ಮಾನವತೆ ‘ಮೂರ್ತಿ’ಗೆನೂರು ಇನ್ನೊಂದು !
ಮೂರ್ತಿರಾಯರಿಗೆ ನೂರಾಒಂದು ತುಂಬಿತು !
ಹೌದು . ‘ದೇವರಿಲ್ಲ , ಆದರೆ ಅವನು ಬೇಕು’ ಎಂದು ಹೇಳುತ್ತಲೇ ಅಗಾಧ ಜೀವನ ಪ್ರೀತಿಯನ್ನು ಮೈಗೂಡಿಸಿಕೊಂಡಿರುವ ಅಕ್ಕಿಹೆಬ್ಬಾಳು ನರಸಿಂಹಮೂರ್ತಿಯವರಿಗೆ ಶನಿವಾರ, ಜೂನ್ 16 ಕ್ಕೆ 101 ತುಂಬಿತು.
ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ 1900 ರ ಜೂನ್ 16 ರಂದು ಹುಟ್ಟಿದ ಮೂರ್ತಿರಾವ್ ಶತಮಾನ ಕಾಲದ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಚಳವಳಿ- ಪಂಥಗಳನ್ನು ಹತ್ತಿರದಿಂದ ಅರಗಿಸಿಕೊಂಡ ವಿಶ್ವಕೋಶ. ಅವರಿಗೊಲಿದದ್ದು ಲಲಿತ ಪ್ರಬಂಧ ಕ್ಷೇತ್ರ. ಕನ್ನಡದ ಅಗ್ರಗಣ್ಯ ಲಲಿತ ಪ್ರಬಂಧಕಾರರನ್ನು ನೆನೆಯುವಾಗ ಮೂರ್ತಿರಾಯರ ಹೆಸರಿಸದೆ ಮುನ್ನಡೆಯುವಂತಿಲ್ಲ . ಅಂಥಾ ಮೂರ್ತಿರಾಯರಿಗೀಗ ನೂರು ಮತ್ತೊಂದು.
ನಮ್ಮ ನಡುವಿನ ಹಿರೀಕ ಮೂರ್ತಿರಾವ್ ಎಂಬ ಈ ಸಜ್ಜನ ಶತಾಯುಷಿಯಾದರೂ ಉಳಿಸಿಕೊಂಡಿರುವ ಬೌದ್ಧಿಕ ಪ್ರಖರತೆ ಹಾಗೂ ಜೀವನಪ್ರೀತಿ ಅಚ್ಚರಿ ಹುಟ್ಟಿಸುವಂತದು. ಈಗಲೂ ದಿನ ಪತ್ರಿಕೆಗಳನ್ನು ತಪ್ಪದೆ ಓದುತ್ತಾರೆ. ಬೆಳಗ್ಗೆ 4.30 ಕ್ಕೆ ಏಳುವುದು, ಹಾಗೂ ಒಂದೆರಡು ಮೈಲು ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದೆಂದು ನಂಬಿದ್ದಾರೆ. ನಂಬಿದ್ದನ್ನು ಪಾಲಿಸುತ್ತಲೂ ಬಂದಿದ್ದಾರೆ. ಮನೆಗೆ ಯಾರೇ ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಚಿಂತೆ ಮಾಡಬೇಡಿರಪ್ಪ , ಸಣ್ಣಗಾಗುತ್ತೀರಿ ಎಂದು ಮೈದಡವುತ್ತಾರೆ. ಸಹೃದಯರು ಸಿಕ್ಕರೆ ಮತ್ತೆ ಷೇಕ್ಸ್‌ಪಿಯರ್, ಅವನ ನಾಟಕಗಳ ಬಗ್ಗೆ ಮಾತನಾಡುತ್ತಾರೆ. ಅವರು ಹೇಳುವಂತೆ ‘ಮನುಷ್ಯನಿಗೆ ಮನುಷ್ಯನೇ ಉತ್ತಮ ಸಂಗಾತಿ’.
ಒಳ್ಳೆಯತನದ ಬಗ್ಗೆ ಮಾತಾಡಿ : ನೂರು ವರ್ಷಗಳ ಬದುಕು ಮೂರ್ತಿರಾಯರ ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ . ‘ಸ್ವಲ್ಪ ನೆನಪಿನ ಶಕ್ತಿ ಕುಗ್ಗಿರುವುದನ್ನು ಬಿಟ್ಟರೆ ನಾನು ಆರೋಗ್ಯವಾಗಿಯೇ ಇದ್ದೇನೆ’ ಎನ್ನುತ್ತಾರೆ. ಅವರ ವಿಚಾರಗಳು ಕೂಡ ಕಾಲದ ಹೊಡೆತಕ್ಕೆ ಸಿಕ್ಕಿ ಬದಲಾಗಿಲ್ಲ . ದೇವರ ಅಸ್ತಿತ್ವವನ್ನು ಎಂದಿನಂತೆ ಈ ಹೊತ್ತೂ ನಿರಾಕರಿಸುತ್ತಾರೆ. ಈಚೆಗೆ ನೀವು ಪೂಜೆ ಮಾಡುತ್ತೀರಂತೆ ಹೌದಾ? ನೂರು ತುಂಬಿದ ಮೇಲೆ ಅಥವಾ ದೇಹ ಮಾಗಿದ ಮಾಲೆ ದೇವರು ನೆನಪಾಗುತ್ತಾನಾ? ಅನ್ನುವಂಥಹ ಕೆಣಕು ಪ್ರಶ್ನೆಗಳಿಗೂ ಅವರು ಮೋರೆಯನ್ನು ಗಂಟಿಕ್ಕುವುದಿಲ್ಲ . ದೇವರ ಬಗ್ಗೆಯೇ ಏಕೆ ಮಾತಾಡುತ್ತೀರಿ. ಒಳ್ಳೆಯತನದ ಬಗ್ಗೆ ಮಾತನಾಡಿ. ಒಳ್ಳೆಯತನವೇ ದೇವರು ಅನ್ನುತ್ತಾರೆ. ಅದೇ ಹಸನ್ಮುಖ .. ಊಹ್ಞೂಂ.. ಮೂರ್ತಿರಾಯರು ಸಿಟ್ಟಾಗುವುದಿಲ್ಲ ! ತುಂಬಿದ ಕೊಡ ತುಳುಕುವುದೂ ಇಲ್ಲ !
ಇಷ್ಟಕ್ಕೂ ಬದುಕು ಮೂರ್ತಿರಾಯರಿಗೆ ಯಾವತ್ತೂ ಭಾರವೆನಿಸಿಲ್ಲ
ನನಗೆ ಡಬ್ಬಲ್ ಸೆಂಚುರಿ ಹೊಡೆಯುವಾಸೆ. ದೇವರು ನನಗಾಗಿ ಕಾಯಬೇಕು ಎಂದು ಅವರು ನಗೆಯಾಡುತ್ತಾರೆ. ಆಧುನಿಕ ಮನುಷ್ಯನ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸುವ ಅವರು, ಎಲ್ಲಕ್ಕಿಂತಲೂ ಮನುಷ್ಯತ್ವವೇ ಮುಖ್ಯ ಅನ್ನುತ್ತಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications