• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಟೆಗೆ ಹೊಂಚು ಹಾಕಿದ ತೋಳ್ಪಡಿತ್ತಾಯ !

By Super
|

ನಿರಂಜನನ ಕಣ್ಮರೆಯ ವಾರ್ಷಿಕೋತ್ಸವವನ್ನು ಆಚರಿಸುವುದಕ್ಕೆ ಗಾಂಪಾ ಗೆಳೆಯರು ನಿರ್ಧರಿಸಿದ್ದರಲ್ಲಿ ಯಾವುದೇ ವ್ಯಂಗ್ಯ ಇರಲಿಲ್ಲ . ಅವರೆಲ್ಲರೂ ನಿರಂಜನನ್ನು ಮರೆತಿದ್ದರು. ಯಾವುದೋ ಒಂದು ಉಲ್ಲಾಸಭರಿತ ಸಂಜೆಗೆ ವಿಷಾದದ ಲೇಪ ಕೊಡುವುದಕ್ಕೋಸ್ಕರ ನಿರಂಜನನ ನಿರ್ಗಮನ ಬಳಕೆಯಾಗುತ್ತಿತ್ತು ಅಷ್ಟೇ.

ಆದರೆ ಅವರಿಗೆ ನಿರಂಜನನ ನಿರ್ಗಮನವನ್ನು ಒಂದು ಉತ್ಸವವನ್ನಾಗಿ ಆಚರಿಸಬಹುದೆಂದು ಅನ್ನಿಸಿದ್ದಕ್ಕೆ ಹಲವಾರು ಕಾರಣಗಳಿದ್ದವು. ಮೊದಲನೆಯದಾಗಿ ಅವರಿಗೂ ಪ್ರಚಾರ ಸಿಗದೇ ತುಂಬ ದಿನಗಳಾಗಿದ್ದವು. ಅದಕ್ಕಿಂತ ಮುಖ್ಯವಾಗಿ ನಿರಂಜನ ಹಾಗೆ ಕಣ್ಣೆದುರಿಗೇ ಕೊಲೆಯಾಗಿ ಹೋದದ್ದು ಯಾರ ಗಮನಕ್ಕೂ ಬರಲಿಲ್ಲವಲ್ಲ ಎಂಬ ದಿಗ್ಭ್ರಮೆ ಅವರನ್ನು ಕಾಡುತ್ತಿತ್ತು . ಹಾಗಿದ್ದರೆ ಯಾರು ಬೇಕಾದರೂ ಒಂದು ದಿನ ಹೀಗೆ ಕಣ್ಮರೆಯಾಗಿಬಿಡಬಹುದು ಅನ್ನುವ ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಅವರಲ್ಲಿ ಇದ್ದಂತಿರಲಿಲ್ಲ . ಒಂದು ರೀತಿಯಲ್ಲಿ ನಿರಂಜನ ಎಲ್ಲರ ಆಳದಲ್ಲಿರುವ ಸಾವಿನ ಭೀತಿಗೆ ಸಂಕೇತದಂತೆ ಭಾಸವಾಗುತ್ತಿದ್ದ.

ಆನಂದನಿಗೂ ನಿರಂಜನನ ಕಣ್ಮರೆಯ ವಾರ್ಷಿಕೋತ್ಸವವನ್ನು ನಡೆಸುವುದರ ಬಗ್ಗೆ ಅಂಥ ಆಸಕ್ತಿಯೇನೂ ಇರಲಿಲ್ಲ. ನಿರಂಜನ ಸತ್ತು ಒಂದು ವರುಷವಾಗಿದೆಯೋ ಎರಡೋ ಅನ್ನುವುದೇ ಅವನಿಗೆ ಮರೆತುಹೋಗಿತ್ತು . ಮೊನ್ನೆ ಮೊನ್ನೆ ಸತ್ತಿದ್ದಾನೆ ಅಂತ ಒಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಸತ್ತು ಬಹಳ ಕಾಲವಾಗಿದೆ ಅನ್ನಿಸುತ್ತಿತ್ತು . ಅದಕ್ಕೆ ಕಾರಣ ತಾವ್ಯಾರೂ ನಿರಂಜನನ ಹೆಣವನ್ನು ನೋಡದೇ ಇದ್ದಿದ್ದು ಅಂತಲೂ ಅವನಿಗೆ ಹೊಳೆಯಿತು. ಹೆಣ ನೋಡಿದರೆ ಮಾತ್ರ ಸಾವು ಅಚ್ಚೊತ್ತಿ ಉಳಿಯುತ್ತದೆ. ಇಲ್ಲದಿದ್ದರೆ ಅಷ್ಟಾಗಿ ನೆನಪಾಗುವುದಿಲ್ಲ ಅಂದುಕೊಂಡ.

ಆದರೆ ಅಂಥದ್ದೊಂದು ಸಮಾರಂಭ ನಡೆದರೆ ತನ್ನ ಪತ್ರಿಕೆಗೊಂದಷ್ಟು ಪ್ರಚಾರ ಸಿಗುತ್ತದೆ ಹಾಗೂ ಅಲ್ಲಿ ರೋಷಾವಿಷ್ಟನಾಗಿ ತೋಳ್ಪಡಿತ್ತಾಯರನ್ನು ಸಾರ್ವಜನಿಕವಾಗಿ ಹಣಿಯಬಹುದು ಎಂದೂ ಆನಂದ ಯೋಚಿಸಿದ.

ರಘುನಂದನ ಉಪ್ಪಿನಂಗಡಿಗೆ ಬರುವುದಕ್ಕೆ ತೀರ್ಮಾನಿಸಿದ್ದರಲ್ಲಿ ಅವನ ಸ್ವಾರ್ಥವೂ ಇತ್ತು . ನರ್ಮದೆ ಮತ್ತೆ ಖಂಡಿತಾ ಸಿಗುತ್ತಾಳೆ ಅಂತ ಅವನಿಗೆ ಅನ್ನಿಸುತ್ತಿತ್ತು. ಯಾವುದೋ ದೃಶ್ಯವನ್ನು ಸಂಯೋಜಿಸುವ ಹೊತ್ತಿಗೆ ಅವನಿಗೆ ಇದ್ದಕ್ಕಿದ್ದಂತೆ ನರ್ಮದೆ ನೆನಪಾಗುತ್ತಿದ್ದಳು. ಆ ದೃಶ್ಯ ಅವಳ ನೆನಪಿನಿಂದ ಉಜ್ವಲಗೊಳ್ಳುತ್ತಿತ್ತು.

ತೋಳ್ಪಡಿತ್ತಾಯರು ಸುಮ್ಮನೆ ಕೂರಲಿಲ್ಲ.

ಅವರ ಬಗ್ಗೆ ಆನಂದ ಬರೆದಾಗ ಅವನನ್ನು ಹೊಡೆದು ಸಾಯಿಸಿಬಿಡಬೇಕು ಅನ್ನುವ ಸಿಟ್ಟು ಅವರನ್ನು ಇಡೀ ದಿನ ಕಾಡಿತ್ತು . ಆಮೇಲೂ ಅದು ನೆನಪಾದಾಗೆಲ್ಲ ಅವರಿಗೆ ಆನಂದ ನೆನಪಾಗುತ್ತಿದ್ದ. ಆದರೆ ಅವರ ವಿವೇಕ ಅವರನ್ನು ಬಿಟ್ಟುಕೊಡಲಿಲ್ಲ . ಆನಂದನನ್ನು ಆ ಕ್ಷಣ ಏನು ಮಾಡಿದರೂ ಆ ಅಪವಾದ ತನ್ನ ಮೇಲೆ ಬರುತ್ತದೆ ಅನ್ನುವ ಎಚ್ಚರದಲ್ಲಿ ಅವರಿದ್ದರು.

ಆದರೆ ಅವರ ಮನಸ್ಸಿನೊಳಗೆ ಒಂದು ಯೋಜನೆ ರೂಪುಗೊಳ್ಳುತ್ತಿತ್ತು. ಇವತ್ತಲ್ಲ ನಾಳೆ ಆನಂದ ಸಿಕ್ಕೇ ಸಿಗುತ್ತಾನೆ. ತನ್ನ ಶತ್ರುಗಳ ಬಗ್ಗೆಯೂ ಹೀಗೆ ಕೆಟ್ಟದಾಗಿ ಬರೆಯುತ್ತಾನೆ. ಒಮ್ಮೆ ಬೈದು ಬರೆಯುವ ಅವಕಾಶ ಸಿಕ್ಕಿದರೆ, ಹಾಗೆ ಬೈದು ಬರೆದು ದಕ್ಕಿಸಿಕೊಂಡರೆ ಅಂಥವರಿಗೆ ಅದರ ರುಚಿ ಸಿಕ್ಕಿಬಿಡುತ್ತದೆ. ಅದಕ್ಕೆ ಅವರು ಅಡಿಕ್ಟ್‌ ಆಗಿಬಿಡುತ್ತಾರೆ. ಆಮೇಲೆ ಅವರು ಏನು ಮಾಡಿದರೂ ಆ ಚಾಳಿಯನ್ನು ಬಿಡುವುದಿಲ್ಲ ಎಂದು ಅವರಿಗೆ ಖಾತ್ರಿಯಾಗಿತ್ತು.

ಹೀಗಿರುವಾಗ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಒಂದು ಅವಕಾಶಕ್ಕಾಗಿ ಅವರು ಕಾದರು. ಆ ಕಾಯುವಿಕೆಯಲ್ಲಿ ಅವರಿಗೇ ವಿಶಿಷ್ಟವಾದ ಗಾಂಭೀರ್ಯವಿತ್ತು. ಅದಕ್ಕಿಂತ ಹೆಚ್ಚಾಗಿ ಘನತೆಯಾಂದಿತ್ತು . ಅದರ ಬಗ್ಗೆ ಪ್ರಸ್ತಾಪ ಮಾಡಿದವರ ಹತ್ತಿರ ಅವರು ಆನಂದನ ಬಗ್ಗೆ ಕೀಳಾಗಿ ಮಾತಾಡಲೂ ಇಲ್ಲ . ಮತ್ತೆ ಕೆಲವು ಪತ್ರಿಕೆಯ ಮಿತ್ರರು ಬೇಕಂತಲೇ ಅವರ ಹತ್ತಿರ ಆನಂದನ ಪತ್ರಿಕೆಯಲ್ಲಿ ಬಂದದ್ದರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದಕ್ಕೇ ತೋಳ್ಪಡಿತ್ತಾಯರು ಒಂದೇ ಉತ್ತರ ಕೊಟ್ಟಿದ್ದರು;

‘ಆನಂದ ಪತ್ರಕರ್ತ. ಅವನ ಕೆಲಸ ಮಾಡಿದ್ದಾನೆ. ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಹಾಗಂತ ಅವನಿಗೆ ನನ್ನ ಮೇಲೆ ದ್ವೇಷವಿಲ್ಲ. ನನಗೆ ಅವನ ಮೇಲೆ ದ್ವೇಷವಿಲ್ಲ. ಅವನ ಮಟ್ಟಿಗೆ ನಾನೊಂದು ರೋಚಕವಾದ ಸುದ್ದಿ. ನನ್ನ ಮಟ್ಟಿಗೆ ಅವನು ವರ್ತಮಾನ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯ ನನಗೆ ಕಾಣುತ್ತಿಲ್ಲ. ಪ್ರತಿಕ್ರಿಯಿಸುವವನಾಗಿದ್ದರೆ ನಾನು ನೇರವಾಗಿ ಆನಂದನ ಜೊತೆಗೇ ಮಾತಾಡುತ್ತಿದ್ದೆ. ಅವನು ನನಗೇನೂ ಹೊಸಬನಲ್ಲ’.

ಇದಕ್ಕಿಂತ ಒಂದು ಮಾತನ್ನೂ ಹೆಚ್ಚಿಗೆ ಅವರು ಆಡಲಿಲ್ಲ.

ಈ ಎಲ್ಲ ಘಟನಾವಳಿಗಳ ನಡುವೆ ತೋಳ್ಪಡಿತ್ತಾಯರನ್ನೇ ನಿರಂಜನನ ವಾರ್ಷಿಕೋತ್ಸವಕ್ಕೆ ಆಹ್ವಾನಿಸಲು ಆನಂದ ಸಲಹೆ ಕೊಟ್ಟ. ತೋಳ್ಪಡಿತ್ತಾಯರು ಖಂಡಿತಾ ಆ ಸಮಾರಂಭಕ್ಕೆ ಬರುವುದಕ್ಕೆ ಒಪ್ಪುವುದಿಲ್ಲ ಅನ್ನುವುದು ಅವನಿಗೆ ಖಾತ್ರಿಯಿತ್ತು.

ಮೋಹನ ಮತ್ತು ಗೆಳೆಯರು ಹೋಗಿ ತೋಳ್ಪಡಿತ್ತಾಯರ ಮುಂದೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಾಗ ಅವರು ಸಂತೋಷದಿಂದ ಒಪ್ಪಿಕೊಂಡರು. ಆನಂದನೂ ಮುಖ್ಯ ಅತಿಥಿಗಳಲ್ಲಿ ಒಬ್ಬ ಎಂದು ಹೇಳಿದಾಗಲೂ ಅವರು ಅದರಿಂದ ವಿಚಲಿತರಾದಂತೆ ಕಾಣಲಿಲ್ಲ . ಮೋಹನ ಮತ್ತು ಗೆಳೆಯರು ಮುಖ ಮುಖ ನೋಡಿಕೊಂಡರು.

ತೋಳ್ಪಡಿತ್ತಾಯರು ಒಪ್ಪಿಕೊಂಡಿದ್ದಾರೆ ಅಂತ ಹೇಳುವುದಕ್ಕೆ ಮೋಹನ ಆನಂದನ ಆಫೀಸಿಗೆ ಬಂದಾಗ ಅಲ್ಲಿ ರಘುನಂದನನೂ ಕೂತಿದ್ದ. ಅವನು ತೋಳ್ಪಡಿತ್ತಾಯರ ವಿರುದ್ಧ ಲೇಖನ ಬರೆದದ್ದಕ್ಕೆ ಆನಂದನನ್ನು ಬೈಯುತ್ತಿದ್ದ. ಆನಂದ ತನ್ನನ್ನು ಸಮರ್ಥಿಸಿಕೊಳ್ಳುವ ಅಗತ್ಯವೂ ಇಲ್ಲದವನಂತೆ ನಗುತ್ತಾ ಕೂತಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daily Novel series - episode 64
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more