ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್‌ ಕನ್ಯಾಕುಮಾರಿ

By Staff
|
Google Oneindia Kannada News

ಮುಂಬಯಿ : ಈಕೆಯ ಹೆಸರು ಭೂಪಿಕಾ. ಈಕೆಗೀಗ ಕೇವಲ 6 ವರ್ಷ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಇದೆಯಲ್ಲ ಹಾಗೆ ಈಕೆಯ ಪ್ರತಿಭೆ ಪರ್ವತದಷ್ಟು. ಈ ಪುಟ್ಟ ವಯಸ್ಸಿನಲ್ಲೇ ಗಿನ್ನಿಸ್‌ ದಾಖಲೆ ಸ್ಥಾಪಿಸಲು ಹೊರಟಿದ್ದಾಳೆ ಈ ಪುಟ್ಟ ಬಾಲೆ. ಕಂಪ್ಯೂಟರ್‌ ಭಾಷೆಗಳೆಲ್ಲ ಈಕೆಗೆ ಕರಗತ. 6 ವರ್ಷದಲ್ಲೇ 60 ವರ್ಷ ಕಲಿತವರೂ ಸಾಧಿಸದಷ್ಟು ವಿಷಯಗಳನ್ನು ಇವಳು ಅರಿತಿದ್ದಾಳೆ. ಸಾಧನೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿರುವ ಭೂಪಿಕಾಗೆ ಗಿನ್ನಿಸ್‌ ಕೈಗೆಟುಕದ ವಸ್ತುವೇನಲ್ಲ.

ಕಲ್ಯಾಣ್‌ನ ಈ ಪುಟ್ಟ ಬಾಲೆ ಒಂದನೇ ತರಗತಿಯ ವಿದ್ಯಾರ್ಥಿನಿ. ಆದರೂ ಈಕೆ ಮಹಾರಾಷ್ಟ್ರ ರಾಜ್ಯ ಮಂಡಳಿಯ ಕಂಪ್ಯೂಟರ್‌ ಪ್ರೋಗ್ರಾಮ್‌ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಗಿನ್ನಿಸ್‌ ದಾಖಲೆ ಮೆರೆಯಲು ಸಜ್ಜಾಗಿದ್ದಾಳೆ. ಹಾಲಿ ಅತಿ ಕಿರಿಯ ಕಂಪ್ಯೂಟರ್‌ ಪ್ರೋಗ್ರಾಮರ್‌ ಎಂದು ಗಿನ್ನಿಸ್‌ ದಾಖಲೆ ಪುಸ್ತಕದಲ್ಲಿ ಬ್ರಿಟನ್‌ನ ಸೋನಾಲಿ ಪಾಂಡ್ಯ ಅವರು ಹೆಸರು ದಾಖಲಾಗಿದೆ. ಈ ಸಾಧನೆ ಮೆರೆದಾಗ ಸೋನಾಲಿಯ ವಯಸ್ಸು 8 ವರ್ಷ, 2 ತಿಂಗಳು.

ಆದರೆ 5 ವರ್ಷ 11 ತಿಂಗಳಿನಲ್ಲೇ ಕಂಪ್ಯೂಟರ್‌ ಪ್ರೋಗ್ರಾಮರ್‌ ಪರೀಕ್ಷೆಗೆ ಕುಳಿತ ಭೂಪಿಕಾ, ಜೂನ್‌ 7ರಂದು ಪ್ರಕಟವಾದ ಮಂಡಳಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಸೋನಾಲಿಯ ದಾಖಲೆಯನ್ನು ಮುರಿದಿದ್ದಾಳೆ.

18 ವರ್ಷ ಮೇಲ್ಪಟ್ಟ ವಯಸ್ಸಿನವರಿಗಾಗಿ ಸಿದ್ಧಪಡಿಸಿದ್ದ ಯೂನಿಕ್ಸ್‌, ಫಾಕ್ಸ್‌ಪ್ರೋ, ಲೋಟಸ್‌, ವರ್ಡ್‌ಸ್ಟಾರ್‌ಗೆ ಸಂಬಂಧಿಸಿದ ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆಯಲ್ಲಿ ಈ ಪುಟ್ಟ ಬಾಲೆ 11 ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿದ್ದಾಳೆ. ಡಿಸೈನಿಂಗ್‌ ಮತ್ತು ಸಿಸ್ಟಮ್‌ ಅನಾಲಿಸಿಸ್‌ಗೂ ಉತ್ತರ ಕೊಟ್ಟಿದ್ದಾಳೆ.

ಪ್ರೌಢಶಾಲೆ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವ ಈ ಪರೀಕ್ಷೆ ತಮ್ಮ ಪುತ್ರಿ ಪ್ರವೇಶ ಗಿಟ್ಟಿಸಲು ಆಕೆಯ ತಂದೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಕಡೆಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮನವೊಲಿಸುವಲ್ಲಿ ಭೂಪಿಕಾಳ ತಂದೆ ಯಶಪಾಲ್‌ ಯಶಸ್ವಿಯಾದರು. ಭೂಪಿಕಾಳ ಕಂಪ್ಯೂಟರ್‌ ಪ್ರತಿಭೆಯ ಬಗ್ಗೆ ಆಕೆ ಓದುತ್ತಿದ್ದ ಶಾಲೆ ನೀಡಿದ ಪ್ರಶಂಸಾ ಪತ್ರ, ಸಾರ್ವಜನಿಕ ಸಮಾರಂಭಗಳಲ್ಲಿ ಈಕೆಯ ಪ್ರತಿಭೆಯನ್ನು ಗುರುತಿಸಿ ನಡೆದಿದ್ದ ಸನ್ಮಾನ, ಮೈಕ್ರೋಸಾಫ್ಟ್‌ ಅಧ್ಯಕ್ಷ ಬಿಲ್‌ ಗೇಟ್ಸ್‌ರ ಮೆಚ್ಚುಗೆಯ ಪತ್ರಗಳು ಈ ಬಾಲೆಯ ಅಪ್ರತಿಮ ಸಾಧನೆಗೆ ಸಂಪೂರ್ಣವಾಗಿ ನೆರವಾದವು.

ಕೇವಲ ತನ್ನ ವಯಸ್ಸು 2 ವರ್ಷ 11 ತಿಂಗಳಾಗಿದ್ದಾಗಲೇ ಡೆಸ್ಕ್‌ ಟಾಪ್‌ ಪಬ್ಲಿಕೇಷನ್‌ (ಡಿ.ಟಿ.ಪಿ.) ನಿರ್ವಹಣೆಯ ಸರ್ಟಿಫಿಕೇಷನ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಭೂಪಿಕಾ ಹೆಸರು ಈಗಾಗಲೇ ಲಿಮ್ಕಾ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಈಗ 6 ವರ್ಷ ತುಂಬುವ ಮೊದಲೇ ಪ್ರೋಗ್ರಾಮಿಂಗ್‌ನಲ್ಲಿ ಉತ್ತೀರ್ಣಳಾಗಿರುವ ಈಕೆಯ ಹೆಸರು ಗಿನ್ನಿಸ್‌ ದಾಖಲೆಯನ್ನು ಸೇರಬೇಕೆಂಬುದು ಈಕೆಯ ತಂದೆಯ ಆಶಯ. ಇದಕ್ಕೆ ಸರಕಾರ ಸೂಕ್ತವಾದ ಕ್ರಮ ಕೈಗೊಳ್ಳ ಬೇಕು ಎಂದು ಅವರು ಆಗ್ರಹಿಸುತ್ತಾರೆ.

96ರಲ್ಲಿ ಯಶಪಾಲ್‌ ಕಂಪ್ಯೂಟರ್‌ ಖರೀದಿಸಿದಾಗಿನಿಂದ ಆವರ ಪುತ್ರಿ ಭೂಪಿಕಾ ತನ್ನ ಆಟದ ಸಾಮಾನುಗಳನ್ನೆಲ್ಲಾ ಬದಿಗೊತ್ತಿ ಕಂಪ್ಯೂಟರ್‌ ಜೊತೆಯ ಆಟವಾಡಿದ್ದಾಳೆ. ಇಂಟರ್‌ನೆಟ್‌ನಲ್ಲಿ ಕೂಡ ಭೂಪಿಕಾ ಸಾಧನೆ ಕಡಿಮೆ ಏನಲ್ಲ. ಇವಳ ಈ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ ವಿಎಸ್‌ಎನ್‌ಎಲ್‌ ಕಳೆದ ವರ್ಷ 100 ಗಂಟೆಗಳ ಉಚಿತ ಇಂಟರ್‌ನೆಟ್‌ ಕೊಡುಗೆಯನ್ನೂ ನೀಡಿ ಪುರಸ್ಕರಿಸಿತ್ತು. (ಯು.ಎನ್‌.ಐ.)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X