• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಘುನಂದನನ ಧೈರ್ಯಕ್ಕೆ ಬೆರಗಾದ ನರ್ಮದೆ

By Super
|

ನರ್ಮದೆ ಪತ್ರಿಕಾಗೋಷ್ಠಿಯಲ್ಲಿ ಆನಂದ ಹೇಳುವುದೆಲ್ಲವನ್ನೂ ತನ್ಮಯಳಾಗಿ ಕೇಳಿಸಿಕೊಂಡಳು. ಅವನನ್ನು ಇದಕ್ಕೂ ಮೊದಲು ಎಲ್ಲೋ ನೋಡಿದ್ದೇನೆ ಅಂತ ಅವಳಿಗೆ ಮೊದಲ ಬಾರಿಗೆ ಅನ್ನಿಸಿತು. ತನ್ನ ಅಪ್ಪಯ್ಯನ ಹಾಗೆಯೇ ಅವನೂ ಮಾತನಾಡುವಾಗ ಎಡತುಟಿ ಕೊಂಚ ಓರೆ ಮಾಡಿ ಮಾತಾಡುತ್ತಾನೆ. ಆದ್ದರಿಂದಲೇ ಪರಿಚಿತನಂತೆ ಕಂಡಿರಬೇಕು ಅಂದುಕೊಂಡಳು. ಅವನ ಸಪೂರ ಮುಖದಲ್ಲಿ ತಳವೂರಿದ ಛಲ ಅವಳಿಗೆ ಇಷ್ಟವಾಯಿತು. ಹಿಡಿದದ್ದನ್ನು ಬಿಡುವವನಲ್ಲ ಎಂಬ ಮೊಂಡುತನ ಭ್ರುಕುಟಿಯಲ್ಲಿದೆಯೋ ಮೂಗಿನಲ್ಲಿದೆಯೋ ಎಂದು ತಿಳಕೊಳ್ಳುವುದಕ್ಕೆ ಪ್ರಯತ್ನಿಸುತ್ತಲೇ ಆಕೆ ಕುಳಿತಿದ್ದಳು.

ಆನಂದ ಸಾಕಷ್ಟು ಓದಿಕೊಂಡು ಸನ್ನದ್ಧನಾಗಿಯೇ ಬಂದಿದ್ದ. ಪಶ್ಚಿಮ ಘಟ್ಟ ಉಳಿಸಿ ಆಂದೋಲನಕ್ಕೆ ನಾವು ರೈತರ ಬೆಂಬಲ ಪಡೆಯಬೇಕು. ರೈತರನ್ನೆಲ್ಲ ಒಗ್ಗೂಡಿಸಬೇಕು. ಹಾಗೆ ಮಾಡಬೇಕಾದರೆ ಅವರ ಒಲವು ಸಂಪಾದಿಸಬೇಕು ಎಂದೆಲ್ಲ ಆತ ಮಾತನಾಡಿದ. ಅವನೆಂದದ್ದು ರಘುನಂದನನಿಗೂ ಮೆಚ್ಚುಗೆಯಾಯ್ತು. ನರ್ಮದೆಯೂ ತುಂಬ ತರ್ಕಬದ್ಧವಾಗಿದೆ ಅಂದುಕೊಂಡಳು. ಆನಂದ ಹೇಳುತ್ತಿದ್ದ ;

‘ನಮ್ಮ ಪರಿಸರವನ್ನು ಅರಣ್ಯವನ್ನು ಹಾಳು ಮಾಡುತ್ತಿರುವವರು ರೈತರಲ್ಲ. ಕೈಗಾರಿಕೋದ್ಯಮಿಗಳು. ಆದರೆ ಸರ್ಕಾರವೂ ವರದಿಗಳೂ ಸುಳ್ಳುಸುಳ್ಳೇ ರೈತರನ್ನೂ ಅಪರಾ ಸ್ಥಾನದಲ್ಲಿ ಕೂರಿಸಿವೆ. ಒಬ್ಬ ರೈತ ತನ್ನ ಮನೆ ಕಟ್ಟುವುದಕ್ಕೆಂದು ಒಂದು ಮರ ಕಡಿದರೂ ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ ಇನ್ನೊಂದು ಕಡೆ ಬೇರೆಬೇರೆಯವರಿಗೆ ಅರಣ್ಯ ತೆರವುಗೊಳಿಸಲು ಕಾಂಟ್ರಾಕ್ಟು ನೀಡುತ್ತದೆ. ಅದರ ಬದಲಾಗಿ ಹಾಗೆ ಕಾಂಟ್ರಾಕ್ಟು ನೀಡುವ ಮೊದಲು ಆಯಾ ತಾಲೂಕಿನ ರೈತರ ಸಭೆ ಕರೆಯಬೇಕು. ರೈತರು ಮಂಜೂರು ಮಾಡಿದರೆ ಮಾತ್ರ ಸರ್ಕಾರದ ಆದೇಶಕ್ಕೆ ಬೆಲೆ ಬರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ರೈತರಿಗೆ ಮರ ಕಡಿಯುವುದಕ್ಕೆ ಯಾವುದೇ ನಿರ್ಬಂಧ ಇರಕೂಡದು’.

ಅಷ್ಟು ಹೊತ್ತಿಗೆ ಪತ್ರಕರ್ತ ರಾಜಗೋಪಾಲ ಹೇಳಿದ ‘ರೈತರೇನೂ ಸಾಚಾಗಳಲ್ಲ ಸ್ವಾಮೀ. ಅವಕಾಶ ಸಿಕ್ಕರೆ ಅವರೂ ಮರ ಕಡಿದು ಮನೆ ಕಟ್ಟಿಸಿಕೊಳ್ಳುತ್ತಾರೆ. ಕಿಟಕಿ ಬಾಗಿಲು ಮಾಡಿಸಿಕೊಳ್ಳುತ್ತಾರೆ. ಕಟ್ಟಿಗೆ ಗೊಬ್ಬರ ಸೊಪ್ಪು ಸದೆ ಅಂತ ಅರಣ್ಯ ನಾಶ ಮಾಡುತ್ತಾರೆ.’

‘ನೀವು ಹೇಳೋದು ಸರಿಯಾಗಿಯೇ ಇದೆ. ಆದರೆ ಒಬ್ಬ ರೈತ ಎಷ್ಟು ಮನೆ ಕಟ್ಟುತ್ತಾನೆ ಹೇಳಿ. ಒಂದು ಮನೆ, ಅಬ್ಬಬ್ಬಾ ಎಂದರೆ ಎರಡು. ಆ ಮನೆಗೆ ಎಷ್ಟು ಬಾಗಿಲಿಡುತ್ತಾನೆ, ಎಷ್ಟು ಕಿಟಕಿ ಇಡುತ್ತಾನೆ? ಅಂದರೆ ಒಂದು ರೈತ ತಲೆಮಾರಿನ ಅಗತ್ಯ ಕೇವಲ ಒಂದು ಮರ ಅಷ್ಟೇ. ಇನ್ನು ಕಟ್ಟಿಗೆ.. ಕಟ್ಟಿಗೆಗೋಸ್ಕರ ಅವನು ಕಡಿಯುವುದು ಮರದ ಕೊಂಬೆಗಳನ್ನು. ಅವು ಚಿಗುರುತ್ತವೆ. ವರುಷಕ್ಕೊಂದು ಮರ ಸಾಯುವುದೂ ಸಹಜ. ಅಂಥ ಸತ್ತ ಮರಗಳ ಕಟ್ಟಿಗೆ ಅವನಿಗೆ ಸಾಕಾಗುತ್ತದೆ. ಸೊಪ್ಪು ಸದೆ ಕಡಿಯುವುದರಿಂದ ಮರಗಳಿಗೇನೂ ಹಾನಿಯಾಗುವುದಿಲ್ಲ.’

ಆದರೆ ಈ ವಾದವನ್ನು ಪತ್ರಕರ್ತರು ಒಪ್ಪಲಿಲ್ಲ. ಕೃಷಿಭೂಮಿಗಾಗಿ ಕಾಡು ಕಡಿಯುತ್ತಾರೆ. ಮರಗಳನ್ನು ಮಾರುತ್ತಾರೆ ಅಂತೆಲ್ಲ ವಾದಿಸತೊಡಗಿದರು. ಸಣ್ಣ ವಾದವಿವಾದ ನಡೆದು ಆನಂದ ತನ್ನ ಅಂಕಿಅಂಶಗಳನ್ನು ಮುಂದಿಟ್ಟ. ಕಳೆದ ಮೂವತ್ತು ವರುಷಗಳಲ್ಲಿ ಕೃಷಿ ಭೂಮಿಗಾಗಿ ತೆರವಾದ ಮರಗಳು ಎಷ್ಟು ? ಅದರಲ್ಲೂ ಪಶ್ಟಿಮ ಘಟ್ಟದ ತಪ್ಪಲಲ್ಲಿ ಎಷ್ಟು ಮಂದಿ ಕೃಷಿ ಮಾಡಿದ್ದಾರೆ. ಅವರು ಒಂದು ವೇಳೆ ಒಂದು ಎಕರೆ ತೆರವು ಮಾಡಿಕೊಂಡರೂ ಅಲ್ಲಿ ಅಡಕೆ ಸಸಿಯನ್ನೋ ತೆಂಗಿನ ಮರವನ್ನೂ ನೆಟ್ಟೇ ನಡುತ್ತಾರೆ. ಹಾಗೇ, ಅಲ್ಲಿ ಹಲಸು, ಮಾವು, ತೇಗದ ಮರಗಳನ್ನು ನೆಡುತ್ತಾರೆ. ಹೀಗಾಗಿ ರೈತ ತನಗೇ ಗೊತ್ತಿಲ್ಲದಂತೆ ಇಕಾಲಜಿಯ ಸಮತೋಲನಕ್ಕೆ ಕಾರಣನಾಗುತ್ತಾನೆ. ಆದರೆ ಗಣಿಗಾರಿಕೆಗೆ ಕೈಗಾರಿಕೆಗೆ ಬಳಕೆಯಾಗುವ ಮರ ಹಾಗಲ್ಲ. ಅವರು ಆ ಪ್ರದೇಶದಲ್ಲಿ ಇರುವುದೂ ಇಲ್ಲ. ಅವರಿಗೆ ಆ ಪ್ರದೇಶದ ಮರಗಳ ಬಗ್ಗೆ ಪ್ರೀತಿಯೂ ಇರುವುದಿಲ್ಲ. ಹೀಗಾಗಿ ಅವರು ಒಂದು ಪ್ರದೇಶದ ಮರಗಳನ್ನು ಪೂರ್ತಿ ನಾಶ ಮಾಡಿಯೇ ಮತ್ತೊಂದು ಪ್ರದೇಶಕ್ಕೆ ಹೋಗುತ್ತಾರೆ.

ರಘುನಂದನನಿಗೆ ಆಶ್ಚರ್ಯವಾಯಿತು. ಅವನ ಪ್ರಕಾರ ಪತ್ರಕರ್ತರು ಪ್ರಶ್ನೆಗಳನ್ನು ಕೇಳಬಹುದು. ಯೋಜನೆಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಆದರೆ ಯಾವ ಕಾರಣಕ್ಕೂ ಯೋಜನೆಯ ಆಶಯದ ವಿರುದ್ಧ ವಾದಿಸಬಾರದು. ಯಾಕೆಂದರೆ ಪತ್ರಕರ್ತರನ್ನು ಕರೆಯುವುದು ಸಂವಾದ ಕಾರ್ಯಕ್ರಮಕ್ಕಾಗಲೀ ಒಂದು ಸಂಗತಿಯ ಇತ್ಯರ್ಥಕ್ಕಾಗಲೀ ಅಲ್ಲ. ಆತ ಒಂದು ಮಾಧ್ಯಮ ಮಾತ್ರ. ಒಂದು ಆಶಯವನ್ನೂ ಯೋಜನೆಯನ್ನೂ ಜನಕ್ಕೆ ತಲುಪಿಸುವುದು ಮಾತ್ರ ಅವರ ಕೆಲಸ. ಅದಕ್ಕೆ ಆ ನಂತರ ಅವರು ಜನಸಾಮಾನ್ಯರಾಗಿ ಫಲಾನುಭವಿಗಳಾಗಿ ಪ್ರತಿಕ್ರಿಯಿಸಬಹುದೇ ಹೊರತು, ಸುದ್ದಿ ಸಂಗ್ರಹಣೆಯ ಹಂತದಲ್ಲೇ ವಾದಕ್ಕಿಳಿಯಕೂಡದು.

ವಾದ ಮುಂದುವರಿಯುತ್ತಾ ಹೋದಂತೆ ಇದನ್ನು ರಘುನಂದನ ಹೇಳಿಯೂ ಬಿಟ್ಟ. ‘ನೋಡಿ, ನಿಮ್ಮನ್ನು ಕರೆಸಿದ್ದು ಚರ್ಚೆ ಮಾಡುವುದಕ್ಕಲ್ಲ. ನಮಗೆ ಅನಿಸಿದ್ದನ್ನು ನಾವು ಹೇಳಿದ್ದೇವೆ. ಅದು ಜನರಿಗೆ ತಲುಪಬೇಕು. ಸರ್ಕಾರಕ್ಕೆ ತಲುಪಬೇಕು. ನೀವು ಮಾಧ್ಯಮ ಆದದ್ದರಿಂದ ನಿಮ್ಮ ಮೂಲಕ ತಲುಪಲಿ ಅಂತ ಹೇಳುತ್ತಿದ್ದೇನೆ. ನೀವು ತಲುಪಿಸುವ ಕೆಲಸ ಮಾಡಿದರೆ ಸಾಕು. ಈಗ ಇಲೆಕ್ಟ್ರಾನಿಕ್‌ ಮಾಧ್ಯಮಗಳು ಬಂದಿವೆ. ಅವು ಅಷ್ಟನ್ನೇ ಮಾಡುತ್ತವೆ. ಮಾತಾಡುವವನ ಮುಂದೆ ಕ್ಯಾಮರಾ ಇಡುತ್ತವೆ. ಹೇಳಿದ್ದು ಹೇಳಿದಂತೆಯೇ ಜನರಿಗೆ ತಲುಪುತ್ತದೆ. ಆದರೆ ನಿಮ್ಮ ಮಾಧ್ಯಮದಲ್ಲಿ ನಾವು ಹೇಳಿದ್ದು ನಿಮ್ಮ ಗ್ರಹಣಶಕ್ತಿ, ಕಲ್ಪನಾಶಕ್ತಿ, ನೆನಪಿನ ಶಕ್ತಿ, ಬರವಣಿಗೆಯ ಶೈಲಿ, ಬರೆಯುವ ಹೊತ್ತಿಗಿನ ನಿಮ್ಮ ಮೂಡು-ಇವನ್ನೆಲ್ಲ ಅವಲಂಬಿಸಿರುತ್ತೆ. ಹೆಚ್ಚಿನ ಸಾರಿ ನಿಮಗೆ ಯಾವುದು ಸುದ್ದಿ ಅನ್ನುವುದೇ ಗೊತ್ತಿರುವುದಿಲ್ಲ. ಆದ್ದರಿಂದ ನಾವು ಮುಖ್ಯ ಅಂತ ಹೇಳಿದ್ದನ್ನಷ್ಟೇ ಬರೆಯಿರಿ’ ಅಂದ.

ಪತ್ರಕರ್ತರು ಕೆಂಡಾಮಂಡಲ ಸಿಟ್ಟಾದರು. ದೊಡ್ಡ ಜಗಳವಾಯಿತು. ಎದ್ದು ಹೊರಡುತ್ತೇವೆ. ಒಂದಕ್ಷರವೂ ಬರೆಯುವುದಿಲ್ಲ. ಅದು ಹೇಗೆ ನೀವು ಜನರನ್ನು ತಲುಪುತ್ತೀರೋ ನೋಡಿಯೇ ಬಿಡುತ್ತೇನೆ ಅಂತ ಕೆಲವರು ಸವಾಲು ಹಾಕಿದರು.

ರಘುನಂದನ ಹೇಳಿದ;

‘ನಾವು ಈ ಹೋರಾಟ ಮಾಡುತ್ತಿರುವುದು ಜನರಿಗಾಗಿ. ಅವರಿಗೆ ಬೇಕಾದದ್ದನ್ನು ಅವರು ಹೇಗಾದರೂ ತಿಳಿದುಕೊಳ್ಳುತ್ತಾರೆ. ನಿಮ್ಮ ಪತ್ರಿಕೆಯಲ್ಲಿ ಬರೆಯದೇ ಹೋದರೆ ಅದರಿಂದ ನಿಮಗೇ ಹಾನಿ, ನಮಗಲ್ಲ. ಬೇಕು ಅನ್ನಿಸಿದರೆ ನಾವು ನಮ್ಮದೇ ಪತ್ರಿಕೆ ಮಾಡಿಕೊಂಡೇವು. ಆ ತಾಕತ್ತೂ ನಮಗಿದೆ. ನಮ್ಮ ಸಂಘಟನೆಗೆ ಇದೆ. ಅಂದ ಹಾಗೆ ನೀವು ವರದಿ ಮಾಡಿದರೆ ಸರಿ, ಇಲ್ಲದೇ ಹೋದರೆ ನಿಮ್ಮ ಸಂಪಾದಕರ ಹತ್ತಿರ ನಾನು ಮಾತಾಡುತ್ತೇನೆ. ಅವರ್ಯಾರೂ ನನಗೆ ಅಪರಿಚಿತರಲ್ಲ’.

ನರ್ಮದೆ ರಘುನಂದನನ ಧೈರ್ಯಕ್ಕೆ ಬೆರಗಾದಳು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X