ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಬ್ಯಾಕ್‌... ಬೊಮ್ಮಕ್ಕ

By Staff
|
Google Oneindia Kannada News

ಸ್ವಾತಂತ್ರ ಹೋರಾಟಗಾರರು ಎಂದಾಕ್ಷಣ ನೆನಪಿನ ಗಣಿಯಿಂದ ಚಿತ್ರಗಳು ತೇಲಿ ಬರುತ್ತವೆ. ಅಂತಹವುಗಳ ಪೈಕಿ, ಗಾಂಧಿ, ನೆಹರು, ಸಾವರ್ಕರ್‌ರಂತಹ ದೊಡ್ಡವರೇ ಕಣ್ತುಂಬಿಕೊಳ್ಳುವುದರಿಂದ ನಮ್ಮ ನೆರೆಯಲ್ಲಿಯೇ ಬದುಕಿದ್ದ , ಸ್ವಾತಂತ್ರಕ್ಕಾಗಿ ಹೋರಾಡಿದವರ ಹೆಸರುಗಳು ಸ್ಮೃತಿ ಪಟಲದಲ್ಲಿ ತಪ್ಪಿಯೂ ಸುಳಿಯುವುದಿಲ್ಲ. ಇದಕ್ಕೆ ಅಪವಾದಗಳೂ ಇಲ್ಲದಿಲ್ಲ ಎಂದರೂ, ನೆನಪಿಗೆ ಬರುವ ಹೆಸರುಗಳಲ್ಲಿ ಶೇ. 90ಕ್ಕೂ ಹೆಚ್ಚು ಪುರುಷರವೇ ಆಗಿರುವುದು ಕಾಕತಾಳೀಯ. ಇಂಥ ಪಟ್ಟಿಯಲ್ಲಿ ನಮ್ಮ ನೆರೆಯಲ್ಲಿನ ಹೆಣ್ಣುಮಗಳೊಬ್ಬಳ ಸಾಧನೆ ಉಲ್ಲೇಖಿಸುವುದಿರಲಿ, ಅವರ ಹೆಸರು ನೆನಪಿಸಿಕೊಳ್ಳುವುದೂ ಕಷ್ಟ. ಅಂಥ ಒಂದು ಪಟ್ಟಿಯಲ್ಲಿ ನಮ್ಮೂರಿನ ಕಾಣಿ ಬೊಮ್ಮಕ್ಕನದೂ ಒಂದು ಹೆಸರು. ಕಾಣಿ ಬೊಮ್ಮಕ್ಕ ಎನ್ನುವ ಬದಲು ಗೋ ಬ್ಯಾಕ್‌ ಬೊಮ್ಮಕ್ಕ ಎಂದರೆ ಯಾರಿಗೂ ಅರ್ಥವಾದೀತು.

ಅಂಕೋಲಾ ಬಳಿಯ ಕಣಗಿಲು ಗ್ರಾಮದ ಬೊಮ್ಮಕ್ಕನ ಜೀವಿತದಲ್ಲಿ 86 ವಸಂತಗಳು ಹಾಯ್ದು ಹೋಗಿ, ನೋವು ನಲಿವುಗಳು ಆಕೆಯನ್ನು ಮಾಗಿಸಿ, ಮುಪ್ಪಡರಿಸಿದ್ದರೂ, ಸ್ವಾತಂತ್ರ ಹೋರಾಟದ ಕುರಿತು ಮಾತು ಹರಿದರೆ , ಆಕೆಗೆ 18ರ ಹರೆಯ ಮರುಕಳಿಸುತ್ತದೆ. ಕಣ್ಣುಗಳು ಮಿನುಗುತ್ತವೆ, ಉತ್ಸಾಹ ಪುಟಿದೇಳುತ್ತದೆ. ಹಾಗೆ ನೋಡಿದರೆ, ಬೊಮ್ಮಕ್ಕನೇನೂ ಜಾಸ್ತಿ ಓದಿಲ್ಲ. ಆಗಿನ ಒಂದೋ ಎರಡೋ ತರಗತಿ ಓದುವಷ್ಟರ ಹೊತ್ತಿಗೆ ಮದುವೆಯಾಯಿತು. ಆದರೆ ಗಂಡ ಸ್ವಾತಂತ್ರ ಯೋಧ. ಮದುವೆಯಾದ ಮೇಲೆ ಗಂಡನ ದಾರಿಯನ್ನೇ ಹಿಡಿದ ಬೊಮ್ಮಕ್ಕ , ತಾನೂ ಸ್ವಾತಂತ್ರ ಚಳವಳಿಗೆ ಧುಮುಕಿದಳು. ಅದರಿಂದ ಬೊಮ್ಮಕ್ಕ ಪಡೆದದ್ದು ಬರೀ ನೋವು. ಜೊತೆಗೊಂದಿಷ್ಟು ಊರವರ ಪ್ರೀತಿ. ಅಂದ ಹಾಗೆ , ಬೊಮ್ಮಕ್ಕನ ಹೆಸರ ಮುಂದಿರುವ , ಗೋಬ್ಯಾಕ್‌ ಎಂಬ ಶಬ್ದ ಊರ ಜನ ಅಭಿಮಾನದಿಂದ ನೀಡಿದ ಅಭಿದಾನ. ಆಕೆಗೆ ಈ ಅಭಿದಾನ ಬಂದ ಕತೆ ಅತ್ಯಂತ ಕುತೂಹಲಕಾರಿ.

ಅದು ಸ್ವಾತಂತ್ರ ಚಳವಳಿ ಅತ್ಯಂತ ತೀವ್ರವಾಗಿದ್ದ ಕಾಲ. ಎಲ್ಲ ಕಡೆಗಳಲ್ಲಿಯೂ ಪ್ರತಿಭಟನೆ, ಕಾನೂನು ಭಂಗ. ಅಂಥ ಸಂದರ್ಭದಲ್ಲಿ ಆಗಿನ ಮುಂಬೈ ಪ್ರೆಸಿಡೆನ್ಸಿಯ ಭಾಗವಾಗಿದ್ದ ಕಾರವಾರಕ್ಕೆ ಗೌರ್ನರ್‌ ಪೋವೆಲ್‌ ಭೇಟಿ ನೀಡುವ ಕಾರ್ಯಕ್ರಮ ರೂಪಿತವಾಯಿತು. ಗೌರ್ನರ್‌ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ಮಾಡಬೇಕು ಎಂಬುದು ಸ್ವಾತಂತ್ರ ಯೋಧರ ಇರಾದೆ. ಅದನ್ನು ತಡೆಯಲು ಹರಸಾಹಸ ಪೊಲೀಸರಿಂದ . ಮುಂಜಾಗೃತಾ ಕ್ರಮವಾಗಿ ಎಲ್ಲ ರಸ್ತೆಗಳನ್ನೂ ಬಂದ್‌ ಮಾಡಲಾಯಿತು, ಎಲ್ಲ ಚಳವಳಿಗಾರರನ್ನೂ ಕೈದು ಮಾಡಲಾಯಿತು. ಕಾರ್ಯಕ್ರಮ ಸುಗಮವಾಗಿ ನಡೆಸಲು ಎಲ್ಲ ವ್ಯವಸ್ಥೆಗಳೂ ಸಾಂಗವಾಗಿಯೇ ಜರುಗಿದವು.

ಗೋ ಬ್ಯಾಕ್‌ ಪೊವೆಲ್‌ : ಕಾರವಾರಕ್ಕೆ ಆಗಮಿಸಿದ ಗೌರ್ನರ್‌ ಪೋವೆಲ್‌ ಇನ್ನೇನು ಅಧಿಕಾರಿಗಳಿಂದ ಸೆಲ್ಯೂಟ್‌ ಸ್ವೀಕರಿಸಬೇಕು, ಅಷ್ಟರಲ್ಲಿ ಗೋಬ್ಯಾಕ್‌ ಬ್ರಿಟಿಷ್‌ ...., ಗೋಬ್ಯಾಕ್‌ ಪೊವೆಲ್‌ ... ಎಂಬ ಘೋಷಣೆ ಮೊಳಗಿತು. ಅದರ ಹಿಂದೆ ಕಾಣಿಸಿಕೊಂಡವಳು ಬೊಮ್ಮಕ್ಕ, ಕಪ್ಪು ನಿಶಾನೆ ಯಾಂದಿಗೆ. ಅದು ಹೇಗೋ ಮಾಡಿ , ಪೊಲೀಸರ ವ್ಯೂಹ ಬೇಧಿಸಿಕೊಂಡು, ಗೌರ್ನರ್‌ಗೆ ಹಲವು ಅಡಿಗಳ ದೂರಕ್ಕೇ ಬಂದು ಬಿಟ್ಟಿದ್ದಳು. ಈಕೆಯ ರಂಗ ಪ್ರವೇಶವಾಗುತ್ತಿದ್ದಂತೆ, ಸ್ವಾತಂತ್ರ ಚಳವಳಿ ಪರವಾದ ಕರಪತ್ರಗಳನ್ನೂ ಮೇಲಿನಿಂದ ಎರಚಲಾಯಿತು. ಈ ದೃಶ್ಯ ಕಾಣುತ್ತಿದ್ದಂತೆಯೇ ಇಡೀ ಅಧಿಕಾರ ಶಾಹಿ ಸ್ಥಂಭೀಭೂತವಾಯಿತು. ತಕ್ಷಣ ಈಕೆಗೆ ಗುಂಡಿಕ್ಕಲು ಪೊಲೀಸರು ಮುಂದಾದರು. ಆದರೆ , ಗೌರ್ನರನ ಹೆಂಡತಿ ಲೇಡಿ ಪೋವೆಲ್‌ ಅಡ್ಡ ಬಂದಿದ್ದರಿಂದ ತತ್ಕಾಲಕ್ಕೆ ಬೊಮ್ಮಕ್ಕ ಬಚಾವ್‌. ಎಷ್ಟೆಂದರೂ, ಆಕೆಯೂ ಹೆಂಗಸಲ್ಲವೇ ? ಈ ಕಾರ್ಯಕ್ಕಾಗಿ ಆಕೆ ಹಿಂದಿನ ರಾತ್ರಿಯಡೀ ನಡೆದಿದ್ದು 25ಕ್ಕೂ ಹೆಚ್ಚು ಮೈಲಿ !

ಈ ಘಟನೆಯ ನಂತರ ಬೊಮ್ಮಕ್ಕನ ಬಾಳು ಸಾಕ್ಷಾತ್‌ ನರಕ. ಪ್ರಾಣವುಳಿಸಿದ ಲೇಡಿ ಪೋವೆಲ್‌ ಪೊಲೀಸರಿಂದ ಕಠಿಣ ಶಿಕ್ಷೆ ತಪ್ಪಿಸಲಿಲ್ಲ. ಜತೆಗೆ ಆರು ತಿಂಗಳ ತುರಂಗವಾಸ.

ಈ ಹಿಂಸೆ ಸೆರೆವಾಸಗಳು ಬೊಮ್ಮಕ್ಕನ ಸ್ಫೂರ್ತಿಗೆ ತಣ್ಣೀರೆರಚಲಿಲ್ಲ. ತುರಂಗವಾಸದ ನಂತರವೂ ಸ್ವಾತಂತ್ರ ಸಮರದಲ್ಲಿ ಮುಂದುವರಿದಳು. ಕರ ನಿರಾಕರಣೆಯ ಚಳವಳಿಯಲ್ಲಿ ಅಧಿಕಾರಿಗಳು ಜಪ್ತಿ ಮಾಡಿದ ಮನೆ ಮಠಗಳನ್ನು ನಿರ್ಭಿಡೆಯಿಂದ ಮುರಿದೆಸೆದಳು. ಆಂದೋಲನದುದ್ದಕ್ಕೂ ಸ್ವಾತಂತ್ರ ಯೋಧರಿಗೆ ಮಾಹಿತಿದಾರಳಾಗಿ, ಅವರ ಅಂಚೆಯಾಳಾಗಿ ದುಡಿದ ಹೆಮ್ಮೆ ಈಕೆಗೆ.

ಮಹಾತ್ಮಾ ಗಾಂಧಿಜಿ ಅಂಕೋಲೆಗೆ ಬಂದಿದ್ದನ್ನು ನೆನೆಯುವಾಗ ಬೊಮ್ಮಕ್ಕನ ಕಣ್ಣುಗಳು ಮಿನುಗುತ್ತವೆ. ಒಟ್ಟಿನಲ್ಲಿ ತೊಂಬತ್ತರ ಗಡಿಯಂಚಿನಲ್ಲಿರುವ ಬೊಮ್ಮಕ್ಕ ನಮ್ಮೂರ ಹೆಮ್ಮೆಯ ಕೂಸು. ಬೊಮ್ಮಕ್ಕ ಬರೀ ವ್ಯಕ್ತಿಯಾಗಿ ಉಳಿದಿಲ್ಲ. ಆಕೆ ಒಂದು ಸಂಕೇತ. ಆಕೆ ನಮ್ಮ ಇತಿಹಾಸ, ವರ್ತಮಾನ ಹಾಗೂ ಭವಿಷ್ಯದ ನಡುವಿನ ಕೊಂಡಿ. ಆದರೆ ಇಂಥ ತೆರೆಮರೆಯ ಸಾಧಕರು, ಅವರ ಬಲಿದಾನ ಹಾಗೂ ಅವರ ಆದರ್ಶ ಓಡುವ ಜಗತ್ತಿಗೆ ಕಾಣಿಸೀತೆ....

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X