರ ಸೆಪ್ಟೆಂಬರ್‌ 26ರಂದು ತೀರ್ಥಹಳ್ಳಿ ತಾಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಹಾ.ಮಾ.ನಾ.ರ ತಂದೆ ಶ್ರೀನಿವಾಸ ನಾಯಕ್‌, ತಾಯಿ ರುಕ್ಮಿಣಮ್ಮ.

ಲೇಖಕರಾಗಿ, ವಿಮರ್ಶಕರಾಗಿ, ಗ್ರಂಥ ಸಂಪಾದಕರಾಗಿ, ಸಣ್ಣಕತೆ, ಪ್ರಬಂಧ ಕ್ಷೇತ್ರವನ್ನು ಸಂಪನ್ನಗೊಳಿಸಿದ ಹಾ.ಮಾ.ನಾ. ಸಂಪ್ರತಿ, ಸಂಚಯ, ಸಂಪದ, ಸಂಪುಟ, ಸೂಲಂಗಿ... ಮೊದಲಾದ ಅಂಕಣಗಳಿಂದ ಖ್ಯಾತರಾಗಿದ್ದರು. ಇವರ ಎಲ್ಲ ಅಂಕಣಗಳೂ ‘ ಸ ’ ಅಕ್ಷರದಿಂದಲೇ ಆರಂಭವಾಗುತ್ತಿದ್ದುದರಿಂದ ಹಾ.ಮಾ.ನಾರ ಆಪ್ತರು ಅವರನ್ನು ಸಕಾರ ಪ್ರಿಯ ಎಂದು ಛೇಡಿಸುತ್ತಿದ್ದರು.

ಕನ್ನಡ ಆನರ್ಸ್‌ ಪದವಿ ಪಡೆದು ಉಪನ್ಯಾಸಕರಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ ಹಾ.ಮಾ.ನಾ. ಆನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನೂ, ಅಮೆರಿಕಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಗಳಿಸಿದರು. ಎರಡು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜ್ಞಾನಪೀಠ ಪ್ರಶಸ್ತಿ ಸಮಿತಿಯ ಕನ್ನಡ ಸಲಹಾ ಸಮಿತಿಯ ಸದಸ್ಯತ್ವವನ್ನೂ ಪಡೆದಿದ್ದರು.

ವಿಶ್ವ ವಿದ್ಯಾಲಯದ ಧನ ಸಹಾಯ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಹಾ.ಮಾ.ನಾ. ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನೂ ಅಲಂಕರಿಸಿದ್ದರು.

ವಿನಾಯಕನ ವಾಙ್ಮಯ, ಸಂಚಯ, ದೇಜಗೌ ವ್ಯಕ್ತಿ ಮತ್ತು ಸಾಹಿತ್ಯ, ಇಂಡಿಯಾ ದೇಶದ ಸಾರ್ವಜನಿಕ ಆಯವ್ಯಯ, ಗೊರೂರು ಗೌರವ ಗ್ರಂಥ, ಎ.ಆರ್‌.ಕೃ. ಜೀವನ ಸಾಧನೆ, ಹಾವು ಮತ್ತು ಹೆಣ್ಣು, ನಮ್ಮ ಮನೆಯ ದೀಪ, ಸಲ್ಲಾಪ, ಅಕ್ಕಮಹಾದೇವಿ, ರವೀಂದ್ರನಾಥ ಠಾಕೂರರು, ಮುಮ್ಮಡಿ ಕೃಷ್ಣರಾಜ ಒಡೆಯರು, ಗಳಗನಾಥ, ಮುದ್ದಣ, ಭಾರತೀಯ ಸಾಹಿತ್ಯದಲ್ಲಿ ಗಾಂಧೀಜಿ, ಕಚೇರಿ ಕೈಪಿಡಿ, ಕನ್ನಡ ಸಾಹಿತ್ಯ ಚರಿತ್ರೆ (5 ಸಂಪುಟಗಳು), ಬಸವ ಪುರುಷ, ಚಿನ್ನದ ಗರಿ, ಜಾನಪದ ಗ್ರಂಥ ಸೂಚಿ, ಬಿಡುಗಡೆಯ ಬಳ್ಳಿ, ಗದ್ಯ ವಿಹಾರ (1-2), ವಿಜ್ಞಾನ ಸಾಹಿತ್ಯ ನಿರ್ಮಾಣ, ಕಾವ್ಯ ಸಂಚಯ, ಶಾಸ್ತ್ರ ಸಾಹಿತ್ಯ ನಿರ್ಮಾಣ ಮುಂತಾದವು ಇವರು ಸಂಪಾದಿಸಿದ ಹಾಗೂ ರಚಿಸಿದ ಕೃತಿಗಳು.

1982 ರಲ್ಲಿ ರಾಜ್ಯ ಸರಕಾರ ಹಾ.ಮಾ.ನಾ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 1985ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಾ.ಮಾ.ನಾ. ಬಾಗಲಕೋಟೆಯಲ್ಲಿ ನಡೆದ 68 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡು ಮೈಸೂರಿಗೆ ತೆರಳುವ ಮಾರ್ಗದಲ್ಲೇ ರೈಲಿನಲ್ಲಿ ಲಘು ಹೃದಯಾಘಾತಕ್ಕೆ ಈಡಾಗಿದ್ದ ಹಾ.ಮಾ.ನಾ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಹೃದಯವಂತರೆನಿಸಿದ್ದ ಹಾ.ಮಾ.ನಾ ಅವರಿಗೆ ಎರಡನೇ ಬಾರಿ ಹೃದಯವೇ ಕೈಕೊಟ್ಟಿತು. ಜ್ಞಾನಪೀಠದ ಕನಸು ಕಂಡಿದ್ದ ಹಾ.ಮಾ.ನಾ.ರ ಕನಸು ಕನಸಾಗೇ ಉಳಿಯಿತು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X